doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Saturday, November 13, 2010

ಕಾ(ಬೇ)ಡುವ ಮುಗ್ಧ ಕನಸುಗಳು..





ಅಣ್ಣಾ... ಒಂದು ರೂಪಾಯಿ ಕೊಡಣ್ಣಾ... ಹಸಿವಾಗುತ್ತೆ...

ನಾನು ನನ್ನದೇ ಅವಸರದಲ್ಲಿ ನಡೆಯುತ್ತಿರುವಾಗ ಇಂತಹ ಕೂಗೊಂದು ಬಾರಿ ಬಾರಿ ಕೇಳುತ್ತದೆ. ಅದು ಒಂದೆರಡು ಬಾರಿಯಲ್ಲ... ಬಸ್ ನಿಲ್ದಾಣಕ್ಕೆ ಕಾಲಿಟ್ಟರೆ ಸಾಕು ಈ ಕೂಗು ನನಗೊಬ್ಬನಿಗೆ ಮಾತ್ರವಲ್ಲ... ಬಹುಷ: ಬಾಕಿ ಉಳಿದವರಿಗೂ ಈ ಕೂಗು ಕೇಳಿರುತ್ತದೆ ಎಂದು ಭಾವಿಸುತ್ತೇನೆ. ಆದರೆ ಅಂತಹ ಕೂಗು ಮಾಮೂಲಿಯಾದ್ದರಿಂದ ಯಾರೂ ಅತ್ತ ತಿರುಗಿ ನಡೆಯಲಾರರು. ನನ್ನಂತೆ ಮಾಡಲು ಬೇರೆ ಕೆಲಸವಿಲ್ಲದ ಕೆಲವರಾದರೂ ಈ ಕೂಗು ಬಂದಕಡೆ ತಿರುಗಿ ಏನೆಂದು ವಿಚಾರಿಸುತ್ತಾರೆ. ಕಿಸೆಯನ್ನು ತಡಕಾಡಿ ಸಿಕ್ಕಿದ ಬಿಡಿಗಾಸು ಇವರ ತಟ್ಟೆಗೆ ಬಿಸಾಡಿ ಮುಂದೆ ಸಾಗುತ್ತಾರೆ. ಇದನ್ನು ಕಥೆಯೆಂದು ಭಾವಿಸದಿರಿ. ಇದು ನಮ್ಮ ಮಂಗಳೂರು ಅಥವಾ ನೆರೆಯ ಉಡುಪಿ ಜಿಲ್ಲೆಯ ಪ್ರಧಾನ ಬಸ್ ತಂಗುದಾಣಗಳಲ್ಲಿ ಕಂಡು ಬರೋ ಬೀದಿ ಮಕ್ಕಳ ತೀರದ ವ್ಯಥೆ..!

ಇಂದು ಮಕ್ಕಳ ದಿನಾಚರಣೆ... ಮಕ್ಕಳನ್ನು ಒಂದು ದಿನದ ಮಟ್ಟಿಗಾದರೂ ಮಾನಸಿಕ ಕಿರಿಯಿಂದ ದೂರವಿರಿಸಿ ಅವರಲ್ಲಿ ಸ್ಫೂತರ್ಿಯ ಸೆಲೆ ತುಂಬಿಸುವ ಸಲುವಾಗಿ ಶಿಕ್ಷಣ ಸಂಸ್ಥೆಗಳು, ವಿವಿಧ ಸಾಮಾಜಿಕ ಸಂಘಟನೆಗಳು ಈ ದಿನವನ್ನು ಭಾರೀ ಗೌಜಿಯಿಂದ ಆಚರಿಸುತ್ತವೆ. ಇಂದಿನ ದಿನವಾದರೂ ಮಕ್ಕಳನ್ನು ಖುಷಿಯಿಂದ ಇರಿಸಿ, ಮಕ್ಕಳೊಂದಿಗೆ ಮಕ್ಕಳಾಟ ಆಡುತ್ತಾ ಕಾಲ ಕಳೆಯೋಣ ಅನ್ನೋದು ಶಿಕ್ಷಕರ ಅಥವಾ ಇಂತಹ ಸಂಘಟನೆಗಳ ಉದ್ದೇಶವಾಗಿರಲೂಬಹು. ಆದ್ರೆ ಈ ಹೊತ್ತಲ್ಲಿ ಪ್ರಜ್ಞಾವಂತ ನಾಗರಿಕರಾದ ನಾವು ಮೇಲಿನ ಸನ್ನಿವೇಶದ ಬಗೆ ಕಿಂಚಿತ್ತಾದರೂ ಯೋಚಿಸಲೇಬೇಕು.

ಮಕ್ಕಳು ದೇವರ ಸಮಾನ?

