ಅಣ್ಣಾ... ಒಂದು ರೂಪಾಯಿ ಕೊಡಣ್ಣಾ... ಹಸಿವಾಗುತ್ತೆ...
ನಾನು ನನ್ನದೇ ಅವಸರದಲ್ಲಿ ನಡೆಯುತ್ತಿರುವಾಗ ಇಂತಹ ಕೂಗೊಂದು ಬಾರಿ ಬಾರಿ ಕೇಳುತ್ತದೆ. ಅದು ಒಂದೆರಡು ಬಾರಿಯಲ್ಲ... ಬಸ್ ನಿಲ್ದಾಣಕ್ಕೆ ಕಾಲಿಟ್ಟರೆ ಸಾಕು ಈ ಕೂಗು ನನಗೊಬ್ಬನಿಗೆ ಮಾತ್ರವಲ್ಲ... ಬಹುಷ: ಬಾಕಿ ಉಳಿದವರಿಗೂ ಈ ಕೂಗು ಕೇಳಿರುತ್ತದೆ ಎಂದು ಭಾವಿಸುತ್ತೇನೆ. ಆದರೆ ಅಂತಹ ಕೂಗು ಮಾಮೂಲಿಯಾದ್ದರಿಂದ ಯಾರೂ ಅತ್ತ ತಿರುಗಿ ನಡೆಯಲಾರರು. ನನ್ನಂತೆ ಮಾಡಲು ಬೇರೆ ಕೆಲಸವಿಲ್ಲದ ಕೆಲವರಾದರೂ ಈ ಕೂಗು ಬಂದಕಡೆ ತಿರುಗಿ ಏನೆಂದು ವಿಚಾರಿಸುತ್ತಾರೆ. ಕಿಸೆಯನ್ನು ತಡಕಾಡಿ ಸಿಕ್ಕಿದ ಬಿಡಿಗಾಸು ಇವರ ತಟ್ಟೆಗೆ ಬಿಸಾಡಿ ಮುಂದೆ ಸಾಗುತ್ತಾರೆ. ಇದನ್ನು ಕಥೆಯೆಂದು ಭಾವಿಸದಿರಿ. ಇದು ನಮ್ಮ ಮಂಗಳೂರು ಅಥವಾ ನೆರೆಯ ಉಡುಪಿ ಜಿಲ್ಲೆಯ ಪ್ರಧಾನ ಬಸ್ ತಂಗುದಾಣಗಳಲ್ಲಿ ಕಂಡು ಬರೋ ಬೀದಿ ಮಕ್ಕಳ ತೀರದ ವ್ಯಥೆ..!
ಇಂದು ಮಕ್ಕಳ ದಿನಾಚರಣೆ... ಮಕ್ಕಳನ್ನು ಒಂದು ದಿನದ ಮಟ್ಟಿಗಾದರೂ ಮಾನಸಿಕ ಕಿರಿಯಿಂದ ದೂರವಿರಿಸಿ ಅವರಲ್ಲಿ ಸ್ಫೂತರ್ಿಯ ಸೆಲೆ ತುಂಬಿಸುವ ಸಲುವಾಗಿ ಶಿಕ್ಷಣ ಸಂಸ್ಥೆಗಳು, ವಿವಿಧ ಸಾಮಾಜಿಕ ಸಂಘಟನೆಗಳು ಈ ದಿನವನ್ನು ಭಾರೀ ಗೌಜಿಯಿಂದ ಆಚರಿಸುತ್ತವೆ. ಇಂದಿನ ದಿನವಾದರೂ ಮಕ್ಕಳನ್ನು ಖುಷಿಯಿಂದ ಇರಿಸಿ, ಮಕ್ಕಳೊಂದಿಗೆ ಮಕ್ಕಳಾಟ ಆಡುತ್ತಾ ಕಾಲ ಕಳೆಯೋಣ ಅನ್ನೋದು ಶಿಕ್ಷಕರ ಅಥವಾ ಇಂತಹ ಸಂಘಟನೆಗಳ ಉದ್ದೇಶವಾಗಿರಲೂಬಹು. ಆದ್ರೆ ಈ ಹೊತ್ತಲ್ಲಿ ಪ್ರಜ್ಞಾವಂತ ನಾಗರಿಕರಾದ ನಾವು ಮೇಲಿನ ಸನ್ನಿವೇಶದ ಬಗೆ ಕಿಂಚಿತ್ತಾದರೂ ಯೋಚಿಸಲೇಬೇಕು.
