doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Sunday, December 12, 2010

ಇದ್ದು, ಇಲ್ಲದವರ ನಡುವೆ ...`ಎಲ್ಲಾ ನಮ್ಮ ಹಣೆಬರಹ ಸಾರ್... ರಸ್ತೇಲಿ, ಬೀದೀಲಿ, ಹೋಟೆಲ್, ಬಸ್ ಸ್ಟಾಪ್ ಎಲ್ಲಿ ಹೋದ್ರೂ ಅಸಹ್ಯ ನೋಟ ಬೀರೋರೇ ಜಾಸ್ತಿ. ನಾವೇನ್ ತಪ್ಪು ಮಾಡಿದ್ದೀವಿ? ಹೀಗೆ ಹುಟ್ಟಿರೋದೇ ನಮ್ ತಪ್ಪಾ...' ಹೀಗೆ ಅವರ ಬಳಿ ಯಾರಲ್ಲೂ ಕೇಳಲಾಗದ ಅಸಂಖ್ಯ ಪ್ರಶ್ನೆಗಳಿದ್ದವು. ತಮ್ಮ-ತಮ್ಮೊಳಗೆ ಹೇಳಿಕೊಂಡು ಪರಸ್ಪರ ಕಣ್ಣೀರು ಒರೆಸಿ ಉತ್ತರ ಕಂಡುಕೊಂಡ ಅದೆಷ್ಟೋ ಸಮಸ್ಯೆಗಳಿದ್ದವು. ಅವರು ತಮ್ಮ ಎಂದಿನ ಶೈಲಿಯಲ್ಲೇ ಜೀವನದ ದುರಂತಗಾಥೆಯನ್ನು ಬಿಡಿಬಿಡಿಯಾಗಿ ವಣರ್ಿಸುತ್ತಿದ್ದರೆ ಕೇಳುತ್ತಿದ್ದ ಕಿವಿ ಸ್ತಬ್ಧವಾಗಿ ಮನಸ್ಸು ಕ್ಷಣಕ್ಷಣಕ್ಕೂ ಭಾರವಾದಂತಹ ಅನುಭವ.

ಹೌದು... ಅವರೇ `ಮಂಗಳಮುಖಿ'ಯರು. ಅವರ ಮುಖ ಕಂಡರೆ ಎಲ್ಲವೂ ಮಂಗಳವಾಗುತ್ತದೆ ಎನ್ನುವುದು ಹೆಸರಿನ ತಾತ್ಪರ್ಯ. ಅಂತಹ ನಂಬಿಕೆಯೂ ನಮ್ಮ ಸಮಾಜದಲ್ಲಿ ಇಲ್ಲದಿಲ್ಲ. ಹಿಜಿರಾ, ಹಿಜಿಡಾ, ಹೆಣ್ಣಿಗರು, ನಪುಂಸಕರು, ಚ..., ಎಂದೆಲ್ಲಾ ಸಮಾಜದಲ್ಲಿ ವಿಶೇಷವಾಗಿ ಗುರುತಿಸಲ್ಪಡುವ ಇವರ ಬಗ್ಗೆ ಅನೇಕ ರೀತಿಯ ನಂಬಿಕೆ, ಅಪನಂಬಿಕೆ, ಮೂಢನಂಬಿಕೆಯೂ ನಮ್ಮಲ್ಲಿ ಬೆಳೆದಿದೆ. ಅವರು ಹಾಗಂತೆ, ಹೀಗಂತೆ... ಎಂದೆಲ್ಲಾ ಅಂತೆ-ಕಂತೆಗಳ ನಡುವೆ ಸುತ್ತಿಕೊಂಡಿರುವ ಅವರ ಬಗೆಗಿನ ಸಂಶಯಗಳಿಗೆ ಸಾಧ್ಯವಾದಷ್ಟು ವಿರಾಮ ನೀಡುವ ಪ್ರಯತ್ನ ಮಾತ್ರ ಇಲ್ಲಿ ನಡೆಸಲಾಗಿದೆ. ಇದ್ದು, ಇಲ್ಲದವರ ನಡುವೆ ಒಂದಿಷ್ಟು ಹೊತ್ತು ಕುಳಿತು ಅವರ ಪ್ರಶ್ನೆಗಳಿಗೆ ಕಿವಿಯಾದಾಗ ಅವರ ನೋವನ್ನು ಕಂಡು ಮನಸ್ಸು ಮರುಕ ಪಟ್ಟಿದ್ದು ಮಾತ್ರ ಸುಳ್ಳಲ್ಲ.

ನಾವಿರೋದೇ ಹೀಗೆ...!

ಮಂಗಳಮುಖಿಯರ ಬಗೆಗಿನ ನಮ್ಮ ಆಸಕ್ತಿಯನ್ನು ಬರಹ ರೂಪಕ್ಕೆ ಇಳಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಯಾರನ್ನೂ ಸುಲಭವಾಗಿ ನಂಬದ ಇವರನ್ನು ಮಾತಾಡಿಸಲು ಹೋದಾಗ ನಮಗೆ ಎದುರಾದವಳು/ಎದುರಾದವನು ಶ್ರುತಿ ಅಲಿಯಾಸ್ ಸುಧಾಕರ. ನಿಮ್ಮ ಬಗ್ಗೆ ತಿಳ್ಕೋಬೇಕು ಎಂದಾಗ ವಿಳಾಸ ತಿಳಿಸಿದ್ದಳು. ಮರುದಿನ ಆಕೆ ತಿಳಿಸಿದ ವಿಳಾಸಕ್ಕೆ ತೆರಳಿದ ನಮಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಅಲ್ಲಿ ನಮಗಾಗಿ ಅವರೆಲ್ಲರೂ ಕಾದಿದ್ದರು. ನಿಮ್ಮ ಬಗೆಗೆ ಒಂದಿಷ್ಟು ಮಾತಾಡಿ ಎಂದಾಗ ಅವರ ದು:ಖದ ಕಟ್ಟೆಯೊಡೆದಿತ್ತು. ಸಮಾಜದ ಅವಮಾನ, ಶೋಷಣೆಯಿಂದ ನೊಂದಿದ್ದ ಅವರ ಮುಖಗಳಲ್ಲಿ ಕಾಣಿಸುತ್ತಿದ್ದುದು ಎಲ್ಲವನ್ನೂ ಹೇಳಿಕೊಳ್ಳಬೇಕು ಎಂಬ ತುಡಿತ. ಕನ್ನಡವನ್ನು ಸ್ಪಷ್ಟವಾಗಿ ಮಾತಾಡುವ ಇವರು ನಮ್ಮ ನೆರೆಯ ಬಳ್ಳಾರಿ ಜಿಲ್ಲೆಯವರೇ ಆಗಿರುವುದು ವಿಶೇಷ. ಅವರೇ ಹೇಳುವಂತೆ ಬಳ್ಳಾರಿ ಜಿಲ್ಲೆಯಲ್ಲಿ ಇವರ ಜನಾಂಗಕ್ಕೆ ಸೇರಿದ ಇನ್ನೂ ಅನೇಕ ಮಂದಿ ಇದ್ದಾರೆ. ಕೆಲವು ಮಂದಿ ಭಿಕ್ಷೆಯೆತ್ತಲು ಊರು ತೊರೆದಿದ್ದರೆ, ಇನ್ನುಳಿದವರು ಅಲ್ಲಿಯೇ ಇದ್ದಾರೆ. ಲಾರಿ, ರೈಲುಗಳ ಮೂಲಕ ಮಂಗಳೂರಿಗೆ ಬಂದೆವು ಎನ್ನುವ ಇವರು, ಇಲ್ಲಿ ನಮಗೆ ಯಾರೂ ಇಲ್ಲ. ನಮ್ಮ ಊರಲ್ಲಾದರೆ ಹೇಗಾದರೂ ಬದುಕಬಹುದು ಅನ್ನೋ ಧೈರ್ಯವಿದೆ ಅನ್ನುತ್ತಾರೆ.