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಪ್ರೀತಿ, ಅವರು ಹೋದಲ್ಲಿ ಬಂದಲ್ಲಿ ಮಕ್ಕಳ ಜೊತೆ ಬೆರೆಯುತ್ತಿದ್ದರು. ಹೀಗಾಗಿ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ ಅನ್ನೋ ಮಾತನ್ನು ಪ್ರಾಥಮಿಕ ಶಾಲೆಯಿಂದ ಇಂದಿನವರೆಗೆ ಕೇಳುತ್ತಲೇ ಇದ್ದೇವೆ. ಆದರೆ ಈ ದಿನಾಚರಣೆಯಂದು ಬೀದಿಗೆ ಬಿದ್ದ ಮಕ್ಕಳನ್ನು ಉಪಚರಿಸುವ ಕೆಲಸವನ್ನು ಯಾರಾದರೂ ಮಾಡಲು ಮುಂದಾಗುತ್ತಾರಾ ಅನ್ನೋ ಪ್ರಶ್ನೆಗೆ ನಮ್ಮಲ್ಲಿ ಉತ್ತರ ಮಾತ್ರ ಶೂನ್ಯ. ಮಕ್ಕಳು ದೇವರಿಗೆ ಸಮಾನ ಎಂದು ಮನೆಯ ಮಕ್ಕಳನ್ನು ಪ್ರೀತಿಸುತ್ತಾ, ಅವರು ಕೇಳಿದ್ದು ಸಾವಿರ ಬೆಲೆಯದ್ದಾದರೂ ಹಿಂದೆ-ಮುಂದೆ ಯೋಚಿಸದೆ ತಂದುಕೊಡುವ ನಾವುಗಳು ಅದೇ ಬೀದಿಯ ಮಕ್ಕಳನ್ನು ಕಂಡಾಗ ಮುಖ ತಿರುಗಿಸಿ ನಡೆಯುವುದೇಕೆ?

ಉಡುಪಿ ಶ್ರೀ ಕೃಷ್ಣನ ನೆಲೆವೀಡು. ಇಲ್ಲಿನ ಅಷ್ಟಮಠಗಳಲ್ಲಿ ಸಂಪತ್ತು ಉಕ್ಕಿ ಹರಿಯುತ್ತಿದೆ. ದೇವಳದ ಜಾಗವೆಂದು ಹೇಳಲಾಗುವ ಸ್ಥಳದಲ್ಲಿ ಒಂದಿಂಚೂ ಜಾಗವನ್ನು ಬಿಡದೆ ಭವ್ಯ ಕಟ್ಟಡಗಳು ಮೇಲೇರುತ್ತಿವೆ. ಇಲ್ಲಿನ ಆದಾಯ ಕೋಟಿಗೂ ಅಧಿಕ. ಹೀಗಿದ್ದರೂ ಇಲ್ಲಿಗೆ ಬೀದಿಗಳಲ್ಲಿ ಅದೇ ಹರಕು-ಮುರುಕು ಬಟ್ಟೆಯ ಸಣ್ಣಪುಟ್ಟ ಮಕ್ಕಳು ಕೈಯಲ್ಲಿ ತಟ್ಟೆ ಹಿಡಿದು ಅಣ್ಣಾ... ಎಂದು ಬೆನ್ನು ಬೀಳುತ್ತವೆ. ಇವರಿಂದ ಪಾರಾದರೆ ಸಾಕು ಎಂದು ಓಡುವ ಮಂದಿಯೆಷ್ಟೋ ಇರಬಹುದು. ಆದರೆ ತಿರುಗಿ ನಿಂತು ಇವರ ಕಷ್ಟ ಕೇಳಿದಾಗ ಮಾತ್ರ ಒಂದು ದಿನದ ಆಚರಣೆ, ಸರಕಾರದ ಸೋಗಲಾಡಿತನ, ಸಾಮಾಜಿಕ ಸಂಘಟನೆಗಳ ಹೊಣೆಗೇಡಿತನ ಮನಸ್ಸಿಗೆ ನಿಜಕ್ಕೂ ಬೇಸರ ತರಿಸದಿರದು.

ಪಾಟರ್್ ಟೈಂ ಭಿಕ್ಷಾಟಣೆ:

ಆತನ ಹೆಸರು ಹನುಮಂತ... ಸೂರ್ಯ ಮುಳುಗುವ ಹೊತ್ತು ಉಡುಪಿಯ ಹೊಸ ಸರಕಾರಿ ಬಸ್ ನಿಲ್ದಾಣಕ್ಕೊಮ್ಮೆ(ಈಗ ಹಳತಾಗಿದೆ) ನೀವು ಕಾಲಿಟ್ಟರೆ ಅಲ್ಲಿ ಎಲ್ಲಾದರೊಂದು ಕಡೆ ಕಂಬದ ಮರೆಯಲ್ಲಿ ನಿಂತು ತನ್ನ ಅಷ್ಟಿಷ್ಟು ಹರಿದ ನೀಲಿ ಚೆಡ್ಡಿಯಿಂದ ನಾಣ್ಯಗಳನ್ನು ಒಂದೊಂದಾಗಿ ತೆಗೆದು ಲೆಕ್ಕ ಮಾಡುತ್ತಿರುತ್ತಾನೆ. ಈತನನ್ನು ನೀವು ನೋಡಿದ್ದು ಗೊತ್ತಾದರೆ ಸಾಕು, ನಿಮ್ಮ ಹಿಂದೆಯೇ ಓಡಿ ಬರುತ್ತಾನೆ. ಹಣ ನೀಡದ ಹೊರತು ಆತ ನಿಮ್ಮನ್ನು ಬಿಡುವುದಿಲ್ಲ. ಅಂದಹಾಗೆ ಹನುಮಂತ ನಿರ್ಗತಿಕನಲ್ಲ. ಉಡುಪಿ ಸಮೀಪದ ದೊಡ್ಡಣಗುಡ್ಡೆಯ ಡೇರೆಯಲ್ಲಿ ತಂದೆ-ತಾಯಿ, ತಂಗಿಯ ಜೊತೆ ವಾಸ ಮಾಡುತ್ತಾನೆ. ಮೂರನೇ ಕ್ಲಾಸು ಕಲಿಯುವ ಹನುಮಂತ ಶಾಲೆಯಿಂದ ಬಂದ ಬಳಿಕ ತಾಯಿಯೇ ಭಿಕ್ಷೆ ಎತ್ತಲು ಕಳುಹಿಸುತ್ತಾಳೆ. ಕಾರಣ ಬಿಲ್ಡಿಂಗ್ ಕಾಮಗಾರಿಗಳಲ್ಲಿ ದುಡಿಯುವ ಹನುಮಂತನ ತಂದೆ ಎಂಬ ರಾಕ್ಷಸನ ಕಿರಿಕಿರಿ. ಪ್ರತೀ ರಾತ್ರಿ ಕುಡಿದು ಇದ್ದ ಹಣವೆಲ್ಲಾ ಅಲ್ಲಲ್ಲಿ ಸಂದಿಗೊಂದರಂತೆ ಇರುವ ಮಟ್ಕಾ ಅಡ್ಡೆಯಲ್ಲಿ ಕಳೆದು ಬರುವ ತಂದೆ ಎಂಬ ಪ್ರಾಣಿ ಹನುಮಂತನ ಶಾಲೆಗೆ ನಯಾಪೈಸೆ ನೀಡುವುದಿಲ್ಲವಂತೆ. ಈ ಕಾರಣಕ್ಕಾಗಿ ಭಿಕ್ಷೆ ಎತ್ತುತ್ತಿದ್ದೇನೆ ಎನ್ನುವ ಹನುಮಂತನ ದಿನವೊಂದರ ಸಂಪಾದನೆ 30ರಿಂದ 40 ರೂಪಾಯಿ. ಕಲಿತು ಏನಾಗುತ್ತೀ ಎಂದು ಕೇಳಿದರೆ, `ಅದೆಲ್ಲ ಯಾಕಣ್ಣಾ ನನ್ಗೆ ಒಂದು ರೂಪಾಯಿ ಕೊಡಿ ಎನ್ನುವ ಮುಗ್ಧ ಬಾಲಕನ ಕನಸೇ ಇಲ್ಲದ ಮಾತುಗಳು ಮನಸ್ಸಿನಾಳಕ್ಕೆ ನೇರವಾಗಿ ಈಟಿಯಂತೆ ಇರಿಯುತ್ತದೆ. ಇದು ಓರ್ವ ಹನುಮಂತನ ಕಥೆಯಲ್ಲ, ಬೀದಿಯಲ್ಲಿ ಒಮ್ಮೆ ತಿರುಗಾಡಿದರೆ ಸಾಕು ಇಂತಹ ಹತ್ತಾರು ಕಥೆಗಳು ನಮ್ಮೆದುರು ತೆರೆದುಕೊಳ್ಳುತ್ತದೆ.

ಲಕ್ಷ್ಮಿ, ಮಂಜುಳಾ, ದ್ಯಾಮವ್ವ...

