doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Sunday, May 15, 2011


ಎಷ್ಟು ಜನುಮವೆತ್ತಿದರೂ ನೀನೇ ಎನಗೆ ಗೆಳತಿ..

ಆಕೆ ನನ್ನ ಬಾಲ್ಯ ಸ್ನೇಹಿತೆಯಲ್ಲ... ಸ್ಕೂಲ್, ಕಾಲೇಜ್ ಮೇಟ್ ಮೊದಲೇ ಅಲ್ಲ... ಸ್ನೇಹಿತೆಯರು ಅಟೋಗ್ರಾಫ್ ಬುಕ್ನಲ್ಲಿ ಜೀವನದುದ್ದಕ್ಕೂ ನಾವು ಬೆಸ್ಟ್ ಫ್ರೆಂಡ್ಸ್, ಎದುರು ಸಿಕ್ಕಾಗ ನಕ್ಕು ಮಾತಾಡಿಸು, ಎಂಬಿತ್ಯಾದಿ ಸುಳ್ಳಿನ ಕಂತೆಯನ್ನು ಬರೆದು ಕೊನೆಗೆ ಮದುವೆಯ ಕಾಗದ ಕೊಡಲು ಮರೆಯದಿರು ಎಂದವರು ಎದುರು ಸಿಕ್ಕಾಗಲೂ ತೀರಾ ಅಪರಿಚಿತರಂತೆ ಬದಿಗೆ ಸರಿದಾಗ ಆಕಸ್ಮಿಕವಾಗಿ ಆದ ಗೆಳೆತನ ನಮ್ಮದು. ಕಳೆದ ಐದು ವರ್ಷಗಳಿಂದ ನಮ್ಮ ನಡುವೆ ಪ್ರತಿದಿನ ಮುಂಜಾನೆಯ ಸುಪ್ರಭಾತದಿಂದ ಹಿಡಿದು ರಾತ್ರಿ ದಿಂಬಿಗೆ ತಲೆಯಾನಿಸುವವರೆಗೆ ಮೆಸೇಜ್ ಹರಿದಾಡುತ್ತಿತ್ತೇ ವಿನ: ಬೇರೇನೂ ಇರಲಿಲ್ಲ. ನಮಗೆ ಪರಸ್ಪರ ಭೇಟಿಯಾಗಬೇಕಾದ ಅವಶ್ಯಕತೆಯೂ ಕಂಡಿರಲಿಲ್ಲ... ಯಾಕೆಂದರೆ ಸ್ನೇಹದಲ್ಲಿ ನಮ್ಮ ನಡುವೆ ಅಂತಸ್ತು, ಸೌಂದರ್ಯ ಯಾವುದೂ ಗಣನೆಗೆ ಸಿಕ್ಕಿರಲಿಲ್ಲ. ಆದರೆ ಈಗ ಆಕೆ ಒಮ್ಮಲೇ ಮದುವೆಯಾಗ್ತಿರೋ ಸುದ್ದಿ ಪ್ರಕಟಿಸಿದ್ದಾಳೆ. ಜತೆಗೆ ಕಾಡರ್್ ಕಳುಹಿಸುತ್ತೇನೆ, ಬನ್ನಿ ಅಂತಾನೂ ಹೇಳಿದ್ದಾಳೆ. ಇದು ನನಗೆ ಎಷ್ಟು ಖುಷಿ ತಂದಿದೆಯೋ ಅಷ್ಟೇ ನೋವು ಕೂಡಾ ಕಾಡುತ್ತಿದೆ. ಒಬ್ಬ ಒಳ್ಳೇ ಗೆಳತಿ ನನ್ನಿಂದ ದೂರವಾಗ್ತಾ ಇದ್ದಾಳೆ ಅಂತ... ಬಾಳಿನಲ್ಲಿ ಕೆಲವೊಮ್ಮೆ ಹಠಾತ್ತಾಗಿ ಸಿಗೋ ಇಂಥ ತಿರುವುಗಳು ಖುಷಿಗಿಂತ ಜಾಸ್ತಿ ನೋವನ್ನು ಕೊಡುತ್ತೆ ಅಲ್ವಾ..? ಬಹುಷ: ಇದು ಆಕೆಗೆ ನನ್ನ ಕೊನೆಯ ಸ್ನೇಹ ಪತ್ರ....