ಮಕ್ಕಳು ದೇವರ ಸಮಾನ?
ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಪ್ರೀತಿ, ಅವರು ಹೋದಲ್ಲಿ ಬಂದಲ್ಲಿ ಮಕ್ಕಳ ಜೊತೆ ಬೆರೆಯುತ್ತಿದ್ದರು. ಹೀಗಾಗಿ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ ಅನ್ನೋ ಮಾತನ್ನು ಪ್ರಾಥಮಿಕ ಶಾಲೆಯಿಂದ ಇಂದಿನವರೆಗೆ ಕೇಳುತ್ತಲೇ ಇದ್ದೇವೆ. ಆದರೆ ಈ ದಿನಾಚರಣೆಯಂದು ಬೀದಿಗೆ ಬಿದ್ದ ಮಕ್ಕಳನ್ನು ಉಪಚರಿಸುವ ಕೆಲಸವನ್ನು ಯಾರಾದರೂ ಮಾಡಲು ಮುಂದಾಗುತ್ತಾರಾ ಅನ್ನೋ ಪ್ರಶ್ನೆಗೆ ನಮ್ಮಲ್ಲಿ ಉತ್ತರ ಮಾತ್ರ ಶೂನ್ಯ. ಮಕ್ಕಳು ದೇವರಿಗೆ ಸಮಾನ ಎಂದು ಮನೆಯ ಮಕ್ಕಳನ್ನು ಪ್ರೀತಿಸುತ್ತಾ, ಅವರು ಕೇಳಿದ್ದು ಸಾವಿರ ಬೆಲೆಯದ್ದಾದರೂ ಹಿಂದೆ-ಮುಂದೆ ಯೋಚಿಸದೆ ತಂದುಕೊಡುವ ನಾವುಗಳು ಅದೇ ಬೀದಿಯ ಮಕ್ಕಳನ್ನು ಕಂಡಾಗ ಮುಖ ತಿರುಗಿಸಿ ನಡೆಯುವುದೇಕೆ?
ಉಡುಪಿ ಶ್ರೀ ಕೃಷ್ಣನ ನೆಲೆವೀಡು. ಇಲ್ಲಿನ ಅಷ್ಟಮಠಗಳಲ್ಲಿ ಸಂಪತ್ತು ಉಕ್ಕಿ ಹರಿಯುತ್ತಿದೆ. ದೇವಳದ ಜಾಗವೆಂದು ಹೇಳಲಾಗುವ ಸ್ಥಳದಲ್ಲಿ ಒಂದಿಂಚೂ ಜಾಗವನ್ನು ಬಿಡದೆ ಭವ್ಯ ಕಟ್ಟಡಗಳು ಮೇಲೇರುತ್ತಿವೆ. ಇಲ್ಲಿನ ಆದಾಯ ಕೋಟಿಗೂ ಅಧಿಕ. ಹೀಗಿದ್ದರೂ ಇಲ್ಲಿಗೆ ಬೀದಿಗಳಲ್ಲಿ ಅದೇ ಹರಕು-ಮುರುಕು ಬಟ್ಟೆಯ ಸಣ್ಣಪುಟ್ಟ ಮಕ್ಕಳು ಕೈಯಲ್ಲಿ ತಟ್ಟೆ ಹಿಡಿದು ಅಣ್ಣಾ... ಎಂದು ಬೆನ್ನು ಬೀಳುತ್ತವೆ. ಇವರಿಂದ ಪಾರಾದರೆ ಸಾಕು ಎಂದು ಓಡುವ ಮಂದಿಯೆಷ್ಟೋ ಇರಬಹುದು. ಆದರೆ ತಿರುಗಿ ನಿಂತು ಇವರ ಕಷ್ಟ ಕೇಳಿದಾಗ ಮಾತ್ರ ಒಂದು ದಿನದ ಆಚರಣೆ, ಸರಕಾರದ ಸೋಗಲಾಡಿತನ, ಸಾಮಾಜಿಕ ಸಂಘಟನೆಗಳ ಹೊಣೆಗೇಡಿತನ ಮನಸ್ಸಿಗೆ ನಿಜಕ್ಕೂ ಬೇಸರ ತರಿಸದಿರದು.
