doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Wednesday, March 2, 2011

ಪ್ರೀತೀಲಿ ಬೀಳೋ ಮುನ್ನ...


ಹದಿಹರೆಯಕ್ಕೆ ಕಾಲಿಟ್ಟ ಪ್ರತೀ ಹೆಣ್ಣು ಅಥವಾ ಗಂಡು ಮಕ್ಕಳು ಕೂಡಾ ತನ್ನ ಸಂಗಾತಿಯ ಆಯ್ಕೆಯಲ್ಲಿ ತೊಡಗುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ನಡೆವ ದಾರಿಯಲ್ಲಿ ಎದುರಿಗೆ ಸಿಕ್ಕ ಹುಡುಗಿ ಚಂದದ ನಗೆ ಬೀರಿದರೆ ಸಾಕು, ಆಕೆ ತನಗೇ ಸೇರಬೇಕು ಎಂದು ಬಯಸೋ ಹುಡುಗರ ಸಂಖ್ಯೆಗೇನೂ ಕಮ್ಮಿಯಿಲ್ಲ. ಸಿಗೋ ಹುಡುಗೀರನ್ನು ಒಂದು ಬಾರಿ ನೋಡಿ, ಆ ಬಳಿಕ ಬಾರಿ-ಬಾರಿ ತಿರುಗಿ ನೋಡಿ ಸಾಗುವ ಹುಡುಗರ ಕಣ್ಣುಗಳು ಆಕೆಯನ್ನು ತನ್ನ ಖಾಸಗಿ ಆಸ್ತಿಯೇನೋ ಎಂಬಂತೆ ಭಾವಿಸಿ ಪ್ರೀತಿ, ಪ್ರೇಮ ಎಂದು ಹಿಂಬಾಲಿಸುವುದೂ ಇದೆ. ನಾನೀಗ ಹೇಳಹೊರಟಿರುವುದು ಹುಡುಗರ ಬಗ್ಗೆಯಲ್ಲ.

ಸದಾ ನಾಚಿಕೆಯ ಬುಗ್ಗೆಯಾಗಿ, ದೂರದಿಂದ ಹುಡುಗರನ್ನು ಕಂಡ ಕೂಡಲೇ ಕೆನ್ನೆ ಕಂಪಡರಿ ಕಣ್ಣಲ್ಲೇ ಮಾತಾಡೋ ಹುಡ್ಗೀರಿಗೂ ಒಬ್ಬೊಬ್ಬ ಹುಡುಗ ಒಂದೊಂದು ಕಾರಣಕ್ಕೆ ಇಷ್ಟವಾಗ್ತಾರೆ. ಆದ್ರೆ ಇವರಲ್ಲಿ ಶೇಕಡಾ ಐದರಷ್ಟೋ, ಹತ್ತರಷ್ಟೋ ಮಂದಿ ಖುಲ್ಲಾಂಖುಲ್ಲಾ ಆಗಿ ತಮ್ಮ ಹುಡ್ಗರನ್ನು ಆರಿಸಿದ್ರೆ, ಇನ್ನುಳಿದ ಹುಡ್ಗೀರು ತಮ್ಮ ಹುಡುಗನನ್ನು ಅಷ್ಟು ಸುಲಭವಾಗಿ ಆರಿಸೋದಿಲ್ಲ. ಆತನ ಗುಣ-ನಡತೆಗಳ ಇಂಚಿಂಚು ಅಳೆದು ತೂಗಿ ಆತ ತನಗೆ ಸಮರ್ಥನೋ, ಅಲ್ವೋ ಅಂತ ನಿರ್ಧರಿಸ್ತಾರೆ. ಇಂತಹ ಹುಡ್ಗೀರು ನಿಜವಾಗಿಯೂ ಕನಸಿನ ಹುಡ್ಗನ ಬಗ್ಗೆ ಇರಿಸುವ ಹೊಂಗನಸುಗಳೇನು ಅನ್ನೋದರ ಬಗ್ಗೆ ಒಂದು ಪುಟ್ಟ ಸಮೀಕ್ಷೆ.(ತಪ್ಪಿದ್ರೆ ಕ್ಷಮೆ ಇರಲಿ... ನಾನೇ ಮಾಡಿದ್ದು...)

