doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Tuesday, October 4, 2011

ಸಾವು-ಬದುಕಿನ ನಡುವೆ...

ಬದುಕು ಮತ್ತು ಸಾವು ಎರಡೂ ತೀರಾ ಅನಿರೀಕ್ಷಿತವೇನೋ ನಿಜ. ಆದರೆ ಇವೆರಡರ ನಡುವಿನ ಅಂತರ ಮಾತ್ರ ತೀರಾ ಕಿರಿದು ಎನಿಸಿಬಿಡುತ್ತದೆ. ನಾವು ಸಾವಿನ ತನಕ ಹೇಗೋ ಬದುಕಿದ್ದು, ಬದುಕಿಗೊಂದು ಮೌಲ್ಯ ಕಂಡುಕೊಳ್ಳಬೇಕು ಎಂದುಕೊಂಡು ಹೋರಾಟ ನಡೆಸುತ್ತಿರುತ್ತೇವೆ. ಆದರೆ ನಮ್ಮ ಬದುಕನ್ನೇ ಸಾವು ಕಸಿಯಲು ಹೊರಟರೆ...?

ಬದುಕು ಸಾವಿನ ನಡುವೆ ಇರುವುದು ಒಂದು ನಿಟ್ಟುಸಿರು, ಆಕಳಿಕೆ ಇಲ್ಲವೇ ಒಂದು ಬಡಿತ ಅಷ್ಟೇ. ಸಾವಿನ ಅಂಚಿಗೆ ಬಂದು ನಿಂತು ಹಿಂತಿರುಗಿದರೆ ನಮ್ಮವರು ಯಾರೂ ಜತೆಗಿಲ್ಲವೆಂದುಕೊಂಡಾಗ ಆಗುವ ವೇದನೆ ಇದೆಯಲ್ಲಾ... ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ಸಾವಿನ ಅಂಚನ್ನು ತಲುಪಿಯೂ `ಇನ್ನೂ ನೀನು ಬದುಕಬೇಕು, ಮರಳಿ ಹೋಗು, ಎಂದು ಭಗವಂತ ಅಜ್ಞಾಪಿಸಿದ ಬಳಿಕ ಸಾವಿನ ಮನೆಯ ಕದತಟ್ಟಿ ವಾಪಸ್ ಆಗುವುದಿದೆಯಲ್ಲಾ... ಅದು ನಿಜಕ್ಕೂ ಅವಿಸ್ಮರಣೀಯ ಅನುಭವ. ಇದನ್ನು ನೀವು ಪುನರ್ಜನ್ಮ ಎಂದುಕೊಳ್ಳಿ... ಮರುಹುಟ್ಟು ಎಂದು ಕರೆಯಿರಿ... ಆದರೆ ಇಲ್ಲಿ ಹೇಳಹೊರಟಿರುವುದು ಯಾರದ್ದೋ ಕಥೆಯನ್ನಲ್ಲ. ಎರಡು ವರುಷಗಳ ಹಿಂದೆ `ಸತ್ತೇಹೋದೆ ಎಂದು ಅರೆಕ್ಷಣ ಕಣ್ಣುಮುಚ್ಚಿ ಕನಲಿದಾಗ ನನ್ನ ಕೊನೆಯಾಯಿತೆಂದೇ ಭಾವಿಸಿದ್ದೆ.. ಆದರೆ `ಆತನಿಗೆ ಅದು ಒಪ್ಪಿಗೆಯಾಗಲಿಲ್ಲ... ಮತ್ತೆ ಬದುಕಿಸಿದ...

