doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Saturday, September 17, 2011

ದೋಣಿಗಲ್ ಟು ಎಡಕುಮೇರಿ ರುದ್ರ ರಮಣೀಯ ಗ್ರೀನ್ ವೇ...
















ಮಾನ್ಸೂನ್ ಟ್ರೆಕ್ಕಿಂಗ್ ಅಥರ್ಾತ್ ಮುಂಗಾರಿನ ಚಾರಣ ಅಂದುಕೊಂಡಷ್ಟು ಸುಲಭವಲ್ಲ. ಎಡೆಬಿಡದೆ ಸುರಿಯೋ ಮಳೆ, ರಕ್ತವನ್ನು ಹೆಪ್ಪುಗಟ್ಟಿಸುವ ಚಳಿ, ಮಂಜು ಮುಸುಕಿ ಕ್ಷಣದಲ್ಲೇ ಕಾಣದಾಗುವ ದಾರಿ ಇವೆಲ್ಲ ಚಾರಣಿಗರಿಗೆ ಅಡಿಗಡಿಗೆ ಸವಾಲು ಕೊಡುವುದರ ಜತೆ ಹೊಸತಾದ ಅನುಭವವನ್ನು ನೀಡುತ್ತದೆ. ಮುಂಗಾರಿನ ಸೊಬಗನ್ನು ಕಣ್ತುಂಬಿಕೊಳ್ಳುತ್ತಾ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ಚಾರಣ ನಡೆಸೋದು ಆಹ್ಲಾದಕರವಾಗಿರುತ್ತೆ. ಚಾರಣಿಗರಿಗೆ ಮೊಗೆದಷ್ಟೂ ಮತ್ತೆ-ಮತ್ತೆ ಅದೇ ಆಕರ್ಷಣೆ, ವಿಸ್ಮಯಗಳ ತಾಣವಾಗಿರುವ ಪಶ್ಚಿಮಘಟ್ಟ ಸುರಿವ ಮಳೆಯ ನಡುವೆ ಸ್ವರ್ಗಸದೃಶವಾಗಿರುತ್ತೆ. ದಟ್ಟವಾದ ಅರಣ್ಯದ ನಡುವೆ ಬಂಧಿಯಾಗಿರುವ ಅದ್ಭುತ ಸೌಂದರ್ಯವನ್ನು ಮೈವೆತ್ತ ಅಸಂಖ್ಯ ಜಲಧಾರೆಗಳಿಗೆ ಮುಂಗಾರಿನ ವೇಳೆ ನಿತ್ಯ ಯೌವನ. ಬರೇ ಜಲಧಾರೆಯಲ್ಲ... ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಎಣಿಕೆಗೂ ಸಿಗದಷ್ಟು ಗಿರಿ-ಶಿಖರಗಳಿವೆ. ಆದರೆ ಇವೆಲ್ಲವುಗಳಿಗಿಂತ ಕೊಂಚ ಭಿನ್ನ ಅನುಭವ ಸಿಗಬೇಕಾದರೆ ನೀವೊಮ್ಮೆ ಸಕಲೇಶಪುರ ಎನ್ನುವ ಟಿಪ್ಪು ಸುಲ್ತಾನ ಆಳಿದ ನಾಡಿಗೆ ಕಾಲಿಡಬೇಕು. ಇಲ್ಲಿಂದ ಒಂದೆರಡು ಕಿ.ಮೀ. ದೂರದಲ್ಲಿರುವ ದೋಣಿಗಲ್ ಟು ಎಡಕುಮೇರಿ ಚಾರಣವಂತೂ... ಅಬ್ಬಾ... ನೆನಪು ಮಾಡ್ಕೊಂಡಷ್ಟು ಮಧುರ. ಪ್ರಶಾಂತವಾಗಿ ಮಲಗಿರುವಂತೆ ಕಾಣುವ ರೈಲ್ವೇ ಹಳಿಯ ಮೇಲೆ ಒಟ್ಟು 18 ಕಿ.ಮೀ. ಉದ್ದದ `ಗ್ರೀನ್ವೇ' ಚಾರಣ ಮನಸ್ಸಿಗೆ ಖುಷಿ ನೀಡುವುದರ ಜೊತೆ ಎಂಟೆದೆಯ ಬಂಟನಿಗೂ ರೋಚಕ, ರೋಮಾಂಚಕ ಅನುಭವವನ್ನು ನೀಡುತ್ತದೆ.

ಎಲ್ಲಿದೆ ಗ್ರೀನ್ ವೇ?

ಸಕಲೇಶಪುರ ಪ್ರಧಾನ ನಿಲ್ದಾಣದಿಂದ ಸುಮಾರು ಒಂದೂವರೆ ಕಿ.ಮಿ. ಹಿಂದೆ ಬಂದರೆ ದೋಣಿಗಲ್ ರೈಲ್ವೇ ನಿಲ್ದಾಣಕ್ಕೆ ದಾರಿ ಸಿಗುತ್ತದೆ. ಇಲ್ಲಿಂದ ಎಡಕುಮೇರಿ ನಿಲ್ದಾಣ ತಲುಪಬೇಕಾದರೆ ಮಧ್ಯೆ ಕಡವರ ಹಳ್ಳಿ ಎಂಬ ನಿಲ್ದಾಣ ಸಿಗುತ್ತದೆ. ಮಂಗಳೂರು-ಬೆಂಗ ಳೂರು ರೈಲ್ವೇ ಮಾರ್ಗದಲ್ಲಿ ಹಸಿರ ಹೊದಿಕೆ ಹೊದ್ದು ಮಲಗಿರುವಂತೆ ಕಾಣುವ ಎರಡು ನಿಲ್ದಾಣಗಳೇ ದೋಣಿ ಗಲ್ ಮತ್ತು ಎಡಕುಮೇರಿ. ಇವೇ ಚಾರಣಪ್ರಿಯರ ಸ್ವರ್ಗ ಎಂದರೂ ತಪ್ಪಾಗಲಾರದು. ಬೆಂಗಳೂರು, ಮೈಸೂರು, ಹಾಸನ ಮಾತ್ರವಲ್ಲದೆ ದೇಶ-ವಿದೇಶಗಳಿಂದಲೂ ಚಾರಣಿಗರು ಇಲ್ಲಿ ಚಾರಣ ನಡೆಸಿ ಮನಸ್ಸಿಗೆ ಆನಂದ ಪಟ್ಟುಕೊಳ್ಳುತ್ತಾರೆ. ಎರಡೂ ನಿಲ್ದಾಣಗಳಲ್ಲಿ ರೈಲು ನಿಲ್ಲದಿದ್ದರೂ ರೈಲು ಪ್ರಯಾಣಿಕರ ಕುತೂಹಲ ಮಾತ್ರ ತಣಿಯುವುದಿಲ್ಲ. ಹಚ್ಚಹಸಿರ ಹಾದಿ, ಒಂದು ಬದಿಯಲ್ಲಿ ಎತ್ತರದ ಬೆಟ್ಟ, ಇನ್ನೊಂದು ಬದಿಯಲ್ಲಿ ಆಳವಾದ ಪ್ರಪಾತ, ದೂರದಿಂದ ಕಂಡುಬರುವ ಪಶ್ಚಿಮಘಟ್ಟದ ಕಣಿವೆ ಪ್ರದೇಶ, ಪರ್ವತವನ್ನು ಸೀಳಿಕೊಂಡು ಹರಿಯುವ ಕೆಂಪು ಹೊಳೆಯ ಸೊಬಗು... ತಿರುವು-ಮುರುವು ಹಳಿಯಲ್ಲಿ ಸಾಗುವ ರೈಲು ಕೆಲವೊಮ್ಮೆ ವೇಗ ತಗ್ಗಿಸಿದರೆ ಮತ್ತೊಮ್ಮೆ ವೇಗ ಪಡೆದು ಸಂಚರಿಸುವುದನ್ನು ನೋಡುವುದೇ ಚಂದ.