ಉಡುಪಿಯ ಸಿಟಿ, ಸವರ್ಿಸ್, ಸರಕಾರಿ ಬಸ್ ನಿಲ್ದಾಣಗಳನ್ನು ತಮ್ಮ ಖಾಯಂ ನೆಲೆಯನ್ನಾಗಿ ಮಾಡಿಕೊಂಡ ಲಕ್ಷ್ಮಿ, ಮಂಜುಳಾ, ದ್ಯಾಮವ್ವರದ್ದು ಕಥೆ ಕೇಳಿದರೆ ಅಯ್ಯೋ ಪಾಪ ಅನಿಸುತ್ತದೆ. ಇವರು ಹೊರಜಿಲ್ಲೆಯ ಕೂಲಿ ಕಾಮರ್ಿಕರ ಮಕ್ಕಳು. ತಂದೆ ಕುಡಿಯಲು ದುಡ್ಡಿಗಾಗಿ ಮಕ್ಕಳನ್ನು ಭಿಕ್ಷೆ ಎತ್ತಲು ಕಳುಹಿಸುತ್ತಾನೆ. ಇವರು ಶಾಲೆಯ ಮುಖವನ್ನೇ ಕಂಡಿಲ್ಲ. ಬೆಳಗ್ಗೆದ್ದು ಬಿಡಾರದಿಂದ ಹೊರಬಿದ್ದು ಬಸ್ ನಿಲ್ದಾಣ ಸೇರಿದರೆ ಮರಳುವುದು ಕತ್ತಲಾವರಿಸಿದ ಬಳಿಕ. ಅದೆಷ್ಟೋ ಮಂದಿಯ ನಾಲಗೆಯಿಂದ ಕೇಳಬಾರದ್ದನ್ನು ಕೇಳಿಸಿಕೊಂಡು, ವಿಕೃತ ಕಾಮುಕರ ಕೆಟ್ಟ ನೋಟಕ್ಕೆ ಸಿಲುಕಿ ಈ ಮಕ್ಕಳು ಭಿಕ್ಷೆ ಬೇಡುತ್ತಲೇ ಇದ್ದಾರೆ. ದಿನವೊಂದಕ್ಕೆ ತಮ್ಮ ಖಚರ್ು ಕಳೆದು 50-60 ರೂಪಾಯಿ ಸಂಪಾದಿಸುತ್ತಾರೆ. ಆದರೆ ಇವರ ಜೋಳಿಗೆ ತುಂಬಿದ ಚಿಲ್ಲರೆ ಹಣ ಎಲ್ಲಾ ಕ್ಷಣಮಾತ್ರದಲ್ಲಿ ಸಾರಾಯಿ ಅಂಗಡಿಯದ್ದೋ, ಮಟ್ಕಾ ಅಡ್ಡೆಯದ್ದೋ ಪಾಲಾಗುತ್ತದೆ.

ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಮನೆಯ ಮಕ್ಕಳನ್ನು ಅಲಂಕರಿಸಿ ಖುಷಿಪಟ್ಟರಷ್ಟೇ ಸಾಲದು. ನಮ್ಮ ನೆರೆಮನೆಯ ಮಕ್ಕಳ ಹೊಟ್ಟೆ ತುಂಬಿದೆಯೇ, ಇಲ್ಲವೇ ಎನ್ನುವುದನ್ನು ನೋಡುವುದು ನಮ್ಮ ಕರ್ತವ್ಯವಾಗಬೇಕು. ಮಾಜಿ ಗೃಹ ಸಚಿವರ ತವರೂರಿನಲ್ಲಿ ಮಕ್ಕಳ ಭಿಕ್ಷಾಟಣೆ ನಿರಂತರ ನಡೆಯುತ್ತಲೇ ಇದೆ. ಪೊಡವಿಗೊಡೆಯನ ನಾಡಿನಲ್ಲಿ ಬೀದಿ ಮಕ್ಕಳ ಶ್ರೇಯೋಭಿವೃದ್ಧಿಗೆ ಅಷ್ಟಮಠಗಳು, ಯತಿವರ್ಯರು ಮನಸ್ಸು ಮಾಡಬೇಕು.

ಮಕ್ಕಳ ದಿನವನ್ನು ವರ್ಷಕ್ಕೊಂದು ಬಾರಿ ಆಚರಿಸಿ ಸಿಹಿತಿಂಡಿ ತಿಂದು ಸಂತಸ ಪಡುವ ನಾವುಗಳು ಬೀದಿ ಮಕ್ಕಳ ಕನಸಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಲು ಶ್ರಮಿಸಬೇಕು. ಇದಕ್ಕಾಗಿಯೇ ಸ್ಥಾಪಿತಗೊಂಡು ಸರಕಾರದ ಹಣವನ್ನು ನುಂಗಿ ನೀರು ಕುಡಿಯುವ ಎನ್ಜಿಓಗಳು ಈ ಬಗ್ಗೆ ಇನ್ನಾದರೂ ಎಚ್ಚರವಾಗಲಿ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನಿಸಲಿ. ಇದು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ. ಆದರೆ ಮಾನವ ಸಮಾಜ ಒಂದಾದಾಗ ಮಕ್ಕಳ ಭಿಕ್ಷಾಟಣೆಗೆ ಖಂಡಿತಾ ಮಂಗಳ ಹಾಡುವುದು ಸಾಧ್ಯ. ಮಕ್ಕಳ ಕೈಯಲ್ಲಿರುವ ತಟ್ಟೆ, ಹೆಗಲಲ್ಲಿರುವ ಜೋಳಿಗೆ ತೆಗೆದು ಅವರ ಬಾಳಿಗೆ ಅಕ್ಷರ ದೀವಿಗೆ ಹಚ್ಚುವವರು ನಾವಾಗೋಣ ಬನ್ನಿ...