ಗೆಳೆಯರೇ, ಸಾವಿನ ಮನೆಯ ಕದತಟ್ಟಿ ಪವಾಡವೆನ್ನುವಂತೆ ಬದುಕಿ ಬಂದವನ ಕೊನೆಯ ಕ್ಷಣದ ತುಡಿತ ಮಾತ್ರ ಇಲ್ಲಿದೆ. ಮಹಾನವಮಿಯ ಕೊನೆಯ ದಿನದಲ್ಲಿ ನನ್ನ ಜೀವನದಲ್ಲಿ ನಡೆದ ಈ ಘಟನೆ ಇಂದಿಗೂ ನವರಾತ್ರಿ ಬಂದಾಗಲೆಲ್ಲಾ ಕಾಡುತ್ತದೆ... ಈ ಬಗ್ಗೆ ಬರೆಯಬಾರದು ಎಂದು ಮನದ ದುಡುಡಗಳನ್ನು ತಹಬಂದಿಗೆ ತಂದು ಎರಡು ವರ್ಷ ಕಳೆದೆ... ಆದರೂ ಕೈಗಳು ನನ್ನ ಮಾತು ಕೇಳುತ್ತಿಲ್ಲ. ಕೀಲಿಮಣೆಯ ಮುಂದೆ ಕುಳಿತಾಗ ಕೈಗಳು ನನ್ನ ಅರಿವಿಗೆ ಬಾರದೆ ಮುನ್ನಡೆಯುತ್ತಿವೆ.

ಅಂದು ನವರಾತ್ರಿ ಹಬ್ಬದ ಎಂಟನೇ ದಿನ. ನಾಡಿನೆಲ್ಲೆಡೆ ಆಯುಧ ಪೂಜೆಯನ್ನು ಭಾರೀ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ. ಸಾಮಾನ್ಯವಾಗಿ ಪತ್ರಕರ್ತರಿಗೆ ಹಬ್ಬ-ಹರಿದಿನಗಳ ಆಚರಣೆ, ಸಡಗರ ಅದಾವುದೂ ಇರುವುದಿಲ್ಲ. ಅವರೊಂಥರಾ ಜೀವಚ್ಛವಗಳಿದ್ದಂತೆ. ಎಲ್ಲಿ, ಏನು ಬೇಕಾದರೂ ಆಗಲಿ, ಪತ್ರಕರ್ತನಿಗೆ ಮಾತ್ರ ಆತನ ಕೆಲಸ ಮುಗಿಯುವುದೇ ಇಲ್ಲ. ಹೀಗಿರುವಾಗ ಅಂದು ನಾನೂ ಎಂದಿನಂತೆ ಕೆಲಸಕ್ಕೆ ಹೋಗಿದ್ದೆ. ಮರುದಿನ ಪ್ರೆಸ್ ಮುಚ್ಚುವ ಕಾರಣ ಕೆಲಸದ ಒತ್ತಡವೂ ಹೆಚ್ಚು. ರಾತ್ರಿ ಹನ್ನೊಂದು ಗಂಟೆಯವರೆಗೆ ಆಫೀಸಿನಲ್ಲಿದ್ದು, ಮನೆಗೆ ಹೊರಟಿದ್ದೆ. ನನ್ನ ಬಸ್ ಸ್ಟಾಪ್ ತನಕ ಗೆಳೆಯನ ಬೈಕ್ನಲ್ಲಿ ಬಂದು ನನ್ನ ಹಳೇ ಮಾಡೆಲ್ ಮಾವರ್ೆಲ್ ಅನ್ನು ಅನ್ನು ಮಧ್ಯರಾತ್ರಿಯ ಸುಮಾರಿಗೆ ಎಚ್ಚರಿಸಿದ್ದೆ. ಅದೂ ನನ್ನ ಮಿತ್ರನೇ ಆಗಿಹೋಗಿದ್ದರಿಂದ ನನ್ನ ಒಂದೇ ತುಳಿತಕ್ಕೆ ಮೇಲೆದ್ದು ಹೊರಡಲು ತಯಾರಾಗಿತ್ತು. ಆದರೆ ಹೊರಟು ಕೆಲವೇ ನಿಮಿಷಗಳಲ್ಲಿ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಕಲ್ಲಿನ ಕಂಬಕ್ಕೆ ಬಡಿದಿತ್ತು...

ಅಮ್ಮಾ... ಎನ್ನುವ ಚೀತ್ಕಾರಕ್ಕೆ ಸ್ಪಂದಿಸುವವರಾರೂ ಅಲ್ಲಿರಲಿಲ್ಲ. ಹನ್ನೆರಡು ಗಂಟೆಯ ಸ್ಮಶಾನ ನೀರವತೆಯಲ್ಲಿ ರಸ್ತೆಯಲ್ಲಿ ಎಲ್ಲರೂ ಇರಬೇಕು ಎಂದು ಊಹಿಸುವುದೂ ವಿಡಂಬನೆಯಾಗುತ್ತದೆ. ಕಣ್ಣಿಗೆ ಸಾವಿರ ನಕ್ಷತ್ರ ಹೊಳೆದಂತೆ, ಮುಖದ ಪೂತರ್ಿ ಹೊರಬರುವ ರಕ್ತ. ಎಲ್ಲೆಡೆ ಕತ್ತಲು... ಕಗ್ಗತ್ತಲು...

