doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Tuesday, January 11, 2011

ಅಪರಿಚಿತ ಸ್ನೇಹಿತರಿಗೆ...




ಸ್ನೇಹದ ಕಡಲಲ್ಲೀ... ನೆನಪಿನ ದೋಣಿಯಲೀ...

ಪಯಣಿಗ ನಾನಮ್ಮಾ...

ಪ್ರೀತಿಯ ತೀರವ ಸೇರುವುದೊಂದೇ ಬಾಳಿನ ಗುರಿಯಮ್ಮಾ...

ಈ ಸ್ನೇಹ, ಗೆಳೆತನ ಇದರ ಬಗ್ಗೆ ಎಲ್ರಿಗೂ ತಿಳಿದಿರುತ್ತೆ ಬಿಡಿ. ಹಾಗೇನೇ ಪ್ರೀತಿ, ಒಲುಮೆ ಇವನ್ನು ನಾವು ನಮ್ಮ ಲೈಫಲ್ಲಿ ಅನುಭವಿಸದೇ ಇದ್ರೂ, ಇದರ ಬಗ್ಗೆ ತಿಳಿದಿರ್ತೀವಿ, ಎಲ್ಲೋ ಒಂದು ಕಡೆ ಓದಿರ್ತೀವಿ. ಇದರ ಬಗ್ಗೆ ಎಷ್ಟು ತಿಳಿದ್ರೂ ಕೆಲವೊಮ್ಮೆ ನಾವು ನಮ್ಮ ಲೈಫಲ್ಲಿ ಸ್ನೇಹಕ್ಕೂ-ಪ್ರೀತಿಗೂ ನಡುವಿನ ವ್ಯತ್ಯಾಸಾನಾ ಗುತರ್ಿಸೋದ್ರಲ್ಲಿ ಎಡವಿರ್ತೀವಿ. ಸ್ನೇಹಕ್ಕೂ-ಪ್ರೀತಿಗೂ ಅಜಗಜಾಂತರ ವ್ಯತ್ಯಾಸವಿದ್ರೂ ಹೀಗೇಕಾಗುತ್ತೆ ಅಂತ ತಿಳಿಯಲ್ಲ. ಇದು ಸ್ನೇಹಾನಾ..? ಇದು ಪ್ರೀತೀನಾ..? ಅಂತಾ ತಿಳೀದೇ ಮುಂದುವರಿದ್ರೆ ಮುಂದೆ ಕಷ್ಟಗಳ ಸರಮಾಲೆಯೇ ಎದುರಾಗೋ ಸಾಧ್ಯತೆಯಂತೂ ಇದ್ದೇ ಇರುತ್ತೆ.

ಘಟನೆ-1 ಮೊಬೈಲಿಗೆ ಯಾರ್ದೋ ಮಿಸ್ಕಾಲ್ ಬರುತ್ತೆ. ಹೊಸ ನಂಬರ್. ರಾತ್ರಿ ಹಗಲು ಆ ನಂಬರ್ನಂದ ಬಿಡುವಿಲ್ಲದೆ ಮಿಸ್ಡ್ ಕಾಲ್ಗಳು. ಯಾರಪ್ಪಾ... ಇವ್ರು ಅಂದ್ಕೊಂಡು ಅತ್ತ ಕಡೆ ಕಾಲ್ ಮಾಡಿದ್ರೆ ಅದು ಯಾವುದೋ ಹೆಣ್ಣಿನ ದನಿ. ಮಿಸ್ಡ್ಕಾಲ್ನಲ್ಲಿ ಶುರುವಾದ ಈ ಮೊಬೈಲ್ ಸ್ನೇಹ ಕೆಲವೇ ದಿನ ಕಳೆಯೋದ್ರೊಳಗೆ ಆಳವಾಗಿ ಬೇರೂರಿರುತ್ತೆ. ಅತ್ತ ಕಡೆಯ ಹೆಣ್ಣು-ಇತ್ತ ಕಡೆಯ ಗಂಡು ಇಬ್ಬರೂ ಸ್ನೇಹದ ಕಡಲಲ್ಲಿ ಮಿಂದು ರಾತ್ರಿ-ಹಗಲೆನ್ನದೆ ಏನೇನೋ ಮಾತಾಡ್ತಾರೆ. ಒಬ್ಬರಿಗೊಬ್ಬರ ಪರಿಚಯವೇ ಇಲ್ಲದಿದ್ರೂ ಸ್ನೇಹ ಗಾಢವಾಗುತ್ತಾ ಹೋಗುತ್ತೆ. ಕೊನೆಗೊಂದು ದಿನ ಆ ಘಳಿಗೆ ಬಂದೇ ಬರುತ್ತೆ. ಅವತ್ತು ಯಾರೋ ಒಬ್ರು ಸ್ನೇಹಾನಾ ಪ್ರೀತಿಯಾಗಿ ಪಡೆಯಲು ಹಾತೊರೆಯ್ತಾರೆ. ಆದ್ರೆ ಇಂತಹ ಸ್ನೇಹಿತರಲ್ಲಿ ಕೇವಲ ಮೋಜಿಗಾಗಿ ಅರೆ ಕ್ಷಣ ಮಾತ್ರ ಪ್ರೀತಿಸ್ತೀನಿ ಅನ್ನಬಹುದು. ಆದ್ರೆ ಅದೇ ಶಾಶ್ವತ ವಾಗಿರೋದಿಕ್ಕೆ ಸಾಧ್ಯಾನಾ? ಅಂತೂ ಇಂತೂ... ಪ್ರೀತಿ ಬಂತು, ಅಂತ ಹಾಡಿ ಕುಣಿದ್ರೆ ಆ ಪ್ರೀತಿ ಕೆಲವೇ ದಿನಗಳಲ್ಲಿ ಮರೆಯಾಗಿರುತ್ತೆ.

ಘಟನೆ-2: ಇದ್ದಕಿಂದ್ದಂತೆ ಒಬ್ಬಳು ಹುಡುಗಿಯ ಮೊಬೈಲಿಗೆ ಯಾವುದೋ ಒಂದು ಹೊಸ ನಂಬರಿನಿಂದ ಮೆಸೇಜ್ ಬರುತ್ತೆ. ಇದು ಮುಂದುವರಿದಾಗ ಹುಡುಗಿ ಮಾತಾಡ್ತಾಳೆ. ಆತನೂ ಮಾತಾಡ್ತಾನೆ. ಮುಂದೆ ಇವರಿಬ್ಬರ ಮೊಬೈಲಿಂದ ಬೇಕಾದಷ್ಟು ಮೆಸೇಜ್ಗಳು ರವಾನೆಯಾಗುತ್ತೆ. ಅಷ್ಟರಲ್ಲಿ ಅರವರಿಬ್ರೂ ಲವ್ವಲ್ಲಿ ಬಿದ್ದಿರ್ತಾರೆ. ಇಲ್ಲೂ ಅವರಿಬ್ಬರೂ ಒಬ್ಬರನ್ನೊಬ್ಬರು ಸರಿಯಾಗಿ ನೋಡಿರಲ್ಲ, ಎದುರಾಗಿ ಮಾತಾಡಿರಲ್ಲ. ಆದ್ರೂ ಅದು ಪ್ರೀತಿ ಅಂತ ತಿಳ್ಕೊಂಡು ಮುಂದುವರಿಯ್ತಾರೆ.

ಹೀಗೆ ಈ ಮೇಲಿನ ಎರಡು ಸ್ಯಾಂಪಲ್ಲಲ್ಲಿ ಪರಸ್ಪರ ಗುರುತು ಪರಿಚಯವಿಲ್ಲದ ಎರಡು ಜೀವಗಳು ಸ್ನೇಹಕ್ಕೆ ಸಿಕ್ಕಿ ಹಾಕ್ಕೊಳ್ಳುತ್ತೆ. ಇಲ್ಲಿ ಸಿಕ್ಕಿ ಹಾಕ್ಕಿಕೊಳ್ಳುವಾಗ `ಐ ಲವ್ ಯು' ಅನ್ನೋವಾಗ ಮುಂದೇನಾಗುತ್ತೆ ಅನ್ನೋದೇ ತಿಳಿದಿರಲ್ಲ. ಹಾಗಾದ್ರೆ ನೋಡದೇ ಇದ್ರೂ ಪ್ರೀತಿ ಹುಟ್ಟುತ್ತಾ..? ತುಂಬಾ ವಿಚಿತ್ರ ಅನ್ನಿಸುತ್ತೆ ಅಲ್ವಾ? ಇದು ವಿಚಿತ್ರವಾದರೂ ಸತ್ಯ. ಬಹಳ ವರ್ಷಗಳ ಹಿಂದೆ ಹಿಂದಿಯಲ್ಲಿ ಬಿಡುಗಡೆಗೊಂಡಿದ್ದ ಯಶಸ್ವಿ ಚಿತ್ರ `ಸಿಫರ್್ ತುಮ್' ಕನ್ನಡದಲ್ಲಿ `ಯಾರೇ ನೀನು ಚೆಲುವೆ' ಆಯಿತು. ಅದರ ಕಥಾವಸ್ತುವೂ ಇದೇ ಆಗಿತ್ತು. ಅಚಾನಕ್ಕಾಗಿ ಭೇಟಿಯಾಗುವ ಗಂಡು-ಹೆಣ್ಣು ಫೋನ್ ಮುಖಾಂತರ ಸ್ನೇಹಿತರಾಗಿ, ಪ್ರೀತಿಯ ಬಲೆಯಲ್ಲಿ ಬಿದ್ದು ಕೊನೆಗೆ ಆ ಪ್ರೀತಿಯನ್ನು ಪಡೆಯಲು ಪಡುವ ಕಷ್ಟವನ್ನು ನಿದರ್ೆಶಕರು ಸೊಗಸಾಗಿ ನರೂಪಿಸಿದ್ದಾರೆ. ಹೀಗಾಗಿ ಆ ಚಿತ್ರ ಶತದಿನೋತ್ಸವ ಕಂಡಿತು. ಈ ವಿಷಯ ಯಾಕೆ ಹೇಳಿದ್ದೆಂದರೆ, ನೋಡದೆ ಪ್ರೀತಿಸುವ ಕಥಾ ಹಂದರ ನಮಲ್ಲಿ ಅದೆಷ್ಟೋ ಬಂದು ಹೋಗಿದೆ. ಇದು ಪ್ರೀತಿಯಲ್ಲ ಅಂತ ಬುದ್ಧಿಯಿರೋರು ಹೇಳಬಹುದು. ಹದಿಹರೆಯದ ಮಾನಸಿಕ ಸಮಸ್ಯೆ ಅಂತನ್ನಲೂಬಹುದು, ಮನಸ್ಸಿನ ತುಮುಲ ಅಂತಂದ್ರೂ ಓ.ಕೆ. ಆದ್ರೂ ಇಲ್ಲೂ ಒಂದು ಅಪ್ಪಟ ಸ್ನೇಹವಿರುತ್ತೆ. ತಾಜಾತನದಿಂದ ನಳನಳಿಸೋ ಹೂವಿನ ತರಾ ಸ್ನೇಹದ ಸುಗಂಧ ಎಲ್ಲೆಡೆಗೂ ವ್ಯಾಪಿಸಿರುತ್ತೆ.

ನೋಡದೆ ಸ್ನೇಹ ಹುಟ್ಟುತ್ತೆ. ಅದನ್ನು ಹಾಗೇ ಬಿಟ್ಟು ಅದಕ್ಕೆ ನೀರೆರೆದರೆ ಅದು ಬೆಳೆದು ಪ್ರೀತಿಯಾಗುತ್ತೆ. ಆದ್ರೆ ಆ ಸ್ನೇಹವನ್ನು ಸರಿಯಾಗಿ ಗುತರ್ಿಸಿ, ಅಥರ್ೈಸಬೇಕಾದ್ದು ನಮ್ಮ ಕರ್ತವ್ಯ. ಕೆಲವ್ರು ಯಾವುದೋ ಒತ್ತಡದಲ್ಲಿ ಬಿದ್ದು ಪ್ರೀತಿಸ್ತಾರೆ. ಸ್ನೇಹಾನ ಪ್ರೀತಿಯೆಂದು ತಿಳಿದು ಮೋಸದ ಬಲೆಗೆ ಬೀಳ್ತಾರೆ. ಪ್ರೀತಿಸ್ತೀನಿ ಅಂತಂದು ಎಲ್ಲವನ್ನೂ ದೋಚಿ ಪರಾರಿಯಾಗೋರೂ ನಮ್ಮಲ್ಲಿ ಬೇಕಾದಷ್ಟು ಜನ ಇದ್ದಾರೆ. ಹೀಗಾಗಿ ಪ್ರೀತಿ ಹೆಸರಲ್ಲಿ ಇದಕ್ಕೆಲ್ಲಾ ಆಸ್ಪದ ಕೊಡಬಾರದು ತಾನೇ?

ಸ್ನೇಹಕ್ಕೆ ಯಾವುದೇ ಬೇಧವಿಲ್ಲ ನಿಜ. ಜಾತಿ-ಮತ ಬೇಧ ತೋರದೆ ಎಲ್ಲೆಲ್ಲೂ ತುಂಬಿರೋದು ಅಂತಂದ್ರೆ ಈ ಸ್ನೇಹ ಮಾತ್ರ. ನಿಜವಾದ ಸ್ನೇಹಕ್ಕೆ ಮುಖದರ್ಶನದ ಅಗತ್ಯವಿರಲ್ಲ. ಯಾರಿಗ್ಗೊತ್ತು, ನಾಳೆ ನಮ್ಮ ಮುಖದರ್ಶನವಾದ ಕೂಡಲೇ ಅವ್ರಿಗೆ ನಾವು ಬೇಡ ಅನ್ನಿಸೋಕ್ಕೂ ಸಾಧ್ಯವಿದೆ. ಆದ್ದರಿಂದ ಸ್ನೇಹ ಸ್ನೇಹವಾಗೇ ಇರಲಿ. ನಿರ್ಮಲ, ನಿಷ್ಕಲ್ಮಶ ಸ್ನೇಹಾನ ಪ್ರೀತಿಯೆಂದು ತಪ್ಪಾಗಿ ಭಾವಿಸಿದ್ರೆ ನಾಳೆ ನಾವು ಆ ಸ್ನೇಹಾನ ಕಳ್ಕೋಬಹುದು. ನೋಡದೆ ಹುಟ್ಟೋ ಸ್ನೇಹ ಚಿರಕಾಲದ ತನಕ ಶಾಶ್ವತವಾಗಿರಲಿ. ಅದಕ್ಕೆ ಪ್ರೀತಿಯ ಲೇಪನ ಬೇಡ ಅನ್ನುವುದು ನನ್ನ ಅಭಿಮತ. ಒಂದು ವೇಳೆ ಅದೇ ಪ್ರೀತಿಯಾಗಿ ನಮ್ಮ ಮುನ್ನಡೆಸುತ್ತದೆಯಾದ್ರೆ ಅದು ನಿಜಕ್ಕೂ ಸಂತಸದ ಮಾತೇ ಸರಿ. ಗುರುತು ಪರಿಚಯವಿಲ್ಲದೆ ಮಿಸ್ಡ್ ಕಾಲ್, ಮೆಸೇಜ್ ಮೂಲಕ ಪರಿಚಯವಾದ ಅದೆಷ್ಟೋ ಸ್ನೇಹಿತರಿಗೆ ಪ್ರೀತಿ ತುಂಬಿದ ನಮಸ್ಕಾರಗಳು.

