doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Saturday, August 3, 2013

ನಿತ್ಯ ನೂತನ... ಇರಲಿ ಗೆಳೆತನಆಗಸ್ಟ್ ತಿಂಗಳ ಪ್ರಥಮ ಭಾನುವಾರವನ್ನು ಗೆಳೆತನದ ದಿನ ಎಂಬುದಾಗಿ ಆಚರಣೆ ಮಾಡಲಾಗುತ್ತದೆ. ಪ್ರೇಮಿಗಳ ದಿನದಂತೆ ಈ ದಿನವೂ ಪಾಶ್ಚಾತ್ಯರ ಬಳುವಳಿಯಾಗಿ ನಮಗೆ ಸಿಕ್ಕಿದ್ದರೂ ಸಮಾಜದ ಇತರ ವಿಶೇಷ ದಿನಗಳ ಮಧ್ಯೆ ಈ ದಿನವೂ ಹಾಸುಹೊಕ್ಕಾಗಿದೆ. `ನಮ್ಮ ಕಾಲದಲ್ಲಿ ಇಂಥದ್ದೆಲ್ಲ ದಿನಗಳ ಆಚರಣೆ ಇರ್ಲಿಲ್ಲ ಅಂತ ಹಿಂದಿನವ್ರು ಮೂಗು ಮುರಿಯ್ತಾರೆ. ಆದ್ರೇನು ಮಾಡೋದು, ಕಾಲೇಜ್ ಹೈಕಳಿಂದ ಹಿಡಿದು ಎಲ್ಕೆಜಿ ಪುಟಾಣಿಗಳ ತನಕ ಕಲರ್ ಕಲರ್ ಫ್ರೆಂಡ್ಶಿಪ್ ಬ್ಯಾಂಡ್ ಹಿಡ್ಕೊಂಡು `ಹ್ಯಾಪಿ ಫ್ರೆಂಡ್ಶಿಪ್ ಡೇ ಅಂದಾಗ ಅವರ ಖುಷಿಗಾಗಿ ಆದ್ರೂ `ಇರ್ಲಿ ಬಿಡಿ ಮಾರಾಯ್ರೇ ಅಂತ ಹೇಳ್ಬೇಕು ತಾನೇ? ಹಾಗೆ ನೋಡಿದ್ರೆ ಫ್ರೆಂಡ್ಶಿಪ್ ಅಥರ್ಾತ್ ಗೆಳೆತನಕ್ಕೂ ಒಂದು ನಿದರ್ಿಷ್ಟ ದಿನ ಅನ್ನೋದು ಬೇಕಾ ಅನ್ನೋ ಪ್ರಶ್ನೆ ಮನಸ್ಸಲ್ಲಿ ಮೂಡದೇ ಇರಲ್ಲ ಅಲ್ವಾ?

ಸ್ನೇಹ ನಿಜಕ್ಕೂ ನವಿರಾದ ಸಂಬಂಧ... ಆಂಗ್ಲಕವಿಯೊಬ್ಬ ಸ್ನೇಹಾನ ಈ ರೀತಿ ವಣರ್ಿಸಿದ್ದಾನೆ. `ಮಿಲಿಯಗಟ್ಟಲೆ ಸ್ನೇಹಿತರನ್ನು ಸಂಪಾದನೆ ಮಾಡೋದು ದೊಡ್ಡ ಪವಾಡವಲ್ಲ. ಆದರೆ ನಿಜವಾದ ಗೆಳೆಯನ್ನು ಸಂಪಾದನೆ ಮಾಡೋದು ಮಾತ್ರ ಕಷ್ಟ. ಮಿಲಿಯದಷ್ಟು ಜನರು ನಮ್ಮ ವಿರುದ್ಧ ನಿಂತಾಗ ನಮ್ಮ ಪರವಾಗಿ ಒಬ್ಬ ನಿಂತಿರುತ್ತಾನಲ್ಲಾ ಆತನೇ ನಿಜವಾದ ಸ್ನೇಹಿತ ಮತ್ತು ಅದೇ ನೈಜ ಸ್ನೇಹ ಹೀಗೆ ಸ್ನೇಹಕ್ಕೆ ನಾನಾ ಕವಿಗಳು ನಾನಾ ರೀತಿಯ ಭಾಷ್ಯ ಬರೆದಿದ್ದಾರೆ. ಸ್ನೇಹ ಯಾವಾಗ, ಎಲ್ಲಿ ಬೇಕಾದರೂ ಮೂಡಬಹುದು... ನೋಡನೋಡುತ್ತಿದ್ದಂತೆಯೇ ಬೆಳೆದು ಹೆಮ್ಮರವಾಗಬಹುದು. ಅದರೆ ಅದೇ ಸ್ನೇಹ ನಮ್ಮ ಬೆನ್ನಹಿಂದೆ ಎಲ್ಲಿಯತನಕ ಇರುತ್ತೆ ಅನ್ನೋದಷ್ಟೇ ಮುಖ್ಯ. ಇಂದು ಜೊತೆಯಲ್ಲಿ ಸ್ನೇಹಿತರ ದಿನ ಆಚರಿಸಿದವರು ಮುಂದಿನ ವರ್ಷವೂ ಜೊತೆಯಲ್ಲೇ ಇರುತ್ತಾರೆ ಎನ್ನಲಾಗದು. ಆಗ ಇನ್ನಾರೋ ಆ ಜಾಗದಲ್ಲಿ ಇರಬಹುದು. ಯಾಕೆಂದ್ರೆ ನಮ್ಮ ಮನಸ್ಸೇ ಮರ್ಕಟನ ಹಾಗೆ... ಕೆಲವೊಮ್ಮೆ ಯಾರೋ... ಯಾಕೋ... ಇಷ್ಟವಾಗ್ತಾರೆ. ಅವರೇ ನಮ್ಮ ಬೆಸ್ಟ್ ಫ್ರೆಂಡ್ ಅಂತ ತಿಳಿತೀವಿ. ಅಂಥವ್ರ ಜೊತೆ ಎಲ್ಲಾನೂ ಶೇರ್ ಮಾಡ್ಕೋತೀವಿ. ಆದರೆ ಅವರು ಮುಂದೊಂದು ದಿನ ಕಾರಣ ಹೇಳದೆ ಕೈಕೊಟ್ಟುಬಿಡುತ್ತಾರೆ. ಆಗ ಅದೆಷ್ಟೋ ನೋವು, ಅವಮಾನ ಅನುಭವಿಸೋದಿಲ್ಲ ಹೇಳಿ...

ಸಂಶೋಧನೆಗಳ ಪ್ರಕಾರ ಸ್ನೇಹ ಬೆಳೆಸೋದ್ರಲ್ಲಿ ಹುಡುಗರಿಗಿಂತ ಹುಡುಗೀರೇ ಮುಂದು ಅಂತ ಹೇಳಲಾಗುತ್ತೆ. ಹುಡುಗೀರು ಸಾಮಾನ್ಯವಾಗಿ ಬೇಗನೆ ಕೈಕೊಡುವವರು ಎಂದು ಅವಿವೇಕಿಗಳು ಹೇಳಿದರೂ ಸ್ನೇಹವನ್ನು ಜತನವಾಗಿ ಕಾಪಾಡೋದ್ರಲ್ಲಿ ಹುಡುಗೀರೇ ಮುಂದು ಅಂತಾನೂ ಹೇಳ್ತಾರೆ. ಸಾಮಾನ್ಯವಾಗಿ ಗಂಡು-ಗಂಡಿನ ಮಧ್ಯೆ ಇರೋ ಸ್ನೇಹಕ್ಕಿಂತ ಹೆಣ್ಣು-ಹೆಣ್ಣಿನ ನಡುವಿನ ಸ್ನೇಹ ತುಂಬಾನೇ ಗಟ್ಟಿಯಾಗಿರುತ್ತೆ. ಹುಡುಗಿಯರು ಅಭದ್ರತೆಯ ವಾತಾವರಣದಲ್ಲಿ ಎಂದೂ ಸ್ನೇಹ ಮಾಡುವುದಿಲ್ಲ. ಒಂದು ವೇಳೆ ಸ್ನೇಹಕ್ಕೆ ಭದ್ರ ಬುನಾದಿ ಅನ್ನೋದು ಇಲ್ಲ ಅಂತಾದ್ರೆ ಆ ಸ್ನೇಹಾನಾ ಮುರಿಯೋದ್ರಲ್ಲೂ ಹುಡುಗೀರು ಹಿಂದೆ-ಮುಂದೆ ನೋಡಲ್ಲ.

ಅದೇ ಹುಡುಗರ ವಿಚಾರಕ್ಕೆ ಬರೋದಾದ್ರೆ, ಫ್ರೆಂಡ್ಸ್ ಆಗೋರ ಸಂಖ್ಯೆಯೂ ಜಾಸ್ತಿ, ಮರೆಯುವುದೂ ಜಾಸ್ತಿ. ಕೆಲವೊಮ್ಮೆ ಒಂದೇ ಕ್ಲಾಸ್ನಲ್ಲಿ ಜತೆಯಲ್ಲೇ ಕುಳಿತು ಮೇಸ್ಟ್ರನ್ನ ಗೋಳುಹೊಯ್ತಾ ಇದ್ದ ಆಪ್ತಮಿತ್ರನನ್ನೇ ಮರೆಯ್ತೀವಿ. ಆತ ಎಂದಾದರೊಂದು ದಿನ ಎದುರಿಗೆ ಸಿಕ್ಕು, `ಎಂಥ ಮಾರಾಯಾ ನೆನಪಿಲ್ವಾ... ಅಂದ್ರೆ ನೆನಪು ಮಾಡ್ಕೊಂಡು ನಾಲಗೆ ಕಚ್ಚುವ ಸರದಿ ನಮ್ಮದಾಗುತ್ತೆ. ಆದ್ರೆ ಹುಡುಗೀರು ಹಾಗಲ್ಲ, ಮದುವೆಯಾಗಿ, ಮಕ್ಕಳಾಗಿ, ಮುದುಕಿಯರಾದ್ರೂ ಅವಳು-ನಾನೂ ಒಂದೇ ಕ್ಲಾಸ್, ಒಂದೇ ಪ್ರಾಯ ಎಂದು ಮೊಮ್ಮಕ್ಕಳ ಎದುರಾದರೂ ಆಡ್ಕೋತಾ ಇರ್ತಾರೆ. ಒಂದುಕ್ಷಣ ನಮ್ಮ ಸುತ್ತ ಗೆಳೆತನ, ಗೆಳೆಯ-ಗೆಳತಿಯರೇ ಇಲ್ಲ... ಏಕಾಂಗಿ ಎಂಬ ಕಲ್ಪನೆಯನ್ನು ಮಾಡಿನೋಡಿ... ಆಗ ಗೊತ್ತಾಗತ್ತೆ ಗೆಳೆತನದ  ನಿಜವಾದ ವ್ಯಾಲ್ಯೂ.