ಸಾಮಾನ್ಯವಾಗಿ ಹೆಣ್ಣು ಮಕ್ಕಳು ನಾಲ್ಕು ಗೋಡೆಗಳ ನಡುವೆ ಬಂಧಿಗಳಾಗಿ, ಅಡುಗೆ ಕೋಣೆಯೇ ಪ್ರಪಂಚ ಅನ್ನೋ ಕಾಲವೊಂದಿತ್ತು. ಓರಗೆಯ ಹುಡುಗರೊಂದಿಗೆ ಚಿನ್ನಿದಾಂಡು ಆಟವಾಡುತ್ತಿದ್ದ ತುಂಡು ಲಂಗದ ಹುಡುಗಿ ದೊಡ್ಡವಳಾಗಿದ್ದಾಳೆ ಎನ್ನುವುದನ್ನು ಮನೆಮಂದಿ ನೆನಪಿಸಿದ ನಂತರವಂತೂ ಆಕೆ ಪರ್ಮನೆಂಟಾಗಿ ಮನೆಯೊಳಕ್ಕೆ ಸೇರುತ್ತಾಳೆ. ಆ ಬಳಿಕವೂ ಹುಡುಗ್ರ ಜತೆ ಸೇರಿದರೆ ಆಕೆಯ ಬಗ್ಗೆ ನಾನಾ ಬಗೆಯ ಕಮೆಂಟ್ಸ್ಗಳು ಓಣಿಯುದ್ದಕ್ಕೂ ಹರಿದಾಡುತ್ತೆ. ಅಡುಗೆಯ ಸೌಟು, ತಟ್ಟೆಗಳೇ ಆಟದ ವಸ್ತುಗಳಾಗುತ್ತೆ. ಇಂತಹ ಪರಿಸ್ಥಿತಿ ಹಿಂದಿನ ಕಾಲದ್ದಾದರೆ ಈಗ ಪರಿಸ್ಥಿತಿ ತೀರಾ ಭಿನ್ನ. ಹುಡುಗೀರು ಮೊದಲಿನಂತಿಲ್ಲ. ತೀರಾ ಮಾಡನರ್್ ಅಲ್ಲದ, ಗ್ರಾಮೀಣ ಸೊಗಡನ್ನು ಅಷ್ಟಿಷ್ಟು ಅಲ್ಲಲ್ಲಿ ಉಳಿಸ್ಕೊಂಡಿರೋ ಕರಾವಳಿ ತೀರದ ಹುಡ್ಗೀರು ಈಗ ತುಂಬಾನೇ ಬದಲಾಗಿದ್ದಾರೆ. ಹಾಗೆ ಹೇಳೋಕ್ಕೆ ಹೋದ್ರೆ ಹುಡ್ಗೀರು ಟೋಟಲ್ ಆಗಿ ಬದಲಾಗಿದ್ದಾರೆ. ತಮಗೆ ಬೇಕಾದ ಹೇರ್ಕ್ಲಿಪ್ನಿಂದ ಹಿಡಿದು ಕೈ ಹಿಡಿಯೋ ಗಂಡನವರೆಗೆ ಆಕೆ ಆಯ್ಕೆಯ ಸ್ವಾತಂತ್ರ್ಯ ಹೊಂದಿದ್ದಾಳೆ ಅಂದಮೇಲೆ ಕೇಳಬೇಕೆ? ಆಕೆ ಸ್ಮಾಟರ್್ ಆಗಿರೋ ಕಾರಣದಿಂದ ಹುಡುಗರ ದೃಷ್ಟಿಗೆ ಸಿಲುಕದೆಯೂ ಓಡಾಡಬಲ್ಲಳು. ಇಂತಹ ಹುಡುಗಿ ಬಯಸೋದಾದರೂ ಏನನ್ನು ಅನ್ನೋದನ್ನು ತಿಳಿಯೋಣ.

1. ಸಾಮಾನ್ಯವಾಗಿ ಲವ್ ಅಥವಾ ಬಾಯ್ಫ್ರೆಂಡ್ ಈ ಎರಡು ವಿಭಾಗದಲ್ಲೂ ಹೆಣ್ಣಾದವಳು ತನಗೆ ಇಷ್ಟವಾಗೋ ಹುಡುಗನ ಪರ್ಸನಾಲಿಟಿಯನ್ನು ಮೊದಲು ಗಮನಿಸುತ್ತಾಳೆ. ಉತ್ತಮ ದೇಹದಾಢ್ರ್ಯತೆ ಇರಬೇಕೆಂದು ಹುಡ್ಗೀರು ಆಸೆ ಪಟ್ಟರೂ ಸ್ಥೂಲಕಾಯರನ್ನು ಲೈಕ್ ಮಾಡಲ್ಲ. ಸದೃಢವಾಗಿ, ಆರೋಗ್ಯದಿಂದಿರುವ ಹುಡುಗರು ಬಲು ಬೇಗನೆ ಇಷ್ಟವಾಗೋದ್ರಲ್ಲಿ ಸಂಶಯವಿಲ್ಲ.