ಲಾಸ್ಟ್ಲೈನ್: ಕಳೆಗುಂದಿದ ಮುಖ, ಕೆದರಿದ ಕೂದಲು, ಮಮತೆ, ಪ್ರೀತಿ ವಾತ್ಸಲ್ಯವರಿಯದ ಮುಗ್ಧ ಮನಸ್ಸು, ಸಪ್ಪೆ ಮೋರೆ ಹಾಕಿಕೊಂಡು ಬಂದು ಹೋಗುವವರ ಕಡೆ ಆಶೆಯ ಕಂಗಳ ದೃಷ್ಟಿ ಹರಿಸುತ್ತಾ, ಬೆನ್ನು ಬಿದ್ದು ಮುದ್ದು ಮಾತುಗಳಿಂದ ಕಾಡುವ ನತದೃಷ್ಟ ಮಕ್ಕಳಿಗೆ ಈ ದಿನದ ಶುಭಾಶಯಗಳು.

Monday, July 26, 2010

ಕೋಪಿಸೋದ್ರಲ್ಲಿ ಇರೋ ಸುಖ...




ಕೋಪದಲ್ಲಿ ಇರೋ ಸುಖ..!

  • `ಕೋಪ' ಅನ್ನೋದು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿರುವ, ಮುಂಗಾರಿನ ಸಮಯದಲ್ಲಿ ಎನಿಸ್ಕೊಂಡಾಗ ಬರೋ ಸಿಡಿಲಿನಂತೆ ನಮ್ಗೆ ತೀರಾ ಚಿರಪರಿಚಿತ ಪದ. ಕರಿ ಮೋಡ ಮುಸುಕಿದಂತೆ ನಮ್ಮ ಮನಸ್ಸನ್ನು ಆವರಿಸಿ, ಮೈ ಮನದಲ್ಲಿ ಸಂಚಲನ ಉಂಟು ಮಾಡೋ ಈ ಕೋಪದ ಮಜಾ ಸವಿದವರಿಗಷ್ಟೇ ಗೊತ್ತು. ಕೋಪದ ಮಹಿಮೆ ಬಲ್ಲವರಾರೋ? ಆದ್ರೆ ಈ ಕೋಪ ಅನ್ನೋದು ಯಾಕೆ ಬರುತ್ತೆ ಅಂತ ನಾವ್ಯಾರೂ ಊಹಿಸೋದೇ ಇಲ್ಲ. ಒಂದು ವೇಳೆ ಹಾಗೆ ಊಹಿಸೋದಿಕ್ಕೆ ಕೆಲ ಕಾಲ ತೆಗೆದುಕೊಂಡ್ರೂ ಆಗ ಎಲ್ಲಿಲ್ಲದ ಕೋಪ ಬರುತ್ತೆ. ಹೀಗೆ ಕೋಪವನ್ನು ನಾನಾ ರೀತಿಯಲ್ಲಿ ವಿಂಗಡಣೆ ಮಾಡೋದೇನೋ ಸರಿ. ಆದ್ರೆ ಕೆಲವೊಂದು ಸಲ ಈ ತರದ ಕೋಪಗಳಿಂದ ಲಾಭಕ್ಕಿಂತ ನಷ್ಠವೇ ಹೆಚ್ಚು ಅನ್ನೋದು ಅಷ್ಟೇ ದಿಟ.
    ನನ್ಗಂತೂ ಆಗಾಗ ಕೆಟ್ಟ ಕೋಪ ಬರುತ್ತೆ ಸ್ವಾಮೀ... ಈ ರೀತಿ ಕೋಪ ಬಂದಾಗ ನಾನು ಮನುಷ್ಯನಾಗಿರಲ್ಲ ಅಂತ ನಮ್ಮ ಮುಂದೆ ನಿಂತ್ಕೊಂಡು ತನ್ನ ಕೋಪದ ವರ್ಣನೆ ಮಾಡೋರನ್ನ ಬೇಜಾನ್ ನೋಡಿರ್ತೀವಿ. ಆತ ತಾನೊಬ್ಬ ಮಹಾನ್ ವ್ಯಕ್ತಿ ಅನ್ನೋ ತರಾ ಫೋಸ್ ಕೊಡ್ತಾ ನಿಂತಿದ್ರೆ ನಮ್ಗೆ ಇನ್ನಷ್ಟು ಕೋಪ ಬಂದಿರುತ್ತೆ. ಈ ಕೋಪಕ್ಕೆ ಕಾರಣಾನೂ ಬೇಕಿಲ್ಲ, ಅದಕ್ಕೆ ಅದರದ್ದೇ ಆದ ನಿದರ್ಿಷ್ಠ ಸ್ವರೂಪವೂ ಇಲ್ಲ. ಹಾಗಂತ ಈ ಕೋಪಾನ ಹಾಗೆ ಸುಮ್ಮನೆ ಬಿಡೋಕ್ಕಾಗುತ್ತಾ? ಬನ್ನಿ... ಈ ಕೋಪದ ಬಗ್ಗೆ ನಾವಾದ್ರೂ ಸ್ವಲ್ಪ ಹೊತ್ತು ಹರಟೋಣ.