ಆಕೆ ಎಲ್ಲಿದ್ದರೂ, ಹೇಗಿದ್ದರೂ ಚೆನ್ನಾಗಿರಲಿ...

ಆಕೆಯ ಮೊಗದಲ್ಲಿ ನಗೆಮಲ್ಲಿಗೆ ಬಾಡದಿರಲಿ....

ಗೆಳತಿ,

ಈ ಪತ್ರಾನಾ ಎಲ್ಲಿಂದ ಆರಂಭಿಸ್ಬೇಕು ಅಂತಾನೇ ತೋಚುತ್ತಿಲ್ಲ... ಕಾರಣ ಮನದ ಮೂಲೆಯಲ್ಲಿ ಮಡುಗಟ್ಟಿದ ಭಾವನೆಗಳು ಅದ್ಯಾಕೋ ತುಂಬಾನೇ ನೋವು ಕೊಡ್ತಾ ಇವೆ ಅನಿಸುತ್ತೆ... ನಮ್ಮ ನಡುವಿನ ಸ್ನೇಹ ಇಂದು-ನಿನ್ನೆ ಆರಂಭಗೊಂಡಿದ್ದಲ್ಲ. ಕಳೆದ ಕೆಲವು ವರ್ಷಗಳಿಂದ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುತ್ತಾ ಬೆಳೆದವರು ನಾವು. ನಿನ್ನ ಪರಿಚಯ ಆಕಸ್ಮಿಕವಾಗಿದ್ದರೂ ಈ ಇಷ್ಟೂ ವರ್ಷಗಳಲ್ಲಿ ನಮ್ಮೊಳಗಿನ ಯಾವುದೋ ಬಂಧವೊಂದು ನಮ್ಮಿಬ್ಬರನ್ನು ಬಿಟ್ಟೂ ಬಿಡದಂತೆ ಬಂಧಿಯನ್ನಾಗಿ ಮಾಡಿತ್ತು ಎಂದರೆ ಅತಿಶಯವಲ್ಲ. ಒಂದು ದಿನ ನನ್ನ ಮೆಸೇಜ್ ಬಾರದೇ ಹೋದರೆ ನೀನು, ನಿನ್ನ ಮೆಸೇಜ್ ಬಾರದೆ ಹೋದರೆ ನಾನು ಅದೆಷ್ಟು ಚಡಪಡಿಸಿದ್ದೆವು ಅನ್ನೋದು ನಮಗಿಂತ ಚೆನ್ನಾಗಿ ಇನ್ನಾರು ತಿಳಿಯೋಕ್ಕೆ ಸಾಧ್ಯ ಅಲ್ವಾ? ಏನೋ ನಿನ್ನ ಜತೆ ನನ್ನ ಮನಸ್ಸಿನ ಭಾವನೆಗಳನ್ನೆಲ್ಲಾ ಹೇಳ್ಕೊಳ್ಬೇಕು ಅಂತ ರೂಮಲ್ಲಿ ಒಬ್ಬನೇ ಕಂಪ್ಯೂಟರ್ ಎದುರು ಕೂತ್ಕೊಂಡ್ರೆ ಕೈ ನಾನೆಣಿಸಿದಷ್ಟು ವೇಗವಾಗಿ ಕೀಬೋಡರ್್ ಮೇಲೆ ಓಡುತ್ತಿಲ್ಲ... ಕಣ್ಣಲ್ಲಿ ನೀರು ಇನ್ನೇನು ಹೊರಬರಲು ಕಾಯುತ್ತಿದೆ... ಇದು ದು:ಖದ ಕಣ್ಣೀರು ಅಂತ ತಪ್ಪಾಗಿ ತಿಳ್ಕೋಬೇಡ ಪುಟ್ಟಿ... ಯಾಕೆ ಗೊತ್ತಾ? ನಾನು ಜೀವನದಲ್ಲಿ ಕಣ್ಣೀರು ಹಾಕೋದನ್ನು ತುಂಬಾನೇ ಕಡಿಮೆ ಮಾಡಿದ್ದೀನಿ. ಹಿಂದೆಲ್ಲಾ ನನ್ನ ಕಣ್ಣೀರಿಗೆ ಬೆಲೆ ಇಲ್ಲ ಅಂತ ನಾನ್ ತಿಳ್ಕೊಂಡಿದ್ರೆ ಇಂದು ನನ್ನ ಕಣ್ಣಾಲಿಗಳು ತೇವಗೊಂಡಿರುವುದಕ್ಕೆ ಕಾರಣ ಅಂತೂ ಇದ್ದೇ ಇದೆ.