2. ಹುಡ್ಗೀರಿಗೆ ಹುಡುಗರ ಕಿರುನಗೆಯ ಶೈಲಿಯೂ ತುಂಬಾನೇ ಇಷ್ಟ. ನೀವೇ ಗಮನಿಸಿ. ಸಭೆ ಅಥವಾ ಸಮಾರಂಭದಲ್ಲಿ ಅಂದವಾಗಿ ನಗುವ ಹುಡ್ಗರನ್ನು ನೋಡಿ, `ಆತ ಎಷ್ಟು ಚೆನ್ನಾಗಿ ನಗುತ್ತಾನೆ ನೋಡೇ ಎಂದು ಹೇಳುತ್ತಾರೆ. ಇದರರ್ಥ ಹುಡುಗರ ಸುಂದರ ನಗು ಹುಡ್ಗೀರನ್ನು ಬಹುಬೇಗನೆ ಮೋಡಿ ಮಾಡಬಲ್ಲದು. ಬಾಲಿವುಡ್ ತಾರೆ ಅಕ್ಷಯ್ ಕುಮಾರ್ನನ್ನು ಅರೆಗಳಿಗೆ ನೆನಪಿಸಿಕೊಳ್ಳಿ, ಆಗ ನಿಮಗೇ ತಿಳಿಯುತ್ತದೆ.

3. ಹುಡುಗ ಅಂದವಾಗಿರಬೇಕಾದ್ದು ನಿಜ. ಬಿಳಿ, ಎಣ್ಣೆಕಪ್ಪು ಬಣ್ಣ ಹೊಂದಿದ್ದರೂ ಮುಖದಲ್ಲಿ ತೇಜಸ್ಸು ತುಂಬಿರಬೇಕೆಂದು ಆಶಿಸುವ ಹುಡುಗಿ, ಚುರುಕಾಗಿ ಕಾಣುವ, ಸದಾ ಕ್ರಿಯಾಶೀಲರಾಗಿ ಕಣ್ಣಲ್ಲೇ ನಗುವ ಹುಡುಗರತ್ತ ಬೇಗ ಆಕಷರ್ಿತರಾಗುತ್ತಾರೆ. ಅದೇ ರೀತಿ ಹುಡುಗ ಪ್ರತಿಭಾವಂತನಾಗಿದ್ದು, ಸಾಮಾನ್ಯ ಜ್ಞಾನವನ್ನು ಹೊಂದಿದ್ದರೆ ಬೇಗನೆ ಆಕಷರ್ಿಸಲ್ಪಡುತ್ತಾನೆ.

4. ಕಪಟವಿಲ್ಲದೆ ನೇರಾನೇರ ಮಾತಾಡುವ ಕಲೆ ಹೊಂದಿದ್ದರೆ ಹುಡುಗ ಬೇಗನೆ ಇಷ್ಟವಾಗುತ್ತಾನೆ. ಮನಸ್ಸಿನಲ್ಲಿ ಏನನ್ನೋ ಇರಿಸಿ, ಬೇರೇನನ್ನೋ ಹೇಳುವ ಹುಡುಗನನ್ನು ಯಾವ ಹುಡುಗಿಯೂ ಕೇರ್ ಮಾಡಲ್ಲ. ನೆಲ ನೋಡದೆ ತಲೆ ಎತ್ತಿ ಮಾತಾಡುವ ಹುಡುಗ ತನ್ನ ಜತೆ ಇರುವಾಗಲಾದರೂ ವಿಧೇಯತೆಯಿಂದ ನಡೆಯಲಿ ಎಂದು ಆಶಿಸೋರೇ ಹೆಚ್ಚು.

5. ಭಯಪಡುವ ಹುಡುಗನನ್ನು ಖಂಡಿತಾ ಹುಡುಗಿ ಮೆಚ್ಚುವುದಿಲ್ಲ. ಏನೇ ಬಂದರೂ ಆತ್ಮವಿಶ್ವಾಸ ಹೊಂದಿದ್ದರೆ ಹುಡುಗ ತನಗೆ ಒಪ್ಪಿಗೆ ಎಂದೇ ಹುಡುಗಿ ಭಾವಿಸುತ್ತಾಳೆ. ಇದು ಆಕೆಯ ಮುಂದಿನ ಬಾಳಿನ ಯೋಚನೆಯನ್ನೂ ಅವಲಂಬಿಸಿರುತ್ತದೆ.