ಸದ್ಯಕ್ಕೆ ಮಂಗಳೂರಿನಲ್ಲಿ 22 ಜನ ಮಂಗಳಮುಖಿಯರು ಬಂದು ನೆಲೆಸಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ನೆಲೆಸಿರುವುದು ಸುರತ್ಕಲ್ ಬಳಿಯ ಕಾನದ ಬಾಡಿಗೆ ಮನೆಯೊಂದರಲ್ಲಿ. ಆರಡಿ, ಮೂರಡಿ ಜಾಗದ ಸಣ್ಣ ಬಾಡಿಗೆ ಮನೆಯಲ್ಲಿ ಇವರನ್ನು ಮನೆಯ ಮಾಲಕರು ಇರಲು ಬಿಟ್ಟಿದ್ದಾರೆ. ಇದೇಕೆ ಹೀಗೆ ಎಂದು ಕೇಳಿದರೆ ನಮಗೆ ಬಾಡಿಗೆಗೆ ಮನ ಕೊಡುವವರು ಸಿಗುವುದೂ ಇಲ್ಲ ಎಂಬ ಉತ್ತರ. ಬಳ್ಳಾರಿ ನವಾಸಿ ಮಲ್ಲಿಕಾಜರ್ುನ ಅಲಿಯಾಸ್ ಸುಧಾ, ಮಲ್ಲಿಕಾಜರ್ುನ ಅಲಿಯಾಸ್ ಮಹಾಲಕ್ಷ್ಮಿ, ರಮೇಶ ಅಲಿಯಾಸ್ ಪ್ರೀತಿ, ರಾಮ ಅಲಿಯಾಸ್ ಚಂದ್ರಕಲಾ, ಅಲಕುಂದಿಯ ಸುಧಾಕರ ಅಲಿಯಾಸ್ ಶ್ರುತಿ, ರಾಮು ಅಲಿಯಾಸ್ ಕಾವ್ಯ, ಮಂಡ್ಯದ ಶ್ರವಣ್ ಅಲಿಯಾಸ್ ಶ್ರಾವಣಿ, ಕಾಸಿಂ ಆಲಿ ಅಲಿಯಾಸ್ ಪ್ರಿಯಾ ಸದ್ಯ ಒಟ್ಟಿಗೇ ವಾಸಿಸುತ್ತಿದ್ದಾರೆ. ಅದೇ ಪುಟ್ಟ ಮನೆಯಲ್ಲಿ ವಾಸ, ಅಲ್ಲೇ ವಿಶ್ರಾಂತಿ, ಮುಂಜಾನೆ ಭಿಕ್ಷೆ ಎತ್ತಲು ಹೋದರೆ ಸಂಜೆಗೆ ವಾಪಸ್, ದಿನಕ್ಕೊಬ್ಬರಂತೆ ಅಡುಗೆ ಮಾಡುವುದು ಇವೇ ಮುಂತಾದ ನಿಯಮಗಳು ಇವರಲ್ಲಿವೆ. ಇವರು ಲೈಂಗಿಕ ಕಾರ್ಯಕರ್ತರು ಅನ್ನೋದನ್ನು ಮನಸಾರೆ ಒಪ್ಪಿಕೊಳ್ಳುವ ಅವರು, ಅದರಲ್ಲೇನು ತಪ್ಪು? ನಮ್ಮ ಹೊಟ್ಟೆಪಾಡಿಗಾಗಿ ಆ ವೃತ್ತಿಗಿಳಿದಿದ್ದೇವೆ, ನಾವು ಯಾರನ್ನೂ ಬಲವಂತ ಪಡಿಸುವುದಿಲ್ಲ ಎನ್ನುತ್ತಾರೆ.

ಮುಂದುವರಿದ ದೇಶಗಳಲ್ಲಿ ನಮ್ಮ ಸಮಾಜವನ್ನು ಯಾರೂ ನಿಕೃಷ್ಟರಾಗಿ ಕಾಣುವುದಿಲ್ಲ. ಅಲ್ಲಿ ಅವರಿಗೂ ಸಾಕಷ್ಟು ಮಯರ್ಾದೆ ಸಿಗುತ್ತದೆ. ಅವರಿಗೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಸರಕಾರಿ ಕೆಲಸ ಮಾಡುವ, ಚುನಾವಣೆಯಲ್ಲಿ ಸ್ಪಧರ್ಿಸುವ ಅವಕಾಶವಿದೆ. ಆದರೆ ನಮ್ಮ ದೇಶದಲ್ಲಿ ಇಂತಹ ಯಾವ ವ್ಯವಸ್ಥೆಯೂ ಇಲ್ಲ. ಕನರ್ಾಟಕ ಸರಕಾರ ನಮಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ ಎಂಬುದನ್ನು ಪೇಪರ್ನಲ್ಲಿ ಓದಿದ ನೆನಪು. ಆದರೆ ಅಂತಹ ಯಾವುದೇ ಯೋಜನೆ ನಮ್ಮನ್ನು ತಲುಪಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇವರು. ನಮ್ಮಲ್ಲಿಯೂ ಇಂದು ಸಾಕಷ್ಟು ತಿಳಿದವರಿದ್ದಾರೆ, ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಲು ಯೋಗ್ಯರಿದ್ದಾರೆ, ಆದರೆ ನಮಗೆ ಸರಕಾರ ಪ್ರಾಶಸ್ತ್ಯವನ್ನೇ ನೀಡಲಾಗುತ್ತಿಲ್ಲ ಎಂಬ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹೌದು! ಮಂಗಳಮುಖಿಯರಿಗೂ ಬದುಕುವ ಹಕ್ಕಿದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇವರಿಗೆ ಗುರುತಿನ ಚೀಟಿ, ಮತದಾನದ ಗುರುತು ಪತ್ರ, ರೇಷನ್ ಕಾಡರ್್ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಇವರ ಆರೋಗ್ಯ ರಕ್ಷಣೆಗಾಗಿ ಸರಕಾರ ಕೈಗೊಂಡಿರುವ ಯೋಜನೆಗಳೂ ಪ್ರಯೋಜನಕ್ಕೆ ಬರುತ್ತಿಲ್ಲ. ಸರಕಾರದ ಹಣವನ್ನು ಪಡೆಯುವ ಎನ್ಜಿಓಗಳೂ ಹಿಡಿದ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಈ ಕಾರಣದಿಂದಾಗಿ ಇವರು ಇಂದಿಗೂ ಯಾರಿಗೂ ಬೇಡದ ಜೀವನವನ್ನು ಸಾಗಿಸುತ್ತಿದ್ದಾರೆ. ಜನರಿಗೆ ತೊಂದರೆ ಕೊಡುತ್ತಾರೆ, ವಸೂಲಿ ಮಾಡುತ್ತಾರೆ, ಪ್ರವಾಸಿ ತಾಣಗಳಲ್ಲಿ ಕಿರಕಿರಿ ಉಂಟುಮಾಡುತ್ತಾರೆ ಎಂಬ ಜನರ ಆರೋಪಗಳನ್ನು ನಿರಾಕರಿಸುವ ಅವರು ತಾವು ಪ್ರವಾಸಿ ಸ್ಥಳದಲ್ಲಿ ಯಾವುದೇ ಸಮಸ್ಯೆಯನ್ನು ಸೃಷ್ಟಿಸುತ್ತಿಲ್ಲ. ನಮ್ಮನ್ನು ಬೇಕೆಂದೇ ತುಚ್ಛವಾಗಿ ಚಿತ್ರಿಸಲಾಗುತ್ತಿದೆ ಅಂತಾರೆ. ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಅಲೆಮಾರಿ ಹಿಜಿಡಾಗಳ ಬದುಕು ಅತಂತ್ರವಾಗಿದೆ. ಬೇಡಿದರೆ ಮಾತ್ರ ಹೊಟ್ಟೆಗೆ ಹಿಟ್ಟು ಎಂಬ ತತ್ವದಲ್ಲಿ ನಂಬಿಕೆಯಿಟ್ಟಿರುವ ಹಿಜಿಡಾಗಳನ್ನು ಮೇಲೆತ್ತುವ ಪ್ರಯತ್ನ ನಡೆಯಬೇಕು. ಅವರು ಹಾಗೆ ಹುಟ್ಟಿದ್ದೇ ತಪ್ಪೆನ್ನಲಾಗದು. ಯಾಕೆಂದರೆ ಹಿಜಿಡಾ ನಾಳೆ ನಮ್ಮ-ನಿಮ್ಮ ನಡುವೆಯೂ ಜನಿಸಬಹುದು. ಹೀಗಾಗಿ ಅವರನ್ನು ನಮ್ಮಿಂದ ದೂರವೇ ಇರಿಸುವುದು ಎಷ್ಟರಮಟ್ಟಿಗೆ ಸರಿ? ಅವರಿಗೂ ಸ್ವತಂತ್ರವಾಗಿ, ಗೌರವಯುತವಾಗಿ ಸಮಾಜದಲ್ಲಿ ಬದುಕುವ ಹಕ್ಕಿದೆ. ಸರಕಾರ, ಸ್ವಯಂಸೇವಾ ಸಂಸ್ಥೆಗಳು ಇನ್ನಾದರೂ ಇತ್ತ ಕಣ್ತೆರೆದು ಮಂಗಳಮುಖಿಯರ ಬದುಕು, ಆರೋಗ್ಯವನ್ನು ಸುಧಾರಿಸುವ ಪ್ರಯತ್ನ ಮಾಡಲಿ ಎಂಬ ಆಶಯ ನಮ್ಮದು.