ದೋಣಿಗಲ್ ನಿಲ್ದಾಣದಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಹಸಿರು ಹಾದಿ ಪ್ರಾರಂಭವಾಗುತ್ತದೆ. ಕಣ್ಣು ಹಾಯಿಸಿದಷ್ಟು ಕಾಣುವ ಹಸಿರುಟ್ಟ ಭೂರಮೆಯ ಸೊಬಗು, ನಡುವೆ ಕಣ್ಣು ಹಾಯಿಸಿದಷ್ಟೂ ದೀರ್ಘವಾಗುವ ರೈಲ್ವೇ ಹಳಿ ನಮ್ಮನ್ನು ಮುಂದೆ-ಮುಂದೆ ಹೆಜ್ಜೆ ಹಾಕುವಂತೆ ಪ್ರೇರೇಪಿಸುತ್ತದೆ. ಕಿ.ಮೀ. ದೂರ ಸಾಗಿದರೆ ಮೊದಲ ಸುರಂಗ ಮಾರ್ಗ ಧುತ್ತನೆ ಎದುರಾಗುತ್ತದೆ. ಇದೇನೂ ದೊಡ್ಡ ಸುರಂಗವಲ್ಲ, ಈ ಕಡೆಯಿಂದ ಆ ಕಡೆಗೆ ಬೆಳಕು ಹರಿಯುತ್ತದೆ. ಆದರೆ ಇದನ್ನು ದಾಟಿ ಮುಂದೆ ಸಾಗಿದಾಗ ಸಿಗುವ ಎರಡನೇ ಸುರಗವಿದೆಯಲ್ಲಾ... ಅದು ನಮ್ಮನ್ನು ಕ್ಷಣಮಾತ್ರ ಭೀತಿಗೊಡ್ಡುತ್ತದೆ. ಬೆಳಕಿನಿಂದ ಕತ್ತಲೆಗೆ ಒಮ್ಮೆಲೇ ಪ್ರವೇಶ ಪಡೆಯುವ ಕಾರಣ ಸುರಂಗದೊಳಗೆ ಕಣ್ಣು ಕತ್ತಲೆ ಬೀಳುವುದೊಂದೇ ಬಾಕಿ. ಆಕ್ಷಣದಲ್ಲಿ ಬ್ಯಾಗ್ನಲ್ಲಿ ಭದ್ರವಾಗಿಟ್ಟ ಟಾಚರ್್ ನೆನನಾಪುತ್ತದೆ. ಕೈಯಲ್ಲಿ ಟಾಚರ್್ ಬೆಳಕನ್ನು ಹಾಯಿಸಿ ಸುರಂಗದ ಮಧ್ಯಭಾಗಕ್ಕೆ ಹೋದಂತೆಲ್ಲ ಉಸಿರು ಕಟ್ಟಿಸುವ ಅನುಭವ, ಮರಗಟ್ಟಿಸುವ ಚಳಿ, ಮೇಲ್ಗಡೆಯಿಂದ ಬೀಳುವ ಹಿಮದಂತಿಹ ನೀರು, ಭೀತಿಯಿಂದ ಜೋರಾಗಿ ಬಡಿಯುವ ಎದೆ... ಹೀಗೆ ಎಲ್ಲವನ್ನೂ ಸಂಭಾಳಿಸಿಕೊಂಡು ಸುರಂಗ ದಾಟಿದರೆ ಕೆಲವೇ ಮೀಟರ್ಗಳ ಅಂತರದಲ್ಲಿ ಮತ್ತೊಂದು ಸುರಂಗ ನಮ್ಮನ್ನು ಸ್ವಾಗತಿಸುತ್ತದೆ. ಹೀಗೆ ಚಾರಣದುದ್ದಕ್ಕೂ ಅನೇಕ ಸುರಂಗಗಳು ನಮ್ಮನ್ನು ಪರೀಕ್ಷೆಗೆ ಒಡ್ಡುತ್ತವೆ. ಇಷ್ಟು ಮಾತ್ರವಲ್ಲದೆ ಚಾರಣದ ದಣಿವನ್ನು ನಿವಾರಿಸಲು ರೈಲ್ವೇ ಹಳಿಗೆ ತಾಗಿಕೊಂಡೇ ಅಸಂಖ್ಯ ಹಿರಿ-ಕಿರಿಯ ಜಲಪಾತಗಳು ವೇಗದಿಂದ ಧುಮ್ಮಿಕ್ಕುತ್ತಿರುತ್ತವೆ. ಇವುಗಳ ನೀರಿಗೆ ಮೈಯೊಡ್ಡಿ ನಿಂತರೆ ಎಂತಹ ದಣಿವೂ ಕ್ಷಣಮಾತ್ರದಲ್ಲೇ ಮಾಯ. ಬೆಟ್ಟದ ಮೇಲಿಂದ ಹರಿಯುವ ಜಲಧಾರೆಯನ್ನೇ ಕುಡಿದು ದಣಿವು ನಿವಾರಿಸಿ ಕೊಳ್ಳಬಹುದು.

