doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Tuesday, January 11, 2011

ರಾ+ಜ+ಕೀ+ಯರಾ-ರಾವಣ, ಜ-ಜರಾಸಂಧ, ಕೀ-ಕೀಚಕ, ಯ-ಯಮ. ಇವರೆಲ್ಲಾ ಒಟ್ಟು ಸೇರಿದ್ರೆ ನಮ್ಮ ಹಾಳುಗೆಟ್ಟ ರಾಜಕೀಯ ಅನ್ನೋದು ನನಗಿಂತ ನಿಮಗೇ ಚೆನ್ನಾಗಿ ತಿಳಿದಿರಬಹುದು. ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ ಬರೆಯೋ ಹಕೀಕತ್ತು ನನ್ಗೂ ಇರಲಿಲ್ಲ. ಆದ್ರೂ ಈಗಷ್ಟೇ ತಾ.ಪಂ, ಜಿ.ಪಂ. ಇಲೆಕ್ಷನ್ನು ಮುಗಿದಿದೆ, ಈಗಿನ ರಾಜಕೀಯ ಸ್ಥಿತಿಯಲ್ಲಿ ಯಾವಾಗ ಈ ಇಲೆಕ್ಷನ್ನು ಬರುತ್ತೆ ಅಂತ ಹೇಳೋಕೂ ಆಗಲ್ಲ. ಹೀಗಿರೋವಾಗ ಕೊಂಚನಾದ್ರೂ ನಿಮ್ಗೆ ಹೇಳದೇ ಇದ್ರೆ ಹೇಗೆ ಹೇಳಿ?

ಹಾಗಾದ್ರೆ ರಾಜಕೀಯ ವ್ಯವಸ್ಥೆಯನ್ನೋದು ನಮ್ಮ ಹೆದ್ದಾರಿಯಷ್ಟೂ ಹದಗೆಟ್ಟಿದೆಯಾ, ಅಂತ ನೀವು ನೀವೇ ಕೇಳ್ಕೊಳ್ಳಿ. ಆಗ ನಮಗೇ ತಿಳಿಯುತ್ತೆ, ನಾನ್ಯಾಕೆ ಈ ರೀತಿ ಬರೆದೆನೆಂದು. ಎಳೆ ಪ್ರಾಯದ ಮಗುವಿನಿಂದ ಹಿಡಿದು ಹಣ್ಣುಹಣ್ಣು ಮುದುಕರ ತನಕ ರಾಜಕೀಯ ಅನ್ನೋ ಹೆಸರೆತ್ತಿದ್ರೆ ಸಾಕು, ಸಿಡಿದು ಬೀಳೋ ಜನಾನೇ ನಮ್ಮಲ್ಲಿರೋವಾಗ ವ್ಯರ್ಥ ಆಲಾಪ ಯಾಕೆ ಬೇಕು? ಎಲೆಕ್ಷನ್ನು ಅಂದಮೇಲೆ ಅಲ್ಲಿ ಗಲಾಟೆ, ಪರ-ವಿರೋಧಿಗಳ ನಡುವಿನ ಕಚ್ಚಾಟ, ಕಂಟ್ರಿ ಸಾರಾಯಿಯ ಹಂಚುವಿಕೆ ಇವೆಲ್ಲಾ ಇದ್ದದ್ದೇ. ಎಲೆಕ್ಷನ್ನು ಅಂದ್ರೆ ನನ್ನ ಬಾಲ್ಯದ ನೆನಪುಗಳು ಈಗಲೂ ಮಸುಕು ಮಸುಕಾಗಿ ಗೋಚರಿಸುತ್ತೆ. ನಮ್ಮ ಊರಲ್ಲಿ ಚುನಾವಣೆ ಬಂತಂದ್ರೆ ಗೌಜಿಯೋ ಗೌಜಿ. ಊರಿಗೆ ಊರೇ ಉಲ್ಲಾಸದಿಂದ ಬೆಳಿಗ್ಗೆ ಬೇಗನೇ ಎದ್ದು ಕುಳಿತಿರುತ್ತೆ. ಹೆಚ್ಚಾಗಿ ಈ ಚುನಾವಣೆ ಅನ್ನೋದು ಶಾಲಾ ಮಕ್ಕಳ ರಜಾದಿನಗಳಲ್ಲೇ ಬರೋದ್ರಿಂದ ನಮಗೆಲ್ಲಾ ಏನೋ ಖುಷಿ. ಒಂಭತ್ತು ದಿನಗಳ ನವರಾತ್ರಿ ಉತ್ಸವ ಬಂದಾಗ ನಾನಾ ರೀತಿಯ ವೇಷ ನೋಡೋಕ್ಕೆ ಯಾವ ರೀತಿ ಕಾದಿರ್ತೀವೋ ಅದೇ ರೀತಿ ಚುನಾವಣೆಯೂ ಕೂಡಾ. ಡಿಫರೆನ್ಸ್ ಏನಂದ್ರೆ ನವರಾತ್ರಿಯ ವೇಷಗಳು ತಮ್ಮ ವೇಷವನ್ನು ಪ್ರದಶರ್ಿಸುತ್ತೆ, ಎಲೆಕ್ಷನ್ನು ಸಮಯ ಬರೋ ವೇಷಗಳು ತಮ್ಮ ಒಳಗೊಳಗೇ ನಾನಾ ರೀತಿಯ ವೇಷಗಳನ್ನು ಒಂದಾದ ಮೇಲೊಂದರಂತೆ ಧರಿಸಿರುತ್ತೆ. ಆದ್ರೆ ನಮ್ಮಗಳ ಕಣ್ಣಿಗೆ ಕಾಣೋದಿಲ್ಲ ಅಷ್ಟೆ.