ರಾ+ಜ+ಕೀ+ಯ



ರಾ-ರಾವಣ, ಜ-ಜರಾಸಂಧ, ಕೀ-ಕೀಚಕ, ಯ-ಯಮ. ಇವರೆಲ್ಲಾ ಒಟ್ಟು ಸೇರಿದ್ರೆ ನಮ್ಮ ಹಾಳುಗೆಟ್ಟ ರಾಜಕೀಯ ಅನ್ನೋದು ನನಗಿಂತ ನಿಮಗೇ ಚೆನ್ನಾಗಿ ತಿಳಿದಿರಬಹುದು. ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ ಬರೆಯೋ ಹಕೀಕತ್ತು ನನ್ಗೂ ಇರಲಿಲ್ಲ. ಆದ್ರೂ ಈಗಷ್ಟೇ ತಾ.ಪಂ, ಜಿ.ಪಂ. ಇಲೆಕ್ಷನ್ನು ಮುಗಿದಿದೆ, ಈಗಿನ ರಾಜಕೀಯ ಸ್ಥಿತಿಯಲ್ಲಿ ಯಾವಾಗ ಈ ಇಲೆಕ್ಷನ್ನು ಬರುತ್ತೆ ಅಂತ ಹೇಳೋಕೂ ಆಗಲ್ಲ. ಹೀಗಿರೋವಾಗ ಕೊಂಚನಾದ್ರೂ ನಿಮ್ಗೆ ಹೇಳದೇ ಇದ್ರೆ ಹೇಗೆ ಹೇಳಿ?

ಹಾಗಾದ್ರೆ ರಾಜಕೀಯ ವ್ಯವಸ್ಥೆಯನ್ನೋದು ನಮ್ಮ ಹೆದ್ದಾರಿಯಷ್ಟೂ ಹದಗೆಟ್ಟಿದೆಯಾ, ಅಂತ ನೀವು ನೀವೇ ಕೇಳ್ಕೊಳ್ಳಿ. ಆಗ ನಮಗೇ ತಿಳಿಯುತ್ತೆ, ನಾನ್ಯಾಕೆ ಈ ರೀತಿ ಬರೆದೆನೆಂದು. ಎಳೆ ಪ್ರಾಯದ ಮಗುವಿನಿಂದ ಹಿಡಿದು ಹಣ್ಣುಹಣ್ಣು ಮುದುಕರ ತನಕ ರಾಜಕೀಯ ಅನ್ನೋ ಹೆಸರೆತ್ತಿದ್ರೆ ಸಾಕು, ಸಿಡಿದು ಬೀಳೋ ಜನಾನೇ ನಮ್ಮಲ್ಲಿರೋವಾಗ ವ್ಯರ್ಥ ಆಲಾಪ ಯಾಕೆ ಬೇಕು? ಎಲೆಕ್ಷನ್ನು ಅಂದಮೇಲೆ ಅಲ್ಲಿ ಗಲಾಟೆ, ಪರ-ವಿರೋಧಿಗಳ ನಡುವಿನ ಕಚ್ಚಾಟ, ಕಂಟ್ರಿ ಸಾರಾಯಿಯ ಹಂಚುವಿಕೆ ಇವೆಲ್ಲಾ ಇದ್ದದ್ದೇ. ಎಲೆಕ್ಷನ್ನು ಅಂದ್ರೆ ನನ್ನ ಬಾಲ್ಯದ ನೆನಪುಗಳು ಈಗಲೂ ಮಸುಕು ಮಸುಕಾಗಿ ಗೋಚರಿಸುತ್ತೆ. ನಮ್ಮ ಊರಲ್ಲಿ ಚುನಾವಣೆ ಬಂತಂದ್ರೆ ಗೌಜಿಯೋ ಗೌಜಿ. ಊರಿಗೆ ಊರೇ ಉಲ್ಲಾಸದಿಂದ ಬೆಳಿಗ್ಗೆ ಬೇಗನೇ ಎದ್ದು ಕುಳಿತಿರುತ್ತೆ. ಹೆಚ್ಚಾಗಿ ಈ ಚುನಾವಣೆ ಅನ್ನೋದು ಶಾಲಾ ಮಕ್ಕಳ ರಜಾದಿನಗಳಲ್ಲೇ ಬರೋದ್ರಿಂದ ನಮಗೆಲ್ಲಾ ಏನೋ ಖುಷಿ. ಒಂಭತ್ತು ದಿನಗಳ ನವರಾತ್ರಿ ಉತ್ಸವ ಬಂದಾಗ ನಾನಾ ರೀತಿಯ ವೇಷ ನೋಡೋಕ್ಕೆ ಯಾವ ರೀತಿ ಕಾದಿರ್ತೀವೋ ಅದೇ ರೀತಿ ಚುನಾವಣೆಯೂ ಕೂಡಾ. ಡಿಫರೆನ್ಸ್ ಏನಂದ್ರೆ ನವರಾತ್ರಿಯ ವೇಷಗಳು ತಮ್ಮ ವೇಷವನ್ನು ಪ್ರದಶರ್ಿಸುತ್ತೆ, ಎಲೆಕ್ಷನ್ನು ಸಮಯ ಬರೋ ವೇಷಗಳು ತಮ್ಮ ಒಳಗೊಳಗೇ ನಾನಾ ರೀತಿಯ ವೇಷಗಳನ್ನು ಒಂದಾದ ಮೇಲೊಂದರಂತೆ ಧರಿಸಿರುತ್ತೆ. ಆದ್ರೆ ನಮ್ಮಗಳ ಕಣ್ಣಿಗೆ ಕಾಣೋದಿಲ್ಲ ಅಷ್ಟೆ.

ಚಿಕ್ಕಂದಿನಲ್ಲಿ ಚುನಾವಣೆ ಬಂದಾಗ ನಾನು ಮತ್ತು ನನ್ನ ಗ್ಯಾಂಗ್ಗೆ ಆನಂದವೋ ಆನಂದ. ನಮ್ಮೂರಿನ ಕುಲಗೆಟ್ಟ ರಸ್ತೆಯಲ್ಲಿ ಆಗೊಮ್ಮೆ, ಈಗೊಮ್ಮೆ ಓಡಾಡುವ ಬಿಳಿಯ ಬಣ್ಣದ ಅಂಬಾಸಿಡರ್ ಕಾರು, ಅದರೊಳಗಿಂದ ಕರಿಯ ಕನ್ನಡಕ, ಬಿಳಿ ಪಂಚೆ, ಜುಬ್ಬಾ ತೊಟ್ಟವರು ಕೆಳಗಿಳಿಯುತ್ತಲೇ ನಮ್ಮಗಳ ಉತ್ಸಾಹ ನೂರ್ಮಡಿಯಾಗುತ್ತಿತ್ತು. ಅವರ ಹಿಂದೆ ಮುಂದೆ ಅದೆಷ್ಟೋ ಬಿಳಿಯ ಅಂಗಿಗಳು ಇರುವೆಗಳಂತೆ ಮುತ್ತಿರುವುದನ್ನು ಕಂಡಾಗ ನಮ್ಗೂ ಗೌರವ ಭಾವ. ಅಷ್ಟರಲ್ಲಿ ಒಬ್ಬವೇದಿಕೆಯ ಮೇಲೇರಿ ಮೈಕಾದಲ್ಲಿ ಊರಿನ ಜನರನ್ನು `ಅಕ್ಕನಕುಲೇ... ಅಣ್ಣನಕುಲೇ...' ಎಂದು ಜೋರಾಗಿ ಅರಚಲು ತೊಡಗಿದರೆ ಎದೆ ನಡುಕ ಹುಟ್ಟುತ್ತಿತ್ತು. ಕೊನೆಗೆ ನಮ್ಮ ಊರಿನ ಓಟನ್ನು ಪಡೆಯಲು ಆ ಬಿಳಿಯ ಬಟ್ಟೆಯವರು ವೇದಿಕೆಯ ಮೇಲೆ ಹತ್ತು ಹಲವು ರೀತಿಯ ಆಶ್ವಾಸನೆಗಳನ್ನು ನೀಡುತ್ತಿದ್ದರು. ರಸ್ತೆ, ದಾರಿದೀಪ, ನಳ್ಳಿ ನೀರು, ಬೋರ್ವೆಲ್ ಹೀಗೆ ನಮ್ಮೆಲ್ಲರನ್ನೂ ನಂಬಿಸಿ ಬಿಡುತ್ತಿದ್ದರು. ನಮ್ಮ ಊರಿನವರಿಗೆ ಅವರು ಮನುಷ್ಯರೇ ಅಲ್ಲ, ದೇವರ ತದ್ರೂಪ ಎನ್ನುವ ಭಾವನೆ. ಹೀಗೆ ನಂಬಿಕೆ, ಭರವಸೆಯ ಜತೆಗೆ ಎಲೆಕ್ಷನ್ನು ಮುಗಿದು ಹೋಗುತ್ತಿತ್ತು. ತಿಂಗಳ ಕಾಲ ನಮ್ಮ ಊರಿನ ರಸ್ತೆಯ ತುಂಬಾ ರಾಡಿಯೆಬ್ಬಿಸಿ , ರಸ್ತೆಯ ಗುಂಡಿಯನ್ನು ಇನ್ನಷ್ಟು ಆಳವನ್ನಾಗಿಸಿದ್ದ ಬಿಳಿಯ ಮೋಟಾರು ವಾಹನಗಳು ಕಾಣದಾದಾಗ, ಬಿಳಿ ಅಂಗಿಗಳೆಲ್ಲಾ ಕಾಣದೆ ಮಾಯವಾದಾಗ ಸ್ವಲ್ಪ ದಿನ ಬೋರ್ ಹೊಡೆಸುತ್ತಿತ್ತು.(ನವರಾತ್ರಿ ಮುಗಿದ ನಂತರ ಆಗುತ್ತಲ್ಲಾ ಹಾಗೆ). ಆದ್ರೆ ನಂತರ ನಮ್ಮ ಊರಿನ ಪೆಕರಾಗಳ ಓಟಿನಿಂದ ಗೆದ್ದವರು ಇತ್ತ ತಲೆ ಹಾಕಿ ಮಲಗುವುದನ್ನೂ ಬಿಟ್ಟಾಗ ನಮ್ಮ ಊರಿನ ಹಿರಿ ಜೀವಗಳು ಹಿಡಿಶಾಪ ಹಾಕುವುದನ್ನು ನೋಡಿದ್ದೆ. ಆಗೆಲ್ಲಾ ಇದೊಂದು ನಾಟಕದಂತೆ ಕಾಣುತ್ತಿತ್ತು.

ಬೆಳೆಯುತ್ತಾ ರಾಜಕೀಯದ ಬಗೆಗಿನ ನನ್ನ ಆಸಕ್ತಿಗಳಿಗೆಲ್ಲಾ ಸರಿಯಾದ ಉತ್ತರ ಸಿಕ್ಕಿದಾಗ ಆಶ್ಚರ್ಯವೂ ಆಯಿತೆನ್ನಿ. ಆಮೇಲೆ ರಾಜಕೀಯ ಅಂದ್ರೆ ನನಗೆ ಈ ರೀತಿಯ ನಿಜಾರ್ಥ ಹೊಳೆದದ್ದು. ಈಗಂತೂ ನಮ್ಮ ರಾಜಕೀಯ ವ್ಯವಸ್ಥೆ ಎಕ್ಕುಟ್ಟಿ ಹೋಗಿರುವುದನ್ನು ಕಣ್ಣೆದುರೇ ನೋಡುತ್ತೇವೆ. ಪಟಿಂಗನ ಕೊನೆಯ ಆಸರೆ ಎನ್ನುವಂತೆ ರಾಜಕೀಯ ಕೀಳಾಗಿ ಹೋಗುತ್ತಿದೆ. ಎಲೆಕ್ಷನ್ನು ಹೇಗಾದ್ರೂ ಆಗಲಿ, ಯಾರೇ ಬೇಕಾದ್ರೂ ಕುಣೀಲಿ, ಓಟು ಮಾತ್ರ ನೀಡೋದು ನಮ್ಮ ಹಕ್ಕು ಅಲ್ವೇನ್ರೀ..?

ಲಾಸ್ಟ್ ಲೈನ್: ನಮ್ಮ ಊರಿನ ಅದೇ ಹಿಂದಿನ ಮಣ್ಣಿನ ರಸ್ತೆ, ರಾತ್ರಿಯ ಕತ್ತಲು, ನಮ್ಮೂರಿನ ಹೆಣ್ಮಕ್ಕಳು ಸೊಂಟ ಬಳುಕಿಸ್ಕೊಂಡು, ಕಾಲು ಉಳುಕಿಸ್ಕೊಂಡು ದೂರದ ಕೆರೆ, ನದಿಯಿಂದ ನೀರು ತರುವುದನ್ನು ನೋಡಿ ಅಯ್ಯೋ ಪಾಪ ಅನಿಸುತ್ತೆ. ಆದ್ರೇನು ಮಾಡೋಣ, ಈ ಸಲನಾದ್ರೂ ಸರಿಯಾದ್ರೆ.... ಅನ್ನೋ ದೂರದ ಆಶೆಯಿಂದ ಜನ ಮತ್ತದೇ ತಪ್ಪು ಮಾಡ್ತಿದ್ದಾರೆ.