ಹಿಜಿಡಾ ಅಂದರೆ ಯಾರು?

ಹಿಜಿರಾ ಅಥವಾ ಹಿಜಿಡಾ ಎನ್ನುವುದು ಉದರ್ು ಭಾಷೆಯಿಂದ ಬಂದಿರುವ ಪದ. ಇಸ್ಲಮಾಬಾದ್, ಪಾಕಿಸ್ತಾನ, ದಕ್ಷಿಣ ಏಶಿಯಾ ಖಂಡದಲ್ಲಿ ಇವರ ಸಂಖ್ಯೆ ಹೆಚ್ಚು. ಪಾಕಿಸ್ತಾನದಲ್ಲಿ ಇವರ ಗುಂಪುಗಳಿಗೆ ಸರಕಾರದಿಂದ ಪ್ರತ್ಯೇಕ ಸ್ಥಾನಮಾನವನ್ನು ಕೊಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಜೀವಿಸುವಂತೆ ನೋಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ತಮಿಳ್ನಾಡು, ಆಂಧ್ರಪ್ರದೇಶದಲ್ಲಿ ಇವರದ್ದೇ ಆದ ಗುಂಪುಗಳಿದ್ದು, ಇವರಿಗೆ ಸರಕಾರದಿಂದ ಗುರುತಿನ ಪತ್ರ ಸಮೇತ ವಿವಿಧ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ಗರಿಷ್ಠ ಸಂಖ್ಯೆಯಲ್ಲಿರುವ ಹಿಜಿಡಾ ಗುಂಪು ರೇಣುಕಾ ದೇವಿಯನ್ನು ಇವರು ಆರಾಧಿಸುತ್ತವೆ. ಹೆಣ್ಣುಮಕ್ಕಳ ಉಡುಗೆಯನ್ನು ತೊಡುವ ಇವರನ್ನು ಜೋಗಪ್ಪ ಎಂತಲೂ ಕರೆಯುತ್ತಾರೆ. ಮದುವೆಯ, ಹುಟ್ಟುಹಬ್ಬದ ಕಾರ್ಯಕ್ರಮಗಳಲ್ಲಿ ಹಾಡಿ, ಕುಣಿಯುವ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ. ದೇಶದ ವಾಣಿಜ್ಯ ನಗರಿಯಾದ ಮುಂಬೈ, ಕಲ್ಕತ್ತಾ, ದೆಹಲಿಯಲ್ಲಿ ಇವರದ್ದೇ ವೇಶ್ಯಾವಾಟಿಕಾ ತಾಣಗಳೂ ಇವೆ. ಇವುಗಳನ್ನು ಕೋಟಿ ಎಂದು ಕರೆಯುತ್ತಾರೆ. ಇಲ್ಲಿ ಮನೆಯಿಂದ ದೂರವಾಗುವ ಹಿಜಿಡಾಗಳು ಬಂದು ಸೇರುತ್ತಾರೆ ಮಾತ್ರವಲ್ಲದೆ, ಇಲ್ಲಿಂದ ಆಂಧ್ರ ಪ್ರದೇಶಕ್ಕೆ ಕರೆದೊಯ್ದು ಲಿಂಗ ಪರಿವರ್ತನೆ ಮಾಡಿಸಿಕೊಂಡು ಹಿಜಿಡಾಗಳನ್ನಾಗಿ ಬದಲಾಯಿಸುವ ವ್ಯವಸ್ಥೆಯೂ ಇದೆ. ಇಲ್ಲಿರುವ ಹಿಜಿಡಾಗಳು ತಮಗೆ ಬೇಕಾದ ಸಂಗಾತಿಯನ್ನು ಆರಿಸಿಕೊಂಡು ಅವರದ್ದೇ ಸಂಪ್ರದಾಯ ಪ್ರಕಾರ ಮದುವೆಯಾದ ಉದಾಹರಣೆಗಳೂ ಇವೆ. ಇಲ್ಲಿ ದೈಹಿಕ ಸಂಬಂಧಕ್ಕಿಂತ ಹೆಚ್ಚಾಗಿ ಪರಸ್ಪರ ಭಾವನೆಗಳಿಗೆ ಬೆಲೆ ಕೊಡುವ ಪದ್ಧತಿ ಇದೆ ಅಲ್ಲದೆ, ಇಲ್ಲಿ ನಡೆಯುವ ಮದುವೆಗೆ ಯಾವುದೇ ಕಾನೂನು, ಕಟ್ಟಳೆಗಳು ಒಳಪಡುವುದಿಲ್ಲ.

ವಾತ್ಸಾಯನ ಬರೆದಿರುವ ಕಾಮಸೂತ್ರದಲ್ಲೂ ಹಿಜಿಡಾಗಳ ಬಗ್ಗೆ ಉಲ್ಲೇಖವಿದೆ. `ತೃತೀಯ ಪ್ರಕೃತಿ' ಎಂದು ಕರೆಯಲ್ಪಡುವ ಹಿಜಿಡಾ ಕಾಮಕ್ರೀಡೆಯ ಬಗ್ಗೆ, `ಇಬ್ಬರೂ ಶಾರೀರಿಕವಾಗಿ ಗಂಡುಗಳಾಗಿದ್ದು, ಅದರಲ್ಲಿ ಒಬ್ಬ ಹೆಣ್ಣಿನ ಬಟ್ಟೆಯನ್ನು ಉಟ್ಟು ನಡೆಸುವ ಲೈಂಗಿಕ ಕ್ರಿಯೆ' ಎಂದು ವಣರ್ಿಸಲಾಗಿದೆ.

ಆರಾಧನೆ:

ಹಿಜಿಡಾಗಳು ಸಾಮಾನ್ಯವಾಗಿ ಬಹುಚರ ಮಠ ಹಾಗೂ ಶಿವನ ಆರಾಧಕರು. ಶಿವ ಹಾಗೂ ಪಾರ್ವತಿ ಒಂದಾಗಿ ಚಿತ್ರಿಸಲ್ಪಡುವ ಅರ್ಧನಾರೀಶ್ವರನನ್ನು ಇವರು ದೈವೀ ಶಕ್ತಿ ಎಂದು ನಂಬುತ್ತಾರೆ. ಭಾರತದ ಧರ್ಮಗ್ರಂಥ ರಾಮಾಯಣದಲ್ಲೂ ಹಿಜಿಡಾಗಳ ಬಗ್ಗೆ ಉಲ್ಲೇಖವಿದೆ. ರಾಮನು ಅಯೋಧ್ಯೆಯನ್ನು ತೊರೆದು 14 ವರ್ಷ ವನವಾಸಕ್ಕೆ ತೆರಳುತ್ತಾನೆ. ಈ ವೇಳೆ ಹೆಣ್ಣು-ಗಂಡು ಎಂಬ ಬೇಧಭಾವವಿಲ್ಲದೆ ಎಲ್ಲರೂ ರಾಮನನ್ನು ಹಿಂಬಾಲಿಸುತ್ತಾರೆ. ಅಂತಿಮವಾಗಿ ರಾಮ ಎಲ್ಲರನ್ನೂ ಸಮಾಧಾನಪಡಿಸಿ ಹಿಂದಕ್ಕೆ ಕಳುಹಿಸುತ್ತಾನೆ. ಆದರೆ ಆತ ತನ್ನ ವನವಾಸ ಮುಗಿಸಿ ವಾಪಸ್ ಬರುವ ವೇಳೆ ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದ ಹಿಜಿಡಾಗಳು ಕಾಣಸಿಗುತ್ತಾರೆ. ರಾಮನ ಜತೆ ಮಾತಾಡಿ, ಆಶೀರ್ವಚನ ಪಡೆಯದ ವಿನ: ಅವರು ಹೋಗುವುದಿಲ್ಲ. ಮಕ್ಕಳು ಜನಿಸಿದ ವೇಳೆ ಮತ್ತು ಮದುವೆಯ ಸಂದರ್ಭ ಅವರಿಗೆ ಅಯೋಧ್ಯೆಯಲ್ಲಿ ತಿರುಗಾಡಿ ಆಶೀರ್ವದಿಸುವ ಕಾಯಕವನ್ನು ಈ ವೇಳೆ ರಾಮನೇ ನೀಡಿದ ಎಂಬ ಬಗ್ಗೆಯೂ ಉಲ್ಲೇಖವಿದೆ. ಈ ಆಶೀರ್ವದಿಸುವ ಕಾಯಕವೇ ಹಾಡು. ನೃತ್ಯವನ್ನು ಒಳಗೊಂಡಿರುವುದಾಗಿ ಪ್ರತೀತಿಯೂ ಇದೆ.

ಕೈ ಬೀಸಿ ಕರೆದ ಮಂಗಳೂರು

ಮಂಗಳೂರು ವಿಶಾಲ ಕಡಲ ತೀರವನ್ನು ಹೊಂದಿರೋ ಸೊಬಗಿನ ಊರು. ಇಲ್ಲಿಗೆ ಒಮ್ಮೆ ಬಂದವರು ಹಿಂತಿರುಗಿ ಹೋಗುವ ಮನಸ್ಸು ಮಾಡಲಾರರು. ಕಾರಣ ಇಲ್ಲಿನ ಜನರ ಆತ್ಮೀಯತೆ, ಪ್ರೀತಿ ಅಂತದ್ದು. ತೀರಾ ಇತ್ತೀಚಿನ ಕೆಲವೊಂದು ವರ್ಷಗಳವರೆಗೆ ಮಂಗಳೂರಿಗರಿಗೆ ಮಂಗಳಮುಖಿಯರ ಪರಿಚಯವೇ ಇದ್ದಿರಲಿಲ್ಲ. ಎಲ್ಲೋ ಮುಂಬೈಯಲ್ಲಿ ಇವರು ಇರುತ್ತಾರಂತೆ, ಅಂಗಡಿ-ಅಂಗಡಿ ಭಿಕ್ಷೆ ಎತ್ತಲು ಹೋಗುತ್ತಾರಂತೆ... ಎಂದೆಲ್ಲಾ ಮುಂಬೈಯಿಂದ ಬರುತ್ತಿದ್ದ ಬಂಧುಗಳು ಅವರ ಬಗ್ಗೆ ಹೇಳುತ್ತಿದ್ದ ಮಾತುಗಳನ್ನು ಕೇಳುತ್ತಾ ನಮ್ಮವರು ಅವರು ಹೇಗಿರಬಹುದು ಎಂದು ಕಲ್ಪಿಸುತ್ತಿದ್ದರೇ ಹೊರತು ಅವರನ್ನು ನೋಡಿರಲಿಲ್ಲ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಇವರು ಇಲ್ಲಿ ನಿತ್ಯ ಸುದ್ದಿಯಲ್ಲಿದ್ದಾರೆ. ಮೊನ್ನೆ ಅಲ್ಲಿದ್ದರು, ಇಂದು ಇಲ್ಲಿದ್ದರು ಎಂಬುದರಿಂದ ಹಿಡಿದು ಇವರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ, ನಮಗಾಗುವ ತೊಂದರೆ ಅಷ್ಟಿಷ್ಟಲ್ಲ ಎಂಬ ಆರೋಪಗಳೂ ಇವರ ಮೇಲಿದೆ. ಹೀಗಿರುವಾಗ ಇವರಲ್ಲಿ ನೀವ್ಯಾಕೆ ನಮ್ಮ ಊರಿಗೆ ಬಂದ್ರಿ ಅಂತ ಕೇಳಿದರೆ, `ನಮಗೆ ಆ ಊರು ಈ ಊರು ಇಲ್ಲಣ್ಣಾ... ಹೋದ ಊರು, ಬಂದ ದೇಶ... ಮಂಗಳೂರು ಕೈ ಬೀಸಿ ಕರೆಯಿತು, ಇಲ್ಲಿ ಬಂದ ಬಳಿಕ ಹಿಂತಿರುಗಿ ಹೋಗೋಕ್ಕೆ ಮನಸಾಗ್ತಾ ಇಲ್ಲ' ಅಂತಾರೆ.

ಏಡ್ಸ್ ಬಗ್ಗೆ ಜಾಗೃತಿ!

ಮಂಗಳೂರಿನಂತಹ ಸಭ್ಯ, ಸುಸಂಸ್ಕೃತ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ನಿರ್ಲಜ್ಜ ಸಲಿಂಗಕಾಮಿಗಳ ಹಾವಳಿಯೂ ಬೆಳೆಯತೊಡಗಿದೆ. ಹಿಜಿಡಾಗಳು ಸಾಮಾನ್ಯವಾಗಿ ಸಲಿಂಗಕಾಮಿಗಳಲ್ಲ. ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದ ಇವರಿಗೂ ಲೈಂಗಿಕ ಬಯಕೆಗಳಿವೆ. ಬಯಕೆ ಮಿತಿ ಮೀರಿದಾಗ ಸಹಜವಾಗಿ ಗಂಡಿನ ಪ್ರೀತಿಯತ್ತ ಇವರು ಆಕಷರ್ಿತರಾಗುತ್ತಾರೆ. ಇವರು ಭಿಕ್ಷೆ ಎತ್ತುವ ಕಾಯಕವನ್ನೇನೋ ನಡೆಸುತ್ತಾರೆ. ಆದರೆ ಅದರ ನಡುವೆ ನಿರ್ಲಜ್ಜ ಪುರುಷರಿಗೆ ಕತ್ತಲಿನ ಸಂದಿಗೊಂದಿಗಳಲ್ಲಿ ಸುಖವನ್ನು ಕೊಡುತ್ತಾರೆ. ಅವರು ಕೊಡುವ ಸುಖ ಗಂಡು-ಹೆಣ್ಣಿನ ಸಮಾಗಮದಿಂದ ದೊರೆಯುವ ಪರಿಪೂರ್ಣ ಸುಖವಲ್ಲ, ಆದರೆ ಕಾಮದ ಮದವೇರಿಸಿಕೊಂಡ ಗಂಡನ್ನು ಅವರು ಕ್ಷಣಮಾತ್ರದಲ್ಲಿ ಕರಗಿಸಿ ಬಿಡುವ ಕಲೆಯನ್ನು ಮಾತ್ರ ಕರಗತ ಮಾಡಿಕೊಂಡಿದ್ದಾರೆ. ರೈಲ್ವೇ ಬ್ರಿಡ್ಜ್, ಹಳೆಯ ಪಾಳುಬಿದ್ದ ಫ್ಯಾಕ್ಟರಿ, ಮರಗಳ ತೋಪು ಮುಂತಾದೆಡೆ ಇವರ ದರ್ಶನಕ್ಕೆಂದೇ ಕಾಯುವ ಪುರುಷ ಸಿಂಹಗಳು... ಇವರನ್ನು ಕಂಡು ಮುಗಿಬೀಳುವ ವಿಟ ಪುರುಷರ ದೇಹದ ಬಿಸಿ ಆರುವವರೆಗೆ ಇವರು ಸಹಕರಿಸಬೇಕು. ಅದನ್ನು ನೀವು ನೈಸಗರ್ಿಕ ಕಾಮ ಎನ್ನಿ... ಅನೈಸಗರ್ಿಕ ಕಾಮವೆನ್ನಿ... ಇವರು ಆ ಬಗ್ಗೆ ತಲೆ ಕೆಡಿಸುವುದಿಲ್ಲ. `ಅಣ್ಣಾ... ನಮ್ಗೂ ಲೈಂಗಿಕ ಬಯಕೆಗಳಿವೆ, ಅದನ್ನು ಈ ರೀತಿ ತೀರಿಸ್ಕೋತೀವಿ. ನಮ್ಮಲ್ಲಿ ಪ್ರತಿನಿತ್ಯ ಒಬ್ಬೊಬ್ಬರು ತಲಾ 3-4 ಮಂದಿಯನ್ನು ನೋಡ್ಕೋತೀವಿ. ಗ್ರಾಹಕರಿಂದ 50-100 ರೂಪಾಯಿ ಮಾತ್ರ ಇಸ್ಕೋತೀವಿ. ಆದ್ರೆ ತಮ್ಮ ಕೆಲಸವಾದ ಮೇಲೆ ಅದನ್ನೂ ನೀಡದೆ ಹಾಗೆ ಎದ್ದು ಹೋಗೋರೂ ಇದ್ದಾರೆ' ಎನ್ನುವ ಇವರು ಲೈಂಗಿಕ ರೋಗಗಳ ಬಗ್ಗೆ ಮಾತ್ರ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಸರಕಾರದಿಂದ ಉಚಿತವಾಗಿ ಸಿಗುವ ನಿರೋಧ್ ಬಳಸದೆ ಇಂತಹ ಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ. ಕೆಲವೊಮ್ಮೆ ಗ್ರಾಹಕರು ವಿಪರೀತ ಒತ್ತಾಯ ಮಾಡುತ್ತಾರೆ. ಆದರೂ ನಮ್ಮಲ್ಲಿಗೆ ಬರುವ ಗ್ರಾಹಕರ ಹಾಗೂ ನಮ್ಮ ಆರೋಗ್ಯ ರಕ್ಷಣೆಗಾಗಿ ನಿರೋಧ್ ಅಗತ್ಯವಾಗಿ ಬಳಸುತ್ತೇವೆ ಎನ್ನುತ್ತಾರೆ.