ಈಗಂತೂ ಕಾಲ ತುಂಬಾನೇ ಬದಲಾಗಿದೆ. ಸಾಮಾಜಿಕ ತಾಣಗಳು ಗೆಳೆತನ ಸಂಪಾದಿಸಲು ಸಾಕಷ್ಟು ದಾರಿಯನ್ನು ಮಾಡಿಕೊಟ್ಟಿವೆ. ನಾನು ಶಾಲೆಗೆ ಹೋಗ್ತಾ ಇದ್ದಾಗ `ಮಂಗಳ ವಾರಪತ್ರಿಕೆ ಗೆಳೆತನ ಸಂಪಾದಿಸಲು ಅವಕಾಶ ಮಾಡಿಕೊಟ್ಟಿತ್ತು. ಒಂದು ಚಿಕ್ಕ ಫೊಟೋ, ಚಿಕ್ಕ ಡೀಟೈಲ್ಸ್, ಹವ್ಯಾಸ, ಅಭಿರುಚಿಯ ಜೊತೆ ವಿಳಾಸ ಇರುತ್ತಿತ್ತು. ಆಗೇನಿದ್ದರೂ ಪತ್ರದ ಮೂಲಕ ಫ್ರೆಂಡ್ಶಿಪ್ ಆಗುತ್ತಿತ್ತು. ಇಲ್ಲಿ ಗಂಡು-ಹೆಣ್ಣು ಸ್ನೇಹಿತರಾಗಿ, ಮದುವೆಯಾಗಿ ಜೊತೆಯಾಗಿ ಬಾಳಿದ ಉದಾಹರಣೆ ಕೂಡಾ ಇದೆ. ಆದರೆ ಇಂದು ಕಾಲ ಬದಲಾಗಿದೆ ಜೊತೆಗೆ ನಾವೂ ಬದಲಾಗಿದ್ದೇವೆ. ಲೆಟರ್ ಬರೆಯೋಕೆ ಟೈಂ ಇಲ್ಲ, ಫೋನ್ ಮಾಡೋಕೆ ಕರೆದರಗಳು ವಿಪರೀತ ಏರಿಕೆಯಾಗಿವೆ. ಹೀಗಾಗಿ ಜನರಿಗೆ ಅಂತಜರ್ಾಲ ತಾಣಗಳು ಕಡಿಮೆ ಖಚರ್ಿಗೆ ಲಾಭದಾಯಕ ಎಂಬಂತೆ ತೋರುತ್ತಿವೆ. ಅಕರ್ುಟ್, ಫೇಸ್ಬುಕ್, ಟ್ವಿಟರ್ ಖಾತೆ ತೆರೆದು ಅಲ್ಲಿರುವವರಿಗೆ ರಿಕ್ವೆಸ್ಟ್ ಕೊಟ್ರೆ ಆಯ್ತು. ಕೆಲವೇ ಕ್ಷಣಗಳಲ್ಲಿ ನೂರಾರು ಸ್ನೇಹಿತರು ನಮ್ಮ ಸುತ್ತಮುತ್ತ ಹುಟ್ಟಿಕೊಳ್ಳುತ್ತಾರೆ. ಆದರೆ ಇವರೆಲ್ಲ ನಮ್ಮ ಬೆಸ್ಟ್ ಫ್ರೆಂಡ್ಗಳಾ... ಖಂಡಿತಾ ಅಲ್ಲ. ಸಾಮಾಜಿಕ ತಾಣಗಳು ಇಂದು ಸ್ನೇಹವನ್ನು ಬಿಕರಿ ಮಾಡುವ ತಾಣಗಳಾಗುತ್ತಿವೆಯೇ ಹೊರತು ಒಳ್ಳೆಯ ಸ್ನೇಹಿತರನ್ನು ಸೃಷ್ಟಿಸುವ ತಾಣಗಳಾಗುತ್ತಿಲ್ಲ. 

ಏನೇ ಇರಲಿ, ಈ ದಿನದ ಮಟ್ಟಿಗಾದರೂ ನಮ್ಮ ಜೀವನದಲ್ಲಿ ಸ್ನೇಹಿತರ ಕಳೆದ ಜೊತೆ ಅಮೂಲ್ಯ ದಿನಗಳನ್ನು ನೆನಪು ಮಾಡಿಕೊಳ್ಳೋಣ. ಮೇಸ್ಟ್ರ ಪಾಠದ ಮಧ್ಯೆ ಮಲಗದಿರಲಿ ಎಂದು ಹುಣಸೆಬೀಜ ತಂದುಕೊಡುತ್ತಿದ್ದ ಹೈಸ್ಕೂಲ್ ಗೆಳತಿ, ಅಕೌಂಟ್ಸ್ ನೋಟ್ಬುಕ್ ಮನೆಗೊಯ್ದು ಕಂಪ್ಲೀಟ್ ಮಾಡಿ ತರುತ್ತಿದ್ದ ಕಾಲೇಜ್ ಗೆಳತಿ, ಬುಗರಿಮರಕ್ಕೆ ಕಲ್ಲು ಹೊಡೆಯಲು ಜೊತೆಗೆ ಬರುತ್ತಿದ್ದ ಚಡ್ಡಿದೋಸ್ತ್, ಮೊಬೈಲ್ ನಾಟ್ ರೀಚೆಬಲ್ ಆಗಿದ್ದರೆ ನೆಟ್ವಕರ್್ ಸಿಕ್ಕ ತಕ್ಷಣ ಕರೆಮಾಡಿ `ನನ್ನನ್ನು ಬಿಟ್ಟು ಎಲ್ಲಿ ಹೋಗಿದ್ದೀಯಾ ಮಾರಾಯ ಎಂದು ಕೇಳುವ ಆಪ್ತಮಿತ್ರ, ಫೇಸ್ಬುಕ್ನ ಲೈಕ್, ಕಮೆಂಟ್ಸ್ ಫ್ರೆಂಡ್ಗಳು, ನಾನಾ ಕಾರಣಕ್ಕೆ ಮನಸ್ಸಿಗೆ ಹತ್ತಿರವಾದ ಗೆಳೆಯ-ಗೆಳತಿಯರು... ಹೀಗೆ ಎಲ್ಲರಿಗೂ ಈ ದಿನದ ಶುಭಾಶಯ...

ಸ್ನೇಹವೆಂದರೆ ಹರಿವ ಜಲಧಿ

ಮನದ ತುಮುಲ ದುಗುಡ ಮರೆಸಿ

ಹುರುಪು ತುಂಬುವ ಜೀವನದಿ

ಒರತೆ ಬತ್ತಿ ದಡಕೆ ಒತ್ತಿ

ಚಿಲುಮೆ ಮಾಯವಾದರೂ 

ನೋವ ಮರೆಸಿ ನಗಲು ಕಲಿಸಿ

ಮನದಿ ಹರುಷ ನೆಮ್ಮದಿ

Thursday, June 13, 2013

ಭರವಸೆ

ಭರವಸೆ

ಮಬ್ಬುಗತ್ತಲಲಿ ಬೆಳಕ ತಡಕಾಡಿ
ಮೌನ ಗೆಲ್ಲುವ ಮಾತ ಬೆನ್ನೇರಿ


ಹುಡುಕುತಿಹೆ ಗೆಳತಿ
ಭರವಸೆಯ ಕಾಲುದಾರಿ...

ಬದುಕ ನಾವೆಯಲಿ ಸಾವ ಬಡಿದಾಡಿ
ತಾಳ್ಮೆ ಕಾಯಲಿ ನಿನ್ನ ದಾರಿ
ಮರುಗುತಿಹೆ ಗೆಳತಿ
ಅಡಿಗಡಿಗೆ ಎನ್ನ ಮನ
ಕಾರುಣ್ಯದ ಎಲ್ಲೆ ಮೀರಿ...

ಗೆಜ್ಜೆಯ ಕಿಂಕಿಣಿ ನಾದ
ಜುಮಕಿಯ ಘಣಘಣ ಸದ್ದು
ಕೈಬಳೆಯ ವಾದ್ಯಘೋಷ
ಚಿರಾಯುವಾಗಲಿ ವರುಷ

ಬದುಕ ನಡೆ, ಸವಿಯ ಪಡೆ
ಮನದೊಳೀ ತುಂಬಿರಲಿ...
ನಿತ್ಯ ಪುಳಕ ಹರುಷ

ಭರವಸೆ


Saturday, January 19, 2013

ಹೆಣ್ಣು... ಅವಳ ಮೇಲೇಕೆ ಕಣ್ಣು..!??