Thursday, December 16, 2010

Kateel thoote dara.AVI


ಇತಿಹಾಸ ಪ್ರಸಿದ್ಧ ಕಟೀಲು ದುಗರ್ಾಪರಮೇಶ್ವರಿ ದೇವಳದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವದ ವೇಳೆ ನಡೆಯುವ ತೂಟೆದಾರ(ತಾಳೆಯ ಗರಿಯನ್ನು ಸುತ್ತಿ ಬೆಂಕಿಯನ್ನು ಹೊತ್ತಿಸಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುವುದು) ತುಳುನಾಡಿನ ಪರಂಪರೆ, ಅಸುರ ಅರುಣಾಸುರನನ್ನು ಸಂಹರಿಸಿದ ದೇವಿ ವಿಜಯಿಯಾಗಿ ಬರುವ ವೇಳೆ ಈ ರೀತಿ ಬೆಂಕಿಯಿಂದ ಸ್ವಾಗತ ಕೋರುವುದು ಎಂಬ ಪ್ರತೀತಿಯೂ ಇದೆ. ಇತಿಹಾಸದಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ವಿಶೇಷವಾದ ನಂಬಿಕೆ ಹಾಗೂ ಆಚರಣೆ. ಈ ವೇಳೆ ಭಕ್ತರು ಮೈಮೇಲೆ ಕೇವಲ ಶಾಲು ಹಾಗೂ ಧೋತಿಯನ್ನು ಮಾತ್ರ ತೊಟ್ಟುಕೊಂಡಿರುತ್ತಾರೆ, ಹಾಗಿದ್ದೂ ನಾನು ಗಮನಿಸಿದಂತೆ ಇಲ್ಲಿಯ ತನಕ ತೋಟೆದಾರಗದಲ್ಲಿ ಬೆಂಕಿ ಅನಾಹುತ, ಭಕ್ತಾದಿಗಳ ಮೈಮೇಲೆ ಗಾಯಗಳುಂಟಾದ ಉದಾಹರಣೆಗಳಿಲ್ಲ...
ಈ ವೈಶಿಷ್ಟ್ಯಪೂರ್ಣ ಆಚರಣೆಯಲ್ಲಿ ಪಾಲ್ಗೊಳ್ಳಲು ನಡುರಾತ್ರಿಯ ವೇಳೆ ಸಾವಿರಾರು ಸಂಖ್ಯೆಯ ಭಕ್ತರು ನೆರೆಯುತ್ತಾರೆ. ಕಟೀಲು ಮಾತೆಯ ಸನ್ನಿಧಿಯಲ್ಲಿ ಪಾವನರಾಗುತ್ತಾರೆ.

Sunday, December 12, 2010

ಇದ್ದು, ಇಲ್ಲದವರ ನಡುವೆ ...







`ಎಲ್ಲಾ ನಮ್ಮ ಹಣೆಬರಹ ಸಾರ್... ರಸ್ತೇಲಿ, ಬೀದೀಲಿ, ಹೋಟೆಲ್, ಬಸ್ ಸ್ಟಾಪ್ ಎಲ್ಲಿ ಹೋದ್ರೂ ಅಸಹ್ಯ ನೋಟ ಬೀರೋರೇ ಜಾಸ್ತಿ. ನಾವೇನ್ ತಪ್ಪು ಮಾಡಿದ್ದೀವಿ? ಹೀಗೆ ಹುಟ್ಟಿರೋದೇ ನಮ್ ತಪ್ಪಾ...' ಹೀಗೆ ಅವರ ಬಳಿ ಯಾರಲ್ಲೂ ಕೇಳಲಾಗದ ಅಸಂಖ್ಯ ಪ್ರಶ್ನೆಗಳಿದ್ದವು. ತಮ್ಮ-ತಮ್ಮೊಳಗೆ ಹೇಳಿಕೊಂಡು ಪರಸ್ಪರ ಕಣ್ಣೀರು ಒರೆಸಿ ಉತ್ತರ ಕಂಡುಕೊಂಡ ಅದೆಷ್ಟೋ ಸಮಸ್ಯೆಗಳಿದ್ದವು. ಅವರು ತಮ್ಮ ಎಂದಿನ ಶೈಲಿಯಲ್ಲೇ ಜೀವನದ ದುರಂತಗಾಥೆಯನ್ನು ಬಿಡಿಬಿಡಿಯಾಗಿ ವಣರ್ಿಸುತ್ತಿದ್ದರೆ ಕೇಳುತ್ತಿದ್ದ ಕಿವಿ ಸ್ತಬ್ಧವಾಗಿ ಮನಸ್ಸು ಕ್ಷಣಕ್ಷಣಕ್ಕೂ ಭಾರವಾದಂತಹ ಅನುಭವ.

ಹೌದು... ಅವರೇ `ಮಂಗಳಮುಖಿ'ಯರು. ಅವರ ಮುಖ ಕಂಡರೆ ಎಲ್ಲವೂ ಮಂಗಳವಾಗುತ್ತದೆ ಎನ್ನುವುದು ಹೆಸರಿನ ತಾತ್ಪರ್ಯ. ಅಂತಹ ನಂಬಿಕೆಯೂ ನಮ್ಮ ಸಮಾಜದಲ್ಲಿ ಇಲ್ಲದಿಲ್ಲ. ಹಿಜಿರಾ, ಹಿಜಿಡಾ, ಹೆಣ್ಣಿಗರು, ನಪುಂಸಕರು, ಚ..., ಎಂದೆಲ್ಲಾ ಸಮಾಜದಲ್ಲಿ ವಿಶೇಷವಾಗಿ ಗುರುತಿಸಲ್ಪಡುವ ಇವರ ಬಗ್ಗೆ ಅನೇಕ ರೀತಿಯ ನಂಬಿಕೆ, ಅಪನಂಬಿಕೆ, ಮೂಢನಂಬಿಕೆಯೂ ನಮ್ಮಲ್ಲಿ ಬೆಳೆದಿದೆ. ಅವರು ಹಾಗಂತೆ, ಹೀಗಂತೆ... ಎಂದೆಲ್ಲಾ ಅಂತೆ-ಕಂತೆಗಳ ನಡುವೆ ಸುತ್ತಿಕೊಂಡಿರುವ ಅವರ ಬಗೆಗಿನ ಸಂಶಯಗಳಿಗೆ ಸಾಧ್ಯವಾದಷ್ಟು ವಿರಾಮ ನೀಡುವ ಪ್ರಯತ್ನ ಮಾತ್ರ ಇಲ್ಲಿ ನಡೆಸಲಾಗಿದೆ. ಇದ್ದು, ಇಲ್ಲದವರ ನಡುವೆ ಒಂದಿಷ್ಟು ಹೊತ್ತು ಕುಳಿತು ಅವರ ಪ್ರಶ್ನೆಗಳಿಗೆ ಕಿವಿಯಾದಾಗ ಅವರ ನೋವನ್ನು ಕಂಡು ಮನಸ್ಸು ಮರುಕ ಪಟ್ಟಿದ್ದು ಮಾತ್ರ ಸುಳ್ಳಲ್ಲ.

ನಾವಿರೋದೇ ಹೀಗೆ...!

ಮಂಗಳಮುಖಿಯರ ಬಗೆಗಿನ ನಮ್ಮ ಆಸಕ್ತಿಯನ್ನು ಬರಹ ರೂಪಕ್ಕೆ ಇಳಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಯಾರನ್ನೂ ಸುಲಭವಾಗಿ ನಂಬದ ಇವರನ್ನು ಮಾತಾಡಿಸಲು ಹೋದಾಗ ನಮಗೆ ಎದುರಾದವಳು/ಎದುರಾದವನು ಶ್ರುತಿ ಅಲಿಯಾಸ್ ಸುಧಾಕರ. ನಿಮ್ಮ ಬಗ್ಗೆ ತಿಳ್ಕೋಬೇಕು ಎಂದಾಗ ವಿಳಾಸ ತಿಳಿಸಿದ್ದಳು. ಮರುದಿನ ಆಕೆ ತಿಳಿಸಿದ ವಿಳಾಸಕ್ಕೆ ತೆರಳಿದ ನಮಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಅಲ್ಲಿ ನಮಗಾಗಿ ಅವರೆಲ್ಲರೂ ಕಾದಿದ್ದರು. ನಿಮ್ಮ ಬಗೆಗೆ ಒಂದಿಷ್ಟು ಮಾತಾಡಿ ಎಂದಾಗ ಅವರ ದು:ಖದ ಕಟ್ಟೆಯೊಡೆದಿತ್ತು. ಸಮಾಜದ ಅವಮಾನ, ಶೋಷಣೆಯಿಂದ ನೊಂದಿದ್ದ ಅವರ ಮುಖಗಳಲ್ಲಿ ಕಾಣಿಸುತ್ತಿದ್ದುದು ಎಲ್ಲವನ್ನೂ ಹೇಳಿಕೊಳ್ಳಬೇಕು ಎಂಬ ತುಡಿತ. ಕನ್ನಡವನ್ನು ಸ್ಪಷ್ಟವಾಗಿ ಮಾತಾಡುವ ಇವರು ನಮ್ಮ ನೆರೆಯ ಬಳ್ಳಾರಿ ಜಿಲ್ಲೆಯವರೇ ಆಗಿರುವುದು ವಿಶೇಷ. ಅವರೇ ಹೇಳುವಂತೆ ಬಳ್ಳಾರಿ ಜಿಲ್ಲೆಯಲ್ಲಿ ಇವರ ಜನಾಂಗಕ್ಕೆ ಸೇರಿದ ಇನ್ನೂ ಅನೇಕ ಮಂದಿ ಇದ್ದಾರೆ. ಕೆಲವು ಮಂದಿ ಭಿಕ್ಷೆಯೆತ್ತಲು ಊರು ತೊರೆದಿದ್ದರೆ, ಇನ್ನುಳಿದವರು ಅಲ್ಲಿಯೇ ಇದ್ದಾರೆ. ಲಾರಿ, ರೈಲುಗಳ ಮೂಲಕ ಮಂಗಳೂರಿಗೆ ಬಂದೆವು ಎನ್ನುವ ಇವರು, ಇಲ್ಲಿ ನಮಗೆ ಯಾರೂ ಇಲ್ಲ. ನಮ್ಮ ಊರಲ್ಲಾದರೆ ಹೇಗಾದರೂ ಬದುಕಬಹುದು ಅನ್ನೋ ಧೈರ್ಯವಿದೆ ಅನ್ನುತ್ತಾರೆ.

ಸದ್ಯಕ್ಕೆ ಮಂಗಳೂರಿನಲ್ಲಿ 22 ಜನ ಮಂಗಳಮುಖಿಯರು ಬಂದು ನೆಲೆಸಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ನೆಲೆಸಿರುವುದು ಸುರತ್ಕಲ್ ಬಳಿಯ ಕಾನದ ಬಾಡಿಗೆ ಮನೆಯೊಂದರಲ್ಲಿ. ಆರಡಿ, ಮೂರಡಿ ಜಾಗದ ಸಣ್ಣ ಬಾಡಿಗೆ ಮನೆಯಲ್ಲಿ ಇವರನ್ನು ಮನೆಯ ಮಾಲಕರು ಇರಲು ಬಿಟ್ಟಿದ್ದಾರೆ. ಇದೇಕೆ ಹೀಗೆ ಎಂದು ಕೇಳಿದರೆ ನಮಗೆ ಬಾಡಿಗೆಗೆ ಮನ ಕೊಡುವವರು ಸಿಗುವುದೂ ಇಲ್ಲ ಎಂಬ ಉತ್ತರ. ಬಳ್ಳಾರಿ ನವಾಸಿ ಮಲ್ಲಿಕಾಜರ್ುನ ಅಲಿಯಾಸ್ ಸುಧಾ, ಮಲ್ಲಿಕಾಜರ್ುನ ಅಲಿಯಾಸ್ ಮಹಾಲಕ್ಷ್ಮಿ, ರಮೇಶ ಅಲಿಯಾಸ್ ಪ್ರೀತಿ, ರಾಮ ಅಲಿಯಾಸ್ ಚಂದ್ರಕಲಾ, ಅಲಕುಂದಿಯ ಸುಧಾಕರ ಅಲಿಯಾಸ್ ಶ್ರುತಿ, ರಾಮು ಅಲಿಯಾಸ್ ಕಾವ್ಯ, ಮಂಡ್ಯದ ಶ್ರವಣ್ ಅಲಿಯಾಸ್ ಶ್ರಾವಣಿ, ಕಾಸಿಂ ಆಲಿ ಅಲಿಯಾಸ್ ಪ್ರಿಯಾ ಸದ್ಯ ಒಟ್ಟಿಗೇ ವಾಸಿಸುತ್ತಿದ್ದಾರೆ. ಅದೇ ಪುಟ್ಟ ಮನೆಯಲ್ಲಿ ವಾಸ, ಅಲ್ಲೇ ವಿಶ್ರಾಂತಿ, ಮುಂಜಾನೆ ಭಿಕ್ಷೆ ಎತ್ತಲು ಹೋದರೆ ಸಂಜೆಗೆ ವಾಪಸ್, ದಿನಕ್ಕೊಬ್ಬರಂತೆ ಅಡುಗೆ ಮಾಡುವುದು ಇವೇ ಮುಂತಾದ ನಿಯಮಗಳು ಇವರಲ್ಲಿವೆ. ಇವರು ಲೈಂಗಿಕ ಕಾರ್ಯಕರ್ತರು ಅನ್ನೋದನ್ನು ಮನಸಾರೆ ಒಪ್ಪಿಕೊಳ್ಳುವ ಅವರು, ಅದರಲ್ಲೇನು ತಪ್ಪು? ನಮ್ಮ ಹೊಟ್ಟೆಪಾಡಿಗಾಗಿ ಆ ವೃತ್ತಿಗಿಳಿದಿದ್ದೇವೆ, ನಾವು ಯಾರನ್ನೂ ಬಲವಂತ ಪಡಿಸುವುದಿಲ್ಲ ಎನ್ನುತ್ತಾರೆ.