    ಸಾಮಾನ್ಯವಾಗಿ ಕೋಪ ಯಾವಾಗ ಬರುತ್ತೆ ಅಂತ ಹೇಳೋಕ್ಕಾಗಲ್ಲ. ಬೆಳಿಗ್ಗೆದ್ದು ಆಫೀಸಿಗೆ ಹೊರಡೋ ತಯಾರಿಯಲ್ಲಿರ್ತೀವಿ. ಆಗ ನಮ್ಗೆ ಬೇಕಿದ್ದ ವಸ್ತುಗಳು ನಮ್ಮಿಂದ ಮರೆಯಾಗಿ ಸಕಾಲದಲ್ಲಿ ಸಿಗೋದಿಲ್ಲ. ಆಗಂತೂ ಕೂಡ್ಲೇ ಕೋಪ ಬಂದ್ಬಿಡುತ್ತೆ. ಅಮ್ಮ ತಿಂಡಿ ಮಾಡಿಟ್ಟು ಹತ್ರ ತಂದು ಕೊಡೋದು ಲೇಟಾದ್ರೆ ಆಗ್ಲೂ ಕೋಪ. ತಿಂಡಿ ತಿಂದು ಅಜರ್ೆಂಟಲ್ಲಿ ವಾಚು, ಪಸರ್ು ಮರೆತು ಬಸ್ಟ್ಯಾಂಡ್ಗೆ ತೆರಳಿದ್ರೆ ಬಸ್ಸು ನಮ್ಮನ್ನೇ ಬಿಟ್ಟು ಹೋಗಿರುತ್ತೆ. ನಾವು ಬಸ್ಸು ಕಾಯ್ಬೇಕೋ? ಬಸ್ಸು ನಮ್ಮನ್ನು ಕಾಯ್ಬೇಕೋ, ತಿಳಿಯದಾಗುತ್ತೆ. ಆಗ ಅನ್ಯಾಯವಾಗಿ ಡ್ರೈವರ್ ಮಹಾಶಯ ನಮ್ಮ ಕೋಪದ ಶಾಪಕ್ಕೆ ಗುರಿಯಾಗ್ಬೇಕಾಗುತ್ತೆ.
    ಸಿಕ್ಕಿದ ಬಸ್ನಲ್ಲಿ ಅಷ್ಟಿಷ್ಟು ತೂರ್ಕೊಂಡು ಒಳ ನುಗ್ಗಿದ್ರೆ ಕಂಡಕ್ಟರ್ನ ಹಾಳು ಬೈಗುಳ ಬೇರೆ. 4 ರೂಪಾಯಿ ಟಿಕೆಟ್ಗೆ 10 ರೂ ನೀಡಿದ್ರೆ ಚಿಲ್ಲರೆ ಇಲ್ಲ ಅನ್ನೋದು ನಮ್ಮ ಕಂಡಕ್ಟರ್ಗಳ ಸ್ಟೈಲ್. ಹಿಂದಿನ ಸ್ಟಾಪ್ನಲ್ಲಿ ಯಾರೋ ಟೈಂ ಕೀಪರ್ ಪುಣ್ಯಾತ್ಮ ಬೈದಿರ್ತಾನೆ, ಅದನ್ನು ಆತ ನಮ್ಮ ಮೇಲೆ ಒಂಚೂರೂ ಬಿಡದೆ ಕಾರಿ ಬಿಡ್ತಾನೆ. ಬಸ್ನಲ್ಲಿ ಮೆಲ್ಲಗೆ ಬೈದು ಬಿಟ್ರೆ ಪರ್ವಾಗಿಲ್ಲ, ಅಂತ ಸುಮ್ಮನಿರಬಹುದು. ಆದ್ರೆ ಕಾಲೇಜು ಹುಡ್ಗೀರ ಮುಂದೆ ಬೈದ್ರೆ ನಾವು ಸುಮ್ಮನಿರ್ತೀವಾ? ಆವಾಗ್ಲೆ ನಮ್ಗೆ ಕೆಟ್ಟ ಕೋಪ ಬರೋದು. ಹೀಗೆ ಕೆಲವೊಮ್ಮೆ ನಾವು ದಿನಕ್ಕೆಷ್ಟು ಸಾರಿ ಕೋಪ ಮಾಡ್ಕೋತೀವಿ ಅಂತ ನೆನಪೇ ಆಗಲ್ಲ.
    ಆಫೀಸಿಗೆ ಹೋದ್ರೆ ಅಲ್ಲೂ ಕೋಪ. ದಿನಾಲೂ ತಲೆ ತಿನ್ನೋರು ಅವತ್ತೂ ಅದನ್ನೇ ಮುಂದುವರಿಸಿದ್ರೆ ಸಾಕು, ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಮತ್ತೆ ಮನಸ್ಸಿಗೆ ಸಮಾಧಾನ ಹೇಳಿ ಸುಮ್ಮನಾಗೋ ಹೊತ್ತಿಗೆ ಕೋಪವೇನೋ ಇಳಿದಿರುತ್ತೆ. ಆದ್ರೆ ಕೋಪ ಮಾತ್ರ ನಮ್ಮನ್ನು ಆ ದಿನ ಪೂತರ್ಿ ನಕ್ಷತ್ರಿಕನ ಹಾಗೆ ಬೆನ್ನ ಹಿಂದೆ ಬಿದ್ದು ಕಾಡ್ತಾ ಇರುತ್ತೆ. ಹೀಗೆ ಕೋಪ ಮಾಡ್ಕೊಂಡು ರಸ್ತೆ ಮೇಲೆ ನಡೆಯ್ತಾ ಇದ್ರೆ ಎದುರಿಗೆ ಸಿಗೋರೆಲ್ಲಾ ನಮ್ಮ ಕೋಪಕ್ಕೆ ಗುರಿಯಾಗ್ತಾರೆ. ಹೆಚ್ಚಿನವರು ಮನೆಗೆ ಬಂದ ಮೇಲೆ ಹೆಂಡತಿಯ ನಗು ಮುಖ ನೋಡಿಯಾದ್ರೂ ತಣ್ಣಗಾಗ್ತಾರೆ. ಅವರಿಗೆ ಗೊತ್ತಿರುತ್ತೆ, ಬಡವನ ಕೋಪ ದವಡೆಗೆ ಮೂಲ ಅಂತ. ಮನೇಲಿ ಹೆಂಡತಿಯಲ್ಲಿ ಕೋಪಿಸ್ಕೊಂಡ್ರೆ ಈಗ ಸಿಗ್ತಾ ಇರೋ ಉಪಚಾರಾನೂ ಸಿಗೋದಿಲ್ಲ, ನೆಮ್ಮದೀನೂ ಇರಲ್ಲ. ಆಕೆ ಅರೆ ಬೇಯಿಸಿದ ಬೇಯಿಸಿದ ಅಡುಗೆ ತಿಂದು ಮಲಗಿದಾಗ ಕೋಪವೆಲ್ಲಾ ಇಳಿದುಬಿಡುತ್ತೆ. ಅದಕ್ಕೆ ಬುದ್ಧಿವಂತ ಗಂಡಸರು ತಮ್ಮ ಹೆಂಡತಿಯ ಮುಂದೆ ಕೋಪ ಪ್ರದಶರ್ಿಸೋಕ್ಕೆ ಹೋಗಲ್ಲ, ಒಂದು ವೇಳೆ ಹೋದ್ರೂ ಹೆಂಡತಿಯಾದವಳು ಹೇಳ್ತಾಳೆ, `ನೀವೊಮ್ಮೆ ಮನೆಗೆ ಬನ್ನಿ' ಅಂತ. ಇದರರ್ಥ ಮನೇಲಿ ಗ್ರಹಚಾರ ಕಾದಿರುತ್ತೆ ಅಂತ ಬೇರೆ ಹೇಳ್ಬೇಕಾಗಿಲ್ಲ ತಾನೇ? ಹೆಂಡತಿ ಗಂಡನ ಕೋಪಕ್ಕೆ ಉತ್ತರ ನೀಡಲು `ರಾತ್ರಿಯಾಗ್ಲಿ, ಬೆಡ್ರೂಮ್ಗೆ ಬರ್ತಾರಲ್ವಾ... ಆಗ ವಿಚಾರಿಸ್ಕೋತೀನಿ' ಅಂತ ಮನದಲ್ಲೇ ಮಂಡಿಗೆ ತಿನ್ತಾ ಇರ್ತಾಳೆ. ಹೀಗೆ ಕೋಪ ಸವರ್ಾಂತಯರ್ಾಮಿಯಾಗಿ ಅಲ್ಲೂ, ಇಲ್ಲೂ ಎಲ್ಲೆಲ್ಲೂ ಇರುತ್ತೆ. ಇವೆಲ್ಲದಕ್ಕಿಂತ ಭಿನ್ನವಾಗಿರೋದು ಪ್ರೇಮಿಗಳ ಕೋಪ... ಸಾಮನ್ಯವಾಗಿ ಹುಸಿಮುನಿಸಿನಿಂದ ಆರಂಭವಾಗೋ ಇದು ನಂತರ ಬೃಹತ್ತಾಗಿ ಬೆಳೆದು ದೊಡ್ಡ ಜಗಳವೇ ಆಗಿ ಬಿಡುತ್ತೆ. ಆಗ ಕೆಲವರಂತೂ ಏನೇನೋ ಮಾತಾಡೋದುಂಟು ಮಾರಾಯ್ರೇ... ಕೋಪಿಸ್ಕೊಂಡಾಗ ಪ್ರೇಮಿಗಳು ಅನ್ನೋದೇ ಮರೆತು ಶತ್ರುಗಳ ತರಾ ಕಾದಾಟಕ್ಕೆ ಇಳೀತಾರೆ. ಈ ಜಗಳ ಮುಗಿಯಲು ಕಣ್ಣೀರಿನ ಧಾರೆ ಎರಡೂ ಕಡೆಯಿಂದ ಧಾರಾಕಾರವಾಗಿ ಸುರೀಬೇಕು. ಆಗ ಇಬ್ಬರಿಗೂ ಸಮಾಧಾನವಾಗಿ ದಿನದ ಕೋಪಕ್ಕೆ ಫುಲ್ಸ್ಟಾಪ್. ಕೋಪ ಮರೆತು ಕಣ್ಣಂಚು ಒದ್ದೆಯಾಗಿ ಪರಸ್ಪರ ಸ್ಸಾರಿ ಕೇಳೋದಿದೆಯಲ್ವಾ? ಅದರಷ್ಟು ಸುಮಧುರ ಕ್ಷಣ ಮತ್ತೊಂದಿಲ್ಲ ಅನ್ನೋದು ನನ್ನ ಮಾತು. ಆಗ ಪ್ರೇಮಿ ಜತೆಗಿದ್ದರಂತೂ ಹೇಳೋದೇ ಬೇಡ. ಪರಸ್ಪರ ಬಾಹು ಬಂಧನದಲ್ಲಿ ಕರಗಿ ಸಂತೈಸೋ ಆ ಕ್ಷಣ ಅವಿಸ್ಮರಣೀಯ. ಕೋಪ ಬರೋದು ಸವರ್ೆ ಸಾಮಾನ್ಯ. ಆದ್ರೆ ಆ ಕೋಪಾನ ಮರೆತು ಪರಸ್ಪರ ಸಂತೈಸೋದು ಮುಖ್ಯ. ಅದಕ್ಕೆ ನಾನು ಮೊದಲು, ಅವನು ಮೊದಲು ಎನ್ನುವ ಹಠ, ಅಹಮ್ಮಿನ ಲವಲೇಶಾನೂ ಇರ್ಬಾರ್ದು. ಹಾಗಾದಾಗ ಮಾತ್ರ ಕೋಪಿಸ್ಕೊಳ್ಳೋದು ಚೆನ್ನಾಗಿರುತ್ತೆ. ಇಲ್ಲಾಂದ್ರೆ ಕೋಪ ಮತ್ತಷ್ಟು ಜಾಸ್ತಿಯಾಗಿ ಅವಾಂತರವನ್ನೆಬ್ಬಿಸುತ್ತೆ. ಅದಕ್ಕೆ ನನ್ನಾಕೆ ಆಗಾಗ ಹೇಳ್ತಿರ್ತಾಳೆ, ಕೋಪ ಕಡಿಮೆ ಮಾಡ್ಕೊಳ್ಳಿ ಅಂತ. ಆಗ ನನ್ಗೆ ಕೆಟ್ಟ ಕೋಪ ಬರುತ್ತೆ. ಎನಿವೇ... ಕೋಪ ಮರೆತು ಮತ್ತೆ ನಗಿಸುವ ನನ್ನವಳಿಗೆ ಥ್ಯಾಂಕ್ಸ್ ಹೇಳ್ತಾ, ವಂದನೆಗಳು.