ಹೆಣ್ಣು... ಈ ಭೂಮಿಯ ವೈಚಿತ್ರ್ಯಗಳಲ್ಲಿ ಆಕೆಯೂ ಒಂದು. ತಾಯಿ, ಮಡದಿ, ಸೋದರಿಯ ರೂಪದಲ್ಲಿ ಕುತೂಹಲದ ಕಣಜವಾಗಿ ಮೊಗೆದಷ್ಟೂ ಪ್ರೀತಿಯ ಧಾರೆಯೆರೆಯುವ ಆಕೆ ತಾಳ್ಮೆ, ಕ್ಷಮೆಯ ಅನ್ವರ್ಥಕ ರೂಪ. ಇದೇ ಕಾರಣಕ್ಕೆ ಆಕೆಯನ್ನು `ಕ್ಷಮಯಾ ಧರಿತ್ರಿ' ಅಂತಲೂ ಕರೆಯುತ್ತಾರೆ. ಪ್ರೀತಿ ತೋರಿಸುವವರಿಗೆ ನಾರಿಯಾಗಿ, ದ್ವೇಷ ಕಾರುವವರಿಗೆ ಮಾರಿಯಾಗುವ ಆಕೆ ಕವಿಗಳ ಪಾಲಿಗೆ ಅಕ್ಷರಶ: ಮುಗಿಯದ ಗಣಿಯಿದ್ದಂತೆ. ಈಕೆಯ ಚೆಲುವು, ಒಣಪು-ವೈಯಾರವನ್ನು ಬಣ್ಣಿಸಿದಷ್ಟೂ ಸಾಲದು. ಆದರೆ ಇಂದು ಆಕೆಯನ್ನು ಸಮಾಜ ಕಾಣುವ ದೃಷ್ಟಿಕೋನ ಬದಲಾಗುತ್ತಿದೆ. ಹೆಣ್ಣನ್ನು ಪೂಜಿಸಬೇಕಾದ ನಾಡಿನಲ್ಲಿ ಆಕೆಯ ಮೇಲೆ ದಬ್ಬಾಳಿಕೆ, ಅತ್ಯಾಚಾರ ನಿತ್ಯ ನಡೆಯುತ್ತಿದೆ. ಹೀಗಿರುವಾಗ ಹೆಣ್ಮಕ್ಕಳು ತಮ್ಮ ಸುರಕ್ಷತೆಯತ್ತ ಕಾಳಜಿ ಹೊಂದಿರಬೇಕಲ್ಲವೇ? ಮನೆಯಿಂದ ಹೊರಗಡೆ ಶಿಕ್ಷಣ, ದುಡಿಮೆ ಇನ್ನಿತರ ಕಾರಣಗಳಿಗಾಗಿ ಹೋಗಿ-ಬರುವವರಿಗೆ ಇಲ್ಲಿದೆ ಕೆಲವು ಸಿಂಪಲ್ ಟಿಪ್ಸ್.
ಮೊಬೈಲ್ ಬಳಕೆಗೂ ಮುನ್ನ...
ಮೊಬೈಲ್ ಎನ್ನುವ ಚೋಟುದ್ದದ ಮಾಯಾಪೆಟ್ಟಿಗೆ ಇಂದು ಎಲ್ಲರ ಕೈಯಲ್ಲಿರುತ್ತೆ ಬಿಡಿ. ಇಂದಿನ ಜಮಾನದಲ್ಲಿ ಹುಡುಗರಿಗಿಂತ ಹುಡುಗಿಯರೇ ಮೊಬೈಲ್ ಮಾಯೆಗೆ ಜೋತುಬಿದ್ದಿರುತ್ತಾರೆ. ಫೇಸ್ಬುಕ್, ಟ್ವಿಟರ್ನಂಥ ಸಾಮಾಜಿಕ ಜಾಲತಾಣಗಳೂ ಮೊಬೈಲ್ನಲ್ಲೇ ಲಭಿಸುವುದರಿಂದ ಅಂಗೈಯಲ್ಲಿ ಮಾಣಿಕ್ಯದಂತೆ ಇದರ ಬಳಕೆ ಕೂಡಾ ಅಗಾಧವಾಗಿದೆ. ಹೆಣ್ಮಕ್ಕಳ ಹೆಚ್ಚಿನ ಸಮಸ್ಯೆಗಳಿಗೆ ಮೂಲ ಕಾರಣವೇ ಮೊಬೈಲ್ ಎಂದು ಅನೇಕ ಮಂದಿ ಖುದ್ದಾಗಿ ಸಂಶೋಧನೆ ನಡೆಸಿದ್ದೂ ಇದೆ. ಹೀಗಾಗಿ ಶಾಲೆ-ಕಾಲೇಜ್ ಹುಡುಗಿಯರು, ಕೆಲಸಕ್ಕೆ ಹೋಗುವ ಯುವತಿಯರು ಮೊಬೈಲ್ ಬಳಕೆಗೂ ಮುನ್ನ ಅದರ ಸಾಧಕ-ಬಾಧಕಗಳ ಬಗ್ಗೆ ಸೂಕ್ತವಾಗಿ ತಿಳಿದಿರಬೇಕಾದ್ದು ಅತ್ಯವಶ್ಯ.
 1. ಈಝಿ ರಿಚಾಜರ್್ ಎಚ್ಚರವಿರಲಿ:
ಬಹುತೇಕ ಪೇಟೆ ಇಲ್ಲವೇ ಗ್ರಾಮಾಂತರ ಪ್ರದೇಶಗಳಲ್ಲಿ ಮೊಬೈಲ್ ರಿಚಾಜರ್್ ಅಂಗಡಿಯವರು ನಿಮ್ಮ ನಂಬರ್ ಅನ್ನು ಪಡೆದುಕೊಂಡು ಬರೆದಿಡುತ್ತಾರೆ. ಇದು ಪರಿಚಯದ ಅಂಗಡಿಯಾಗಿದ್ದರೆ ಪರವಾಗಿಲ್ಲ. ಅದರ ಬದಲು ಅಪರಿಚಿತ ಅಂಗಡಿಯಲ್ಲಿ ರಿಚಾಜರ್್ ಮಾಡಿಸಲು ನಂಬರ್ ಕೊಟ್ಟರೆ ಅವರು ಅದನ್ನು ಪುಂಡ ಹುಡುಗರಿಗೆ ನೀಡಬಹುದು ಇಲ್ಲವೇ ತಾವೇ `ಒಂದು ಕೈ ನೋಡೋಣ' ಎಂದು ಅಪರಿಚಿತ ಮೆಸೇಜ್ ಕಳುಹಿಸಿ ಕ್ಯುರಿಯಾಸಿಟಿ ಹುಟ್ಟಿಸಬಹುದು. ಇಂಥ ಕುತೂಹಲದ ಬೆನ್ನುಹತ್ತಿದ ಹುಡುಗಿಯರು ಅತ್ಯಾಚಾರ, ಲೈಂಗಿಕ ಶೋಷಣೆಗೆ ತುತ್ತಾದ ಅನೇಕ ಉದಾಹರಣೆಗಳಿವೆ. ಹೀಗಾಗಿ ಈಝಿ ರಿಚಾಜರ್್ ಮಾಡಿಸದೆ ಕಾಡರ್್ ಪಡೆದು ರಿಚಾಜರ್್ ಮಾಡುವುದು ಒಳಿತು.
2. ಸಿಕ್ಕಸಿಕ್ಕವರ ಮೊಬೈಲ್ ಕ್ಯಾಮೆರಾದಲ್ಲಿ ಬಂಧಿಯಾಗಬೇಡಿ.
ಹುಡುಗಿ ಸುಂದರಿಯಾಗಿದ್ದು, ಸೋಷಿಯಲ್ ಆಗಿದ್ದರಂತೂ ಆಕೆ ಹೋದಲ್ಲೆಲ್ಲ ಹುಡುಗರ ಕಣ್ಣು ಹಿಂಬಾಲಿಸುತ್ತಿರುತ್ತದೆ. ಆಕೆ ಮದುವೆ, ಕಾಲೇಜ್ ಡೇ ಮತ್ತಿತರ ಕಾರ್ಯಕ್ರಮಗಳಲ್ಲಿ ಚೆಂದದ ಬಟ್ಟೆ ತೊಟ್ಟು ಬಂದರಂತೂ ಆಕೆಯ ಸುತ್ತಮುತ್ತ ಹುಡುಗರ ದಂಡೇ ಸೇರಿರುತ್ತದೆ. ಈಗಂತೂ ಎಲ್ಲರ ಕೈಯಲ್ಲಿ ಕ್ಯಾಮೆರಾ ಮೊಬೈಲ್ ಬಂದಿರುವ ಕಾರಣ ಆಕೆಯ ಫೊಟೋ ಕ್ಲಿಕ್ಕಿಸುವ ಹಂಬಲ. ಈಕೆಗಂತೂ ಎಲ್ಲರೂ ತನ್ನನ್ನು ಗುರುತಿಸುತ್ತಾರೆ ಎಂಬ ಹುಚ್ಚು ಭ್ರಮೆ. ಆದರೆ ಆತ ತೆಗೆಯುವ ಒಂದೇ ಒಂದು ಫೊಟೋ ಮುಂದೆ ಜೀವನದಲ್ಲಿ ಪಡಬಾರದ ನೋವು ಪಡಬೇಕಾದೀತೆಂಬ ಅರಿವಿರಲಿ. ಫೊಟೋವನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿಯೋ, ಅದನ್ನು ತನ್ನ ಜೊತೆ ಸೇರಿಸಿಯೋ ವಿಕೃತ ಆನಂದ ಪಡುವವರೂ ಇರಬಹುದು. ಆದ್ದರಿಂದ ಸಿಕ್ಕಸಿಕ್ಕವರ ಕ್ಯಾಮೆರಾ ಕಣ್ಣುಗಳಲ್ಲಿ ಬಂಧಿಯಾಗದಿರಿ. ಫೋಟೋ ಕ್ಲಿಕ್ಕಿಸಲು ಹೋದರೆ ನರಾಕರಿಸಿ, ಅಟ್ಲೀಸ್ಟ್ ಮುಖಕ್ಕೆ ಕೈ ಇಲ್ಲವೇ ದುಪಟ್ಟಾವನ್ನಾದರೂ ಅಡ್ಡ ಹಿಡಿಯಿರಿ.
3. ಮೆಸೇಜ್ ಕಳುಹಿಸುವಾಗ ನಂಬರ್ ಪುನ: ಪರೀಕ್ಷಿಸಿಕೊಳ್ಳಿ
ಚಾಟ್ ಬಾಕ್ಸ್ ಇರೋ ಮೊಬೈಲಲ್ಲಾದರೆ ಪರವಾಗಿಲ್ಲ. ಆದರೆ ಪ್ರತೀ ಬಾರಿ ನಂಬರ್ ನೋಡಿ ಮೆಸೇಜ್ಗೆ ರಿಪ್ಲೈ ಮಾಡುವವರು ಇಲ್ಲವೇ ಹೊಸ ನಂಬರ್ಗೆ ಮೆಸೇಜ್ ಕಳುಹಿಸುವ ಹುಡುಗಿಯರು ಎಚ್ಚರಿಕೆ ವಹಿಸಲೇಬೇಕು. ಯಾಕೆಂದರೆ ಕಳುಹಿಸುವ ಒಂದು ಮೆಸೇಜ್ ಮುಂದೆ ನೆಮ್ಮದಿಯಿಲ್ಲದ ನಾಳೆಗಳಿಗೆ ಕಾರಣವಾದೀತು. ಕರೆ ಮಾಡುವಾಗಲೂ ಅಷ್ಟೇ ನಂಬರ್ ಡಯಲ್ ಮಾಡಿದ್ದು ಸರಿಯಿದೆಯೇ ಎಂದು ಖಚಿತಪಡಿಸಿಕೊಳ್ಳಿ. ತಪ್ಪಿಹೋದ ಕರೆಯಿಂದ ಜೀವನವೇ ಹಳಿತಪ್ಪುವ ಸಾಧ್ಯತೆಯೂ ಇದೆ. ಮೊಬೈಲ್ ಬಳಕೆಯ ವೇಳೆ ಇಷ್ಟು ನಿಯಮ ಪಾಲಿಸಿದ ನಂತರವೂ ನಿಮ್ಮ ಮೊಬೈಲ್ಗೆ ಅಪರಿಚಿತ ಕರೆ, ಸಂದೇಶ ಬರಬಹುದು. ಒಂದೆರಡು ಬಾರಿ ಬಂದರೆ ಅಂಥವರಿಗೆ `ರಾಂಗ್ ನಂಬರ್' ಎಂದು ಮನದಟ್ಟು ಮಾಡಿಬಿಡಿ. ನರಂತರ ಬರಲಾರಂಭಿಸಿದರೆ ತಡಮಾಡದೆ ಮನೆಮಂದಿಯ ಜತೆ ಚಚರ್ಿಸಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಹಿಂಜರಿಯಬೇಡಿ. ಇಲ್ಲಿ ಭಯ, ನಾಚಿಕೆ ಪಡುವ ಅಗತ್ಯವಿಲ್ಲ.