ಬಿಟ್ಟರೂ ಬಿಡದೀ ಮಾಯೆ!

ನಾವು ಎಲ್ಲರಂತೆಯೇ ಬದುಕಲು ಬಯಸುತ್ತೇವೆ, ನಮಗೂ ಸಮಾಜದ ಮುಖ್ಯವಾಹಿನಿಗೆ ಬರುವ ಆಸೆಯೇನೋ ಇದೆ. ನಮ್ಮವರು ಟಿ.ವಿ. ಚಾನೆಲ್ಗಳಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಾರೆ, ರೇಡಿಯೋ ಜಾಕಿ ಆಗಿಯೂ ದುಡಿಯುತ್ತಿದ್ದಾರೆ. ಸ್ವಾವಲಂಬನೆಯ ಬದುಕು ನಡೆಸಬಹುದು ಎನ್ನುವ ಮಾತು ಹೇಳಲು ಮಾತ್ರ ಸುಲಭ. ಆದರೆ ನಮಗೇನೇ ಮಾಡಿದರೂ ಈ ಬಟ್ಟೆ ಮತ್ತೆ, ಮತ್ತೆ ಸೆಳೆಯುತ್ತದೆ. ನಮಗೆ ಗೊತ್ತು ನಾವು ಎಲ್ಲರಂತಿಲ್ಲ. ನಾವು ಗಂಡಸರ ಹಾಗೆ ಇದ್ದೀವಿ, ಆದರೆ ನಾವು ಹಾಗೆ ಇಲ್ಲ. ನಮಗೆ ಮಾತ್ರ ಗೊತ್ತು ನಾವು ಏನು ಎಂಬುದು. ಹೀಗಾಗಿ ನಾವು ಗಂಡಸರ ಬಟ್ಟೆ ತೊಟ್ಟು ಓಡಾಡುವಂತಿಲ್ಲ. ಹಾಗೊಂದು ವೇಳೆ ನಾವು ಗಂಡಸರ ವೇಷ ಧರಿಸಿ ಓಡಾಡಿದರೂ ನಮಗೆ ಆತ್ಮತೃಪ್ತಿ ಎನ್ನುವುದು ಸಿಗಲ್ಲ. ಈ ಹೆಣ್ಣಿನ ಬಟ್ಟೆ, ಅಲಂಕಾರ ನಮ್ಮನ್ನು ಮತ್ತೆ ತನ್ನೆಡೆಗೆ ಆಕಷರ್ಿಸುತ್ತದೆ. ಇದನ್ನೇ ಧರಿಸಿ ಮೆರೆಯಬೇಕು ಎಂಬ ಬಯಕೆ ಜಾಸ್ತಿಯಾಗುತ್ತೆ. ಈ ವೇಳೆ ಇಂತಹ ಯೋಚನೆ ನಮ್ಮ ಮನದಲ್ಲಿ ಮೂಡುವುದಾದರೂ ಹೇಗೆ? ನಾವು ಹುಟ್ಟಿದ್ದೇ ದೇವರ ಶಾಪ... ಹೇಗೋ ಬದುಕುತ್ತೇವೆ, ನಮ್ಮನ್ನು ಬದುಕಲು ಬಿಡಿ ಎಂದು ಕೈಮುಗಿದು ಕಣ್ಣಲ್ಲಿ ನೀರು ತಂದುಕೊಳ್ಳುತ್ತಾಳೆ ಪ್ರೀತಿ ಅಲಿಯಾಸ್ ರಮೇಶ್.