6. ಅಭಿಮಾನ ಎನ್ನುವುದು ಪ್ರೀತಿಯ ಮತ್ತೊಂದು ಮಗ್ಗುಲು. ಹೀಗಾಗಿ ಪ್ರೀತಿ ಅಥವಾ ಸ್ನೇಹದಂತೆಯೇ ತನ್ನನ್ನು ಕಂಡಾಗ ಸೌಂದರ್ಯದ ಬಗ್ಗೆ, ಪ್ರೀತಿಯ ಬಗ್ಗೆ ಕನಿಷ್ಠ ಮೆಚ್ಚುಗೆ, ಅಭಿಮಾನವನ್ನಾದರೂ ಹೊಂದಿರಲಿ ಎಂದೇ ಹುಡ್ಗೀರು ಬಯಸುತ್ತಾರೆ. ತನ್ನ ಹಿತ, ಅಹಿತಗಳನ್ನು ಗಮನಿಸಿ ಕೇರ್ ತೆಗೆದುಕೊಳ್ಳುವ ಹುಡುಗ ಹೆಚ್ಚಿನ ಹುಡುಗಿಯರಿಗೆ ಇಷ್ಟವಾಗುತ್ತಾನೆ.

7. ದಿನನಿತ್ಯದ ಬಿಡುವಿರದ ದುಡಿಮೆಯ ವೇಳೆಯಲ್ಲೂ ತನಗಾಗಿ ಒಂಚೂರು ಟೈಮನ್ನಾದರೂ ತನ್ನ ಹುಡುಗ ಮೀಸಲಿಡಲಿ ಎನ್ನುವುದೇ ಹೆಚ್ಚಿನ ಹುಡ್ಗೀರ ಬೇಡಿಕೆ. ಮಾತು ತಪ್ಪಿ ನಡೆಯುವ, ತನ್ನನ್ನು ಬಿಟ್ಟು ಬೇರೊಬ್ಬಳ ಜತೆ ಸಲುಗೆ ತೋರಿಸುವ ಹುಡುಗರು ಅಷ್ಟಕ್ಕಷ್ಟೆ. ಆದ್ರೆ ಕೆಲವೊಮ್ಮೆ ಟೈಮ್ ಇಲ್ಲ ಎಂಬ ಸಾಮಾನ್ಯ ಸಮಸ್ಯೆಯೇ ಸಂಬಂಧದ ನಡುವೆ ಬಿರುಕು ಮೂಡಿಸಲು ಕಾರಣವಾಗುತ್ತದೆ. ಆತನ ಎಲ್ಲಾ ಗುಣಗಳನ್ನು ಆಕೆ ಮೆಚ್ಚಿ, ಅಡ್ಜಸ್ಟ್ ಆಗಿದ್ದರೂ ಇದೊಂದು ಕಾರಣ ಮಾತ್ರ ಯಾವಾಗಲೂ ಸಹಿಸಿಕೊಳ್ಳುವುದಿಲ್ಲ.

8. ಜವಾಬ್ದಾರಿ ಇರಬೇಕಾದ್ದು ಅತಿಮುಖ್ಯ. ಕುಟುಂಬ, ಮನೆಯಲ್ಲಿ, ಹೋದಲ್ಲಿ, ಬಂದಲ್ಲಿ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದರ ಮೇಲೆ ಹುಡ್ಗೀರ ಪ್ರೀತಿ ಅವಲಂಬಿತವಾಗಿರುತ್ತದೆ. ಮನೆಕೆಲಸದಲ್ಲಿ ನೆರವಾಗುವುದು, ತನ್ನನ್ನು ಪ್ರೀತಿಸಿದಂತೆ ತನ್ನ ತಾಯಿ, ತಂದೆಯೊಂದಿಗೆ ಕೂಡಾ ಗೌರವ, ಅಭಿಮಾನದಿಂದ ವ್ಯವಹರಿಸುವ ಹುಡುಗ ಹುಡುಗಿಗೆ ಇಷ್ಟವಾಗುತ್ತಾನೆ.