ಏನೆಂದು ಬರೆಯಲಿ ಹೇಳು? ಇನ್ನು ಕೆಲವು ದಿನ ಕಳೆಯುವಷ್ಟರಲ್ಲಿ ನೀನು ಮದುವಣಗಿತ್ತಿಯಾಗಿ ಸಿಂಗರಿಸಿ ಹಸೆಮಣೆ ಏರಲು ತಯಾರಾಗಿ ನಿಂತಿರುತ್ತೀಯಾ... ನಿನಗ್ಗೊತ್ತಾ, ನೀನು ದಿಢೀರನೆ ಅಂತ ಮದುವೆ ಆಗ್ತಿರೋ ಸುದ್ದಿ ಕೇಳಿ ನಾನೆಷ್ಟು ಖುಷಿ ಪಟ್ಟೆ ಎಂದು. ಹೆಣ್ಣಿಗೆ ಕುತ್ತಿಗೆಯಲ್ಲಿ ತಾಳಿ ಬೀಳೋದಕ್ಕೆ ಎಂತೆಂಥ ಪಾಡು ಪಡೋದನ್ನು ನೋಡಿದ್ದೀನಿ. ಅದೂ ನನ್ನ ಗೆಳತೀನಾ ನೋಡಿದ ಹುಡ್ಗ ಒಂದೇ ಕಣ್ಣೋಟದಲ್ಲಿ ಮದುವೆ ಮಾಡ್ಕೊಡಿ ಅದೂ ತಿಂಗಳೊಳಗೆ ಅಂತಂದ್ರೆ ಖುಷಿ ಪಡದೇ ಇರೋಕ್ಕೆ ಸಾಧ್ಯಾನಾ ಹೇಳು? ಬಹುಷ: ನನ್ನಷ್ಟು ಯಾರೂ ಖುಷಿ ಪಟ್ಟಿರಲಿಕ್ಕಿಲ್ಲ. ಆದ್ರೆ ಒಂದು ಕ್ಷಣ ನನ್ನಷ್ಟಕ್ಕೆ ಕುಳಿತು ನಮ್ಮ ಇಷ್ಟು ವರ್ಷದ ಸ್ನೇಹದ ಬಗ್ಗೆ ಯೋಚಿಸ್ದೆ ನೊಡು. ಆಗ ಮಾತ್ರ ಕಣ್ಣಾಲಿಗಳು ತೇವಗೊಂಡಿತ್ತು. ಇಷ್ಟು ವರುಷ ನನ್ನ ಜೀವದ ಜೊತೆಯಾಗಿ ಪ್ರತಿದಿನ ನಸುಕಿನ ಸುಪ್ರಭಾತದಿಂದ ಹಿಡಿದು ರಾತ್ರಿ ನಿದ್ದೆಗೆ ಜಾರುವವರೆಗೆ ಜೊತೆಯಿದ್ದವಳು ನೀನು. ನಾನು ತುಂಬಾ ಮುಂಗೋಪಿ. ನನ್ನ ಮನಸ್ಸಿಗೆ ಯಾರಾದ್ರೂ ಬೇಸರ ಆಗೋ ರೀತಿ ವತರ್ಿಸಿದ್ರೆ ನನಗೆ ಬೇಗನೆ ಕೋಪ ಬರುತ್ತೆ. ಅಂತದ್ರಲ್ಲಿ ನನ್ನ ಮನಸ್ಸಿಗೆ ಇಷ್ಟು ವರ್ಷಗಳಲ್ಲಿ ಕೊಂಚಾನೂ ಬೇಸರ ಆಗದ ಹಾಗೆ ನಾನು ಕೋಪಿಸ್ಕೊಳ್ಳದ ಹಾಗೆ ನೋಡ್ಕೊಂಡ ನೀನು ನಿಜಕ್ಕೂ ಗ್ರೇಟ್..!