ಕಾಯುವಳು ಸವದತ್ತಿ ಎಲ್ಲಮ್ಮ

ಹಿಜಿಡಾಗಳ ತಂಡದಲ್ಲಿ ಇರುವ ಎಲ್ಲರೂ ಶಿಕ್ಷಣ ಪಡೆದಿಲ್ಲವಾದರೂ ಮಹಾಲಕ್ಷ್ಮಿ ಅಲಿಯಾಸ್ ಮಲ್ಲಿಕಾಜರ್ುನ ಎಸ್ಎಸ್ಎಲ್ಸಿ ಕಲಿತಿದ್ದಾಳೆ. ಪ್ರೀತಿ ಅಲಿಯಾಸ್ ರಮೇಶ ಅತೀ ಹೆಚ್ಚು ಅಂದರೆ ಪಿಯುಸಿ ಪಾಸ್ ಆಗಿದ್ದಾಳೆ, ಶ್ರುತಿ ಅಲಿಯಾಸ್ ಸುಧಾಕರ ಎಂಟನೇ ತರಗತಿ ಪಾಸ್ ಆದವಳು ಮುಂದೆ ಓದಿಲ್ಲ. ಇದಕ್ಕೆಲ್ಲಾ ಕಾರಣವಾಗಿದ್ದು ಇದೇ ಸಮಸ್ಯೆ ಎನ್ನುತ್ತಾರೆ ತಂಡದಲ್ಲಿ ಸ್ಫುರದ್ರೂಪಿಯಾಗಿ ಗುರುತಿಸಲ್ಪಡುವ ಶ್ರುತಿ. ಈಕೆಯೇ ಹೇಳುವಂತೆ, `ಬಾಲ್ಯ ಕಳೆದು ಯೌವನಕ್ಕೆ ಕಾಲಿಡುವ ವೇಳೆ ನನ್ನಲ್ಲೇನೋ ಬದಲಾವಣೆ ಆಗುತ್ತಿರುವ ಅನುಭವವಾಯಿತು. ನಾನು ಗಂಡು ಮಗು ಆಗಿದ್ದರೂ ನನಗೆ ಇದ್ದುದು ಹೆಣ್ಣಿನ ಬಟ್ಟೆಗಳ ಮೇಲೆ ಕಣ್ಣು. ಮನೆಯಲ್ಲಿಯೂ ನನಗೆ ಹೆಣ್ಣು ಮಕ್ಕಳ ಬಟ್ಟೆ ಉಡುವುದು ಹೆಚ್ಚು ಪ್ರಿಯವಾಗುತ್ತಿತ್ತು. ಈ ಕಾರಣಕ್ಕಾಗಿ ಮನೆಯ ಹೆಂಗಸರ ಬಟ್ಟೆಯನ್ನು ಉಟ್ಟು ಚಂದ ನೋಡುತ್ತಿದ್ದೆ. ಮನೆಯಲ್ಲಿ ಹೆಣ್ಣು ಮಕ್ಕಳಂತೆ ಅಲಂಕರಿಸುವುದು, ಪಾತ್ರೆ ತೊಳೆಯುವುದು, ನೆಲ ಒರೆಸುವುದು ಇವೇ ಮುಂತಾದ ಕೆಲಸದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದೆ. ಇದೇಕೆ ಎಂದೇ ನನಗೆ ಅರ್ಥವಾಗುತ್ತಿಲ್ಲ. ಆದರೆ ಕೊನೆಗೊಂದು ದಿನ ನಾನದಕ್ಕೆ ಅರ್ಥ ಕಂಡುಕೊಂಡೆ. ನಾನು ಎಲ್ಲರಂತಿಲ್ಲ. ರಸ್ತೆಯಲ್ಲಿ ಸೊಂಟ ಬಳುಕಿಸುತ್ತಾ ಕೈ ಬೀಸಿಕೊಂಡು ನಡೆಯುತ್ತಿದ್ದರೆ ನನಗೆ ರಸ್ತೆಯ ತುಂಬಾ ಗೇಲಿಯ ಮಾತುಗಳು ಕೇಳಿಬರತೊಡಗಿತು. ಹೀಗೆ ನನಗೆ ನಾನೇ ನಿಶ್ಚಯಿಸಿದೆ. ಹೌದು... ನಾನು ಸುಧಾಕರ ಎಂಬ ಹೆಸರು ಹೊಂದಿದ್ದರೂ ಸುಧಾಕರನಂತಿಲ್ಲ. ನನ್ನಲ್ಲಿರುವುದು ಹೆಣ್ಣಿನ ಮನಸ್ಸು. ಅತ್ತ ಗಂಡೂ ಅಲ್ಲದೆ, ಇತ್ತ ಹೆಣ್ಣೂ ಅಲ್ಲದೆ ಇರುವ ನಾನು ಮನೆಯಲ್ಲಿ ಹೆಚ್ಚು ದಿನ ಇರಲಾಗಲಿಲ್ಲ. ಒಂದು ದಿನ ಮನೆ ಬಿಟ್ಟವಳು ಸವದತ್ತಿ ಎಲ್ಲಮ್ಮನ ಗುಡಿಗೆ ಹೋಗಿ ಪೂಜಾರಿಯ ಕೈಯಿಂದ ಕೊರಳಿಗೆ ಈ ಮಾಲೆ ಧರಿಸಿದೆ. ಆನಂತರ ನಾನು ಏನೆಂಬುದು ನನಗೇ ಅರ್ಥವಾಗಿ ಹೋಯಿತು' ಎನ್ನುತ್ತಾಳೆ. `ಹುಟ್ಟುವಾಗ ಯಾರೂ ಹೀಗೆ ಇರುವುದಿಲ್ಲ. ನಮಗೂ ಒಂದು ಮಗು ಹುಟ್ಟಿತು ಎಂದು ಹೆತ್ತವರು ಸಂತಸ ಪಡುತ್ತಾರೆ. ಆದರೆ ಬೆಳೆಯುತ್ತಾ ಇಂತಹ ಮಗು ಹುಟ್ಟಬಹುದು ಎನ್ನುವುದು ಅವರಿಗೆ ತಿಳಿದಿರುತ್ತದೆಯೇ? ನಾವು ಯಾವ ಜನ್ಮದಲ್ಲಿ ಯಾರಿಗೆ ಪಾಪ ಮಾಡಿದ್ದೇವೋ, ಈ ಜನ್ಮದಲ್ಲಿ ಅನುಭವಿಸುತ್ತಿದ್ದೇವೆ. ಹುಟ್ಟಿಸಿದವ ಹುಲ್ಲನ್ನು ಮಾತ್ರ ತಿನ್ನಿಸಲಾರ' ಎಂದು ಎಲ್ಲಮ್ಮನ ಹೆಸರು ಹೇಳಿಕೊಂಡು ಮೌನಕ್ಕೆ ಶರಣಾಗುತ್ತಾಳೆ.

ಎಲ್ಲರಿಗೊಬ್ಬಳೇ `ರಾಣಿ'

ಹಿಜಿಡಾಗಳು ಜಿಲ್ಲೆಗೆ ಬರಲು ಮುಖ್ಯ ಕಾರಣ ವರ್ಷದ ಹಿಂದೆ ಜಿಲ್ಲೆಯಲ್ಲಿ ದಾಂಗುಡಿ ಇಡುತ್ತಾ ಸಾಗಿ ಬರುತ್ತಿದ್ದ ಮೈನ್ಸ್ ಲಾರಿಗಳು. ಬಳ್ಳಾರಿಯ ಸಂಡೂರಿನಿಂದ ಕಬ್ಬಿಣದ ಅದಿರನ್ನು ಹೇರಿಕೊಂಡು ಇಲ್ಲಿಗೆ ಬರುತ್ತಿದ್ದ ಲಾರಿಗಳ ಚಾಲಕರು ತಮ್ಮ ಜೊತೆ ಟೈಂಪಾಸ್ಗೆಂದು ಮಂಗಳಮುಖಿಯರನ್ನೂ ಕರೆತಂದರು ಎನ್ನಲಾಗುತ್ತಿದೆ. ಹೀಗೆ ಬಂದ ಇವರು ಇಲ್ಲಿನ ವಾತಾವರಣ ನೋಡಿ ಹಿಂತಿರುಗಿ ಹೋಗಲು ಮನಸ್ಸಾಗದೆ ಇಲ್ಲಿಯೇ ಉಳಿದಿರುವ ಸಾಧ್ಯತೆಗಳೂ ಹೆಚ್ಚು. ಹಾಗೆಂದು ಇವರನ್ನು ಹೇಳುವವರು, ಕೇಳುವವರು ಯಾರೂ ಇಲ್ಲವೆಂದುಕೊಳ್ಳಬೇಡಿ. ಇವರ ಗುಂಪಿಗೆ ಓರ್ವ ನಾಯಕನೂ ಇದ್ದಾನೆ(ಳೆ). ಆಕೆಯ ಹೆಸರು ರಾಣಿ. ಈಕೆ ಮೂಲತ: ಬೆಂಗಳೂರಿನ ನಿವಾಸಿ. ಇವರ ಗುಂಪಿನಲ್ಲಿಯೇ ಸ್ಫುರದ್ರೂಪಿ ಈಕೆ. ಈ ಕಾರಣದಿಂದಲೇ ಇವಳಿಗೆ ಭಾರೀ ಡಿಮ್ಯಾಂಡ್ ಅಂತಾರೆ ಇವರು. ರಾಣಿ ಮಂಗಳೂರಿನಲ್ಲಿ ಇವರ ಜತೆ ಇರುವುದು ಕೆಲವು ದಿನಗಳು ಮಾತ್ರ. ಉಳಿದಂತೆ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುತ್ತಾಳೆ. ಇಡೀ ತಂಡದಲ್ಲಿ ಏನೇ ನಿಧರ್ಾರ ಕೈಗೊಳ್ಳಬೇಕಿದ್ದರೂ ರಾಣಿಯ ಒಪ್ಪಿಗೆ ಬೇಕೇ ಬೇಕು. ಆಕೆ `ಯೆಸ್' ಅಂದಮೇಲೆ ಎಲ್ಲವೂ ಮುಂದುವರಿಯುತ್ತದೆ.

ಭಿಕ್ಷಾಂದೇಹಿ!