ಫೇಸ್ಬುಕ್ನಲ್ಲಿ ಫೇಸ್ ಪ್ರದಶರ್ಿಸದಿರಿ:
ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ಬುಕ್ ಭಾರೀ ಫೇಮಸ್. ಶಾಲೆ, ಕಾಲೇಜ್, ಕಚೇರಿ ಎಲ್ಲೇ ಇದ್ದರೂ ಫೇಸ್ಬುಕ್ನಲ್ಲಿ ಇಂದಿನ ಯುವಜನತೆ ಸದಾ ಬ್ಯುಸಿ. ಹಾಯ್ ಎಂದರೆ ಸಾಕು, ಅತ್ತಕಡೆಯಿಂದ ರಿಪ್ಲೈ ಬರುತ್ತದೆ. ಹೀಗಿರುವಾಗ ಹುಡುಗಿಯರು ಫೇಸ್ಬುಕ್ ಬಗ್ಗೆ ಎಚ್ಚರವಹಿಸಿದಷ್ಟೂ ಸಾಲದು.
1. ಭಾವಚಿತ್ರ ಅಪ್ಲೋಡ್ ಮಾಡದಿರಿ
ಫೇಸ್ಬುಕ್ ಅಥರ್ಾತ್ ಮುಖಹೊತ್ತಗೆ, ಇಲ್ಲೇ ಮುಖ ಕಾಣಿಸದಿದ್ದರೆ ಹೇಗೆಂದು ನೀವು ಪ್ರಶ್ನಿಸಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಂತೂ ಫೇಸ್ಬುಕ್ನಲ್ಲಿ ಮುಖ ಕಾಣಿಸಿಕೊಂಡ್ರೆ ಅಪಾಯ ಖಚಿತ. ಯಾಕೆಂದರೆ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ನಿಮ್ಮ ಮುಖವನ್ನು ಇನ್ನಾರೋ ಕದ್ದು ನಕಲಿ ಖಾತೆ ತೆರೆಯಬಹುದು ಇಲ್ಲವೇ ಅವರ ಜೊತೆ ನಿಮ್ಮ ಭಾವಚಿತ್ರ ಹಾಕಿ ಪ್ರೇಮಿಗಳಂತೆ ಇಲ್ಲವೇ ದಂಪತಿಯಂತೆ ಪೋಸ್ ಕೊಟ್ಟು ನಿಮ್ಮನ್ನು ಬೇಸ್ತು ಬೀಳಿಸಬಹುದು. ಈಗಂತೂ ಮನೆಮಂದಿ, ಸಂಬಂಧಿಕರು ಫೇಸ್ಬುಕ್ನಲ್ಲಿ ಕಾಮನ್ ಆಗಿ ಇರೋವಾಗ ಮಾನಸಿಕ ಕಿರಿಕಿರಿ ತಪ್ಪಿದ್ದಲ್ಲ.
ಫೇಸ್ಬುಕ್ಗೆ ಭಾವಚಿತ್ರ, ಪ್ರವಾಸಕ್ಕೆ ತೆರಳಿದ್ದ ಸಂದರ್ಭದ ಚಿತ್ರಗಳನ್ನು ಹಾಕುವುದಾದರೂ ಅದನ್ನು ನಂಬಿಕಸ್ಥರಿಗೆ ಮಾತ್ರ ಶೇರ್ ಮಾಡಿಬಿಡಿ. ಫೋಟೋ ಆಲ್ಬಂನಲ್ಲಿ ಇಂಥದ್ದೊಂದು ಆಯ್ಕೆ ಇರುತ್ತದೆ. ಈ ಬಗ್ಗೆ ತಿಳಿದಿಲ್ಲವಾದರೆ ತಿಳಿದಿರುವವರ ಜೊತೆ ಮಾಹಿತಿ ಪಡೆದುಕೊಳ್ಳಿ. ಇದರಿಂದ ನಿಮ್ಮ ಫೋಟೋ ದುರ್ಬಳಕೆ ಆಗುವುದನ್ನು ತಪ್ಪಿಸಲು ಸಾಧ್ಯ.
ಇನ್ನು ಸೈಬರ್ಗೆ ತೆರಳಿ ಫೇಸ್ಬುಕ್ ಪೋಸ್ಟ್, ಫೋಟೋ ಅಪ್ಲೋಡ್ ಮಾಡುವವರು ಅಲ್ಲಿನ ಕಂಪ್ಯೂಟರ್ನಲ್ಲಿ ನಿಮ್ಮ ದಾಖಲೆ ಉಳಿದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. `ಸೈನ್ ಔಟ್' ಮಾಡದೆ ಎದ್ದು ಬರುವುದು ಮತ್ತೊಬ್ಬರು ನಿಮ್ಮ ಖಾತೆ ಬಳಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ಆದ್ದರಿಂದ ಸೈಬರ್, ಕಚೇರಿಗಳಲ್ಲಿ ಫೇಸ್ಬುಕ್ ಬಳಕೆ ಮಾಡುವಿರಾದರೆ ಅಲ್ಲಿ ನಿಮ್ಮ ಪಾಸ್ವಡರ್್ ಸೇವ್ ಆಗದಂತೆ ನೋಡಿಕೊಳ್ಳಿ.
ಫೇಸ್ಬುಕ್ನಲ್ಲಿ ಪರಿಚಯವಿದ್ದವರ, ಸಮಾನಮನಸ್ಕರ ಜೊತೆ ಗೆಳೆತನ ಬೆಳೆಸುವುದು ಒಳ್ಳೆಯದು. ಗೆಳೆಯರ ಜೊತೆ ಕಾಫಿ ಕುಡಿದಿದ್ದು, ಊಟ ಮಾಡಿದ್ದು, ಎಲ್ಲಿಗೋ ಹೋಗಿದ್ದು ಎಲ್ಲವನ್ನೂ ಬಟಾಬಯಲಾಗಿಸುವ ಬದಲು ಆದಷ್ಟು ಗೌಪ್ಯತೆ ಕಾಪಾಡುವುದು ಒಳಿತು. ಯಾವುದೇ ಸಂದರ್ಭದಲ್ಲಿ ಫೇಸ್ಬುಕ್ ಫ್ರೆಂಡ್ ನಂಬಿಕೆಗೆ ಯೋಗ್ಯನಲ್ಲ, ಫೇಕ್ ಅಕೌಂಟ್ ಎಂದು ಕಂಡುಬಂದಲ್ಲಿ ಸಮಜಾಯಿಷಿ ನೀಡದೆ ರಿಮೂವ್ ಮಾಡಿಬಿಡಿ. ಒಂದು ವೇಳೆ ಫೇಸ್ಬುಕ್ ಖಾತೆಯಿಂದ ಅಚಾತುರ್ಯ ಸಂಭವಿಸಿದಲ್ಲಿ ಸಮೀಪದ ಪೊಲೀಸ್ ಠಾಣೆಯಲ್ಲಿ ಸೈಬರ್ ಕ್ರೈಂ ವಿಭಾಗದಡಿಯಲ್ಲಿ ದೂರು ಕೊಟ್ಟುಬಿಡಿ. ಪೊಲೀಸರು ತನಿಖೆ ನಡೆಸುತ್ತಾರೆ. ತನಿಖೆ ಕೈಗೆತ್ತಿಕೊಳ್ಳುವುದು ನಿಧಾನವಾದರೆ ಹಿರಿಯ ಪೊಲೀಸ್ ಅಧಿಕಾರಿಗಳು ಇಲ್ಲವೇ ಸುದ್ದಿ ಮಾಧ್ಯಮಗಳ ಗಮನಕ್ಕೆ ವಿಷಯವನ್ನು ತನ್ನಿ. ನಮಗೆ ನ್ಯಾಯ ಸಿಗಬಹುದು.

ಬೀದಿಕಾಮಣ್ಣರ ಬಗ್ಗೆ ಹುಷಾರು!
ವಿದ್ಯಾಥರ್ಿನಿಯರು, ಉದ್ಯೋಗಿ ಯುವತಿಯರು ಮೊಬೈಲ್, ಫೇಸ್ಬುಕ್ನಲ್ಲಿ ಎದುರಿಸುವ ವಿಕೃತರ ಕಿರುಕುಳಕ್ಕಿಂತ ಬೀದಿ ಕಾಮಣ್ಣರ ಕಿರುಕುಳವೇ ಜಾಸ್ತಿ. ನಿತ್ಯ ಸಿಗುತ್ತಾರೆ, ಮುಗುಳ್ನಗುತ್ತಾರೆ ಎಂದು ಕೊಂಚ ಸಲುಗೆ ಕೊಟ್ಟರೂ ಸಾಕು, ಅವರು ನಿಮ್ಮ ಹಿಂದೆ ಬೀಳುತ್ತಾರೆ. ಸಂಚಾರದ ಬಸ್ಗಳಲ್ಲಿ, ಮಾರುಕಟ್ಟೆ ಇಲ್ಲವೇ ಬಸ್ಸ್ಟಾಪ್ಗಳಲ್ಲಿ ಮಾನಸಿಕ ಕಿರುಕುಳಕ್ಕೆ ಈಡಾಗಬೇಕಾಗುತ್ತದೆ. ಆದ್ದರಿಂದ ಜನಜಂಗುಳಿಯ ನಡುವೆ ಸಂಚರಿಸುವಾಗ ಎಚ್ಚರಿಕೆ ಅಗತ್ಯ. ಬಸ್ಗಳಲ್ಲಿ ಪಕ್ಕದ ಸೀಟ್ನಲ್ಲಿ ಕುಳಿತು ನಿದ್ದೆ ಬರುವಂತೆ ನಟಿಸಿ ಕಿರುಕುಳ ನೀಡುವುದೂ ಇದೆ. ಕೈಯಲ್ಲಿ ಪೆಪ್ಪರ್ ಸ್ಪ್ರೇ ಇಲ್ಲವೇ ಗುಂಡುಸೂಜಿ ಇಟ್ಟುಕೊಂಡಿರಿ. ಇಟ್ಟುಕೊಂಡರಷ್ಟೇ ಸಾಲದು, ಬಳಕೆ ಮಾಡುವ ಧೈರ್ಯ, ಮನೋಸ್ಥೈರ್ಯವನ್ನೂ ಬೆಳೆಸಿಕೊಳ್ಳಿ. ಆತ್ಮರಕ್ಷಣೆಗಾಗಿ ಕರಾಟೆ ಅಥವಾ ಇನ್ನಿತರ ಸಮರಕಲೆಯನ್ನು ಕಲಿಯುವುದೂ ಒಳ್ಳೆಯದು.