ಇಲ್ಲಿಂದ ಸುಮಾರು ಆರು ಕಿ.ಮೀ. ದೂರದಲ್ಲಿ ಕಡವರಹಳ್ಳಿ ರೈಲ್ವೇ ನಿಲ್ದಾಣ ಸಿಗುತ್ತದೆ. ಇಲ್ಲಿ ಗೂಡ್ಸ್ ರೈಲುಗಳು ಮಾತ್ರ ನಿಲುಗಡೆಯಾಗುತ್ತದೆ, ಇನ್ನುಳಿದಂತೆ ಮಂಗಳೂರು-ಬೆಂಗಳೂರು ನಡುವೆ ಓಡುವ ರೈಲು ಇಲ್ಲಿ ನಿಲುಗಡೆ ಘೋಷಿಸದೆ ನಿಧಾನಕ್ಕೆ ಬಳುಕುತ್ತಾ ಮುಂದೆ ಸಾಗುತ್ತದೆ. ಹಾಸನ-ಮಂಗಳೂರು ರೈಲ್ವೇ ಹಳಿ ಪೂತರ್ಿಗೊಳ್ಳದ ಕಾರಣ ಇಲ್ಲಿ ರೈಲುಗಳ ಸಂಖ್ಯೆಯೂ ಹೆಚ್ಚಿಲ್ಲ, ಓಡಾಟವೂ ಮಿತಿಯಲ್ಲಿದೆ. ಇಲ್ಲಿನ ನಿಲ್ದಾಣದಲ್ಲಿ ಇರುವುದು ಇಬ್ಬರೇ. ಒಬ್ಬ ಸ್ಟೇಷನ್ ಮಾಸ್ಟರ್ ಮತ್ತೊಬ್ಬ ಅವನ ಸಹಾಯಕ. ಬೆಟ್ಟದ ಬದಿಯಲ್ಲಿರೋ ಸಣ್ಣ ನಿಲ್ದಾಣದ ಹತ್ರ ನಿಂತರೆ ದೂರದಲ್ಲಿ ಶಿರಾಡಿ ಘಾಟಿ ಮಸುಕಾಗಿ ಗೋಚರಿಸುತ್ತದೆ. ಇಲ್ಲಿಂದ ಮುಂದಕ್ಕೆ ಸಿಗುವುದೇ ಎಡಕುಮೇರಿ ನಿಲ್ದಾಣ... ಸುಬ್ರಹ್ಮಣ್ಯ ದಾರಿಯಾಗಿ ಎಡಕುಮೇರಿ ನಿಲ್ದಾಣಕ್ಕೆ ಬಂದರೆ ಅಲ್ಲಿಂದ ದೋಣಿಗಲ್ ಚಾರಣವನ್ನೂ ಮಾಡಬಹುದು. ರೈಲ್ವೇ ಹಳಿ, ಕಬ್ಬಿಣದ ರೈಲ್ವೇ ಮೇಲ್ಸೇತುವೆ, ಸುರಂಗಮಾರ್ಗ, ಆಳವಾದ ಪ್ರಪಾತ, ಕೆಂಪುಹೊಳೆಯ ವೈಯ್ಯಾರ, ಅಸಂಖ್ಯ ಜಲಧಾರೆ, ಪಶ್ಚಿಮಘಟ್ಟ ಪರ್ವತ ಶ್ರೇಣಿ... ಎಲ್ಲವೂ ಹಸಿರೋ ಹಸಿರು... ಪ್ರಕೃತಿಯ ಮಡಿಲಲ್ಲಿ ಧನ್ಯರಾಗುವ ಬಯಕೆ ನಿಮಗಿದ್ದರೆ ಸರ್ವಸಿದ್ಧತೆಯೊಂದಿಗೆ `ಗ್ರೀನ್ವೇ' ಚಾರಣ ಕೈಗೊಳ್ಳಿ. ಪ್ರಕೃತಿಯ ಮಡಿಲಲ್ಲಿ ಸಖತ್ ಎಂಜಾಯ್ ಮಾಡಿ...