ಹಿಜಿಡಾಗಳು ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾರಾದರೂ ಅವರ ಜೀವನದ ಅವಿಭಾಜ್ಯ ಅಂಗವೆಂದರೆ ಭಿಕ್ಷಾಟಣೆ. ಅವರೇ ಹೇಳುವಂತೆ `ಭವತೀ ಭಿಕ್ಷಾಂದೇಹಿ' ಎಂದು ಕೈ ಮುಂದೆ ಚಾಚಿ ಭಿಕ್ಷೆ ಬೇಡದಿದ್ದರೆ ಅವರಿಗೆ ಏನನ್ನೋ ಕಳೆದುಕೊಂಡಂತೆ. ಇದರಿಂದ ದೊರೆಯುವ ಸಂಪಾದನೆಯೂ ಚೆನ್ನಾಗಿದೆ. ಆದರೆ ಬೆಳಗ್ಗಿನಿಂದ ಸಂಜೆಯ ತನಕ ಅಂಗಡಿ ಮೆಟ್ಟಿಲು ತುಳಿಯುತ್ತಾ ಅವರಿವರು ಹೇಳುವ ಕೊಳಕು ಮಾತುಗಳನ್ನು ಕೇಳಬೇಕು. ಎಷ್ಟೋ ಮಂದಿ ಇವರು ಬರುತ್ತಿದ್ದಂತೆಯೇ ತಮ್ಮ ಅಂಗಡಿ ಬಾಗಿಲು ಎಳೆದು ಹತ್ತಿರದ ಅಂಗಡಿಗೆ ಹೋಗುವುದೂ ಇದೆ. ಇನ್ನು ಕೆಲವರಂತೂ ಇವರು ಭಿಕ್ಷೆಗೆ ಬಂದು ಅಂಗಡಿ ಮುಂಬಾಗಿಲಲ್ಲಿ ನಿಂತರೆ ದೊಣ್ಣೆ ಹಿಡಿದು ಓಡಿಸುವುದೂ ಮಾಮೂಲಿ. ಇಷ್ಟೆಲ್ಲಾ ಸಮಸ್ಯೆಯ ನಡುವೆಯೂ ಇವರು ದಿನವೊಂದಕ್ಕೆ ಸರಾಸರಿ 250-300 ರೂ. ದುಡಿಯುತ್ತಾರೆ. `ಹೇಗಾದರೂ ಭಿಕ್ಷೆ ಬೇಡಿ ಬದುಕುತ್ತೇವೆ ಸಾರ್... ಆದ್ರೆ ರಸ್ತೆಯಲ್ಲಿ ನಡೆಯುವುದೇ ಕಷ್ಟ. ಹೆಣ್ಣು ಮಕ್ಕಳಂತೂ ನಮ್ಮ ಹತ್ತಿರವೂ ಸಾಗದೆ ಮಾರುದೂರ ಹಾರಿದರೆ, ಗಂಡಸರು ಚ... ಬಂದ ಅಂತ ವ್ಯಂಗ್ಯವಾಡುತ್ತಾರೆ, ಇಷ್ಟೆಲ್ಲಾ ಸಮಸ್ಯೆ ಇದ್ರೂ ನಾವು ಯಾರೊಡನೆಯೂ ಜಗಳಕ್ಕೆ ನಿಲ್ಲುವುದಿಲ್ಲ. ನಮ್ಮಷ್ಟಕ್ಕೆ ಭಿಕ್ಷೆ ಬೇಡುತ್ತೇವೆ' ಎನ್ನುತ್ತಾರೆ ರಮೇಶ್ ಅಲಿಯಾಸ್ ಪ್ರೀತಿ.

9 comments:

Sathish Kulal said...

ಶಶಿಯವರೇ ಧನ್ಯವಾದಗಳು..
ಹೌದು,ನಮ್ಮ ಸಮಾಜದಲ್ಲಿ ಶೋಷಣೆಗೊಳಪಟ್ಟವರಲ್ಲಿ ಇವರೂ ಕೂಡಾ ಸೇರಿದ್ದಾರೆ.ಹಿಜಡಾಗಳೆಂದರೆ ಕೀಳಾಗಿ ಕಾಣುವ ಈ ಸಮಾಜ ಅವರಿಗೆ ಎಲ್ಲರಂತೆ ಬದುಕಲು ಅವಕಾಶ ಮಾಡಿ ಕೊಟ್ಟಿಲ್ಲ ಎನ್ನುವುದೇ ದೊಡ್ಡ ದುರಂತ. ಬಹುಶಃ ಇದಕ್ಕೆ ಅವರ ನಡವಳಿಕೆಗಳೂ ಕಾರಣವಿರಬಹುದು ಅನಿಸುತ್ತೆ!
ಅವರಿಗೆ ಮುಖ್ಯವಾಗಿ ಜೀವನದಲ್ಲಿ ಬೇಕಾಗಿರುವುದು ಅನುಕಂಪ ಮತ್ತು ಅವಕಾಶ,ಆದರೆ ನಮ್ಮ 'ಕೈಲಾಗದವರ'ಸರ್ಕಾರದಿಂದ ಅವರ ಅಭಿವೃದ್ಧಿಯನ್ನು ನಿರೀಕ್ಷಿಸುವುದು ವ್ಯರ್ಥ!
ಈಗಿನ ನಮ್ಮ ಮುಂದುವರಿದ ಸುಶಿಕ್ಷಿತ ಸಮಾಜದಲ್ಲಿ ಇನ್ನು ಮೇಲಾದರೂ ಅವರ ಬದುಕಲ್ಲಿ ಬದಲಾವಣೆಯ ಗಾಳಿ ಬೀಸಲಿ..
ಬಹಳ ಉತ್ತಮವಾದ ಕಣ್ಣು ತೆರೆಸುವ ಲೇಖನ. ಅಭಿನಂದನೆಗಳು...

Mili said...

good one shashi

ಮಿಥುನ ಕೊಡೆತ್ತೂರು said...

ನಿಜಕ್ಕೂ ಅತ್ಯುತ್ತಮ ಬರಹ ಮತ್ತು ಚಿತ್ರಗಳು. ಓದಿ ಖುಷಿ ಮತ್ತು ಬೇಸರ ಆಯಿತು.
ಅಂದ ಹಾಗೆ ಹಿಜಿಡಾಗಳು ಬೇಡುವುದಕ್ಕೆಂದು ಅಂಗಡಿ, ಕಚೇರಿಗಳಿಗೆ ಬಂದು ದಬ್ಬಾಳಿಕೆ ನಡೆಸುವುದು ಮಾತ್ರ ಅಸಹ್ಯ

ಸುಷ್ಮಾ ಮೂಡುಬಿದಿರೆ said...

ತುಂಬಾ ಒಳ್ಳೆಯ ಲೇಖನ....ಶೀರ್ಷಿಕೆಯೇ ಮನ ನಾಟುವಂತಿದೆ..ಪ್ರಜ್ಞಾವಂತ ಸಮಾಜದ "ಪ್ರಜ್ಞೆ" ಯ ಬಗ್ಗೆ ಉತ್ತಮ ಬರಹ..ಅವರ ಬದುಕು ಬವಣೆಯ ಕುರಿತು ತುಂಬ ಚೆನ್ನಾಗಿ ನಿರೂಪಿಸಿದ್ದೀರಿ..comment ಮಾಡಿದ ಸ್ನೇಹಿತರು ಹೇಳಿದಂತೆ ಕೆಲವೊಮ್ಮೆ ಅವರೂ ನಮ್ಮನ್ನ ದಬ್ಬಾಳಿಕೆ ಮಾಡುತ್ತಿರುವರೋ ಏನೋ ಎಂಬ ಅನುಮಾನ ಕಾಡುವುದಂತೂ ನಿಜ..!! ಏನೇ ಆದರೂ ಅವರ ಬಾಳು ಹಸನಾಗಲಿ ಎಂಬುದು ನನ್ನ ಹಾರೈಕೆಯು ಕೂಡ...

ಶಶೀ ಬೆಳ್ಳಾಯರು said...