ಡ್ರೆಸ್ಕೋಡ್ ನಿಮಗೆ ನೀವೇ ಅನುಸರಿಸಿ:
ಸಾಮಾನ್ಯವಾಗಿ ಎಲ್ಲೇ ಹೆಣ್ಮಕ್ಕಳ ಮೇಲೆ ದೌರ್ಜನ್ಯ ನಡೆದರೂ ಪುರುಷ ಪ್ರಧಾನ ಸಮಾಜ ಬೆರಳು ತೋರಿಸುವುದು ಹೆಣ್ಣಿನ ಡ್ರೆಸ್ ಕಡೆ. `ಆಕೆ ಅಂಥ ಬಟ್ಟೆ ಧರಿಸಿದರೆ ಹಾಗೆ ಆಗದೆ ಇರುತ್ತಾ?' ಎಂಬ ಸಮರ್ಥನೆ ಬೇರೆ. ಇದು ಒಂದು ರೀತಿಯಲ್ಲಿ ಸರಿ ಎಂದು ಕಂಡುಬಂದರೂ ಇದೇ ಅದಕ್ಕೆ ಕಾರಣವಂತೂ ಖಂಡಿತಾ ಅಲ್ಲ. ಯಾಕೆಂದರೆ ಲೈಂಗಿಕ ಅತ್ಯಾಚಾರ, ಶೋಷಣೆ ಪಟ್ಟಣ ಪ್ರದೇಶಕ್ಕಿಂತ ಜಾಸ್ತಿಯಾಗಿ ಹಳ್ಳಿಯಲ್ಲಿ ಸಂಭವಿಸುತ್ತದೆ. ಅಲ್ಲಿನ ಹೆಣ್ಣುಮಕ್ಕಳು ಮೈತುಂಬಾ ಬಟ್ಟೆ ಹೊದ್ದುಕೊಂಡಿದ್ದರೂ ಕಾಮುಕರಿಗೆ ಸುಲಭದಲ್ಲಿ ತುತ್ತಾಗುತ್ತಾರೆ. ಹೀಗಾಗಿ ಹೆಣ್ಮಕ್ಕಳು ತಮ್ಮ ಡ್ರೆಸ್ಕೋಡ್ ಅನ್ನು ತಾವೇ ರೂಪಿಸಬೇಕು.
ಸಾಧ್ಯವಾದಷ್ಟು ಬಿಗಿಯಾದ ಇಲ್ಲವೇ ಅಂಗಾಂಗ ಕಾಣಿಸುವ ತೆಳುವಿನ ಬಟ್ಟೆಯನ್ನು ಧರಿಸುವುದನ್ನು ಕಮ್ಮಿಮಾಡಿ. ಜೀನ್ಸ್, ಟಿ-ಶಟ್ಸರ್್ ಧರಿಸುವುದರಿಂದ ಕಂಫಟರ್್ ಅನ್ನಿಸುವುದಾದರೆ ನೋ ಪ್ರಾಬ್ಲಂ. ಇಂದಿನ ದಿನಗಳಲ್ಲಿ ಚೂಡಿದಾರದಂತೆಯೇ ಇದೂ ಕೂಡಾ ಸಭ್ಯ ಉಡುಪುಗಳಲ್ಲಿ ಒಂದಾಗಿದೆ. ಟಾಪ್ ಇಲ್ಲವೇ ಟಿ-ಶಟ್ಸರ್್ ಮೇಲೆ ಹೊದ್ದುಕೊಳ್ಳಲು ಬಣ್ಣಬಣ್ಣದ ಮಫ್ಲರ್ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹೀಗಾಗಿ ಇದರ ಬಳಕೆಯನ್ನೂ ಮಾಡಬಹುದು. ಗಿಡ್ಡಗಿನ ಸ್ಕಟರ್್, ಚಡ್ಡಿ ಧರಿಸುವುದಾದರೆ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನಕೊಡಿ.

ನಗುವಿಗೂ ಲಿಮಿಟ್ ಇರಲಿ:
ಹೌದು..! ಹೆಣ್ಣೆಂದರೆ ಹಾಗೆ. ಆಕೆಯಲ್ಲಿ ಮಾತಿಗಿಂತ ನಗುವೇ ಜಾಸ್ತಿ. ಓರಗೆಯ ಹೆಣ್ಣುಮಕ್ಕಳೆಲ್ಲ ಒಟ್ಟು ಸೇರಿದರಂತೂ ಮುಗಿದೇ ಹೋಯಿತು. ಅಲ್ಲಿ ನಗುವಿನ ಹಬ್ಬ, ಸಂಭ್ರಮ. ಆಕೆಯಲ್ಲಿ ಮಾತಾಡುವಷ್ಟು ತಾಳ್ಮೆ ಕಮ್ಮಿ. ಆಕೆಯದೇನಿದ್ದರೂ ನಗುವಲ್ಲೇ ಉತ್ತರ. ಆದರೆ ಇದೇ ನಗು ಆಕೆಯನ್ನು ಕೀಳಂದಾಜಿಸಲು ಕಾರಣವಾಗುತ್ತೆ ಅಂದ್ರೆ ನಂಬಲೇಬೇಕು. ಸಾಮಾನ್ಯವಾಗಿ ಹೈಸ್ಕೂಲ್, ಕಾಲೇಜ್ ಹುಡುಗಿಯರು ಗುಂಪಾಗಿ ಬಸ್ ಹತ್ತಿದರಂತೂ ಕೇಳುವುದೇ ಬೇಡ. ಸಂತೆಯ ಗದ್ದಲ ಅಲ್ಲಿ ಏರ್ಪಡುತ್ತದೆ. ಮಾತು-ಮಾತಿನ ನಡುವೆ ಗೊಳ್ಳನೆ ನಗು ಬಸ್ನಲ್ಲಿದ್ದ ಎಲ್ಲರ ಗಮನ ಸೆಳೆಯುತ್ತದೆ. ಹೀಗೆ ಇತರರ ಗಮನ ಸೆಳೆಯುವ ನಗುವಿಗೆ ಲಿಮಿಟ್ ಹಾಕಿದಲ್ಲಿ ಒಳ್ಳೆಯದು.
ನಗುವಿನಿಂದ ಯಾವತ್ತೂ ಬೇರೊಬ್ಬರಿಗೆ ಕೆಟ್ಟ ಸಂದೇಶ ರವಾನೆಯಾಗಬಾರದು. ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ನಗುವಾಗ ಬೇರೆಯವರು ಗಮನಿಸುತ್ತಾರೆ ಎಂಬ ಪರಿಜ್ಞಾನವಿರಲಿ. ಇಲ್ಲವಾದರೆ ನಗುವೇ ನಿಮ್ಮ ಬಗ್ಗೆ ಇತರರಲ್ಲಿ ತಪ್ಪು ಕಲ್ಪನೆ ಮೂಡಿಸಬಹುದು. ಕೆಲವು ಮಂದಿ ಹೆಣ್ಮಕ್ಕಳಂತೂ ಸ್ನೇಹಿತರ ನಡುವಿದ್ದಾಗ ತಮ್ಮ ಸುತ್ತಮುತ್ತ ಬೇರೆಯವರೂ ಇರುತ್ತಾರೆ ಎಂಬ ಕಲ್ಪನೆಯೂ ಇಲ್ಲದೆ ನಗುತ್ತಾರೆ. ಕೆಲವು ಬಾರಿ ಈ ನಗು ಅದೆಷ್ಟು ಜೋರಾಗಿ ಇರುತ್ತದೆಂದರೆ ಯಾರೇ ಆಗಲಿ, ಅರೆಘಳಿಗೆ ನಿಂತು ನೋಡಲೇಬೇಕು. ಇಂಥ ನಗು ಇತರರನ್ನು ತಮ್ಮತ್ತ ಬೇಗನೆ ಸೆಳೆಯುತ್ತದೆ ಎಂಬ ಪರಿಜ್ಞಾನವೂ ಅವರಲ್ಲಿರುವುದಿಲ್ಲ. ಹಾಗಂತ ನಗುವಿಗೆ ಬ್ರೇಕ್ ಹಾಕಬೇಡಿ. ನಗು ಸದಾ ನಿಮ್ಮ ಜೊತೆಯಲ್ಲಿರಲಿ ಆದರೆ ಲಿಮಿಟ್ನೊಂದಿಗೆ...

Tuesday, October 4, 2011

ಸಾವು-ಬದುಕಿನ ನಡುವೆ...

ಬದುಕು ಮತ್ತು ಸಾವು ಎರಡೂ ತೀರಾ ಅನಿರೀಕ್ಷಿತವೇನೋ ನಿಜ. ಆದರೆ ಇವೆರಡರ ನಡುವಿನ ಅಂತರ ಮಾತ್ರ ತೀರಾ ಕಿರಿದು ಎನಿಸಿಬಿಡುತ್ತದೆ. ನಾವು ಸಾವಿನ ತನಕ ಹೇಗೋ ಬದುಕಿದ್ದು, ಬದುಕಿಗೊಂದು ಮೌಲ್ಯ ಕಂಡುಕೊಳ್ಳಬೇಕು ಎಂದುಕೊಂಡು ಹೋರಾಟ ನಡೆಸುತ್ತಿರುತ್ತೇವೆ. ಆದರೆ ನಮ್ಮ ಬದುಕನ್ನೇ ಸಾವು ಕಸಿಯಲು ಹೊರಟರೆ...?

ಬದುಕು ಸಾವಿನ ನಡುವೆ ಇರುವುದು ಒಂದು ನಿಟ್ಟುಸಿರು, ಆಕಳಿಕೆ ಇಲ್ಲವೇ ಒಂದು ಬಡಿತ ಅಷ್ಟೇ. ಸಾವಿನ ಅಂಚಿಗೆ ಬಂದು ನಿಂತು ಹಿಂತಿರುಗಿದರೆ ನಮ್ಮವರು ಯಾರೂ ಜತೆಗಿಲ್ಲವೆಂದುಕೊಂಡಾಗ ಆಗುವ ವೇದನೆ ಇದೆಯಲ್ಲಾ... ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ಸಾವಿನ ಅಂಚನ್ನು ತಲುಪಿಯೂ `ಇನ್ನೂ ನೀನು ಬದುಕಬೇಕು, ಮರಳಿ ಹೋಗು, ಎಂದು ಭಗವಂತ ಅಜ್ಞಾಪಿಸಿದ ಬಳಿಕ ಸಾವಿನ ಮನೆಯ ಕದತಟ್ಟಿ ವಾಪಸ್ ಆಗುವುದಿದೆಯಲ್ಲಾ... ಅದು ನಿಜಕ್ಕೂ ಅವಿಸ್ಮರಣೀಯ ಅನುಭವ. ಇದನ್ನು ನೀವು ಪುನರ್ಜನ್ಮ ಎಂದುಕೊಳ್ಳಿ... ಮರುಹುಟ್ಟು ಎಂದು ಕರೆಯಿರಿ... ಆದರೆ ಇಲ್ಲಿ ಹೇಳಹೊರಟಿರುವುದು ಯಾರದ್ದೋ ಕಥೆಯನ್ನಲ್ಲ. ಎರಡು ವರುಷಗಳ ಹಿಂದೆ `ಸತ್ತೇಹೋದೆ ಎಂದು ಅರೆಕ್ಷಣ ಕಣ್ಣುಮುಚ್ಚಿ ಕನಲಿದಾಗ ನನ್ನ ಕೊನೆಯಾಯಿತೆಂದೇ ಭಾವಿಸಿದ್ದೆ.. ಆದರೆ `ಆತನಿಗೆ ಅದು ಒಪ್ಪಿಗೆಯಾಗಲಿಲ್ಲ... ಮತ್ತೆ ಬದುಕಿಸಿದ...