ಮುಂದುವರಿದ ದೇಶಗಳಲ್ಲಿ ನಮ್ಮ ಸಮಾಜವನ್ನು ಯಾರೂ ನಿಕೃಷ್ಟರಾಗಿ ಕಾಣುವುದಿಲ್ಲ. ಅಲ್ಲಿ ಅವರಿಗೂ ಸಾಕಷ್ಟು ಮಯರ್ಾದೆ ಸಿಗುತ್ತದೆ. ಅವರಿಗೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಸರಕಾರಿ ಕೆಲಸ ಮಾಡುವ, ಚುನಾವಣೆಯಲ್ಲಿ ಸ್ಪಧರ್ಿಸುವ ಅವಕಾಶವಿದೆ. ಆದರೆ ನಮ್ಮ ದೇಶದಲ್ಲಿ ಇಂತಹ ಯಾವ ವ್ಯವಸ್ಥೆಯೂ ಇಲ್ಲ. ಕನರ್ಾಟಕ ಸರಕಾರ ನಮಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ ಎಂಬುದನ್ನು ಪೇಪರ್ನಲ್ಲಿ ಓದಿದ ನೆನಪು. ಆದರೆ ಅಂತಹ ಯಾವುದೇ ಯೋಜನೆ ನಮ್ಮನ್ನು ತಲುಪಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇವರು. ನಮ್ಮಲ್ಲಿಯೂ ಇಂದು ಸಾಕಷ್ಟು ತಿಳಿದವರಿದ್ದಾರೆ, ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಲು ಯೋಗ್ಯರಿದ್ದಾರೆ, ಆದರೆ ನಮಗೆ ಸರಕಾರ ಪ್ರಾಶಸ್ತ್ಯವನ್ನೇ ನೀಡಲಾಗುತ್ತಿಲ್ಲ ಎಂಬ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹೌದು! ಮಂಗಳಮುಖಿಯರಿಗೂ ಬದುಕುವ ಹಕ್ಕಿದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇವರಿಗೆ ಗುರುತಿನ ಚೀಟಿ, ಮತದಾನದ ಗುರುತು ಪತ್ರ, ರೇಷನ್ ಕಾಡರ್್ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಇವರ ಆರೋಗ್ಯ ರಕ್ಷಣೆಗಾಗಿ ಸರಕಾರ ಕೈಗೊಂಡಿರುವ ಯೋಜನೆಗಳೂ ಪ್ರಯೋಜನಕ್ಕೆ ಬರುತ್ತಿಲ್ಲ. ಸರಕಾರದ ಹಣವನ್ನು ಪಡೆಯುವ ಎನ್ಜಿಓಗಳೂ ಹಿಡಿದ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಈ ಕಾರಣದಿಂದಾಗಿ ಇವರು ಇಂದಿಗೂ ಯಾರಿಗೂ ಬೇಡದ ಜೀವನವನ್ನು ಸಾಗಿಸುತ್ತಿದ್ದಾರೆ. ಜನರಿಗೆ ತೊಂದರೆ ಕೊಡುತ್ತಾರೆ, ವಸೂಲಿ ಮಾಡುತ್ತಾರೆ, ಪ್ರವಾಸಿ ತಾಣಗಳಲ್ಲಿ ಕಿರಕಿರಿ ಉಂಟುಮಾಡುತ್ತಾರೆ ಎಂಬ ಜನರ ಆರೋಪಗಳನ್ನು ನಿರಾಕರಿಸುವ ಅವರು ತಾವು ಪ್ರವಾಸಿ ಸ್ಥಳದಲ್ಲಿ ಯಾವುದೇ ಸಮಸ್ಯೆಯನ್ನು ಸೃಷ್ಟಿಸುತ್ತಿಲ್ಲ. ನಮ್ಮನ್ನು ಬೇಕೆಂದೇ ತುಚ್ಛವಾಗಿ ಚಿತ್ರಿಸಲಾಗುತ್ತಿದೆ ಅಂತಾರೆ. ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಅಲೆಮಾರಿ ಹಿಜಿಡಾಗಳ ಬದುಕು ಅತಂತ್ರವಾಗಿದೆ. ಬೇಡಿದರೆ ಮಾತ್ರ ಹೊಟ್ಟೆಗೆ ಹಿಟ್ಟು ಎಂಬ ತತ್ವದಲ್ಲಿ ನಂಬಿಕೆಯಿಟ್ಟಿರುವ ಹಿಜಿಡಾಗಳನ್ನು ಮೇಲೆತ್ತುವ ಪ್ರಯತ್ನ ನಡೆಯಬೇಕು. ಅವರು ಹಾಗೆ ಹುಟ್ಟಿದ್ದೇ ತಪ್ಪೆನ್ನಲಾಗದು. ಯಾಕೆಂದರೆ ಹಿಜಿಡಾ ನಾಳೆ ನಮ್ಮ-ನಿಮ್ಮ ನಡುವೆಯೂ ಜನಿಸಬಹುದು. ಹೀಗಾಗಿ ಅವರನ್ನು ನಮ್ಮಿಂದ ದೂರವೇ ಇರಿಸುವುದು ಎಷ್ಟರಮಟ್ಟಿಗೆ ಸರಿ? ಅವರಿಗೂ ಸ್ವತಂತ್ರವಾಗಿ, ಗೌರವಯುತವಾಗಿ ಸಮಾಜದಲ್ಲಿ ಬದುಕುವ ಹಕ್ಕಿದೆ. ಸರಕಾರ, ಸ್ವಯಂಸೇವಾ ಸಂಸ್ಥೆಗಳು ಇನ್ನಾದರೂ ಇತ್ತ ಕಣ್ತೆರೆದು ಮಂಗಳಮುಖಿಯರ ಬದುಕು, ಆರೋಗ್ಯವನ್ನು ಸುಧಾರಿಸುವ ಪ್ರಯತ್ನ ಮಾಡಲಿ ಎಂಬ ಆಶಯ ನಮ್ಮದು.

ಹಿಜಿಡಾ ಅಂದರೆ ಯಾರು?

ಹಿಜಿರಾ ಅಥವಾ ಹಿಜಿಡಾ ಎನ್ನುವುದು ಉದರ್ು ಭಾಷೆಯಿಂದ ಬಂದಿರುವ ಪದ. ಇಸ್ಲಮಾಬಾದ್, ಪಾಕಿಸ್ತಾನ, ದಕ್ಷಿಣ ಏಶಿಯಾ ಖಂಡದಲ್ಲಿ ಇವರ ಸಂಖ್ಯೆ ಹೆಚ್ಚು. ಪಾಕಿಸ್ತಾನದಲ್ಲಿ ಇವರ ಗುಂಪುಗಳಿಗೆ ಸರಕಾರದಿಂದ ಪ್ರತ್ಯೇಕ ಸ್ಥಾನಮಾನವನ್ನು ಕೊಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಜೀವಿಸುವಂತೆ ನೋಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ತಮಿಳ್ನಾಡು, ಆಂಧ್ರಪ್ರದೇಶದಲ್ಲಿ ಇವರದ್ದೇ ಆದ ಗುಂಪುಗಳಿದ್ದು, ಇವರಿಗೆ ಸರಕಾರದಿಂದ ಗುರುತಿನ ಪತ್ರ ಸಮೇತ ವಿವಿಧ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ಗರಿಷ್ಠ ಸಂಖ್ಯೆಯಲ್ಲಿರುವ ಹಿಜಿಡಾ ಗುಂಪು ರೇಣುಕಾ ದೇವಿಯನ್ನು ಇವರು ಆರಾಧಿಸುತ್ತವೆ. ಹೆಣ್ಣುಮಕ್ಕಳ ಉಡುಗೆಯನ್ನು ತೊಡುವ ಇವರನ್ನು ಜೋಗಪ್ಪ ಎಂತಲೂ ಕರೆಯುತ್ತಾರೆ. ಮದುವೆಯ, ಹುಟ್ಟುಹಬ್ಬದ ಕಾರ್ಯಕ್ರಮಗಳಲ್ಲಿ ಹಾಡಿ, ಕುಣಿಯುವ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ. ದೇಶದ ವಾಣಿಜ್ಯ ನಗರಿಯಾದ ಮುಂಬೈ, ಕಲ್ಕತ್ತಾ, ದೆಹಲಿಯಲ್ಲಿ ಇವರದ್ದೇ ವೇಶ್ಯಾವಾಟಿಕಾ ತಾಣಗಳೂ ಇವೆ. ಇವುಗಳನ್ನು ಕೋಟಿ ಎಂದು ಕರೆಯುತ್ತಾರೆ. ಇಲ್ಲಿ ಮನೆಯಿಂದ ದೂರವಾಗುವ ಹಿಜಿಡಾಗಳು ಬಂದು ಸೇರುತ್ತಾರೆ ಮಾತ್ರವಲ್ಲದೆ, ಇಲ್ಲಿಂದ ಆಂಧ್ರ ಪ್ರದೇಶಕ್ಕೆ ಕರೆದೊಯ್ದು ಲಿಂಗ ಪರಿವರ್ತನೆ ಮಾಡಿಸಿಕೊಂಡು ಹಿಜಿಡಾಗಳನ್ನಾಗಿ ಬದಲಾಯಿಸುವ ವ್ಯವಸ್ಥೆಯೂ ಇದೆ. ಇಲ್ಲಿರುವ ಹಿಜಿಡಾಗಳು ತಮಗೆ ಬೇಕಾದ ಸಂಗಾತಿಯನ್ನು ಆರಿಸಿಕೊಂಡು ಅವರದ್ದೇ ಸಂಪ್ರದಾಯ ಪ್ರಕಾರ ಮದುವೆಯಾದ ಉದಾಹರಣೆಗಳೂ ಇವೆ. ಇಲ್ಲಿ ದೈಹಿಕ ಸಂಬಂಧಕ್ಕಿಂತ ಹೆಚ್ಚಾಗಿ ಪರಸ್ಪರ ಭಾವನೆಗಳಿಗೆ ಬೆಲೆ ಕೊಡುವ ಪದ್ಧತಿ ಇದೆ ಅಲ್ಲದೆ, ಇಲ್ಲಿ ನಡೆಯುವ ಮದುವೆಗೆ ಯಾವುದೇ ಕಾನೂನು, ಕಟ್ಟಳೆಗಳು ಒಳಪಡುವುದಿಲ್ಲ.

ವಾತ್ಸಾಯನ ಬರೆದಿರುವ ಕಾಮಸೂತ್ರದಲ್ಲೂ ಹಿಜಿಡಾಗಳ ಬಗ್ಗೆ ಉಲ್ಲೇಖವಿದೆ. `ತೃತೀಯ ಪ್ರಕೃತಿ' ಎಂದು ಕರೆಯಲ್ಪಡುವ ಹಿಜಿಡಾ ಕಾಮಕ್ರೀಡೆಯ ಬಗ್ಗೆ, `ಇಬ್ಬರೂ ಶಾರೀರಿಕವಾಗಿ ಗಂಡುಗಳಾಗಿದ್ದು, ಅದರಲ್ಲಿ ಒಬ್ಬ ಹೆಣ್ಣಿನ ಬಟ್ಟೆಯನ್ನು ಉಟ್ಟು ನಡೆಸುವ ಲೈಂಗಿಕ ಕ್ರಿಯೆ' ಎಂದು ವಣರ್ಿಸಲಾಗಿದೆ.

ಆರಾಧನೆ:

ಹಿಜಿಡಾಗಳು ಸಾಮಾನ್ಯವಾಗಿ ಬಹುಚರ ಮಠ ಹಾಗೂ ಶಿವನ ಆರಾಧಕರು. ಶಿವ ಹಾಗೂ ಪಾರ್ವತಿ ಒಂದಾಗಿ ಚಿತ್ರಿಸಲ್ಪಡುವ ಅರ್ಧನಾರೀಶ್ವರನನ್ನು ಇವರು ದೈವೀ ಶಕ್ತಿ ಎಂದು ನಂಬುತ್ತಾರೆ. ಭಾರತದ ಧರ್ಮಗ್ರಂಥ ರಾಮಾಯಣದಲ್ಲೂ ಹಿಜಿಡಾಗಳ ಬಗ್ಗೆ ಉಲ್ಲೇಖವಿದೆ. ರಾಮನು ಅಯೋಧ್ಯೆಯನ್ನು ತೊರೆದು 14 ವರ್ಷ ವನವಾಸಕ್ಕೆ ತೆರಳುತ್ತಾನೆ. ಈ ವೇಳೆ ಹೆಣ್ಣು-ಗಂಡು ಎಂಬ ಬೇಧಭಾವವಿಲ್ಲದೆ ಎಲ್ಲರೂ ರಾಮನನ್ನು ಹಿಂಬಾಲಿಸುತ್ತಾರೆ. ಅಂತಿಮವಾಗಿ ರಾಮ ಎಲ್ಲರನ್ನೂ ಸಮಾಧಾನಪಡಿಸಿ ಹಿಂದಕ್ಕೆ ಕಳುಹಿಸುತ್ತಾನೆ. ಆದರೆ ಆತ ತನ್ನ ವನವಾಸ ಮುಗಿಸಿ ವಾಪಸ್ ಬರುವ ವೇಳೆ ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದ ಹಿಜಿಡಾಗಳು ಕಾಣಸಿಗುತ್ತಾರೆ. ರಾಮನ ಜತೆ ಮಾತಾಡಿ, ಆಶೀರ್ವಚನ ಪಡೆಯದ ವಿನ: ಅವರು ಹೋಗುವುದಿಲ್ಲ. ಮಕ್ಕಳು ಜನಿಸಿದ ವೇಳೆ ಮತ್ತು ಮದುವೆಯ ಸಂದರ್ಭ ಅವರಿಗೆ ಅಯೋಧ್ಯೆಯಲ್ಲಿ ತಿರುಗಾಡಿ ಆಶೀರ್ವದಿಸುವ ಕಾಯಕವನ್ನು ಈ ವೇಳೆ ರಾಮನೇ ನೀಡಿದ ಎಂಬ ಬಗ್ಗೆಯೂ ಉಲ್ಲೇಖವಿದೆ. ಈ ಆಶೀರ್ವದಿಸುವ ಕಾಯಕವೇ ಹಾಡು. ನೃತ್ಯವನ್ನು ಒಳಗೊಂಡಿರುವುದಾಗಿ ಪ್ರತೀತಿಯೂ ಇದೆ.

ಕೈ ಬೀಸಿ ಕರೆದ ಮಂಗಳೂರು

ಮಂಗಳೂರು ವಿಶಾಲ ಕಡಲ ತೀರವನ್ನು ಹೊಂದಿರೋ ಸೊಬಗಿನ ಊರು. ಇಲ್ಲಿಗೆ ಒಮ್ಮೆ ಬಂದವರು ಹಿಂತಿರುಗಿ ಹೋಗುವ ಮನಸ್ಸು ಮಾಡಲಾರರು. ಕಾರಣ ಇಲ್ಲಿನ ಜನರ ಆತ್ಮೀಯತೆ, ಪ್ರೀತಿ ಅಂತದ್ದು. ತೀರಾ ಇತ್ತೀಚಿನ ಕೆಲವೊಂದು ವರ್ಷಗಳವರೆಗೆ ಮಂಗಳೂರಿಗರಿಗೆ ಮಂಗಳಮುಖಿಯರ ಪರಿಚಯವೇ ಇದ್ದಿರಲಿಲ್ಲ. ಎಲ್ಲೋ ಮುಂಬೈಯಲ್ಲಿ ಇವರು ಇರುತ್ತಾರಂತೆ, ಅಂಗಡಿ-ಅಂಗಡಿ ಭಿಕ್ಷೆ ಎತ್ತಲು ಹೋಗುತ್ತಾರಂತೆ... ಎಂದೆಲ್ಲಾ ಮುಂಬೈಯಿಂದ ಬರುತ್ತಿದ್ದ ಬಂಧುಗಳು ಅವರ ಬಗ್ಗೆ ಹೇಳುತ್ತಿದ್ದ ಮಾತುಗಳನ್ನು ಕೇಳುತ್ತಾ ನಮ್ಮವರು ಅವರು ಹೇಗಿರಬಹುದು ಎಂದು ಕಲ್ಪಿಸುತ್ತಿದ್ದರೇ ಹೊರತು ಅವರನ್ನು ನೋಡಿರಲಿಲ್ಲ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಇವರು ಇಲ್ಲಿ ನಿತ್ಯ ಸುದ್ದಿಯಲ್ಲಿದ್ದಾರೆ. ಮೊನ್ನೆ ಅಲ್ಲಿದ್ದರು, ಇಂದು ಇಲ್ಲಿದ್ದರು ಎಂಬುದರಿಂದ ಹಿಡಿದು ಇವರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ, ನಮಗಾಗುವ ತೊಂದರೆ ಅಷ್ಟಿಷ್ಟಲ್ಲ ಎಂಬ ಆರೋಪಗಳೂ ಇವರ ಮೇಲಿದೆ. ಹೀಗಿರುವಾಗ ಇವರಲ್ಲಿ ನೀವ್ಯಾಕೆ ನಮ್ಮ ಊರಿಗೆ ಬಂದ್ರಿ ಅಂತ ಕೇಳಿದರೆ, `ನಮಗೆ ಆ ಊರು ಈ ಊರು ಇಲ್ಲಣ್ಣಾ... ಹೋದ ಊರು, ಬಂದ ದೇಶ... ಮಂಗಳೂರು ಕೈ ಬೀಸಿ ಕರೆಯಿತು, ಇಲ್ಲಿ ಬಂದ ಬಳಿಕ ಹಿಂತಿರುಗಿ ಹೋಗೋಕ್ಕೆ ಮನಸಾಗ್ತಾ ಇಲ್ಲ' ಅಂತಾರೆ.