ಧನ್ಯವಾದ ಸತೀಶ್, ಮಿಥುನ, ಮಿಲಿ ಹಾಗೂ ಸುಷ್ಮಾ ಅವರೇ...
ಮಿಥುನ ಅವರೇ, ನಿಜಕ್ಕೂ ಅವರ ಬದುಕು, ಜೀವನ ಶೈಲಿ, ತುಂಡು ಕೊಠಡಿಯೊಳಗೆ ಅಷ್ಟು ಮಂದಿಯ ಬದುಕು ಮನ ಕಲಕುತ್ತದೆ. ಇನ್ನು ನೀವು ಹೇಳಿದಂತೆ ಅವರು ಅಂಗಡಿಗಳಲ್ಲಿ ಬೇಡಲು ಬಂದು ದಬ್ಬಾಳಿಕೆ ಮಾಡುತ್ತಾರೆ ಎಂಬ ಮಾತು ಜನರ ಮನಸ್ಸಿನಲ್ಲಿ ಸಾಮಾನ್ಯವಾಗಿದೆ. ಆದರೆ ಅವರೇ ಹೇಳುವಂತೆ ಅಂತಹ ಯಾವುದೇ ದಬ್ಬಾಳಿಕೆಯನ್ನು ನಡೆಸುತ್ತಿಲ್ಲ. ಬದಲಾಗಿ ಅಂಗಡಿ ಮಾಲಕರು ಕೊಟ್ಟಷ್ಟು ಹಣವನ್ನು ಪಡೆದುಕೊಳ್ಳುತ್ತಾರೆ. ವಾರದ ನಿದರ್ಿಷ್ಟ ದಿನದಂದು ಅವರು ಬಂದು ಬೇಡುವುದರಿಂದ ಇದು ದಬ್ಬಾಳಿಕೆ ಎಂದು ನಾಗರಿಕ ಸಮಾಜಕ್ಕೆ ಅನಿಸಲೂಬಹುದು.
ಲೇಖನ ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಾದರೂ ಅವರನ್ನು ನೋಡುವ ದೃಷ್ಟಿಕೋನ ಬದಲಾಗಲಿ ಎಂಬ ಹಾರೈಕೆಯೊಂದಿಗೆ,,,

Bhaskar Amin said...

ಬದುಕುವುದಕ್ಕೆ ಎಲ್ಲರಿಗೂ ಸಮಾನ ಹಕ್ಕಿದೆ, ಬದುಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ , ಹುಟ್ಟುತ್ತಲೇ ನಾವು ಹೀಗೇ ಹುಟ್ಟಬೇಕು ಎಂಬ ಆಯ್ಕೆಗೆ ಅವಕಾಶಗಳಿಲ್ಲ , ನಿಜಕ್ಕೂ ಸಮಾಜದ ಹಾಗೂ ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿ ಹೀನಾಯ ಬದುಕನ್ನು ಅನುಭವಿಸುತ್ತಿರುವ ಮಂಗಳಮುಖಿಯರ ಯಾತನಾಮಯ ಬದುಕು ನಿಜಕ್ಕೂ ನಮ್ಮಲ್ಲಿನ ದೊಡ್ಡ ದುರಂತ..!!!!! ಶಶಿ, ಮಂಗಳಮುಖಿಯರ ಬರಡು ಬದುಕಿನ ಬಗ್ಗೆ ಸ್ಪಂದಿಸಿದ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ,ಸಮಾಜದ ಬಗ್ಗೆ ಬೆಳಕು ಚೆಲ್ಲುವ ಇಂತಹ ಲೇಖನಗಳು ನಿಮ್ಮಿಂದ ಇನ್ನಷ್ಟು ಹೊರಹೊಮ್ಮಲಿ ಎಂಬುವುದು ನನ್ನ ಆಶಯ.

Bhaskar Amin said...

ಬದುಕುವುದಕ್ಕೆ ಎಲ್ಲರಿಗೂ ಸಮಾನ ಹಕ್ಕಿದೆ, ಬದುಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ , ಹುಟ್ಟುತ್ತಲೇ ನಾವು ಹೀಗೇ ಹುಟ್ಟಬೇಕು ಎಂಬ ಆಯ್ಕೆಗೆ ಅವಕಾಶಗಳಿಲ್ಲ , ನಿಜಕ್ಕೂ ಸಮಾಜದ ಹಾಗೂ ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿ ಹೀನಾಯ ಬದುಕನ್ನು ಅನುಭವಿಸುತ್ತಿರುವ ಮಂಗಳಮುಖಿಯರ ಯಾತನಾಮಯ ಬದುಕು ನಿಜಕ್ಕೂ ನಮ್ಮಲ್ಲಿನ ದೊಡ್ಡ ದುರಂತ..!!!!! ಶಶಿ, ಮಂಗಳಮುಖಿಯರ ಬರಡು ಬದುಕಿನ ಬಗ್ಗೆ ಸ್ಪಂದಿಸಿದ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ,ಸಮಾಜದ ಬಗ್ಗೆ ಬೆಳಕು ಚೆಲ್ಲುವ ಇಂತಹ ಲೇಖನಗಳು ನಿಮ್ಮಿಂದ ಇನ್ನಷ್ಟು ಹೊರಹೊಮ್ಮಲಿ ಎಂಬುವುದು ನನ್ನ ಆಶಯ.

ಸುರೇಶ್ ಫಲಿಮಾರ್ said...

ಶಶಿಯವರೇ ಧನ್ಯವಾದಗಳು..
No one is perfect in this world ಜಾತೀಯ, ಪಂಗಡ, ಅವ್ಯಾಸ ಹೀಗೆ ಅನೇಕ ರೀತಿಯ ಹಿಂಸೆಗಳ ನಡುವೆ ಇವತ್ತು ಇವರು ಬದುಕಬೇಕಾಗಿದೆ..ಅವರ ಮಿಕ್ಕ ಕೆಲವು ವಿಚಾರಗಳು ಆಸಕ್ತಿಕರವಾಗಿದ್ದರು - ಅವರ ಕೇವಲ ಈ ವರ್ತನೆಗಳಿಂದ ಅವರನ್ನು ಬೇರ್ಪಡಿಸಿ ನೋಡ ಬಾರದು. ಅವರ ಆಸಕ್ತಿಕರ ವಿಷಯವನ್ನು ನಮ್ಮ ಸರಕಾರ ತುಸು ಚರ್ಚಿಸಿ ಮನವ ಹಕ್ಕನ್ನು ಅವರಿಗೂ ತಲುಪುವಂತೆ ಮಾಡಬೇಕು.
ಶಸಿ ಮನಮುಟ್ಟುವಂತಹ ಲೇಖನ ನಿಮ್ಮದು, ದನ್ನಾವದಗಳು.
ಸುರೇಶ್ ಬಂಗೇರ ಪಲಿಮಾರ್.

ಸುರೇಶ್ ಫಲಿಮಾರ್ said...

ಶಶಿಯವರೇ ಧನ್ಯವಾದಗಳು..
No one is perfect in this world ಜಾತೀಯ, ಪಂಗಡ, ಅವ್ಯಾಸ ಹೀಗೆ ಅನೇಕ ರೀತಿಯ ಹಿಂಸೆಗಳ ನಡುವೆ ಇವತ್ತು ಇವರು ಬದುಕಬೇಕಾಗಿದೆ..ಅವರ ಮಿಕ್ಕ ಕೆಲವು ವಿಚಾರಗಳು ಆಸಕ್ತಿಕರವಾಗಿದ್ದರು - ಅವರ ಕೇವಲ ಈ ವರ್ತನೆಗಳಿಂದ ಅವರನ್ನು ಬೇರ್ಪಡಿಸಿ ನೋಡ ಬಾರದು. ಅವರ ಆಸಕ್ತಿಕರ ವಿಷಯವನ್ನು ನಮ್ಮ ಸರಕಾರ ತುಸು ಚರ್ಚಿಸಿ ಮನವ ಹಕ್ಕನ್ನು ಅವರಿಗೂ ತಲುಪುವಂತೆ ಮಾಡಬೇಕು.
ಶಸಿ ಮನಮುಟ್ಟುವಂತಹ ಲೇಖನ ನಿಮ್ಮದು, ದನ್ನಾವದಗಳು.
ಸುರೇಶ್ ಬಂಗೇರ ಪಲಿಮಾರ್.