ಹೌದು... ನನಗೆ ಈಗಲೂ ಅಸ್ಪಷ್ಟ ನೆನಪಿದೆ. ನಾನು ಶರೀರದ ಇದ್ದ ಬಲವನ್ನೆಲ್ಲಾ ಪ್ರಯೋಗಿಸಿ ಮೇಲೇಳಬೇಕು ಎಂದು ಸಾವಿರ ಬಾರಿ ಮುಂದಾಗಿದ್ದೆ. ಆದರೆ ತಲೆ, ಹಣೆ, ಬಾಯಿ ಒಡೆದು ರಕ್ತ ಕಾರಂಜಿಯಂತೆ ಚಿಮ್ಮುತ್ತಿರುವಾಗ ಕೈಗಳು ತನ್ನಿಂತಾನೇ ಬಲ ಕಳೆದುಕೊಳ್ಳುತ್ತಿತ್ತು. ಎದ್ದು ನಿಲ್ಲಲು ಯತ್ನಿಸುವಷ್ಟರಲ್ಲಿ ಕಣ್ಗಳಿಗೆ ಗಾಢಾಂಧಕಾರ... ತಲೆಗೆ ಬಿದ್ದ ಬಲವಾದ ಏಟು ನನಗೆ ಅಷ್ಟು ಸಾವಕಾಶ ನೀಡದೆ ಉಸಿರಿನ ಜೊತೆ ಚೆಲ್ಲಾಟವಾಡುತ್ತಿತ್ತು.. ಒಮ್ಮೆ ದೀರ್ಘವಾಗಿ ಉಸಿರು ತೆಗೆದುಕೊಂಡ ಅನುಭವ... ಹೌದು... ನಾನಿನ್ನು ಬದುಕುವುದಿಲ್ಲ ಎನ್ನುವುದು ಅರಿವಾಗಿತ್ತು. ಆ ಕ್ಷಣದಲ್ಲಿ ನನ್ನಮ್ಮ ನೆನಪಾದರು. ಅತ್ತೆನೋ, ಬಿಟ್ಟೆನೋ ಎನ್ನುವುದು ನನಗಿನ್ನೂ ತಿಳಿದಿಲ್ಲ. ಯಾಕೆಂದರೆ ಹರಿಯುವ ರಕ್ತದಲ್ಲಿ ನನ್ನ ಅಳುವನ್ನು ಗುರುತಿಸುವುದು ಸಾಧ್ಯವೂ ಆಗಿರಲಿಲ್ಲ. ಇನ್ನೂ ಯಾರ್ಯಾರೋ ನೆನಪಾದರು... ಏನೇನೋ ನೆನಪಾಯಿತು... ಆ ಕ್ಷಣದಲ್ಲೂ ನನ್ನ ದೇವರು ನೆನಪಾದ... ಇನ್ನೇನು ಸಾವು ನನ್ನ ತೀರಾ ಸಮೀಪ ಬಂದು ನಿಂತಿತ್ತು. `ಬದುಕಿದ್ದು ಸಾಕು, ನಡೆ ನನ್ನೊಂದಿಗೆ ಎಂದು ಬಾರಿ-ಬಾರಿ ಕೂಗಿ ಕರೆಯುತ್ತಿತ್ತು. ಬಳಿಕ ಮತ್ತೇನೂ ನೆನಪಿಲ್ಲ... ಸುತ್ತಲೂ ಕತ್ತಲು... ಕಗ್ಗತ್ತಲ ಗೋರಿಯೊಳಗೆ ಯಾರೋ ಕನಲಿದಂತೆ... ಯಾರೋ ಹೆಸರು ಹೇಳಿ ಕೂಗಿದಂತೆ... ಕೋಣ... ಹಗ್ಗ... ಎಲ್ಲವೂ ಅಸ್ಪಷ್ಟ... ಬದುಕಿನ ಜೊತೆ ಸೆಣಸಾಡಿ ಸಾವರಿಸಿಕೊಳ್ಳಲಾರದೆ ಕಣ್ಣುಮುಚ್ಚಿದ್ದೆ...