ಚಿಕ್ಕಂದಿನಲ್ಲಿ ಚುನಾವಣೆ ಬಂದಾಗ ನಾನು ಮತ್ತು ನನ್ನ ಗ್ಯಾಂಗ್ಗೆ ಆನಂದವೋ ಆನಂದ. ನಮ್ಮೂರಿನ ಕುಲಗೆಟ್ಟ ರಸ್ತೆಯಲ್ಲಿ ಆಗೊಮ್ಮೆ, ಈಗೊಮ್ಮೆ ಓಡಾಡುವ ಬಿಳಿಯ ಬಣ್ಣದ ಅಂಬಾಸಿಡರ್ ಕಾರು, ಅದರೊಳಗಿಂದ ಕರಿಯ ಕನ್ನಡಕ, ಬಿಳಿ ಪಂಚೆ, ಜುಬ್ಬಾ ತೊಟ್ಟವರು ಕೆಳಗಿಳಿಯುತ್ತಲೇ ನಮ್ಮಗಳ ಉತ್ಸಾಹ ನೂರ್ಮಡಿಯಾಗುತ್ತಿತ್ತು. ಅವರ ಹಿಂದೆ ಮುಂದೆ ಅದೆಷ್ಟೋ ಬಿಳಿಯ ಅಂಗಿಗಳು ಇರುವೆಗಳಂತೆ ಮುತ್ತಿರುವುದನ್ನು ಕಂಡಾಗ ನಮ್ಗೂ ಗೌರವ ಭಾವ. ಅಷ್ಟರಲ್ಲಿ ಒಬ್ಬವೇದಿಕೆಯ ಮೇಲೇರಿ ಮೈಕಾದಲ್ಲಿ ಊರಿನ ಜನರನ್ನು `ಅಕ್ಕನಕುಲೇ... ಅಣ್ಣನಕುಲೇ...' ಎಂದು ಜೋರಾಗಿ ಅರಚಲು ತೊಡಗಿದರೆ ಎದೆ ನಡುಕ ಹುಟ್ಟುತ್ತಿತ್ತು. ಕೊನೆಗೆ ನಮ್ಮ ಊರಿನ ಓಟನ್ನು ಪಡೆಯಲು ಆ ಬಿಳಿಯ ಬಟ್ಟೆಯವರು ವೇದಿಕೆಯ ಮೇಲೆ ಹತ್ತು ಹಲವು ರೀತಿಯ ಆಶ್ವಾಸನೆಗಳನ್ನು ನೀಡುತ್ತಿದ್ದರು. ರಸ್ತೆ, ದಾರಿದೀಪ, ನಳ್ಳಿ ನೀರು, ಬೋರ್ವೆಲ್ ಹೀಗೆ ನಮ್ಮೆಲ್ಲರನ್ನೂ ನಂಬಿಸಿ ಬಿಡುತ್ತಿದ್ದರು. ನಮ್ಮ ಊರಿನವರಿಗೆ ಅವರು ಮನುಷ್ಯರೇ ಅಲ್ಲ, ದೇವರ ತದ್ರೂಪ ಎನ್ನುವ ಭಾವನೆ. ಹೀಗೆ ನಂಬಿಕೆ, ಭರವಸೆಯ ಜತೆಗೆ ಎಲೆಕ್ಷನ್ನು ಮುಗಿದು ಹೋಗುತ್ತಿತ್ತು. ತಿಂಗಳ ಕಾಲ ನಮ್ಮ ಊರಿನ ರಸ್ತೆಯ ತುಂಬಾ ರಾಡಿಯೆಬ್ಬಿಸಿ , ರಸ್ತೆಯ ಗುಂಡಿಯನ್ನು ಇನ್ನಷ್ಟು ಆಳವನ್ನಾಗಿಸಿದ್ದ ಬಿಳಿಯ ಮೋಟಾರು ವಾಹನಗಳು ಕಾಣದಾದಾಗ, ಬಿಳಿ ಅಂಗಿಗಳೆಲ್ಲಾ ಕಾಣದೆ ಮಾಯವಾದಾಗ ಸ್ವಲ್ಪ ದಿನ ಬೋರ್ ಹೊಡೆಸುತ್ತಿತ್ತು.(ನವರಾತ್ರಿ ಮುಗಿದ ನಂತರ ಆಗುತ್ತಲ್ಲಾ ಹಾಗೆ). ಆದ್ರೆ ನಂತರ ನಮ್ಮ ಊರಿನ ಪೆಕರಾಗಳ ಓಟಿನಿಂದ ಗೆದ್ದವರು ಇತ್ತ ತಲೆ ಹಾಕಿ ಮಲಗುವುದನ್ನೂ ಬಿಟ್ಟಾಗ ನಮ್ಮ ಊರಿನ ಹಿರಿ ಜೀವಗಳು ಹಿಡಿಶಾಪ ಹಾಕುವುದನ್ನು ನೋಡಿದ್ದೆ. ಆಗೆಲ್ಲಾ ಇದೊಂದು ನಾಟಕದಂತೆ ಕಾಣುತ್ತಿತ್ತು.