9. ಹೆಚ್ಚಿನ ಹುಡುಗರು ತಾವು ಹೇಳಬೇಕಾದ್ದನ್ನು ಎಲ್ಲೂ ನಿಲ್ಲಿಸದೆ ಹೇಳಿ ಹುಡುಗಿ ಬಾಯ್ತೆರೆದಾಗ ಮಾತ್ರ ಕಿವಿ ಮುಚ್ಚಿ ತಮ್ಮಷ್ಟಕ್ಕೆ ತಾವಿರುತ್ತಾರೆ. ಇದರಲ್ಲಿ ಹುಡುಗರು ಫೇಲ್ ಆದ್ರೆ ಲವ್ ಲೈಫ್ ಅರ್ಧಕ್ಕೆ ನಿಲ್ಲುತ್ತದೆ. ಕೇಳುವ ಗುಣ ಮುಖ್ಯ. ಆಕೆ ಹೇಳಿದ್ದನ್ನು ಸಮಾಧಾನದಿಂದ ಆಲಿಸಿದರೆ ಆಕೆಗೆ ಅಷ್ಟೇ ಇಷ್ಟವಾಗುತ್ತೆ ಅನ್ನೋದನ್ನು ಮರೆಯಬಾರದು.

10. ಹುಡುಗ ಎಂದರೆ ಜೋರು. ಆದರೆ ತನ್ನ ಜತೆ ಮಾತ್ರ ಆತ ಅನಗತ್ಯ ದರ್ಪ ತೋರುವುದು ಬೇಡ, ಸಾರ್ವಜನಿಕ ಸ್ಥಳಗಳಿಂದ ಹಿಡಿದು ಮನೆಯೊಳಗೆ ಕೂಡಾ ತನ್ನ ಜತೆ ನಯ, ವಿನಯದಿಂದ ನಡೆಯುವ ಹುಡುಗನನ್ನು ಹುಡುಗಿ ಅತಿಯಾಗಿ ಪ್ರೀತಿಸುತ್ತಾಳೆ. ಹುಡುಗ ತನ್ನ ಜನ್ಮತ: ಸ್ವಭಾವ ಬದಿಗಿರಿಸಿ ನವಿರು ಭಾವನೆಗಳಿಂದ ವತರ್ಿಸಿದಲ್ಲಿ ಹುಡುಗಿ ಆತನಿಗೆ ಮನಸೋಲುತ್ತಾಳೆ.

ಈ ಹತ್ತು ಸಿಂಪಲ್ ಸೂತ್ರಗಳು ಯಾವುದಾದ್ರೂ ಹುಡ್ಗಿಯನ್ನು ಪ್ರೀತಿಸ್ಲೇಬೇಕು ಅಂತ ಜಿದ್ದಿಗೆ ಬಿದ್ದಿರೋ ಹುಡುಗರು ಗಮನಿಸಬೇಕಾದ್ದು ಅವಶ್ಯ. ಇವೆಲ್ಲಾ ಗುಣಗಳು ಹುಡ್ಗರಲ್ಲಿ ಇದ್ರೆ ಅವರು ಪ್ರೀತಿಸೋಕ್ಕೂ ಲಾಯಕ್ಕು, ಪ್ರೀತಿ ಪಡೆಯೋಕ್ಕೂ ಲಾಯಕ್ಕು. ಇದರಲ್ಲಿ ಒಂದೆರಡು ಗುಣಗಳು ಮಾತ್ರ ಇದ್ರೆ ಪ್ರಯತ್ನಿಸೋದ್ರಲ್ಲಿ ತಪ್ಪಿಲ್ಲ. ಆದ್ರೆ ಒಮ್ಮೆಗೆ ಸಿಕ್ಕ ಪ್ರೀತಿ ಮತ್ತೆಂದೂ ದೂರವಾಗದು ಅನ್ನೋ ಭ್ರಮೆ ಬೇಡ. ಯಾಕೇಂದ್ರೆ ಪ್ರೀತಿ ಚೇಂಜ್ ಕೇಳುತ್ತೆ. ಕಾಲ ಬದಲಾದಂತೆ ಪ್ರೀತಿಸೋರು ಕೂಡಾ ಬದಲಾಗ್ತಾರೆ. ಪ್ರೀತಿಸಲು ಬೇಕಾಗುವ ಗುಣ, ಲಕ್ಷಣಗಳೂ ಕೂಡಾ ಬದಲಾಗುತ್ತೆ. ಎನಿವೇ... ಭಾವನೆಗಳನ್ನು ಅರಿತುಕೊಳ್ಳೋ ಹುಡುಗ-ಹುಡುಗಿ ಎಲ್ರಿಗೂ ಸಿಗಲಿ. ಆಯ್ಕೆ ಮಾತ್ರ ಜೋಪಾನವಾಗಿರಲಿ.