ಏಡ್ಸ್ ಬಗ್ಗೆ ಜಾಗೃತಿ!

ಮಂಗಳೂರಿನಂತಹ ಸಭ್ಯ, ಸುಸಂಸ್ಕೃತ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ನಿರ್ಲಜ್ಜ ಸಲಿಂಗಕಾಮಿಗಳ ಹಾವಳಿಯೂ ಬೆಳೆಯತೊಡಗಿದೆ. ಹಿಜಿಡಾಗಳು ಸಾಮಾನ್ಯವಾಗಿ ಸಲಿಂಗಕಾಮಿಗಳಲ್ಲ. ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದ ಇವರಿಗೂ ಲೈಂಗಿಕ ಬಯಕೆಗಳಿವೆ. ಬಯಕೆ ಮಿತಿ ಮೀರಿದಾಗ ಸಹಜವಾಗಿ ಗಂಡಿನ ಪ್ರೀತಿಯತ್ತ ಇವರು ಆಕಷರ್ಿತರಾಗುತ್ತಾರೆ. ಇವರು ಭಿಕ್ಷೆ ಎತ್ತುವ ಕಾಯಕವನ್ನೇನೋ ನಡೆಸುತ್ತಾರೆ. ಆದರೆ ಅದರ ನಡುವೆ ನಿರ್ಲಜ್ಜ ಪುರುಷರಿಗೆ ಕತ್ತಲಿನ ಸಂದಿಗೊಂದಿಗಳಲ್ಲಿ ಸುಖವನ್ನು ಕೊಡುತ್ತಾರೆ. ಅವರು ಕೊಡುವ ಸುಖ ಗಂಡು-ಹೆಣ್ಣಿನ ಸಮಾಗಮದಿಂದ ದೊರೆಯುವ ಪರಿಪೂರ್ಣ ಸುಖವಲ್ಲ, ಆದರೆ ಕಾಮದ ಮದವೇರಿಸಿಕೊಂಡ ಗಂಡನ್ನು ಅವರು ಕ್ಷಣಮಾತ್ರದಲ್ಲಿ ಕರಗಿಸಿ ಬಿಡುವ ಕಲೆಯನ್ನು ಮಾತ್ರ ಕರಗತ ಮಾಡಿಕೊಂಡಿದ್ದಾರೆ. ರೈಲ್ವೇ ಬ್ರಿಡ್ಜ್, ಹಳೆಯ ಪಾಳುಬಿದ್ದ ಫ್ಯಾಕ್ಟರಿ, ಮರಗಳ ತೋಪು ಮುಂತಾದೆಡೆ ಇವರ ದರ್ಶನಕ್ಕೆಂದೇ ಕಾಯುವ ಪುರುಷ ಸಿಂಹಗಳು... ಇವರನ್ನು ಕಂಡು ಮುಗಿಬೀಳುವ ವಿಟ ಪುರುಷರ ದೇಹದ ಬಿಸಿ ಆರುವವರೆಗೆ ಇವರು ಸಹಕರಿಸಬೇಕು. ಅದನ್ನು ನೀವು ನೈಸಗರ್ಿಕ ಕಾಮ ಎನ್ನಿ... ಅನೈಸಗರ್ಿಕ ಕಾಮವೆನ್ನಿ... ಇವರು ಆ ಬಗ್ಗೆ ತಲೆ ಕೆಡಿಸುವುದಿಲ್ಲ. `ಅಣ್ಣಾ... ನಮ್ಗೂ ಲೈಂಗಿಕ ಬಯಕೆಗಳಿವೆ, ಅದನ್ನು ಈ ರೀತಿ ತೀರಿಸ್ಕೋತೀವಿ. ನಮ್ಮಲ್ಲಿ ಪ್ರತಿನಿತ್ಯ ಒಬ್ಬೊಬ್ಬರು ತಲಾ 3-4 ಮಂದಿಯನ್ನು ನೋಡ್ಕೋತೀವಿ. ಗ್ರಾಹಕರಿಂದ 50-100 ರೂಪಾಯಿ ಮಾತ್ರ ಇಸ್ಕೋತೀವಿ. ಆದ್ರೆ ತಮ್ಮ ಕೆಲಸವಾದ ಮೇಲೆ ಅದನ್ನೂ ನೀಡದೆ ಹಾಗೆ ಎದ್ದು ಹೋಗೋರೂ ಇದ್ದಾರೆ' ಎನ್ನುವ ಇವರು ಲೈಂಗಿಕ ರೋಗಗಳ ಬಗ್ಗೆ ಮಾತ್ರ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಸರಕಾರದಿಂದ ಉಚಿತವಾಗಿ ಸಿಗುವ ನಿರೋಧ್ ಬಳಸದೆ ಇಂತಹ ಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ. ಕೆಲವೊಮ್ಮೆ ಗ್ರಾಹಕರು ವಿಪರೀತ ಒತ್ತಾಯ ಮಾಡುತ್ತಾರೆ. ಆದರೂ ನಮ್ಮಲ್ಲಿಗೆ ಬರುವ ಗ್ರಾಹಕರ ಹಾಗೂ ನಮ್ಮ ಆರೋಗ್ಯ ರಕ್ಷಣೆಗಾಗಿ ನಿರೋಧ್ ಅಗತ್ಯವಾಗಿ ಬಳಸುತ್ತೇವೆ ಎನ್ನುತ್ತಾರೆ.

ಬಿಟ್ಟರೂ ಬಿಡದೀ ಮಾಯೆ!

ನಾವು ಎಲ್ಲರಂತೆಯೇ ಬದುಕಲು ಬಯಸುತ್ತೇವೆ, ನಮಗೂ ಸಮಾಜದ ಮುಖ್ಯವಾಹಿನಿಗೆ ಬರುವ ಆಸೆಯೇನೋ ಇದೆ. ನಮ್ಮವರು ಟಿ.ವಿ. ಚಾನೆಲ್ಗಳಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಾರೆ, ರೇಡಿಯೋ ಜಾಕಿ ಆಗಿಯೂ ದುಡಿಯುತ್ತಿದ್ದಾರೆ. ಸ್ವಾವಲಂಬನೆಯ ಬದುಕು ನಡೆಸಬಹುದು ಎನ್ನುವ ಮಾತು ಹೇಳಲು ಮಾತ್ರ ಸುಲಭ. ಆದರೆ ನಮಗೇನೇ ಮಾಡಿದರೂ ಈ ಬಟ್ಟೆ ಮತ್ತೆ, ಮತ್ತೆ ಸೆಳೆಯುತ್ತದೆ. ನಮಗೆ ಗೊತ್ತು ನಾವು ಎಲ್ಲರಂತಿಲ್ಲ. ನಾವು ಗಂಡಸರ ಹಾಗೆ ಇದ್ದೀವಿ, ಆದರೆ ನಾವು ಹಾಗೆ ಇಲ್ಲ. ನಮಗೆ ಮಾತ್ರ ಗೊತ್ತು ನಾವು ಏನು ಎಂಬುದು. ಹೀಗಾಗಿ ನಾವು ಗಂಡಸರ ಬಟ್ಟೆ ತೊಟ್ಟು ಓಡಾಡುವಂತಿಲ್ಲ. ಹಾಗೊಂದು ವೇಳೆ ನಾವು ಗಂಡಸರ ವೇಷ ಧರಿಸಿ ಓಡಾಡಿದರೂ ನಮಗೆ ಆತ್ಮತೃಪ್ತಿ ಎನ್ನುವುದು ಸಿಗಲ್ಲ. ಈ ಹೆಣ್ಣಿನ ಬಟ್ಟೆ, ಅಲಂಕಾರ ನಮ್ಮನ್ನು ಮತ್ತೆ ತನ್ನೆಡೆಗೆ ಆಕಷರ್ಿಸುತ್ತದೆ. ಇದನ್ನೇ ಧರಿಸಿ ಮೆರೆಯಬೇಕು ಎಂಬ ಬಯಕೆ ಜಾಸ್ತಿಯಾಗುತ್ತೆ. ಈ ವೇಳೆ ಇಂತಹ ಯೋಚನೆ ನಮ್ಮ ಮನದಲ್ಲಿ ಮೂಡುವುದಾದರೂ ಹೇಗೆ? ನಾವು ಹುಟ್ಟಿದ್ದೇ ದೇವರ ಶಾಪ... ಹೇಗೋ ಬದುಕುತ್ತೇವೆ, ನಮ್ಮನ್ನು ಬದುಕಲು ಬಿಡಿ ಎಂದು ಕೈಮುಗಿದು ಕಣ್ಣಲ್ಲಿ ನೀರು ತಂದುಕೊಳ್ಳುತ್ತಾಳೆ ಪ್ರೀತಿ ಅಲಿಯಾಸ್ ರಮೇಶ್.

ಕಾಯುವಳು ಸವದತ್ತಿ ಎಲ್ಲಮ್ಮ

ಹಿಜಿಡಾಗಳ ತಂಡದಲ್ಲಿ ಇರುವ ಎಲ್ಲರೂ ಶಿಕ್ಷಣ ಪಡೆದಿಲ್ಲವಾದರೂ ಮಹಾಲಕ್ಷ್ಮಿ ಅಲಿಯಾಸ್ ಮಲ್ಲಿಕಾಜರ್ುನ ಎಸ್ಎಸ್ಎಲ್ಸಿ ಕಲಿತಿದ್ದಾಳೆ. ಪ್ರೀತಿ ಅಲಿಯಾಸ್ ರಮೇಶ ಅತೀ ಹೆಚ್ಚು ಅಂದರೆ ಪಿಯುಸಿ ಪಾಸ್ ಆಗಿದ್ದಾಳೆ, ಶ್ರುತಿ ಅಲಿಯಾಸ್ ಸುಧಾಕರ ಎಂಟನೇ ತರಗತಿ ಪಾಸ್ ಆದವಳು ಮುಂದೆ ಓದಿಲ್ಲ. ಇದಕ್ಕೆಲ್ಲಾ ಕಾರಣವಾಗಿದ್ದು ಇದೇ ಸಮಸ್ಯೆ ಎನ್ನುತ್ತಾರೆ ತಂಡದಲ್ಲಿ ಸ್ಫುರದ್ರೂಪಿಯಾಗಿ ಗುರುತಿಸಲ್ಪಡುವ ಶ್ರುತಿ. ಈಕೆಯೇ ಹೇಳುವಂತೆ, `ಬಾಲ್ಯ ಕಳೆದು ಯೌವನಕ್ಕೆ ಕಾಲಿಡುವ ವೇಳೆ ನನ್ನಲ್ಲೇನೋ ಬದಲಾವಣೆ ಆಗುತ್ತಿರುವ ಅನುಭವವಾಯಿತು. ನಾನು ಗಂಡು ಮಗು ಆಗಿದ್ದರೂ ನನಗೆ ಇದ್ದುದು ಹೆಣ್ಣಿನ ಬಟ್ಟೆಗಳ ಮೇಲೆ ಕಣ್ಣು. ಮನೆಯಲ್ಲಿಯೂ ನನಗೆ ಹೆಣ್ಣು ಮಕ್ಕಳ ಬಟ್ಟೆ ಉಡುವುದು ಹೆಚ್ಚು ಪ್ರಿಯವಾಗುತ್ತಿತ್ತು. ಈ ಕಾರಣಕ್ಕಾಗಿ ಮನೆಯ ಹೆಂಗಸರ ಬಟ್ಟೆಯನ್ನು ಉಟ್ಟು ಚಂದ ನೋಡುತ್ತಿದ್ದೆ. ಮನೆಯಲ್ಲಿ ಹೆಣ್ಣು ಮಕ್ಕಳಂತೆ ಅಲಂಕರಿಸುವುದು, ಪಾತ್ರೆ ತೊಳೆಯುವುದು, ನೆಲ ಒರೆಸುವುದು ಇವೇ ಮುಂತಾದ ಕೆಲಸದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದೆ. ಇದೇಕೆ ಎಂದೇ ನನಗೆ ಅರ್ಥವಾಗುತ್ತಿಲ್ಲ. ಆದರೆ ಕೊನೆಗೊಂದು ದಿನ ನಾನದಕ್ಕೆ ಅರ್ಥ ಕಂಡುಕೊಂಡೆ. ನಾನು ಎಲ್ಲರಂತಿಲ್ಲ. ರಸ್ತೆಯಲ್ಲಿ ಸೊಂಟ ಬಳುಕಿಸುತ್ತಾ ಕೈ ಬೀಸಿಕೊಂಡು ನಡೆಯುತ್ತಿದ್ದರೆ ನನಗೆ ರಸ್ತೆಯ ತುಂಬಾ ಗೇಲಿಯ ಮಾತುಗಳು ಕೇಳಿಬರತೊಡಗಿತು. ಹೀಗೆ ನನಗೆ ನಾನೇ ನಿಶ್ಚಯಿಸಿದೆ. ಹೌದು... ನಾನು ಸುಧಾಕರ ಎಂಬ ಹೆಸರು ಹೊಂದಿದ್ದರೂ ಸುಧಾಕರನಂತಿಲ್ಲ. ನನ್ನಲ್ಲಿರುವುದು ಹೆಣ್ಣಿನ ಮನಸ್ಸು. ಅತ್ತ ಗಂಡೂ ಅಲ್ಲದೆ, ಇತ್ತ ಹೆಣ್ಣೂ ಅಲ್ಲದೆ ಇರುವ ನಾನು ಮನೆಯಲ್ಲಿ ಹೆಚ್ಚು ದಿನ ಇರಲಾಗಲಿಲ್ಲ. ಒಂದು ದಿನ ಮನೆ ಬಿಟ್ಟವಳು ಸವದತ್ತಿ ಎಲ್ಲಮ್ಮನ ಗುಡಿಗೆ ಹೋಗಿ ಪೂಜಾರಿಯ ಕೈಯಿಂದ ಕೊರಳಿಗೆ ಈ ಮಾಲೆ ಧರಿಸಿದೆ. ಆನಂತರ ನಾನು ಏನೆಂಬುದು ನನಗೇ ಅರ್ಥವಾಗಿ ಹೋಯಿತು' ಎನ್ನುತ್ತಾಳೆ. `ಹುಟ್ಟುವಾಗ ಯಾರೂ ಹೀಗೆ ಇರುವುದಿಲ್ಲ. ನಮಗೂ ಒಂದು ಮಗು ಹುಟ್ಟಿತು ಎಂದು ಹೆತ್ತವರು ಸಂತಸ ಪಡುತ್ತಾರೆ. ಆದರೆ ಬೆಳೆಯುತ್ತಾ ಇಂತಹ ಮಗು ಹುಟ್ಟಬಹುದು ಎನ್ನುವುದು ಅವರಿಗೆ ತಿಳಿದಿರುತ್ತದೆಯೇ? ನಾವು ಯಾವ ಜನ್ಮದಲ್ಲಿ ಯಾರಿಗೆ ಪಾಪ ಮಾಡಿದ್ದೇವೋ, ಈ ಜನ್ಮದಲ್ಲಿ ಅನುಭವಿಸುತ್ತಿದ್ದೇವೆ. ಹುಟ್ಟಿಸಿದವ ಹುಲ್ಲನ್ನು ಮಾತ್ರ ತಿನ್ನಿಸಲಾರ' ಎಂದು ಎಲ್ಲಮ್ಮನ ಹೆಸರು ಹೇಳಿಕೊಂಡು ಮೌನಕ್ಕೆ ಶರಣಾಗುತ್ತಾಳೆ.