ಪಾಟರ್್ ಟೈಂ ಭಿಕ್ಷಾಟಣೆ:
ಆತನ ಹೆಸರು ಹನುಮಂತ... ಸೂರ್ಯ ಮುಳುಗುವ ಹೊತ್ತು ಉಡುಪಿಯ ಹೊಸ ಸರಕಾರಿ ಬಸ್ ನಿಲ್ದಾಣಕ್ಕೊಮ್ಮೆ(ಈಗ ಹಳತಾಗಿದೆ) ನೀವು ಕಾಲಿಟ್ಟರೆ ಅಲ್ಲಿ ಎಲ್ಲಾದರೊಂದು ಕಡೆ ಕಂಬದ ಮರೆಯಲ್ಲಿ ನಿಂತು ತನ್ನ ಅಷ್ಟಿಷ್ಟು ಹರಿದ ನೀಲಿ ಚೆಡ್ಡಿಯಿಂದ ನಾಣ್ಯಗಳನ್ನು ಒಂದೊಂದಾಗಿ ತೆಗೆದು ಲೆಕ್ಕ ಮಾಡುತ್ತಿರುತ್ತಾನೆ. ಈತನನ್ನು ನೀವು ನೋಡಿದ್ದು ಗೊತ್ತಾದರೆ ಸಾಕು, ನಿಮ್ಮ ಹಿಂದೆಯೇ ಓಡಿ ಬರುತ್ತಾನೆ. ಹಣ ನೀಡದ ಹೊರತು ಆತ ನಿಮ್ಮನ್ನು ಬಿಡುವುದಿಲ್ಲ. ಅಂದಹಾಗೆ ಹನುಮಂತ ನಿರ್ಗತಿಕನಲ್ಲ. ಉಡುಪಿ ಸಮೀಪದ ದೊಡ್ಡಣಗುಡ್ಡೆಯ ಡೇರೆಯಲ್ಲಿ ತಂದೆ-ತಾಯಿ, ತಂಗಿಯ ಜೊತೆ ವಾಸ ಮಾಡುತ್ತಾನೆ. ಮೂರನೇ ಕ್ಲಾಸು ಕಲಿಯುವ ಹನುಮಂತ ಶಾಲೆಯಿಂದ ಬಂದ ಬಳಿಕ ತಾಯಿಯೇ ಭಿಕ್ಷೆ ಎತ್ತಲು ಕಳುಹಿಸುತ್ತಾಳೆ. ಕಾರಣ ಬಿಲ್ಡಿಂಗ್ ಕಾಮಗಾರಿಗಳಲ್ಲಿ ದುಡಿಯುವ ಹನುಮಂತನ ತಂದೆ ಎಂಬ ರಾಕ್ಷಸನ ಕಿರಿಕಿರಿ. ಪ್ರತೀ ರಾತ್ರಿ ಕುಡಿದು ಇದ್ದ ಹಣವೆಲ್ಲಾ ಅಲ್ಲಲ್ಲಿ ಸಂದಿಗೊಂದರಂತೆ ಇರುವ ಮಟ್ಕಾ ಅಡ್ಡೆಯಲ್ಲಿ ಕಳೆದು ಬರುವ ತಂದೆ ಎಂಬ ಪ್ರಾಣಿ ಹನುಮಂತನ ಶಾಲೆಗೆ ನಯಾಪೈಸೆ ನೀಡುವುದಿಲ್ಲವಂತೆ. ಈ ಕಾರಣಕ್ಕಾಗಿ ಭಿಕ್ಷೆ ಎತ್ತುತ್ತಿದ್ದೇನೆ ಎನ್ನುವ ಹನುಮಂತನ ದಿನವೊಂದರ ಸಂಪಾದನೆ 30ರಿಂದ 40 ರೂಪಾಯಿ. ಕಲಿತು ಏನಾಗುತ್ತೀ ಎಂದು ಕೇಳಿದರೆ, `ಅದೆಲ್ಲ ಯಾಕಣ್ಣಾ ನನ್ಗೆ ಒಂದು ರೂಪಾಯಿ ಕೊಡಿ ಎನ್ನುವ ಮುಗ್ಧ ಬಾಲಕನ ಕನಸೇ ಇಲ್ಲದ ಮಾತುಗಳು ಮನಸ್ಸಿನಾಳಕ್ಕೆ ನೇರವಾಗಿ ಈಟಿಯಂತೆ ಇರಿಯುತ್ತದೆ. ಇದು ಓರ್ವ ಹನುಮಂತನ ಕಥೆಯಲ್ಲ, ಬೀದಿಯಲ್ಲಿ ಒಮ್ಮೆ ತಿರುಗಾಡಿದರೆ ಸಾಕು ಇಂತಹ ಹತ್ತಾರು ಕಥೆಗಳು ನಮ್ಮೆದುರು ತೆರೆದುಕೊಳ್ಳುತ್ತದೆ.
ಲಕ್ಷ್ಮಿ, ಮಂಜುಳಾ, ದ್ಯಾಮವ್ವ...
ಉಡುಪಿಯ ಸಿಟಿ, ಸವರ್ಿಸ್, ಸರಕಾರಿ ಬಸ್ ನಿಲ್ದಾಣಗಳನ್ನು ತಮ್ಮ ಖಾಯಂ ನೆಲೆಯನ್ನಾಗಿ ಮಾಡಿಕೊಂಡ ಲಕ್ಷ್ಮಿ, ಮಂಜುಳಾ, ದ್ಯಾಮವ್ವರದ್ದು ಕಥೆ ಕೇಳಿದರೆ ಅಯ್ಯೋ ಪಾಪ ಅನಿಸುತ್ತದೆ. ಇವರು ಹೊರಜಿಲ್ಲೆಯ ಕೂಲಿ ಕಾಮರ್ಿಕರ ಮಕ್ಕಳು. ತಂದೆ ಕುಡಿಯಲು ದುಡ್ಡಿಗಾಗಿ ಮಕ್ಕಳನ್ನು ಭಿಕ್ಷೆ ಎತ್ತಲು ಕಳುಹಿಸುತ್ತಾನೆ. ಇವರು ಶಾಲೆಯ ಮುಖವನ್ನೇ ಕಂಡಿಲ್ಲ. ಬೆಳಗ್ಗೆದ್ದು ಬಿಡಾರದಿಂದ ಹೊರಬಿದ್ದು ಬಸ್ ನಿಲ್ದಾಣ ಸೇರಿದರೆ ಮರಳುವುದು ಕತ್ತಲಾವರಿಸಿದ ಬಳಿಕ. ಅದೆಷ್ಟೋ ಮಂದಿಯ ನಾಲಗೆಯಿಂದ ಕೇಳಬಾರದ್ದನ್ನು ಕೇಳಿಸಿಕೊಂಡು, ವಿಕೃತ ಕಾಮುಕರ ಕೆಟ್ಟ ನೋಟಕ್ಕೆ ಸಿಲುಕಿ ಈ ಮಕ್ಕಳು ಭಿಕ್ಷೆ ಬೇಡುತ್ತಲೇ ಇದ್ದಾರೆ. ದಿನವೊಂದಕ್ಕೆ ತಮ್ಮ ಖಚರ್ು ಕಳೆದು 50-60 ರೂಪಾಯಿ ಸಂಪಾದಿಸುತ್ತಾರೆ. ಆದರೆ ಇವರ ಜೋಳಿಗೆ ತುಂಬಿದ ಚಿಲ್ಲರೆ ಹಣ ಎಲ್ಲಾ ಕ್ಷಣಮಾತ್ರದಲ್ಲಿ ಸಾರಾಯಿ ಅಂಗಡಿಯದ್ದೋ, ಮಟ್ಕಾ ಅಡ್ಡೆಯದ್ದೋ ಪಾಲಾಗುತ್ತದೆ.
ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಮನೆಯ ಮಕ್ಕಳನ್ನು ಅಲಂಕರಿಸಿ ಖುಷಿಪಟ್ಟರಷ್ಟೇ ಸಾಲದು. ನಮ್ಮ ನೆರೆಮನೆಯ ಮಕ್ಕಳ ಹೊಟ್ಟೆ ತುಂಬಿದೆಯೇ, ಇಲ್ಲವೇ ಎನ್ನುವುದನ್ನು ನೋಡುವುದು ನಮ್ಮ ಕರ್ತವ್ಯವಾಗಬೇಕು. ಮಾಜಿ ಗೃಹ ಸಚಿವರ ತವರೂರಿನಲ್ಲಿ ಮಕ್ಕಳ ಭಿಕ್ಷಾಟಣೆ ನಿರಂತರ ನಡೆಯುತ್ತಲೇ ಇದೆ. ಪೊಡವಿಗೊಡೆಯನ ನಾಡಿನಲ್ಲಿ ಬೀದಿ ಮಕ್ಕಳ ಶ್ರೇಯೋಭಿವೃದ್ಧಿಗೆ ಅಷ್ಟಮಠಗಳು, ಯತಿವರ್ಯರು ಮನಸ್ಸು ಮಾಡಬೇಕು.
ಮಕ್ಕಳ ದಿನವನ್ನು ವರ್ಷಕ್ಕೊಂದು ಬಾರಿ ಆಚರಿಸಿ ಸಿಹಿತಿಂಡಿ ತಿಂದು ಸಂತಸ ಪಡುವ ನಾವುಗಳು ಬೀದಿ ಮಕ್ಕಳ ಕನಸಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಲು ಶ್ರಮಿಸಬೇಕು. ಇದಕ್ಕಾಗಿಯೇ ಸ್ಥಾಪಿತಗೊಂಡು ಸರಕಾರದ ಹಣವನ್ನು ನುಂಗಿ ನೀರು ಕುಡಿಯುವ ಎನ್ಜಿಓಗಳು ಈ ಬಗ್ಗೆ ಇನ್ನಾದರೂ ಎಚ್ಚರವಾಗಲಿ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನಿಸಲಿ. ಇದು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ. ಆದರೆ ಮಾನವ ಸಮಾಜ ಒಂದಾದಾಗ ಮಕ್ಕಳ ಭಿಕ್ಷಾಟಣೆಗೆ ಖಂಡಿತಾ ಮಂಗಳ ಹಾಡುವುದು ಸಾಧ್ಯ. ಮಕ್ಕಳ ಕೈಯಲ್ಲಿರುವ ತಟ್ಟೆ, ಹೆಗಲಲ್ಲಿರುವ ಜೋಳಿಗೆ ತೆಗೆದು ಅವರ ಬಾಳಿಗೆ ಅಕ್ಷರ ದೀವಿಗೆ ಹಚ್ಚುವವರು ನಾವಾಗೋಣ ಬನ್ನಿ...
ಲಾಸ್ಟ್ಲೈನ್: ಕಳೆಗುಂದಿದ ಮುಖ, ಕೆದರಿದ ಕೂದಲು, ಮಮತೆ, ಪ್ರೀತಿ ವಾತ್ಸಲ್ಯವರಿಯದ ಮುಗ್ಧ ಮನಸ್ಸು, ಸಪ್ಪೆ ಮೋರೆ ಹಾಕಿಕೊಂಡು ಬಂದು ಹೋಗುವವರ ಕಡೆ ಆಶೆಯ ಕಂಗಳ ದೃಷ್ಟಿ ಹರಿಸುತ್ತಾ, ಬೆನ್ನು ಬಿದ್ದು ಮುದ್ದು ಮಾತುಗಳಿಂದ ಕಾಡುವ ನತದೃಷ್ಟ ಮಕ್ಕಳಿಗೆ ಈ ದಿನದ ಶುಭಾಶಯಗಳು.