ಇದಾಗಿ ಗಂಟೆಯೇ ದಾಟಿರಬಹುದು. ಹತ್ತಿರದಲ್ಲಿ ಯಾರೋ ನನ್ನನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದರು. ಇನ್ನೂ ಬದುಕಿದ್ದಾನೆ... ಎನ್ನುತ್ತಿದ್ದರು. ತಲೆಯ ಭಾಗದ ಏಟನ್ನು ಕಂಡು ಬೆದರಿದ ಅವರು ಮೇಲೆಬ್ಬಿಸಿದಾಗ ನನಗೆ ಎಲ್ಲಿಂದಲೋ ಮತ್ತೆ ಜೀವ ಬಂದಿತ್ತು. ನಾನೇ ಎದ್ದುನಿಂತು ಆಸ್ಪತ್ರೆಗೆ ಕರೆದೊಯ್ಯಿರಿ ಎಂದೆ... ಆದರೆ ರಸ್ತೆಯಲ್ಲಿ ಬಿದ್ದಾತ ಅಪಘಾತಕ್ಕೆ ಈಡಾಗಿರಲಿ, ಕೊಲೆಯತ್ನವೇ ಆಗಿರಲಿ... ಆಸ್ಪತ್ರೆಗೆ ಕರೆದೊಯ್ಯುವ ಧೈರ್ಯ ಯಾರಲ್ಲಿರುತ್ತೆ? ನನ್ನನ್ನು ರಿಕ್ಷಾದಲ್ಲಿ ಕರೆತಂದು ಮನೆಗೆ ಬಿಟ್ಟರು... ಮನೆಯಲ್ಲಿ ಮತ್ತದೇ ಬೊಬ್ಬೆ... ಸ್ಮಶಾನಸದೃಶ ವಾತಾವರಣ... ಆದರೂ ನನ್ನ ಮನಸ್ಸು ನೀನು ಬದುಕಬೇಕು ಎಂದು ಛಲ ಹುಟ್ಟಿಸುತ್ತಿತ್ತು. ಗೆಳೆಯನ ರಿಕ್ಷಾವನ್ನು ಕರೆದು ನಸುಕಿನ ಮೂರು ಗಂಟೆಗೆ ಆಸ್ಪತ್ರೆ ಸೇರಿದೆ ಗುಟುಕು ಜೀವ ಉಳಿಸಿಕೊಂಡು... ಆಸ್ಪತ್ರೆಗೆ ಇನ್ನೇನು ಸ್ವಲ್ಪ ದಾರಿ ಇದೆ ಎನ್ನುವಾಗಲೇ ದೇಹದ ರಕ್ತ ಖಾಲಿಯಾಗಿತ್ತು... ಎದೆ ಭಾರವಾಗಿ ಕಣ್ಣುಮುಚ್ಚಿದ್ದೆ... ಮತ್ತೆ ಪ್ರಜ್ಞೆ ಬಂದಾಗ ಬಿಳಿ ಬಟ್ಟೆ ಧರಿಸಿದವರು ಸುತ್ತಲೂ ಸೇರಿದ್ದರು. ಮುಖವನ್ನು ಉದ್ದನೆಯ ಸೂಜಿಯಿಂದ ಹೊಲಿಯುತ್ತಿದ್ದರು... ಮುಖದ ಪೂತರ್ಿ 32 ಹೊಲಿಗೆ ಹಾಕಿದ್ದರು.

ನನ್ನ ಮುಖ ನನಗೇ ನೋಡಲು ಭಯವಾಗುತ್ತಿತ್ತು. ಅಮ್ಮ, ಪಪ್ಪ, ಅಕ್ಕ, ತಂಗಿ, ಅಣ್ಣ, ಅತ್ತಿಗೆ ಎಲ್ಲರೂ ಧೈರ್ಯ ತುಂಬುತ್ತಿದ್ದರು. ಮತ್ತೆ ಮೊದಲಿನಂತಾಗುತ್ತೀಯಾ ಎಂದು ಹಾರೈಸಿದ್ದರು.