ಗೆಳೆಯರೇ, ಸಾವಿನ ಮನೆಯ ಕದತಟ್ಟಿ ಪವಾಡವೆನ್ನುವಂತೆ ಬದುಕಿ ಬಂದವನ ಕೊನೆಯ ಕ್ಷಣದ ತುಡಿತ ಮಾತ್ರ ಇಲ್ಲಿದೆ. ಮಹಾನವಮಿಯ ಕೊನೆಯ ದಿನದಲ್ಲಿ ನನ್ನ ಜೀವನದಲ್ಲಿ ನಡೆದ ಈ ಘಟನೆ ಇಂದಿಗೂ ನವರಾತ್ರಿ ಬಂದಾಗಲೆಲ್ಲಾ ಕಾಡುತ್ತದೆ... ಈ ಬಗ್ಗೆ ಬರೆಯಬಾರದು ಎಂದು ಮನದ ದುಡುಡಗಳನ್ನು ತಹಬಂದಿಗೆ ತಂದು ಎರಡು ವರ್ಷ ಕಳೆದೆ... ಆದರೂ ಕೈಗಳು ನನ್ನ ಮಾತು ಕೇಳುತ್ತಿಲ್ಲ. ಕೀಲಿಮಣೆಯ ಮುಂದೆ ಕುಳಿತಾಗ ಕೈಗಳು ನನ್ನ ಅರಿವಿಗೆ ಬಾರದೆ ಮುನ್ನಡೆಯುತ್ತಿವೆ.

ಅಂದು ನವರಾತ್ರಿ ಹಬ್ಬದ ಎಂಟನೇ ದಿನ. ನಾಡಿನೆಲ್ಲೆಡೆ ಆಯುಧ ಪೂಜೆಯನ್ನು ಭಾರೀ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ. ಸಾಮಾನ್ಯವಾಗಿ ಪತ್ರಕರ್ತರಿಗೆ ಹಬ್ಬ-ಹರಿದಿನಗಳ ಆಚರಣೆ, ಸಡಗರ ಅದಾವುದೂ ಇರುವುದಿಲ್ಲ. ಅವರೊಂಥರಾ ಜೀವಚ್ಛವಗಳಿದ್ದಂತೆ. ಎಲ್ಲಿ, ಏನು ಬೇಕಾದರೂ ಆಗಲಿ, ಪತ್ರಕರ್ತನಿಗೆ ಮಾತ್ರ ಆತನ ಕೆಲಸ ಮುಗಿಯುವುದೇ ಇಲ್ಲ. ಹೀಗಿರುವಾಗ ಅಂದು ನಾನೂ ಎಂದಿನಂತೆ ಕೆಲಸಕ್ಕೆ ಹೋಗಿದ್ದೆ. ಮರುದಿನ ಪ್ರೆಸ್ ಮುಚ್ಚುವ ಕಾರಣ ಕೆಲಸದ ಒತ್ತಡವೂ ಹೆಚ್ಚು. ರಾತ್ರಿ ಹನ್ನೊಂದು ಗಂಟೆಯವರೆಗೆ ಆಫೀಸಿನಲ್ಲಿದ್ದು, ಮನೆಗೆ ಹೊರಟಿದ್ದೆ. ನನ್ನ ಬಸ್ ಸ್ಟಾಪ್ ತನಕ ಗೆಳೆಯನ ಬೈಕ್ನಲ್ಲಿ ಬಂದು ನನ್ನ ಹಳೇ ಮಾಡೆಲ್ ಮಾವರ್ೆಲ್ ಅನ್ನು ಅನ್ನು ಮಧ್ಯರಾತ್ರಿಯ ಸುಮಾರಿಗೆ ಎಚ್ಚರಿಸಿದ್ದೆ. ಅದೂ ನನ್ನ ಮಿತ್ರನೇ ಆಗಿಹೋಗಿದ್ದರಿಂದ ನನ್ನ ಒಂದೇ ತುಳಿತಕ್ಕೆ ಮೇಲೆದ್ದು ಹೊರಡಲು ತಯಾರಾಗಿತ್ತು. ಆದರೆ ಹೊರಟು ಕೆಲವೇ ನಿಮಿಷಗಳಲ್ಲಿ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಕಲ್ಲಿನ ಕಂಬಕ್ಕೆ ಬಡಿದಿತ್ತು...

ಅಮ್ಮಾ... ಎನ್ನುವ ಚೀತ್ಕಾರಕ್ಕೆ ಸ್ಪಂದಿಸುವವರಾರೂ ಅಲ್ಲಿರಲಿಲ್ಲ. ಹನ್ನೆರಡು ಗಂಟೆಯ ಸ್ಮಶಾನ ನೀರವತೆಯಲ್ಲಿ ರಸ್ತೆಯಲ್ಲಿ ಎಲ್ಲರೂ ಇರಬೇಕು ಎಂದು ಊಹಿಸುವುದೂ ವಿಡಂಬನೆಯಾಗುತ್ತದೆ. ಕಣ್ಣಿಗೆ ಸಾವಿರ ನಕ್ಷತ್ರ ಹೊಳೆದಂತೆ, ಮುಖದ ಪೂತರ್ಿ ಹೊರಬರುವ ರಕ್ತ. ಎಲ್ಲೆಡೆ ಕತ್ತಲು... ಕಗ್ಗತ್ತಲು...

ಹೌದು... ನನಗೆ ಈಗಲೂ ಅಸ್ಪಷ್ಟ ನೆನಪಿದೆ. ನಾನು ಶರೀರದ ಇದ್ದ ಬಲವನ್ನೆಲ್ಲಾ ಪ್ರಯೋಗಿಸಿ ಮೇಲೇಳಬೇಕು ಎಂದು ಸಾವಿರ ಬಾರಿ ಮುಂದಾಗಿದ್ದೆ. ಆದರೆ ತಲೆ, ಹಣೆ, ಬಾಯಿ ಒಡೆದು ರಕ್ತ ಕಾರಂಜಿಯಂತೆ ಚಿಮ್ಮುತ್ತಿರುವಾಗ ಕೈಗಳು ತನ್ನಿಂತಾನೇ ಬಲ ಕಳೆದುಕೊಳ್ಳುತ್ತಿತ್ತು. ಎದ್ದು ನಿಲ್ಲಲು ಯತ್ನಿಸುವಷ್ಟರಲ್ಲಿ ಕಣ್ಗಳಿಗೆ ಗಾಢಾಂಧಕಾರ... ತಲೆಗೆ ಬಿದ್ದ ಬಲವಾದ ಏಟು ನನಗೆ ಅಷ್ಟು ಸಾವಕಾಶ ನೀಡದೆ ಉಸಿರಿನ ಜೊತೆ ಚೆಲ್ಲಾಟವಾಡುತ್ತಿತ್ತು.. ಒಮ್ಮೆ ದೀರ್ಘವಾಗಿ ಉಸಿರು ತೆಗೆದುಕೊಂಡ ಅನುಭವ... ಹೌದು... ನಾನಿನ್ನು ಬದುಕುವುದಿಲ್ಲ ಎನ್ನುವುದು ಅರಿವಾಗಿತ್ತು. ಆ ಕ್ಷಣದಲ್ಲಿ ನನ್ನಮ್ಮ ನೆನಪಾದರು. ಅತ್ತೆನೋ, ಬಿಟ್ಟೆನೋ ಎನ್ನುವುದು ನನಗಿನ್ನೂ ತಿಳಿದಿಲ್ಲ. ಯಾಕೆಂದರೆ ಹರಿಯುವ ರಕ್ತದಲ್ಲಿ ನನ್ನ ಅಳುವನ್ನು ಗುರುತಿಸುವುದು ಸಾಧ್ಯವೂ ಆಗಿರಲಿಲ್ಲ. ಇನ್ನೂ ಯಾರ್ಯಾರೋ ನೆನಪಾದರು... ಏನೇನೋ ನೆನಪಾಯಿತು... ಆ ಕ್ಷಣದಲ್ಲೂ ನನ್ನ ದೇವರು ನೆನಪಾದ... ಇನ್ನೇನು ಸಾವು ನನ್ನ ತೀರಾ ಸಮೀಪ ಬಂದು ನಿಂತಿತ್ತು. `ಬದುಕಿದ್ದು ಸಾಕು, ನಡೆ ನನ್ನೊಂದಿಗೆ ಎಂದು ಬಾರಿ-ಬಾರಿ ಕೂಗಿ ಕರೆಯುತ್ತಿತ್ತು. ಬಳಿಕ ಮತ್ತೇನೂ ನೆನಪಿಲ್ಲ... ಸುತ್ತಲೂ ಕತ್ತಲು... ಕಗ್ಗತ್ತಲ ಗೋರಿಯೊಳಗೆ ಯಾರೋ ಕನಲಿದಂತೆ... ಯಾರೋ ಹೆಸರು ಹೇಳಿ ಕೂಗಿದಂತೆ... ಕೋಣ... ಹಗ್ಗ... ಎಲ್ಲವೂ ಅಸ್ಪಷ್ಟ... ಬದುಕಿನ ಜೊತೆ ಸೆಣಸಾಡಿ ಸಾವರಿಸಿಕೊಳ್ಳಲಾರದೆ ಕಣ್ಣುಮುಚ್ಚಿದ್ದೆ...

ಇದಾಗಿ ಗಂಟೆಯೇ ದಾಟಿರಬಹುದು. ಹತ್ತಿರದಲ್ಲಿ ಯಾರೋ ನನ್ನನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದರು. ಇನ್ನೂ ಬದುಕಿದ್ದಾನೆ... ಎನ್ನುತ್ತಿದ್ದರು. ತಲೆಯ ಭಾಗದ ಏಟನ್ನು ಕಂಡು ಬೆದರಿದ ಅವರು ಮೇಲೆಬ್ಬಿಸಿದಾಗ ನನಗೆ ಎಲ್ಲಿಂದಲೋ ಮತ್ತೆ ಜೀವ ಬಂದಿತ್ತು. ನಾನೇ ಎದ್ದುನಿಂತು ಆಸ್ಪತ್ರೆಗೆ ಕರೆದೊಯ್ಯಿರಿ ಎಂದೆ... ಆದರೆ ರಸ್ತೆಯಲ್ಲಿ ಬಿದ್ದಾತ ಅಪಘಾತಕ್ಕೆ ಈಡಾಗಿರಲಿ, ಕೊಲೆಯತ್ನವೇ ಆಗಿರಲಿ... ಆಸ್ಪತ್ರೆಗೆ ಕರೆದೊಯ್ಯುವ ಧೈರ್ಯ ಯಾರಲ್ಲಿರುತ್ತೆ? ನನ್ನನ್ನು ರಿಕ್ಷಾದಲ್ಲಿ ಕರೆತಂದು ಮನೆಗೆ ಬಿಟ್ಟರು... ಮನೆಯಲ್ಲಿ ಮತ್ತದೇ ಬೊಬ್ಬೆ... ಸ್ಮಶಾನಸದೃಶ ವಾತಾವರಣ... ಆದರೂ ನನ್ನ ಮನಸ್ಸು ನೀನು ಬದುಕಬೇಕು ಎಂದು ಛಲ ಹುಟ್ಟಿಸುತ್ತಿತ್ತು. ಗೆಳೆಯನ ರಿಕ್ಷಾವನ್ನು ಕರೆದು ನಸುಕಿನ ಮೂರು ಗಂಟೆಗೆ ಆಸ್ಪತ್ರೆ ಸೇರಿದೆ ಗುಟುಕು ಜೀವ ಉಳಿಸಿಕೊಂಡು... ಆಸ್ಪತ್ರೆಗೆ ಇನ್ನೇನು ಸ್ವಲ್ಪ ದಾರಿ ಇದೆ ಎನ್ನುವಾಗಲೇ ದೇಹದ ರಕ್ತ ಖಾಲಿಯಾಗಿತ್ತು... ಎದೆ ಭಾರವಾಗಿ ಕಣ್ಣುಮುಚ್ಚಿದ್ದೆ... ಮತ್ತೆ ಪ್ರಜ್ಞೆ ಬಂದಾಗ ಬಿಳಿ ಬಟ್ಟೆ ಧರಿಸಿದವರು ಸುತ್ತಲೂ ಸೇರಿದ್ದರು. ಮುಖವನ್ನು ಉದ್ದನೆಯ ಸೂಜಿಯಿಂದ ಹೊಲಿಯುತ್ತಿದ್ದರು... ಮುಖದ ಪೂತರ್ಿ 32 ಹೊಲಿಗೆ ಹಾಕಿದ್ದರು.