ಎಲ್ಲರಿಗೊಬ್ಬಳೇ `ರಾಣಿ'

ಹಿಜಿಡಾಗಳು ಜಿಲ್ಲೆಗೆ ಬರಲು ಮುಖ್ಯ ಕಾರಣ ವರ್ಷದ ಹಿಂದೆ ಜಿಲ್ಲೆಯಲ್ಲಿ ದಾಂಗುಡಿ ಇಡುತ್ತಾ ಸಾಗಿ ಬರುತ್ತಿದ್ದ ಮೈನ್ಸ್ ಲಾರಿಗಳು. ಬಳ್ಳಾರಿಯ ಸಂಡೂರಿನಿಂದ ಕಬ್ಬಿಣದ ಅದಿರನ್ನು ಹೇರಿಕೊಂಡು ಇಲ್ಲಿಗೆ ಬರುತ್ತಿದ್ದ ಲಾರಿಗಳ ಚಾಲಕರು ತಮ್ಮ ಜೊತೆ ಟೈಂಪಾಸ್ಗೆಂದು ಮಂಗಳಮುಖಿಯರನ್ನೂ ಕರೆತಂದರು ಎನ್ನಲಾಗುತ್ತಿದೆ. ಹೀಗೆ ಬಂದ ಇವರು ಇಲ್ಲಿನ ವಾತಾವರಣ ನೋಡಿ ಹಿಂತಿರುಗಿ ಹೋಗಲು ಮನಸ್ಸಾಗದೆ ಇಲ್ಲಿಯೇ ಉಳಿದಿರುವ ಸಾಧ್ಯತೆಗಳೂ ಹೆಚ್ಚು. ಹಾಗೆಂದು ಇವರನ್ನು ಹೇಳುವವರು, ಕೇಳುವವರು ಯಾರೂ ಇಲ್ಲವೆಂದುಕೊಳ್ಳಬೇಡಿ. ಇವರ ಗುಂಪಿಗೆ ಓರ್ವ ನಾಯಕನೂ ಇದ್ದಾನೆ(ಳೆ). ಆಕೆಯ ಹೆಸರು ರಾಣಿ. ಈಕೆ ಮೂಲತ: ಬೆಂಗಳೂರಿನ ನಿವಾಸಿ. ಇವರ ಗುಂಪಿನಲ್ಲಿಯೇ ಸ್ಫುರದ್ರೂಪಿ ಈಕೆ. ಈ ಕಾರಣದಿಂದಲೇ ಇವಳಿಗೆ ಭಾರೀ ಡಿಮ್ಯಾಂಡ್ ಅಂತಾರೆ ಇವರು. ರಾಣಿ ಮಂಗಳೂರಿನಲ್ಲಿ ಇವರ ಜತೆ ಇರುವುದು ಕೆಲವು ದಿನಗಳು ಮಾತ್ರ. ಉಳಿದಂತೆ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುತ್ತಾಳೆ. ಇಡೀ ತಂಡದಲ್ಲಿ ಏನೇ ನಿಧರ್ಾರ ಕೈಗೊಳ್ಳಬೇಕಿದ್ದರೂ ರಾಣಿಯ ಒಪ್ಪಿಗೆ ಬೇಕೇ ಬೇಕು. ಆಕೆ `ಯೆಸ್' ಅಂದಮೇಲೆ ಎಲ್ಲವೂ ಮುಂದುವರಿಯುತ್ತದೆ.

ಭಿಕ್ಷಾಂದೇಹಿ!

ಹಿಜಿಡಾಗಳು ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾರಾದರೂ ಅವರ ಜೀವನದ ಅವಿಭಾಜ್ಯ ಅಂಗವೆಂದರೆ ಭಿಕ್ಷಾಟಣೆ. ಅವರೇ ಹೇಳುವಂತೆ `ಭವತೀ ಭಿಕ್ಷಾಂದೇಹಿ' ಎಂದು ಕೈ ಮುಂದೆ ಚಾಚಿ ಭಿಕ್ಷೆ ಬೇಡದಿದ್ದರೆ ಅವರಿಗೆ ಏನನ್ನೋ ಕಳೆದುಕೊಂಡಂತೆ. ಇದರಿಂದ ದೊರೆಯುವ ಸಂಪಾದನೆಯೂ ಚೆನ್ನಾಗಿದೆ. ಆದರೆ ಬೆಳಗ್ಗಿನಿಂದ ಸಂಜೆಯ ತನಕ ಅಂಗಡಿ ಮೆಟ್ಟಿಲು ತುಳಿಯುತ್ತಾ ಅವರಿವರು ಹೇಳುವ ಕೊಳಕು ಮಾತುಗಳನ್ನು ಕೇಳಬೇಕು. ಎಷ್ಟೋ ಮಂದಿ ಇವರು ಬರುತ್ತಿದ್ದಂತೆಯೇ ತಮ್ಮ ಅಂಗಡಿ ಬಾಗಿಲು ಎಳೆದು ಹತ್ತಿರದ ಅಂಗಡಿಗೆ ಹೋಗುವುದೂ ಇದೆ. ಇನ್ನು ಕೆಲವರಂತೂ ಇವರು ಭಿಕ್ಷೆಗೆ ಬಂದು ಅಂಗಡಿ ಮುಂಬಾಗಿಲಲ್ಲಿ ನಿಂತರೆ ದೊಣ್ಣೆ ಹಿಡಿದು ಓಡಿಸುವುದೂ ಮಾಮೂಲಿ. ಇಷ್ಟೆಲ್ಲಾ ಸಮಸ್ಯೆಯ ನಡುವೆಯೂ ಇವರು ದಿನವೊಂದಕ್ಕೆ ಸರಾಸರಿ 250-300 ರೂ. ದುಡಿಯುತ್ತಾರೆ. `ಹೇಗಾದರೂ ಭಿಕ್ಷೆ ಬೇಡಿ ಬದುಕುತ್ತೇವೆ ಸಾರ್... ಆದ್ರೆ ರಸ್ತೆಯಲ್ಲಿ ನಡೆಯುವುದೇ ಕಷ್ಟ. ಹೆಣ್ಣು ಮಕ್ಕಳಂತೂ ನಮ್ಮ ಹತ್ತಿರವೂ ಸಾಗದೆ ಮಾರುದೂರ ಹಾರಿದರೆ, ಗಂಡಸರು ಚ... ಬಂದ ಅಂತ ವ್ಯಂಗ್ಯವಾಡುತ್ತಾರೆ, ಇಷ್ಟೆಲ್ಲಾ ಸಮಸ್ಯೆ ಇದ್ರೂ ನಾವು ಯಾರೊಡನೆಯೂ ಜಗಳಕ್ಕೆ ನಿಲ್ಲುವುದಿಲ್ಲ. ನಮ್ಮಷ್ಟಕ್ಕೆ ಭಿಕ್ಷೆ ಬೇಡುತ್ತೇವೆ' ಎನ್ನುತ್ತಾರೆ ರಮೇಶ್ ಅಲಿಯಾಸ್ ಪ್ರೀತಿ.

Saturday, November 13, 2010

ಕಾ(ಬೇ)ಡುವ ಮುಗ್ಧ ಕನಸುಗಳು..





ಅಣ್ಣಾ... ಒಂದು ರೂಪಾಯಿ ಕೊಡಣ್ಣಾ... ಹಸಿವಾಗುತ್ತೆ...

ನಾನು ನನ್ನದೇ ಅವಸರದಲ್ಲಿ ನಡೆಯುತ್ತಿರುವಾಗ ಇಂತಹ ಕೂಗೊಂದು ಬಾರಿ ಬಾರಿ ಕೇಳುತ್ತದೆ. ಅದು ಒಂದೆರಡು ಬಾರಿಯಲ್ಲ... ಬಸ್ ನಿಲ್ದಾಣಕ್ಕೆ ಕಾಲಿಟ್ಟರೆ ಸಾಕು ಈ ಕೂಗು ನನಗೊಬ್ಬನಿಗೆ ಮಾತ್ರವಲ್ಲ... ಬಹುಷ: ಬಾಕಿ ಉಳಿದವರಿಗೂ ಈ ಕೂಗು ಕೇಳಿರುತ್ತದೆ ಎಂದು ಭಾವಿಸುತ್ತೇನೆ. ಆದರೆ ಅಂತಹ ಕೂಗು ಮಾಮೂಲಿಯಾದ್ದರಿಂದ ಯಾರೂ ಅತ್ತ ತಿರುಗಿ ನಡೆಯಲಾರರು. ನನ್ನಂತೆ ಮಾಡಲು ಬೇರೆ ಕೆಲಸವಿಲ್ಲದ ಕೆಲವರಾದರೂ ಈ ಕೂಗು ಬಂದಕಡೆ ತಿರುಗಿ ಏನೆಂದು ವಿಚಾರಿಸುತ್ತಾರೆ. ಕಿಸೆಯನ್ನು ತಡಕಾಡಿ ಸಿಕ್ಕಿದ ಬಿಡಿಗಾಸು ಇವರ ತಟ್ಟೆಗೆ ಬಿಸಾಡಿ ಮುಂದೆ ಸಾಗುತ್ತಾರೆ. ಇದನ್ನು ಕಥೆಯೆಂದು ಭಾವಿಸದಿರಿ. ಇದು ನಮ್ಮ ಮಂಗಳೂರು ಅಥವಾ ನೆರೆಯ ಉಡುಪಿ ಜಿಲ್ಲೆಯ ಪ್ರಧಾನ ಬಸ್ ತಂಗುದಾಣಗಳಲ್ಲಿ ಕಂಡು ಬರೋ ಬೀದಿ ಮಕ್ಕಳ ತೀರದ ವ್ಯಥೆ..!

ಇಂದು ಮಕ್ಕಳ ದಿನಾಚರಣೆ... ಮಕ್ಕಳನ್ನು ಒಂದು ದಿನದ ಮಟ್ಟಿಗಾದರೂ ಮಾನಸಿಕ ಕಿರಿಯಿಂದ ದೂರವಿರಿಸಿ ಅವರಲ್ಲಿ ಸ್ಫೂತರ್ಿಯ ಸೆಲೆ ತುಂಬಿಸುವ ಸಲುವಾಗಿ ಶಿಕ್ಷಣ ಸಂಸ್ಥೆಗಳು, ವಿವಿಧ ಸಾಮಾಜಿಕ ಸಂಘಟನೆಗಳು ಈ ದಿನವನ್ನು ಭಾರೀ ಗೌಜಿಯಿಂದ ಆಚರಿಸುತ್ತವೆ. ಇಂದಿನ ದಿನವಾದರೂ ಮಕ್ಕಳನ್ನು ಖುಷಿಯಿಂದ ಇರಿಸಿ, ಮಕ್ಕಳೊಂದಿಗೆ ಮಕ್ಕಳಾಟ ಆಡುತ್ತಾ ಕಾಲ ಕಳೆಯೋಣ ಅನ್ನೋದು ಶಿಕ್ಷಕರ ಅಥವಾ ಇಂತಹ ಸಂಘಟನೆಗಳ ಉದ್ದೇಶವಾಗಿರಲೂಬಹು. ಆದ್ರೆ ಈ ಹೊತ್ತಲ್ಲಿ ಪ್ರಜ್ಞಾವಂತ ನಾಗರಿಕರಾದ ನಾವು ಮೇಲಿನ ಸನ್ನಿವೇಶದ ಬಗೆ ಕಿಂಚಿತ್ತಾದರೂ ಯೋಚಿಸಲೇಬೇಕು.

ಮಕ್ಕಳು ದೇವರ ಸಮಾನ?

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಪ್ರೀತಿ, ಅವರು ಹೋದಲ್ಲಿ ಬಂದಲ್ಲಿ ಮಕ್ಕಳ ಜೊತೆ ಬೆರೆಯುತ್ತಿದ್ದರು. ಹೀಗಾಗಿ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ ಅನ್ನೋ ಮಾತನ್ನು ಪ್ರಾಥಮಿಕ ಶಾಲೆಯಿಂದ ಇಂದಿನವರೆಗೆ ಕೇಳುತ್ತಲೇ ಇದ್ದೇವೆ. ಆದರೆ ಈ ದಿನಾಚರಣೆಯಂದು ಬೀದಿಗೆ ಬಿದ್ದ ಮಕ್ಕಳನ್ನು ಉಪಚರಿಸುವ ಕೆಲಸವನ್ನು ಯಾರಾದರೂ ಮಾಡಲು ಮುಂದಾಗುತ್ತಾರಾ ಅನ್ನೋ ಪ್ರಶ್ನೆಗೆ ನಮ್ಮಲ್ಲಿ ಉತ್ತರ ಮಾತ್ರ ಶೂನ್ಯ. ಮಕ್ಕಳು ದೇವರಿಗೆ ಸಮಾನ ಎಂದು ಮನೆಯ ಮಕ್ಕಳನ್ನು ಪ್ರೀತಿಸುತ್ತಾ, ಅವರು ಕೇಳಿದ್ದು ಸಾವಿರ ಬೆಲೆಯದ್ದಾದರೂ ಹಿಂದೆ-ಮುಂದೆ ಯೋಚಿಸದೆ ತಂದುಕೊಡುವ ನಾವುಗಳು ಅದೇ ಬೀದಿಯ ಮಕ್ಕಳನ್ನು ಕಂಡಾಗ ಮುಖ ತಿರುಗಿಸಿ ನಡೆಯುವುದೇಕೆ?