ನನ್ನ ಮುಖವನ್ನು ನೋಡುವುದಕ್ಕೂ ಅಸಹ್ಯವಾಗುತ್ತಿತ್ತು. ಭೀಕರವಾಗಿದ್ದ ಮುಖವನ್ನು ನೋಡಲು ಧೈರ್ಯ ಸಾಲುತ್ತಿರಲಿಲ್ಲ. ಆದರೂ ಆಸ್ಪತ್ರೆಯ ಶೌಚಾಲಯದಲ್ಲಿ ಕನ್ನಡಿ ಎದುರು ನಿಂತು ಮುಖವನ್ನು ನೋಡಿದ್ದೆ. ನನಗೆ ಅಳು ಬರಲಿಲ್ಲ... ವೈದ್ಯರು, ನಸರ್್ಗಳ `ಬೇಡ.. ಹೋಗಬೇಡ... ನಾವು ಜವಾಬ್ದಾರರಲ್ಲ.. ಅನ್ನೋ ಮಾತಿನ ನಡುವೆಯೂ ಒಂದೇ ದಿನ ಆಸ್ಪತ್ರೆ ವಾಸ ಪೂರೈಸಿ ಮನೆಗೆ ಹೊರಟೆ... ನಾಲ್ಕು ದಿನ ಇರು ಎಂದ ಮನೆಮಂದಿಗೆ ಇಲ್ಲಿ ಇರಿಸಿದರೆ ಸುಸೈಡ್ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿದೆ. ಅಂತೂ-ಇಂತೂ ನನ್ನ ಯಾತ್ರೆ ಮನೆ ಸೇರಿತ್ತು.

ಹದಿನೈದು ದಿನಗಳ ಕಾಲ ದಿನಕ್ಕೆ ಮೂರು ಇಂಜೆಕ್ಷನ್... ಇಪ್ಪತ್ತಕ್ಕೂ ಹೆಚ್ಚು ಮಾತ್ರೆ... ಮೂರು ಬಾರಿ ವೈದ್ಯರ ಭೇಟಿ, ಜ್ಯೂಸ್, ಬಿಸ್ಕತ್ ಇವಿಷ್ಟೇ ನನಗೆ ಗೊತ್ತಿತ್ತು. ಆಗಾಗ ಕನ್ನಡಿ ನೋಡುತ್ತಾ ಕೂರುತ್ತಿದ್ದೆ... ಆಮೇಲೆ ಮುಖದ ಕೆಲವು ಭಾಗ ಬ್ಯಾಂಡೇಜ್ ಹಾಕಿ ಆಫೀಸ್ ಹೋದೆ. ತಿಂಗಳು ಕಳೆಯುವಷ್ಟರಲ್ಲಿ ಮತ್ತೆ ಮೊದಲಿನಂತಾದೆ...

ಕೆಲವರು ಏನೋ ಯೋಚಿಸಿದ್ದರು... ಆತ ಮತ್ತೆ ಮೊದಲಿನಂತಾಗುವುದಿಲ್ಲ ಎಂದರು... ಕೊಲೆಯತ್ನ ಎಂದು ಬೊಬ್ಬೆ ಹೊಡೆದರು. ಆದರೆ ಇದಾವುದಕ್ಕೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ಈ ದಿನ ಬಂದಾಗ ಮನದ ತುಂಬಾ ದುಗುಡ... ಬೇಸರ... ಖುಷಿಯಾಗಿರಲು ಬಯಸುತ್ತೇನೆ... ಆದರೆ ನೆನಪುಗಳು ಬೆನ್ನು ಬಿಡುವುದಿಲ್ಲ... ಸಿಹಿನೆನಪುಗಳ ನಡುವೆ ಇಂಥ ಕಹಿನೆನಪುಗಳು ಇದ್ದರೆ ಜೀವನ ಚೆಂದ ಅಂತ ನಂಬಿರೋನು ನಾನು...

ಬಹುಷ: ಸಾವಿನ ಕೊನೆಯ ಕ್ಷಣವನ್ನು ನನ್ನಷ್ಟು ಹಿತವಾಗಿ ಯಾರೂ ಅನುಭವಿಸಲಿಕ್ಕಿಲ್ಲ...!!