ಬೆಳೆಯುತ್ತಾ ರಾಜಕೀಯದ ಬಗೆಗಿನ ನನ್ನ ಆಸಕ್ತಿಗಳಿಗೆಲ್ಲಾ ಸರಿಯಾದ ಉತ್ತರ ಸಿಕ್ಕಿದಾಗ ಆಶ್ಚರ್ಯವೂ ಆಯಿತೆನ್ನಿ. ಆಮೇಲೆ ರಾಜಕೀಯ ಅಂದ್ರೆ ನನಗೆ ಈ ರೀತಿಯ ನಿಜಾರ್ಥ ಹೊಳೆದದ್ದು. ಈಗಂತೂ ನಮ್ಮ ರಾಜಕೀಯ ವ್ಯವಸ್ಥೆ ಎಕ್ಕುಟ್ಟಿ ಹೋಗಿರುವುದನ್ನು ಕಣ್ಣೆದುರೇ ನೋಡುತ್ತೇವೆ. ಪಟಿಂಗನ ಕೊನೆಯ ಆಸರೆ ಎನ್ನುವಂತೆ ರಾಜಕೀಯ ಕೀಳಾಗಿ ಹೋಗುತ್ತಿದೆ. ಎಲೆಕ್ಷನ್ನು ಹೇಗಾದ್ರೂ ಆಗಲಿ, ಯಾರೇ ಬೇಕಾದ್ರೂ ಕುಣೀಲಿ, ಓಟು ಮಾತ್ರ ನೀಡೋದು ನಮ್ಮ ಹಕ್ಕು ಅಲ್ವೇನ್ರೀ..?