ನನ್ನ ಮುಖ ನನಗೇ ನೋಡಲು ಭಯವಾಗುತ್ತಿತ್ತು. ಅಮ್ಮ, ಪಪ್ಪ, ಅಕ್ಕ, ತಂಗಿ, ಅಣ್ಣ, ಅತ್ತಿಗೆ ಎಲ್ಲರೂ ಧೈರ್ಯ ತುಂಬುತ್ತಿದ್ದರು. ಮತ್ತೆ ಮೊದಲಿನಂತಾಗುತ್ತೀಯಾ ಎಂದು ಹಾರೈಸಿದ್ದರು.

ನನ್ನ ಮುಖವನ್ನು ನೋಡುವುದಕ್ಕೂ ಅಸಹ್ಯವಾಗುತ್ತಿತ್ತು. ಭೀಕರವಾಗಿದ್ದ ಮುಖವನ್ನು ನೋಡಲು ಧೈರ್ಯ ಸಾಲುತ್ತಿರಲಿಲ್ಲ. ಆದರೂ ಆಸ್ಪತ್ರೆಯ ಶೌಚಾಲಯದಲ್ಲಿ ಕನ್ನಡಿ ಎದುರು ನಿಂತು ಮುಖವನ್ನು ನೋಡಿದ್ದೆ. ನನಗೆ ಅಳು ಬರಲಿಲ್ಲ... ವೈದ್ಯರು, ನಸರ್್ಗಳ `ಬೇಡ.. ಹೋಗಬೇಡ... ನಾವು ಜವಾಬ್ದಾರರಲ್ಲ.. ಅನ್ನೋ ಮಾತಿನ ನಡುವೆಯೂ ಒಂದೇ ದಿನ ಆಸ್ಪತ್ರೆ ವಾಸ ಪೂರೈಸಿ ಮನೆಗೆ ಹೊರಟೆ... ನಾಲ್ಕು ದಿನ ಇರು ಎಂದ ಮನೆಮಂದಿಗೆ ಇಲ್ಲಿ ಇರಿಸಿದರೆ ಸುಸೈಡ್ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿದೆ. ಅಂತೂ-ಇಂತೂ ನನ್ನ ಯಾತ್ರೆ ಮನೆ ಸೇರಿತ್ತು.

ಹದಿನೈದು ದಿನಗಳ ಕಾಲ ದಿನಕ್ಕೆ ಮೂರು ಇಂಜೆಕ್ಷನ್... ಇಪ್ಪತ್ತಕ್ಕೂ ಹೆಚ್ಚು ಮಾತ್ರೆ... ಮೂರು ಬಾರಿ ವೈದ್ಯರ ಭೇಟಿ, ಜ್ಯೂಸ್, ಬಿಸ್ಕತ್ ಇವಿಷ್ಟೇ ನನಗೆ ಗೊತ್ತಿತ್ತು. ಆಗಾಗ ಕನ್ನಡಿ ನೋಡುತ್ತಾ ಕೂರುತ್ತಿದ್ದೆ... ಆಮೇಲೆ ಮುಖದ ಕೆಲವು ಭಾಗ ಬ್ಯಾಂಡೇಜ್ ಹಾಕಿ ಆಫೀಸ್ ಹೋದೆ. ತಿಂಗಳು ಕಳೆಯುವಷ್ಟರಲ್ಲಿ ಮತ್ತೆ ಮೊದಲಿನಂತಾದೆ...

ಕೆಲವರು ಏನೋ ಯೋಚಿಸಿದ್ದರು... ಆತ ಮತ್ತೆ ಮೊದಲಿನಂತಾಗುವುದಿಲ್ಲ ಎಂದರು... ಕೊಲೆಯತ್ನ ಎಂದು ಬೊಬ್ಬೆ ಹೊಡೆದರು. ಆದರೆ ಇದಾವುದಕ್ಕೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ಈ ದಿನ ಬಂದಾಗ ಮನದ ತುಂಬಾ ದುಗುಡ... ಬೇಸರ... ಖುಷಿಯಾಗಿರಲು ಬಯಸುತ್ತೇನೆ... ಆದರೆ ನೆನಪುಗಳು ಬೆನ್ನು ಬಿಡುವುದಿಲ್ಲ... ಸಿಹಿನೆನಪುಗಳ ನಡುವೆ ಇಂಥ ಕಹಿನೆನಪುಗಳು ಇದ್ದರೆ ಜೀವನ ಚೆಂದ ಅಂತ ನಂಬಿರೋನು ನಾನು...

ಬಹುಷ: ಸಾವಿನ ಕೊನೆಯ ಕ್ಷಣವನ್ನು ನನ್ನಷ್ಟು ಹಿತವಾಗಿ ಯಾರೂ ಅನುಭವಿಸಲಿಕ್ಕಿಲ್ಲ...!!

Saturday, September 17, 2011

ದೋಣಿಗಲ್ ಟು ಎಡಕುಮೇರಿ ರುದ್ರ ರಮಣೀಯ ಗ್ರೀನ್ ವೇ...
ಮಾನ್ಸೂನ್ ಟ್ರೆಕ್ಕಿಂಗ್ ಅಥರ್ಾತ್ ಮುಂಗಾರಿನ ಚಾರಣ ಅಂದುಕೊಂಡಷ್ಟು ಸುಲಭವಲ್ಲ. ಎಡೆಬಿಡದೆ ಸುರಿಯೋ ಮಳೆ, ರಕ್ತವನ್ನು ಹೆಪ್ಪುಗಟ್ಟಿಸುವ ಚಳಿ, ಮಂಜು ಮುಸುಕಿ ಕ್ಷಣದಲ್ಲೇ ಕಾಣದಾಗುವ ದಾರಿ ಇವೆಲ್ಲ ಚಾರಣಿಗರಿಗೆ ಅಡಿಗಡಿಗೆ ಸವಾಲು ಕೊಡುವುದರ ಜತೆ ಹೊಸತಾದ ಅನುಭವವನ್ನು ನೀಡುತ್ತದೆ. ಮುಂಗಾರಿನ ಸೊಬಗನ್ನು ಕಣ್ತುಂಬಿಕೊಳ್ಳುತ್ತಾ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ಚಾರಣ ನಡೆಸೋದು ಆಹ್ಲಾದಕರವಾಗಿರುತ್ತೆ. ಚಾರಣಿಗರಿಗೆ ಮೊಗೆದಷ್ಟೂ ಮತ್ತೆ-ಮತ್ತೆ ಅದೇ ಆಕರ್ಷಣೆ, ವಿಸ್ಮಯಗಳ ತಾಣವಾಗಿರುವ ಪಶ್ಚಿಮಘಟ್ಟ ಸುರಿವ ಮಳೆಯ ನಡುವೆ ಸ್ವರ್ಗಸದೃಶವಾಗಿರುತ್ತೆ. ದಟ್ಟವಾದ ಅರಣ್ಯದ ನಡುವೆ ಬಂಧಿಯಾಗಿರುವ ಅದ್ಭುತ ಸೌಂದರ್ಯವನ್ನು ಮೈವೆತ್ತ ಅಸಂಖ್ಯ ಜಲಧಾರೆಗಳಿಗೆ ಮುಂಗಾರಿನ ವೇಳೆ ನಿತ್ಯ ಯೌವನ. ಬರೇ ಜಲಧಾರೆಯಲ್ಲ... ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಎಣಿಕೆಗೂ ಸಿಗದಷ್ಟು ಗಿರಿ-ಶಿಖರಗಳಿವೆ. ಆದರೆ ಇವೆಲ್ಲವುಗಳಿಗಿಂತ ಕೊಂಚ ಭಿನ್ನ ಅನುಭವ ಸಿಗಬೇಕಾದರೆ ನೀವೊಮ್ಮೆ ಸಕಲೇಶಪುರ ಎನ್ನುವ ಟಿಪ್ಪು ಸುಲ್ತಾನ ಆಳಿದ ನಾಡಿಗೆ ಕಾಲಿಡಬೇಕು. ಇಲ್ಲಿಂದ ಒಂದೆರಡು ಕಿ.ಮೀ. ದೂರದಲ್ಲಿರುವ ದೋಣಿಗಲ್ ಟು ಎಡಕುಮೇರಿ ಚಾರಣವಂತೂ... ಅಬ್ಬಾ... ನೆನಪು ಮಾಡ್ಕೊಂಡಷ್ಟು ಮಧುರ. ಪ್ರಶಾಂತವಾಗಿ ಮಲಗಿರುವಂತೆ ಕಾಣುವ ರೈಲ್ವೇ ಹಳಿಯ ಮೇಲೆ ಒಟ್ಟು 18 ಕಿ.ಮೀ. ಉದ್ದದ `ಗ್ರೀನ್ವೇ' ಚಾರಣ ಮನಸ್ಸಿಗೆ ಖುಷಿ ನೀಡುವುದರ ಜೊತೆ ಎಂಟೆದೆಯ ಬಂಟನಿಗೂ ರೋಚಕ, ರೋಮಾಂಚಕ ಅನುಭವವನ್ನು ನೀಡುತ್ತದೆ.

ಎಲ್ಲಿದೆ ಗ್ರೀನ್ ವೇ?