ಉಡುಪಿ ಶ್ರೀ ಕೃಷ್ಣನ ನೆಲೆವೀಡು. ಇಲ್ಲಿನ ಅಷ್ಟಮಠಗಳಲ್ಲಿ ಸಂಪತ್ತು ಉಕ್ಕಿ ಹರಿಯುತ್ತಿದೆ. ದೇವಳದ ಜಾಗವೆಂದು ಹೇಳಲಾಗುವ ಸ್ಥಳದಲ್ಲಿ ಒಂದಿಂಚೂ ಜಾಗವನ್ನು ಬಿಡದೆ ಭವ್ಯ ಕಟ್ಟಡಗಳು ಮೇಲೇರುತ್ತಿವೆ. ಇಲ್ಲಿನ ಆದಾಯ ಕೋಟಿಗೂ ಅಧಿಕ. ಹೀಗಿದ್ದರೂ ಇಲ್ಲಿಗೆ ಬೀದಿಗಳಲ್ಲಿ ಅದೇ ಹರಕು-ಮುರುಕು ಬಟ್ಟೆಯ ಸಣ್ಣಪುಟ್ಟ ಮಕ್ಕಳು ಕೈಯಲ್ಲಿ ತಟ್ಟೆ ಹಿಡಿದು ಅಣ್ಣಾ... ಎಂದು ಬೆನ್ನು ಬೀಳುತ್ತವೆ. ಇವರಿಂದ ಪಾರಾದರೆ ಸಾಕು ಎಂದು ಓಡುವ ಮಂದಿಯೆಷ್ಟೋ ಇರಬಹುದು. ಆದರೆ ತಿರುಗಿ ನಿಂತು ಇವರ ಕಷ್ಟ ಕೇಳಿದಾಗ ಮಾತ್ರ ಒಂದು ದಿನದ ಆಚರಣೆ, ಸರಕಾರದ ಸೋಗಲಾಡಿತನ, ಸಾಮಾಜಿಕ ಸಂಘಟನೆಗಳ ಹೊಣೆಗೇಡಿತನ ಮನಸ್ಸಿಗೆ ನಿಜಕ್ಕೂ ಬೇಸರ ತರಿಸದಿರದು.

ಪಾಟರ್್ ಟೈಂ ಭಿಕ್ಷಾಟಣೆ:

ಆತನ ಹೆಸರು ಹನುಮಂತ... ಸೂರ್ಯ ಮುಳುಗುವ ಹೊತ್ತು ಉಡುಪಿಯ ಹೊಸ ಸರಕಾರಿ ಬಸ್ ನಿಲ್ದಾಣಕ್ಕೊಮ್ಮೆ(ಈಗ ಹಳತಾಗಿದೆ) ನೀವು ಕಾಲಿಟ್ಟರೆ ಅಲ್ಲಿ ಎಲ್ಲಾದರೊಂದು ಕಡೆ ಕಂಬದ ಮರೆಯಲ್ಲಿ ನಿಂತು ತನ್ನ ಅಷ್ಟಿಷ್ಟು ಹರಿದ ನೀಲಿ ಚೆಡ್ಡಿಯಿಂದ ನಾಣ್ಯಗಳನ್ನು ಒಂದೊಂದಾಗಿ ತೆಗೆದು ಲೆಕ್ಕ ಮಾಡುತ್ತಿರುತ್ತಾನೆ. ಈತನನ್ನು ನೀವು ನೋಡಿದ್ದು ಗೊತ್ತಾದರೆ ಸಾಕು, ನಿಮ್ಮ ಹಿಂದೆಯೇ ಓಡಿ ಬರುತ್ತಾನೆ. ಹಣ ನೀಡದ ಹೊರತು ಆತ ನಿಮ್ಮನ್ನು ಬಿಡುವುದಿಲ್ಲ. ಅಂದಹಾಗೆ ಹನುಮಂತ ನಿರ್ಗತಿಕನಲ್ಲ. ಉಡುಪಿ ಸಮೀಪದ ದೊಡ್ಡಣಗುಡ್ಡೆಯ ಡೇರೆಯಲ್ಲಿ ತಂದೆ-ತಾಯಿ, ತಂಗಿಯ ಜೊತೆ ವಾಸ ಮಾಡುತ್ತಾನೆ. ಮೂರನೇ ಕ್ಲಾಸು ಕಲಿಯುವ ಹನುಮಂತ ಶಾಲೆಯಿಂದ ಬಂದ ಬಳಿಕ ತಾಯಿಯೇ ಭಿಕ್ಷೆ ಎತ್ತಲು ಕಳುಹಿಸುತ್ತಾಳೆ. ಕಾರಣ ಬಿಲ್ಡಿಂಗ್ ಕಾಮಗಾರಿಗಳಲ್ಲಿ ದುಡಿಯುವ ಹನುಮಂತನ ತಂದೆ ಎಂಬ ರಾಕ್ಷಸನ ಕಿರಿಕಿರಿ. ಪ್ರತೀ ರಾತ್ರಿ ಕುಡಿದು ಇದ್ದ ಹಣವೆಲ್ಲಾ ಅಲ್ಲಲ್ಲಿ ಸಂದಿಗೊಂದರಂತೆ ಇರುವ ಮಟ್ಕಾ ಅಡ್ಡೆಯಲ್ಲಿ ಕಳೆದು ಬರುವ ತಂದೆ ಎಂಬ ಪ್ರಾಣಿ ಹನುಮಂತನ ಶಾಲೆಗೆ ನಯಾಪೈಸೆ ನೀಡುವುದಿಲ್ಲವಂತೆ. ಈ ಕಾರಣಕ್ಕಾಗಿ ಭಿಕ್ಷೆ ಎತ್ತುತ್ತಿದ್ದೇನೆ ಎನ್ನುವ ಹನುಮಂತನ ದಿನವೊಂದರ ಸಂಪಾದನೆ 30ರಿಂದ 40 ರೂಪಾಯಿ. ಕಲಿತು ಏನಾಗುತ್ತೀ ಎಂದು ಕೇಳಿದರೆ, `ಅದೆಲ್ಲ ಯಾಕಣ್ಣಾ ನನ್ಗೆ ಒಂದು ರೂಪಾಯಿ ಕೊಡಿ ಎನ್ನುವ ಮುಗ್ಧ ಬಾಲಕನ ಕನಸೇ ಇಲ್ಲದ ಮಾತುಗಳು ಮನಸ್ಸಿನಾಳಕ್ಕೆ ನೇರವಾಗಿ ಈಟಿಯಂತೆ ಇರಿಯುತ್ತದೆ. ಇದು ಓರ್ವ ಹನುಮಂತನ ಕಥೆಯಲ್ಲ, ಬೀದಿಯಲ್ಲಿ ಒಮ್ಮೆ ತಿರುಗಾಡಿದರೆ ಸಾಕು ಇಂತಹ ಹತ್ತಾರು ಕಥೆಗಳು ನಮ್ಮೆದುರು ತೆರೆದುಕೊಳ್ಳುತ್ತದೆ.

ಲಕ್ಷ್ಮಿ, ಮಂಜುಳಾ, ದ್ಯಾಮವ್ವ...

ಉಡುಪಿಯ ಸಿಟಿ, ಸವರ್ಿಸ್, ಸರಕಾರಿ ಬಸ್ ನಿಲ್ದಾಣಗಳನ್ನು ತಮ್ಮ ಖಾಯಂ ನೆಲೆಯನ್ನಾಗಿ ಮಾಡಿಕೊಂಡ ಲಕ್ಷ್ಮಿ, ಮಂಜುಳಾ, ದ್ಯಾಮವ್ವರದ್ದು ಕಥೆ ಕೇಳಿದರೆ ಅಯ್ಯೋ ಪಾಪ ಅನಿಸುತ್ತದೆ. ಇವರು ಹೊರಜಿಲ್ಲೆಯ ಕೂಲಿ ಕಾಮರ್ಿಕರ ಮಕ್ಕಳು. ತಂದೆ ಕುಡಿಯಲು ದುಡ್ಡಿಗಾಗಿ ಮಕ್ಕಳನ್ನು ಭಿಕ್ಷೆ ಎತ್ತಲು ಕಳುಹಿಸುತ್ತಾನೆ. ಇವರು ಶಾಲೆಯ ಮುಖವನ್ನೇ ಕಂಡಿಲ್ಲ. ಬೆಳಗ್ಗೆದ್ದು ಬಿಡಾರದಿಂದ ಹೊರಬಿದ್ದು ಬಸ್ ನಿಲ್ದಾಣ ಸೇರಿದರೆ ಮರಳುವುದು ಕತ್ತಲಾವರಿಸಿದ ಬಳಿಕ. ಅದೆಷ್ಟೋ ಮಂದಿಯ ನಾಲಗೆಯಿಂದ ಕೇಳಬಾರದ್ದನ್ನು ಕೇಳಿಸಿಕೊಂಡು, ವಿಕೃತ ಕಾಮುಕರ ಕೆಟ್ಟ ನೋಟಕ್ಕೆ ಸಿಲುಕಿ ಈ ಮಕ್ಕಳು ಭಿಕ್ಷೆ ಬೇಡುತ್ತಲೇ ಇದ್ದಾರೆ. ದಿನವೊಂದಕ್ಕೆ ತಮ್ಮ ಖಚರ್ು ಕಳೆದು 50-60 ರೂಪಾಯಿ ಸಂಪಾದಿಸುತ್ತಾರೆ. ಆದರೆ ಇವರ ಜೋಳಿಗೆ ತುಂಬಿದ ಚಿಲ್ಲರೆ ಹಣ ಎಲ್ಲಾ ಕ್ಷಣಮಾತ್ರದಲ್ಲಿ ಸಾರಾಯಿ ಅಂಗಡಿಯದ್ದೋ, ಮಟ್ಕಾ ಅಡ್ಡೆಯದ್ದೋ ಪಾಲಾಗುತ್ತದೆ.

ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಮನೆಯ ಮಕ್ಕಳನ್ನು ಅಲಂಕರಿಸಿ ಖುಷಿಪಟ್ಟರಷ್ಟೇ ಸಾಲದು. ನಮ್ಮ ನೆರೆಮನೆಯ ಮಕ್ಕಳ ಹೊಟ್ಟೆ ತುಂಬಿದೆಯೇ, ಇಲ್ಲವೇ ಎನ್ನುವುದನ್ನು ನೋಡುವುದು ನಮ್ಮ ಕರ್ತವ್ಯವಾಗಬೇಕು. ಮಾಜಿ ಗೃಹ ಸಚಿವರ ತವರೂರಿನಲ್ಲಿ ಮಕ್ಕಳ ಭಿಕ್ಷಾಟಣೆ ನಿರಂತರ ನಡೆಯುತ್ತಲೇ ಇದೆ. ಪೊಡವಿಗೊಡೆಯನ ನಾಡಿನಲ್ಲಿ ಬೀದಿ ಮಕ್ಕಳ ಶ್ರೇಯೋಭಿವೃದ್ಧಿಗೆ ಅಷ್ಟಮಠಗಳು, ಯತಿವರ್ಯರು ಮನಸ್ಸು ಮಾಡಬೇಕು.

ಮಕ್ಕಳ ದಿನವನ್ನು ವರ್ಷಕ್ಕೊಂದು ಬಾರಿ ಆಚರಿಸಿ ಸಿಹಿತಿಂಡಿ ತಿಂದು ಸಂತಸ ಪಡುವ ನಾವುಗಳು ಬೀದಿ ಮಕ್ಕಳ ಕನಸಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಲು ಶ್ರಮಿಸಬೇಕು. ಇದಕ್ಕಾಗಿಯೇ ಸ್ಥಾಪಿತಗೊಂಡು ಸರಕಾರದ ಹಣವನ್ನು ನುಂಗಿ ನೀರು ಕುಡಿಯುವ ಎನ್ಜಿಓಗಳು ಈ ಬಗ್ಗೆ ಇನ್ನಾದರೂ ಎಚ್ಚರವಾಗಲಿ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನಿಸಲಿ. ಇದು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ. ಆದರೆ ಮಾನವ ಸಮಾಜ ಒಂದಾದಾಗ ಮಕ್ಕಳ ಭಿಕ್ಷಾಟಣೆಗೆ ಖಂಡಿತಾ ಮಂಗಳ ಹಾಡುವುದು ಸಾಧ್ಯ. ಮಕ್ಕಳ ಕೈಯಲ್ಲಿರುವ ತಟ್ಟೆ, ಹೆಗಲಲ್ಲಿರುವ ಜೋಳಿಗೆ ತೆಗೆದು ಅವರ ಬಾಳಿಗೆ ಅಕ್ಷರ ದೀವಿಗೆ ಹಚ್ಚುವವರು ನಾವಾಗೋಣ ಬನ್ನಿ...

ಲಾಸ್ಟ್ಲೈನ್: ಕಳೆಗುಂದಿದ ಮುಖ, ಕೆದರಿದ ಕೂದಲು, ಮಮತೆ, ಪ್ರೀತಿ ವಾತ್ಸಲ್ಯವರಿಯದ ಮುಗ್ಧ ಮನಸ್ಸು, ಸಪ್ಪೆ ಮೋರೆ ಹಾಕಿಕೊಂಡು ಬಂದು ಹೋಗುವವರ ಕಡೆ ಆಶೆಯ ಕಂಗಳ ದೃಷ್ಟಿ ಹರಿಸುತ್ತಾ, ಬೆನ್ನು ಬಿದ್ದು ಮುದ್ದು ಮಾತುಗಳಿಂದ ಕಾಡುವ ನತದೃಷ್ಟ ಮಕ್ಕಳಿಗೆ ಈ ದಿನದ ಶುಭಾಶಯಗಳು.

Monday, July 26, 2010

ಕೋಪಿಸೋದ್ರಲ್ಲಿ ಇರೋ ಸುಖ...




ಕೋಪದಲ್ಲಿ ಇರೋ ಸುಖ..!