ನಮ್ಮ ಸ್ನೇಹ ಇಷ್ಟು ದೂರ ಸಾಗಿದ ರೀತಿ ಎಣಿಸ್ಕೊಂಡ್ರೆ ಈಗ ನಿಜಕ್ಕೂ ನಾನು ಕನಸು ಕಾಣ್ತಿದ್ದೀನಾ ಅನ್ನಿಸ್ತಿದೆ. ನನ್ಗೆ ಏನೇ ಬೇಸರ ಆದ್ರೂ, ಮನಸ್ಸಿಗೆ ಏನೇ ನೋವಾದ್ರೂ ನನ್ಗೆ ಮೊದಲು ನೆನಪಾಗ್ತಾ ಇದ್ದಿದ್ದು ನೀನು ಮಾತ್ರ. ನಿನ್ಗೆ ಮೆಸೇಜ್ ಮಾಡಿ ಎಲ್ಲಾನೂ ಹೇಳಿಬಿಟ್ರೆ ಆರಾಮವಾಗಿ ನಿದ್ರೆ ಮಾಡ್ತಿದ್ದೆ. ನಾನು ಬದುಕಿನಲ್ಲಿ ಭರವಸೆ ಕಳ್ಕೊಳ್ಳೋ ಸಮಯ ಬಂದಾಗ ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದವಳು ನೀನು. ನಾನು ಏನೇ ಬರೆದ್ರೂ ಚೆನ್ನಾಗಿದೆ, ಕಂಟಿನ್ಯೂ ಮಾಡಿ ಅಂತ ದೂರದಿಂದಲೇ ಹಾರೈಸಿದವಳು ನೀನು. ಹೀಗಿರೋವಾಗ ಒಮ್ಮೆಲೇ ಮದುವೆ ಆಗಿ ಗಂಡನ ಹಿಂದೆ ನಡೆವಾಗ ಕೊಂಚನಾದ್ರೂ ನೋವಾಗದೇ ಇರುತ್ತಾ ಹೇಳು? ನಸುಕಿನಲ್ಲಿ ನಾನು ಎದ್ದಾಗಲಿಂದ ಹಿಡಿದು ರಾತ್ರಿ ದಿಂಬಿಗೆ ತಲೆಯಾನಿಸುವವರೆಗೆ ಇದ್ದ ಒಬ್ಬಳೇ ಗೆಳತಿ ನೀನು ಮಾತ್ರ.

ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿದ್ದೀಯಾ... ಭಗವಂತ ಒಳ್ಳೇದು ಮಾಡ್ತಾನೆ ಅಂತ ಹಾರೈಸುತ್ತಿದ್ದ ನಾನು ನಿನ್ನ ಮದುವೆ ಸುದ್ದಿಯಿಂದ ನನ್ನ ಹಾರೈಕೆ ನಿಜ ಆಯ್ತು ಅಂತ ಖುಷಿ ಪಡ್ತಿದ್ದೀನಿ. ಆದ್ರೆ ಇನ್ನೊಂದೆಡೆ ನೋವು ನನ್ನ ಕಾಡ್ತಾ ಇದೆ. ಇಷ್ಟು ಬರಯೋವಷ್ಟರಲ್ಲಿ ಗಂಟಲುಬ್ಬಿ ಬರ್ತಾ ಇದೆ. ಮದುವೆಯಾದ್ಮೇಲೆ ನಮ್ಮ ಗೆಳೆತನ ಇರ್ಬಹುದು. ಅದು ನಕ್ಷತ್ರ, ಭೂಮಿ, ಸೂರ್ಯ, ಚಂದ್ರ ಇರೋವರೆಗೆ ಶಾಶ್ವತ ನಿಜ. ಆದ್ರೆ ಹಿಂದೆ ನಮ್ಮ ನಡುವೆ ಇದ್ದ ಸಲುಗೆ ಮುಂದೆ ಇರಲ್ಲ, ಇರಕೂಡದು ಅಂತಾನೂ ಗೊತ್ತು. ನನ್ನ ಬೆಸ್ಟ್ ಫ್ರೆಂಡ್ ಮದುವೆಯಾದ್ಳು ಅಂತ ನಿನ್ನ ಸ್ಥಾನ ತುಂಬಲು ಬೇರೆಯವರಿಗೆ ಎಂದೂ ಅವಕಾಶ ನೀಡಲ್ಲ ಇದಂತೂ ಸತ್ಯ. ಏನೇ ಇರಲಿ... ಮದುವೆಯ ಸಂಭ್ರಮದಲ್ಲಿ ಇರೋ ನಿನ್ಗೆ ಈ ಪತ್ರ ಬರೆದು ಕಣ್ಣಂಚು ತೇವಗೊಳಿಸಿದ್ದಕ್ಕೆ ಕ್ಷಮೆಯಿರಲಿ. ನನ್ಗೊತ್ತು... ಈ ಲೆಟರ್ ಒದಿದ ಕೂಡ್ಲೇ ನನ್ ಸೆಲ್ಗೆ ನಿನ್ ಕಾಲ್, ಮೆಸೇಜ್ ಬಂದೇ ಬರುತ್ತೆ ಅಂತ.. ಮತ್ತೆ `ನಾನಿದ್ದೀನಿ' ಅನ್ನೋ ಭರವಸೆಯ ಮಾತುಗಳು... `ಬೇಸರ ಮಾಡ್ಕೋಬೇಡ' ಅನ್ನೋ ಸಾಂತ್ವನ... ಹೌದು..! ನಾನೂ ಭಗವಂತನಲ್ಲಿ ಅದನ್ನೇ ಕೇಳ್ತಾ ಇದ್ದೀನಿ. ನನ್ನ ಮುದ್ದು ಗೆಳತಿ ಎಲ್ಲೇ ಇದ್ರೂ, ಹೇಗೇ ಇದ್ರೂ ಸುಖವಾಗಿರಲಿ. ನಾನು ಎಷ್ಟು ಜನುಮವೆತ್ತಿದರೂ ಆಕೆ ಎನ್ನ ಗೆಳತಿಯಾಗಿ ಪ್ರೋತ್ಸಾಹದ ಚಿಲುಮೆಯಾಗಿರಲಿ. ನನ್ನ ನೆನಪು ಸದಾ ಆಕೆಯ ಜೊತೆಗಿರಲಿ.

ಪತ್ರ ಓದಿ ಪ್ಲೀಸ್ ಅಳ್ಬೇಡ... ಖುಷಿಯಾಗಿರು. ಮದುವೆಯಾಗಿ ಹೋದೆ ಅಂತ ನಿನ್ನ ಮರೆವೆ ಎಂದುಕೊಳ್ಳದಿರು. ನನ್ನ ಉಸಿರು ಇರುವ ತನಕ ನಿನ್ನ ನೆನಪು ನನ್ನ ಮನಸ್ಸಿನಾಳದಲ್ಲಿ ಮನೆ ಮಾಡಿರುತ್ತೆ. ಅಲ್ಲಿ ಸ್ನೇಹದ ಸಿಂಚನ ಸದಾ ಪಸರಿಸಿರುತ್ತೆ. ಎಲ್ಲಿದ್ದರೂ ನಿನ್ನ ಮದುವೆ ದಿನ ಖಂಡಿತಾ ಬಂದೇ ಬರ್ತೀನಿ... ನಿನ್ನ ಬೆಸ್ಟ್ ಫ್ರೆಂಡ್ ಸ್ಥಾನ ಕೊಟ್ಟು ಇಷ್ಟು ವರ್ಷ ನನ್ನ ನೋವು-ನಲಿವಿನಲ್ಲಿ ಭಾಗಿಯಾದ ನಿನ್ಗೆ ನಾನೆಂದೂ ಚಿರಋಣಿ.... ಹಾಗೇ ಮದುವೆಯ ಮುಂಗಡ ಶುಭಾಶಯಗಳು ಅನ್ನುತ್ತಾ....

ಇಂತಿ.

ಚಂದ್ರಮ