ಲಾಸ್ಟ್ ಲೈನ್: ನಮ್ಮ ಊರಿನ ಅದೇ ಹಿಂದಿನ ಮಣ್ಣಿನ ರಸ್ತೆ, ರಾತ್ರಿಯ ಕತ್ತಲು, ನಮ್ಮೂರಿನ ಹೆಣ್ಮಕ್ಕಳು ಸೊಂಟ ಬಳುಕಿಸ್ಕೊಂಡು, ಕಾಲು ಉಳುಕಿಸ್ಕೊಂಡು ದೂರದ ಕೆರೆ, ನದಿಯಿಂದ ನೀರು ತರುವುದನ್ನು ನೋಡಿ ಅಯ್ಯೋ ಪಾಪ ಅನಿಸುತ್ತೆ. ಆದ್ರೇನು ಮಾಡೋಣ, ಈ ಸಲನಾದ್ರೂ ಸರಿಯಾದ್ರೆ.... ಅನ್ನೋ ದೂರದ ಆಶೆಯಿಂದ ಜನ ಮತ್ತದೇ ತಪ್ಪು ಮಾಡ್ತಿದ್ದಾರೆ.

8 comments:

Digwas Bellemane said...

good one

ಸಾಗರದಾಚೆಯ ಇಂಚರ said...

Truly true
bejaaru agi hogide raajakeeya da bagge maataadoke

ಶಶೀ ಬೆಳ್ಳಾಯರು said...

ಧನ್ಯವಾದಗಳು ದಿಗ್ವಾಸ್ ಸರ್ ಹಾಗೂ ಸಾಗರದಾಚೆಯ ಇಂಚರ ಅವರಿಗೆ,
ರಾಜಕೀಯ ಅಂದ್ರ ನಿಜಕ್ಕೂ ಅಸಹ್ಯವಾಗ್ತಿದೆ. ಭೂಮಾಫಿಯಾದಲ್ಲಿ ತೊಡಗಿರೋ ಪಕ್ಷವನ್ನು ಜನರು ಆರಿಸಿ ಅಧಿಕಾರ ಕೊಡ್ತಿದ್ದಾರೆ, ಇನ್ನೊಂದು ಪಕ್ಷ ಇನ್ನೂ ಗಾಂಧಿ, ನೆಹರೂ ಹೆಸರು ಹೇಳ್ಕೊಂಡು ಸದನವನ್ನು ಮೀನು ಮಾರುಕಟ್ಟೆಗಿಂತ ಕೊಳಕು ಮಾಡಹೊರಟಿದೆ. ಇವರ ನಡುವೆ ಮಣ್ಣು ಮುಕ್ಕಿ ಪಕ್ಷ ಜನರ ಗಮನ ಸೆಳೆಯಲು ಹರಸಾಹಸ ಪಡ್ತಾ ಇದೆ...
ಧಿಕ್ಕಾರವಿರಲಿ....ನೀಚ, ಕುಟಿಲ ರಾಜಕಾರಿಣಿಗಳಿಗೆ..,,!!!

Sushma said...