  • `ಕೋಪ' ಅನ್ನೋದು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿರುವ, ಮುಂಗಾರಿನ ಸಮಯದಲ್ಲಿ ಎನಿಸ್ಕೊಂಡಾಗ ಬರೋ ಸಿಡಿಲಿನಂತೆ ನಮ್ಗೆ ತೀರಾ ಚಿರಪರಿಚಿತ ಪದ. ಕರಿ ಮೋಡ ಮುಸುಕಿದಂತೆ ನಮ್ಮ ಮನಸ್ಸನ್ನು ಆವರಿಸಿ, ಮೈ ಮನದಲ್ಲಿ ಸಂಚಲನ ಉಂಟು ಮಾಡೋ ಈ ಕೋಪದ ಮಜಾ ಸವಿದವರಿಗಷ್ಟೇ ಗೊತ್ತು. ಕೋಪದ ಮಹಿಮೆ ಬಲ್ಲವರಾರೋ? ಆದ್ರೆ ಈ ಕೋಪ ಅನ್ನೋದು ಯಾಕೆ ಬರುತ್ತೆ ಅಂತ ನಾವ್ಯಾರೂ ಊಹಿಸೋದೇ ಇಲ್ಲ. ಒಂದು ವೇಳೆ ಹಾಗೆ ಊಹಿಸೋದಿಕ್ಕೆ ಕೆಲ ಕಾಲ ತೆಗೆದುಕೊಂಡ್ರೂ ಆಗ ಎಲ್ಲಿಲ್ಲದ ಕೋಪ ಬರುತ್ತೆ. ಹೀಗೆ ಕೋಪವನ್ನು ನಾನಾ ರೀತಿಯಲ್ಲಿ ವಿಂಗಡಣೆ ಮಾಡೋದೇನೋ ಸರಿ. ಆದ್ರೆ ಕೆಲವೊಂದು ಸಲ ಈ ತರದ ಕೋಪಗಳಿಂದ ಲಾಭಕ್ಕಿಂತ ನಷ್ಠವೇ ಹೆಚ್ಚು ಅನ್ನೋದು ಅಷ್ಟೇ ದಿಟ.
    ನನ್ಗಂತೂ ಆಗಾಗ ಕೆಟ್ಟ ಕೋಪ ಬರುತ್ತೆ ಸ್ವಾಮೀ... ಈ ರೀತಿ ಕೋಪ ಬಂದಾಗ ನಾನು ಮನುಷ್ಯನಾಗಿರಲ್ಲ ಅಂತ ನಮ್ಮ ಮುಂದೆ ನಿಂತ್ಕೊಂಡು ತನ್ನ ಕೋಪದ ವರ್ಣನೆ ಮಾಡೋರನ್ನ ಬೇಜಾನ್ ನೋಡಿರ್ತೀವಿ. ಆತ ತಾನೊಬ್ಬ ಮಹಾನ್ ವ್ಯಕ್ತಿ ಅನ್ನೋ ತರಾ ಫೋಸ್ ಕೊಡ್ತಾ ನಿಂತಿದ್ರೆ ನಮ್ಗೆ ಇನ್ನಷ್ಟು ಕೋಪ ಬಂದಿರುತ್ತೆ. ಈ ಕೋಪಕ್ಕೆ ಕಾರಣಾನೂ ಬೇಕಿಲ್ಲ, ಅದಕ್ಕೆ ಅದರದ್ದೇ ಆದ ನಿದರ್ಿಷ್ಠ ಸ್ವರೂಪವೂ ಇಲ್ಲ. ಹಾಗಂತ ಈ ಕೋಪಾನ ಹಾಗೆ ಸುಮ್ಮನೆ ಬಿಡೋಕ್ಕಾಗುತ್ತಾ? ಬನ್ನಿ... ಈ ಕೋಪದ ಬಗ್ಗೆ ನಾವಾದ್ರೂ ಸ್ವಲ್ಪ ಹೊತ್ತು ಹರಟೋಣ.
    ಸಾಮಾನ್ಯವಾಗಿ ಕೋಪ ಯಾವಾಗ ಬರುತ್ತೆ ಅಂತ ಹೇಳೋಕ್ಕಾಗಲ್ಲ. ಬೆಳಿಗ್ಗೆದ್ದು ಆಫೀಸಿಗೆ ಹೊರಡೋ ತಯಾರಿಯಲ್ಲಿರ್ತೀವಿ. ಆಗ ನಮ್ಗೆ ಬೇಕಿದ್ದ ವಸ್ತುಗಳು ನಮ್ಮಿಂದ ಮರೆಯಾಗಿ ಸಕಾಲದಲ್ಲಿ ಸಿಗೋದಿಲ್ಲ. ಆಗಂತೂ ಕೂಡ್ಲೇ ಕೋಪ ಬಂದ್ಬಿಡುತ್ತೆ. ಅಮ್ಮ ತಿಂಡಿ ಮಾಡಿಟ್ಟು ಹತ್ರ ತಂದು ಕೊಡೋದು ಲೇಟಾದ್ರೆ ಆಗ್ಲೂ ಕೋಪ. ತಿಂಡಿ ತಿಂದು ಅಜರ್ೆಂಟಲ್ಲಿ ವಾಚು, ಪಸರ್ು ಮರೆತು ಬಸ್ಟ್ಯಾಂಡ್ಗೆ ತೆರಳಿದ್ರೆ ಬಸ್ಸು ನಮ್ಮನ್ನೇ ಬಿಟ್ಟು ಹೋಗಿರುತ್ತೆ. ನಾವು ಬಸ್ಸು ಕಾಯ್ಬೇಕೋ? ಬಸ್ಸು ನಮ್ಮನ್ನು ಕಾಯ್ಬೇಕೋ, ತಿಳಿಯದಾಗುತ್ತೆ. ಆಗ ಅನ್ಯಾಯವಾಗಿ ಡ್ರೈವರ್ ಮಹಾಶಯ ನಮ್ಮ ಕೋಪದ ಶಾಪಕ್ಕೆ ಗುರಿಯಾಗ್ಬೇಕಾಗುತ್ತೆ.
    ಸಿಕ್ಕಿದ ಬಸ್ನಲ್ಲಿ ಅಷ್ಟಿಷ್ಟು ತೂರ್ಕೊಂಡು ಒಳ ನುಗ್ಗಿದ್ರೆ ಕಂಡಕ್ಟರ್ನ ಹಾಳು ಬೈಗುಳ ಬೇರೆ. 4 ರೂಪಾಯಿ ಟಿಕೆಟ್ಗೆ 10 ರೂ ನೀಡಿದ್ರೆ ಚಿಲ್ಲರೆ ಇಲ್ಲ ಅನ್ನೋದು ನಮ್ಮ ಕಂಡಕ್ಟರ್ಗಳ ಸ್ಟೈಲ್. ಹಿಂದಿನ ಸ್ಟಾಪ್ನಲ್ಲಿ ಯಾರೋ ಟೈಂ ಕೀಪರ್ ಪುಣ್ಯಾತ್ಮ ಬೈದಿರ್ತಾನೆ, ಅದನ್ನು ಆತ ನಮ್ಮ ಮೇಲೆ ಒಂಚೂರೂ ಬಿಡದೆ ಕಾರಿ ಬಿಡ್ತಾನೆ. ಬಸ್ನಲ್ಲಿ ಮೆಲ್ಲಗೆ ಬೈದು ಬಿಟ್ರೆ ಪರ್ವಾಗಿಲ್ಲ, ಅಂತ ಸುಮ್ಮನಿರಬಹುದು. ಆದ್ರೆ ಕಾಲೇಜು ಹುಡ್ಗೀರ ಮುಂದೆ ಬೈದ್ರೆ ನಾವು ಸುಮ್ಮನಿರ್ತೀವಾ? ಆವಾಗ್ಲೆ ನಮ್ಗೆ ಕೆಟ್ಟ ಕೋಪ ಬರೋದು. ಹೀಗೆ ಕೆಲವೊಮ್ಮೆ ನಾವು ದಿನಕ್ಕೆಷ್ಟು ಸಾರಿ ಕೋಪ ಮಾಡ್ಕೋತೀವಿ ಅಂತ ನೆನಪೇ ಆಗಲ್ಲ.
    ಆಫೀಸಿಗೆ ಹೋದ್ರೆ ಅಲ್ಲೂ ಕೋಪ. ದಿನಾಲೂ ತಲೆ ತಿನ್ನೋರು ಅವತ್ತೂ ಅದನ್ನೇ ಮುಂದುವರಿಸಿದ್ರೆ ಸಾಕು, ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಮತ್ತೆ ಮನಸ್ಸಿಗೆ ಸಮಾಧಾನ ಹೇಳಿ ಸುಮ್ಮನಾಗೋ ಹೊತ್ತಿಗೆ ಕೋಪವೇನೋ ಇಳಿದಿರುತ್ತೆ. ಆದ್ರೆ ಕೋಪ ಮಾತ್ರ ನಮ್ಮನ್ನು ಆ ದಿನ ಪೂತರ್ಿ ನಕ್ಷತ್ರಿಕನ ಹಾಗೆ ಬೆನ್ನ ಹಿಂದೆ ಬಿದ್ದು ಕಾಡ್ತಾ ಇರುತ್ತೆ. ಹೀಗೆ ಕೋಪ ಮಾಡ್ಕೊಂಡು ರಸ್ತೆ ಮೇಲೆ ನಡೆಯ್ತಾ ಇದ್ರೆ ಎದುರಿಗೆ ಸಿಗೋರೆಲ್ಲಾ ನಮ್ಮ ಕೋಪಕ್ಕೆ ಗುರಿಯಾಗ್ತಾರೆ. ಹೆಚ್ಚಿನವರು ಮನೆಗೆ ಬಂದ ಮೇಲೆ ಹೆಂಡತಿಯ ನಗು ಮುಖ ನೋಡಿಯಾದ್ರೂ ತಣ್ಣಗಾಗ್ತಾರೆ. ಅವರಿಗೆ ಗೊತ್ತಿರುತ್ತೆ, ಬಡವನ ಕೋಪ ದವಡೆಗೆ ಮೂಲ ಅಂತ. ಮನೇಲಿ ಹೆಂಡತಿಯಲ್ಲಿ ಕೋಪಿಸ್ಕೊಂಡ್ರೆ ಈಗ ಸಿಗ್ತಾ ಇರೋ ಉಪಚಾರಾನೂ ಸಿಗೋದಿಲ್ಲ, ನೆಮ್ಮದೀನೂ ಇರಲ್ಲ. ಆಕೆ ಅರೆ ಬೇಯಿಸಿದ ಬೇಯಿಸಿದ ಅಡುಗೆ ತಿಂದು ಮಲಗಿದಾಗ ಕೋಪವೆಲ್ಲಾ ಇಳಿದುಬಿಡುತ್ತೆ. ಅದಕ್ಕೆ ಬುದ್ಧಿವಂತ ಗಂಡಸರು ತಮ್ಮ ಹೆಂಡತಿಯ ಮುಂದೆ ಕೋಪ ಪ್ರದಶರ್ಿಸೋಕ್ಕೆ ಹೋಗಲ್ಲ, ಒಂದು ವೇಳೆ ಹೋದ್ರೂ ಹೆಂಡತಿಯಾದವಳು ಹೇಳ್ತಾಳೆ, `ನೀವೊಮ್ಮೆ ಮನೆಗೆ ಬನ್ನಿ' ಅಂತ. ಇದರರ್ಥ ಮನೇಲಿ ಗ್ರಹಚಾರ ಕಾದಿರುತ್ತೆ ಅಂತ ಬೇರೆ ಹೇಳ್ಬೇಕಾಗಿಲ್ಲ ತಾನೇ? ಹೆಂಡತಿ ಗಂಡನ ಕೋಪಕ್ಕೆ ಉತ್ತರ ನೀಡಲು `ರಾತ್ರಿಯಾಗ್ಲಿ, ಬೆಡ್ರೂಮ್ಗೆ ಬರ್ತಾರಲ್ವಾ... ಆಗ ವಿಚಾರಿಸ್ಕೋತೀನಿ' ಅಂತ ಮನದಲ್ಲೇ ಮಂಡಿಗೆ ತಿನ್ತಾ ಇರ್ತಾಳೆ. ಹೀಗೆ ಕೋಪ ಸವರ್ಾಂತಯರ್ಾಮಿಯಾಗಿ ಅಲ್ಲೂ, ಇಲ್ಲೂ ಎಲ್ಲೆಲ್ಲೂ ಇರುತ್ತೆ. ಇವೆಲ್ಲದಕ್ಕಿಂತ ಭಿನ್ನವಾಗಿರೋದು ಪ್ರೇಮಿಗಳ ಕೋಪ... ಸಾಮನ್ಯವಾಗಿ ಹುಸಿಮುನಿಸಿನಿಂದ ಆರಂಭವಾಗೋ ಇದು ನಂತರ ಬೃಹತ್ತಾಗಿ ಬೆಳೆದು ದೊಡ್ಡ ಜಗಳವೇ ಆಗಿ ಬಿಡುತ್ತೆ. ಆಗ ಕೆಲವರಂತೂ ಏನೇನೋ ಮಾತಾಡೋದುಂಟು ಮಾರಾಯ್ರೇ... ಕೋಪಿಸ್ಕೊಂಡಾಗ ಪ್ರೇಮಿಗಳು ಅನ್ನೋದೇ ಮರೆತು ಶತ್ರುಗಳ ತರಾ ಕಾದಾಟಕ್ಕೆ ಇಳೀತಾರೆ. ಈ ಜಗಳ ಮುಗಿಯಲು ಕಣ್ಣೀರಿನ ಧಾರೆ ಎರಡೂ ಕಡೆಯಿಂದ ಧಾರಾಕಾರವಾಗಿ ಸುರೀಬೇಕು. ಆಗ ಇಬ್ಬರಿಗೂ ಸಮಾಧಾನವಾಗಿ ದಿನದ ಕೋಪಕ್ಕೆ ಫುಲ್ಸ್ಟಾಪ್. ಕೋಪ ಮರೆತು ಕಣ್ಣಂಚು ಒದ್ದೆಯಾಗಿ ಪರಸ್ಪರ ಸ್ಸಾರಿ ಕೇಳೋದಿದೆಯಲ್ವಾ? ಅದರಷ್ಟು ಸುಮಧುರ ಕ್ಷಣ ಮತ್ತೊಂದಿಲ್ಲ ಅನ್ನೋದು ನನ್ನ ಮಾತು. ಆಗ ಪ್ರೇಮಿ ಜತೆಗಿದ್ದರಂತೂ ಹೇಳೋದೇ ಬೇಡ. ಪರಸ್ಪರ ಬಾಹು ಬಂಧನದಲ್ಲಿ ಕರಗಿ ಸಂತೈಸೋ ಆ ಕ್ಷಣ ಅವಿಸ್ಮರಣೀಯ. ಕೋಪ ಬರೋದು ಸವರ್ೆ ಸಾಮಾನ್ಯ. ಆದ್ರೆ ಆ ಕೋಪಾನ ಮರೆತು ಪರಸ್ಪರ ಸಂತೈಸೋದು ಮುಖ್ಯ. ಅದಕ್ಕೆ ನಾನು ಮೊದಲು, ಅವನು ಮೊದಲು ಎನ್ನುವ ಹಠ, ಅಹಮ್ಮಿನ ಲವಲೇಶಾನೂ ಇರ್ಬಾರ್ದು. ಹಾಗಾದಾಗ ಮಾತ್ರ ಕೋಪಿಸ್ಕೊಳ್ಳೋದು ಚೆನ್ನಾಗಿರುತ್ತೆ. ಇಲ್ಲಾಂದ್ರೆ ಕೋಪ ಮತ್ತಷ್ಟು ಜಾಸ್ತಿಯಾಗಿ ಅವಾಂತರವನ್ನೆಬ್ಬಿಸುತ್ತೆ. ಅದಕ್ಕೆ ನನ್ನಾಕೆ ಆಗಾಗ ಹೇಳ್ತಿರ್ತಾಳೆ, ಕೋಪ ಕಡಿಮೆ ಮಾಡ್ಕೊಳ್ಳಿ ಅಂತ. ಆಗ ನನ್ಗೆ ಕೆಟ್ಟ ಕೋಪ ಬರುತ್ತೆ. ಎನಿವೇ... ಕೋಪ ಮರೆತು ಮತ್ತೆ ನಗಿಸುವ ನನ್ನವಳಿಗೆ ಥ್ಯಾಂಕ್ಸ್ ಹೇಳ್ತಾ, ವಂದನೆಗಳು.