ಸಕಲೇಶಪುರ ಪ್ರಧಾನ ನಿಲ್ದಾಣದಿಂದ ಸುಮಾರು ಒಂದೂವರೆ ಕಿ.ಮಿ. ಹಿಂದೆ ಬಂದರೆ ದೋಣಿಗಲ್ ರೈಲ್ವೇ ನಿಲ್ದಾಣಕ್ಕೆ ದಾರಿ ಸಿಗುತ್ತದೆ. ಇಲ್ಲಿಂದ ಎಡಕುಮೇರಿ ನಿಲ್ದಾಣ ತಲುಪಬೇಕಾದರೆ ಮಧ್ಯೆ ಕಡವರ ಹಳ್ಳಿ ಎಂಬ ನಿಲ್ದಾಣ ಸಿಗುತ್ತದೆ. ಮಂಗಳೂರು-ಬೆಂಗ ಳೂರು ರೈಲ್ವೇ ಮಾರ್ಗದಲ್ಲಿ ಹಸಿರ ಹೊದಿಕೆ ಹೊದ್ದು ಮಲಗಿರುವಂತೆ ಕಾಣುವ ಎರಡು ನಿಲ್ದಾಣಗಳೇ ದೋಣಿ ಗಲ್ ಮತ್ತು ಎಡಕುಮೇರಿ. ಇವೇ ಚಾರಣಪ್ರಿಯರ ಸ್ವರ್ಗ ಎಂದರೂ ತಪ್ಪಾಗಲಾರದು. ಬೆಂಗಳೂರು, ಮೈಸೂರು, ಹಾಸನ ಮಾತ್ರವಲ್ಲದೆ ದೇಶ-ವಿದೇಶಗಳಿಂದಲೂ ಚಾರಣಿಗರು ಇಲ್ಲಿ ಚಾರಣ ನಡೆಸಿ ಮನಸ್ಸಿಗೆ ಆನಂದ ಪಟ್ಟುಕೊಳ್ಳುತ್ತಾರೆ. ಎರಡೂ ನಿಲ್ದಾಣಗಳಲ್ಲಿ ರೈಲು ನಿಲ್ಲದಿದ್ದರೂ ರೈಲು ಪ್ರಯಾಣಿಕರ ಕುತೂಹಲ ಮಾತ್ರ ತಣಿಯುವುದಿಲ್ಲ. ಹಚ್ಚಹಸಿರ ಹಾದಿ, ಒಂದು ಬದಿಯಲ್ಲಿ ಎತ್ತರದ ಬೆಟ್ಟ, ಇನ್ನೊಂದು ಬದಿಯಲ್ಲಿ ಆಳವಾದ ಪ್ರಪಾತ, ದೂರದಿಂದ ಕಂಡುಬರುವ ಪಶ್ಚಿಮಘಟ್ಟದ ಕಣಿವೆ ಪ್ರದೇಶ, ಪರ್ವತವನ್ನು ಸೀಳಿಕೊಂಡು ಹರಿಯುವ ಕೆಂಪು ಹೊಳೆಯ ಸೊಬಗು... ತಿರುವು-ಮುರುವು ಹಳಿಯಲ್ಲಿ ಸಾಗುವ ರೈಲು ಕೆಲವೊಮ್ಮೆ ವೇಗ ತಗ್ಗಿಸಿದರೆ ಮತ್ತೊಮ್ಮೆ ವೇಗ ಪಡೆದು ಸಂಚರಿಸುವುದನ್ನು ನೋಡುವುದೇ ಚಂದ.

ದೋಣಿಗಲ್ ನಿಲ್ದಾಣದಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಹಸಿರು ಹಾದಿ ಪ್ರಾರಂಭವಾಗುತ್ತದೆ. ಕಣ್ಣು ಹಾಯಿಸಿದಷ್ಟು ಕಾಣುವ ಹಸಿರುಟ್ಟ ಭೂರಮೆಯ ಸೊಬಗು, ನಡುವೆ ಕಣ್ಣು ಹಾಯಿಸಿದಷ್ಟೂ ದೀರ್ಘವಾಗುವ ರೈಲ್ವೇ ಹಳಿ ನಮ್ಮನ್ನು ಮುಂದೆ-ಮುಂದೆ ಹೆಜ್ಜೆ ಹಾಕುವಂತೆ ಪ್ರೇರೇಪಿಸುತ್ತದೆ. ಕಿ.ಮೀ. ದೂರ ಸಾಗಿದರೆ ಮೊದಲ ಸುರಂಗ ಮಾರ್ಗ ಧುತ್ತನೆ ಎದುರಾಗುತ್ತದೆ. ಇದೇನೂ ದೊಡ್ಡ ಸುರಂಗವಲ್ಲ, ಈ ಕಡೆಯಿಂದ ಆ ಕಡೆಗೆ ಬೆಳಕು ಹರಿಯುತ್ತದೆ. ಆದರೆ ಇದನ್ನು ದಾಟಿ ಮುಂದೆ ಸಾಗಿದಾಗ ಸಿಗುವ ಎರಡನೇ ಸುರಗವಿದೆಯಲ್ಲಾ... ಅದು ನಮ್ಮನ್ನು ಕ್ಷಣಮಾತ್ರ ಭೀತಿಗೊಡ್ಡುತ್ತದೆ. ಬೆಳಕಿನಿಂದ ಕತ್ತಲೆಗೆ ಒಮ್ಮೆಲೇ ಪ್ರವೇಶ ಪಡೆಯುವ ಕಾರಣ ಸುರಂಗದೊಳಗೆ ಕಣ್ಣು ಕತ್ತಲೆ ಬೀಳುವುದೊಂದೇ ಬಾಕಿ. ಆಕ್ಷಣದಲ್ಲಿ ಬ್ಯಾಗ್ನಲ್ಲಿ ಭದ್ರವಾಗಿಟ್ಟ ಟಾಚರ್್ ನೆನನಾಪುತ್ತದೆ. ಕೈಯಲ್ಲಿ ಟಾಚರ್್ ಬೆಳಕನ್ನು ಹಾಯಿಸಿ ಸುರಂಗದ ಮಧ್ಯಭಾಗಕ್ಕೆ ಹೋದಂತೆಲ್ಲ ಉಸಿರು ಕಟ್ಟಿಸುವ ಅನುಭವ, ಮರಗಟ್ಟಿಸುವ ಚಳಿ, ಮೇಲ್ಗಡೆಯಿಂದ ಬೀಳುವ ಹಿಮದಂತಿಹ ನೀರು, ಭೀತಿಯಿಂದ ಜೋರಾಗಿ ಬಡಿಯುವ ಎದೆ... ಹೀಗೆ ಎಲ್ಲವನ್ನೂ ಸಂಭಾಳಿಸಿಕೊಂಡು ಸುರಂಗ ದಾಟಿದರೆ ಕೆಲವೇ ಮೀಟರ್ಗಳ ಅಂತರದಲ್ಲಿ ಮತ್ತೊಂದು ಸುರಂಗ ನಮ್ಮನ್ನು ಸ್ವಾಗತಿಸುತ್ತದೆ. ಹೀಗೆ ಚಾರಣದುದ್ದಕ್ಕೂ ಅನೇಕ ಸುರಂಗಗಳು ನಮ್ಮನ್ನು ಪರೀಕ್ಷೆಗೆ ಒಡ್ಡುತ್ತವೆ. ಇಷ್ಟು ಮಾತ್ರವಲ್ಲದೆ ಚಾರಣದ ದಣಿವನ್ನು ನಿವಾರಿಸಲು ರೈಲ್ವೇ ಹಳಿಗೆ ತಾಗಿಕೊಂಡೇ ಅಸಂಖ್ಯ ಹಿರಿ-ಕಿರಿಯ ಜಲಪಾತಗಳು ವೇಗದಿಂದ ಧುಮ್ಮಿಕ್ಕುತ್ತಿರುತ್ತವೆ. ಇವುಗಳ ನೀರಿಗೆ ಮೈಯೊಡ್ಡಿ ನಿಂತರೆ ಎಂತಹ ದಣಿವೂ ಕ್ಷಣಮಾತ್ರದಲ್ಲೇ ಮಾಯ. ಬೆಟ್ಟದ ಮೇಲಿಂದ ಹರಿಯುವ ಜಲಧಾರೆಯನ್ನೇ ಕುಡಿದು ದಣಿವು ನಿವಾರಿಸಿ ಕೊಳ್ಳಬಹುದು.

ಇಲ್ಲಿಂದ ಸುಮಾರು ಆರು ಕಿ.ಮೀ. ದೂರದಲ್ಲಿ ಕಡವರಹಳ್ಳಿ ರೈಲ್ವೇ ನಿಲ್ದಾಣ ಸಿಗುತ್ತದೆ. ಇಲ್ಲಿ ಗೂಡ್ಸ್ ರೈಲುಗಳು ಮಾತ್ರ ನಿಲುಗಡೆಯಾಗುತ್ತದೆ, ಇನ್ನುಳಿದಂತೆ ಮಂಗಳೂರು-ಬೆಂಗಳೂರು ನಡುವೆ ಓಡುವ ರೈಲು ಇಲ್ಲಿ ನಿಲುಗಡೆ ಘೋಷಿಸದೆ ನಿಧಾನಕ್ಕೆ ಬಳುಕುತ್ತಾ ಮುಂದೆ ಸಾಗುತ್ತದೆ. ಹಾಸನ-ಮಂಗಳೂರು ರೈಲ್ವೇ ಹಳಿ ಪೂತರ್ಿಗೊಳ್ಳದ ಕಾರಣ ಇಲ್ಲಿ ರೈಲುಗಳ ಸಂಖ್ಯೆಯೂ ಹೆಚ್ಚಿಲ್ಲ, ಓಡಾಟವೂ ಮಿತಿಯಲ್ಲಿದೆ. ಇಲ್ಲಿನ ನಿಲ್ದಾಣದಲ್ಲಿ ಇರುವುದು ಇಬ್ಬರೇ. ಒಬ್ಬ ಸ್ಟೇಷನ್ ಮಾಸ್ಟರ್ ಮತ್ತೊಬ್ಬ ಅವನ ಸಹಾಯಕ. ಬೆಟ್ಟದ ಬದಿಯಲ್ಲಿರೋ ಸಣ್ಣ ನಿಲ್ದಾಣದ ಹತ್ರ ನಿಂತರೆ ದೂರದಲ್ಲಿ ಶಿರಾಡಿ ಘಾಟಿ ಮಸುಕಾಗಿ ಗೋಚರಿಸುತ್ತದೆ. ಇಲ್ಲಿಂದ ಮುಂದಕ್ಕೆ ಸಿಗುವುದೇ ಎಡಕುಮೇರಿ ನಿಲ್ದಾಣ... ಸುಬ್ರಹ್ಮಣ್ಯ ದಾರಿಯಾಗಿ ಎಡಕುಮೇರಿ ನಿಲ್ದಾಣಕ್ಕೆ ಬಂದರೆ ಅಲ್ಲಿಂದ ದೋಣಿಗಲ್ ಚಾರಣವನ್ನೂ ಮಾಡಬಹುದು. ರೈಲ್ವೇ ಹಳಿ, ಕಬ್ಬಿಣದ ರೈಲ್ವೇ ಮೇಲ್ಸೇತುವೆ, ಸುರಂಗಮಾರ್ಗ, ಆಳವಾದ ಪ್ರಪಾತ, ಕೆಂಪುಹೊಳೆಯ ವೈಯ್ಯಾರ, ಅಸಂಖ್ಯ ಜಲಧಾರೆ, ಪಶ್ಚಿಮಘಟ್ಟ ಪರ್ವತ ಶ್ರೇಣಿ... ಎಲ್ಲವೂ ಹಸಿರೋ ಹಸಿರು... ಪ್ರಕೃತಿಯ ಮಡಿಲಲ್ಲಿ ಧನ್ಯರಾಗುವ ಬಯಕೆ ನಿಮಗಿದ್ದರೆ ಸರ್ವಸಿದ್ಧತೆಯೊಂದಿಗೆ `ಗ್ರೀನ್ವೇ' ಚಾರಣ ಕೈಗೊಳ್ಳಿ. ಪ್ರಕೃತಿಯ ಮಡಿಲಲ್ಲಿ ಸಖತ್ ಎಂಜಾಯ್ ಮಾಡಿ...