Really good one...
ಹೇಳಬೇಕಾದ್ದನ್ನು ಯಾವುದೇ ಮುಲಾಜಿಲ್ಲದೆ ಹೇಳಿಯೇಬಿಟ್ಟಿದ್ದಿರಿ... ಜೊತೆಗೊಂದಿಷ್ಟು ಪದ ಸ್ವಾರಸ್ಯ "ರಾ+ಜ+ಕೀ+ಯ "...ಈ ಥರಾ ಟೀಕೆಯಿಂದಲಾದರು ನಮ್ಮ ಜನನಾಯಕರುಗಳು ಜನಪರ ಚಿಂತೆ ಮಾಡುತ್ತಾರೋ ನೋಡೋಣ,..ನಿಮ್ಮ ವಸ್ತು ನಿಷ್ಠ ಲೇಖನಕ್ಕೆ ಅಭಿನಂದನೆಗಳು..

Sushma said...

Really good one...
ಹೇಳಬೇಕಾದ್ದನ್ನು ಯಾವುದೇ ಮುಲಾಜಿಲ್ಲದೆ ಹೇಳಿಯೇಬಿಟ್ಟಿದ್ದಿರಿ... ಜೊತೆಗೊಂದಿಷ್ಟು ಪದ ಸ್ವಾರಸ್ಯ "ರಾ+ಜ+ಕೀ+ಯ "...ಈ ಥರಾ ಟೀಕೆಯಿಂದಲಾದರು ನಮ್ಮ ಜನನಾಯಕರುಗಳು ಜನಪರ ಚಿಂತೆ ಮಾಡುತ್ತಾರೋ ನೋಡೋಣ,..ನಿಮ್ಮ ವಸ್ತು ನಿಷ್ಠ ಲೇಖನಕ್ಕೆ ಅಭಿನಂದನೆಗಳು..

ಶರಶ್ಚಂದ್ರ ಕಲ್ಮನೆ said...

ಒಳ್ಳೆಯ ಲೇಖನ.. ಪುಟದ ಬಣ್ಣ ಹಾಗು ಅಕ್ಷರಗಳ ಬಣ್ಣವನ್ನು ಸಾಧ್ಯವಾದರೆ ಬದಲಾಯಿಸಿ. ಓದುವುದಕ್ಕೆ ಹಿತವೆನಿಸುವುದಿಲ್ಲ.

ಶಶೀ ಬೆಳ್ಳಾಯರು said...

ಧನ್ಯವಾದಗಳು ಸುಶ್ಮಾ...
ನಿಮ್ಮ ಪ್ರೋತ್ಸಾಹ ಇದೇ ರೀತಿ ಇರಲಿ... ಪ್ರೀತಿ, ಅಕ್ಕರೆ ತುಂಬಿದ ನಿಮ್ಮ ಪ್ರತಿಕ್ರಿಯೆಗೆ ನಾನು ಅಭಾರಿಯಾಗಿದ್ದೇನೆ... ರಾಜಕೀಯದ ಬಗ್ಗೆ ಬರೆಯೋದೇ ಬೇಡ ಅನ್ನಿಸುವಷ್ಟು ರಾಜಕೀಯ ಹದಗೆಟ್ಟಿದೆ. ಇದಕ್ಕೆ ನಾವೇ ಕಾರಣ ಅಂತಾನೂ ಗೊತ್ತಿದೆ... ಆದ್ರೂ ಮತ್ತದೇ ತಪ್ಪುಗಳನ್ನು ಮಾಡೋ ನಾವು ಒಂಥರಾ ಮೂರ್ಖರೇ ಅಲ್ವಾ?

ಶಶೀ ಬೆಳ್ಳಾಯರು said...

ಶರತ್ಚಂದ್ರ ಸರ್...
ನಿಮ್ಮ ಸಲಹೆಯನ್ನು ಪಾಲಿಸಿದ್ದೇನೆ... ನಿಮ್ಮ ಅಮೂಲ್ಯ ಪ್ರತಿಕ್ರಿಯೆ ಇದೇ ರೀತಿ ನನ್ನ ಬೆನ್ನ ಹಿಂದಿರಲಿ.. ಧನ್ಯವಾದಗಳು ತಮಗೆ...