Tuesday, July 13, 2010

ಕೊಡಚಾದ್ರಿಯ ತುದಿಗೆ...











ಕೊಡಚಾದ್ರಿಯ ತುದಿಗೆ...

ಬಿಡುವಿರದ ದಿನಗಳ ನಡುವೆಯೂ ಟ್ರೆಕ್ಕಿಂಗ್ ಅಥರ್ಾತ್ ಚಾರಣ ಅಂತಂದ್ರೆ ಕಿವಿ ನಿಮಿರಿಸೋ ನಮ್ಮ ಸಮಾನ ಮನಸ್ಕ ಗೆಳೆಯರ ತಂಡ ಈ ಬಾರಿ ಟ್ರೆಕ್ಕಿಂಗ್ ಹೊರಟಿದ್ದು ಮಂಜು ಕವಿಯುವ ನಾಡಿಗೆ... ಇಬ್ಬನಿ ಹನಿಯಾಗಿ ಹನಿಯೋ ಕೊಡಚಾದ್ರಿಯ ತುದಿಗೆ...
ಕೊಡಚಾದ್ರಿ ಟ್ರೆಕ್... ಅದೂ ಬಿಡದೆ ಕಾಡೋ ಮುಂಗಾರಿನ ನಡುವೆ..! ನಿಮಗೆಲ್ಲೋ ತಲೆ ಕೆಟ್ಟಿರಬೇಕು. ಬೇಸಿಗೆ ಕಾಲಕ್ಕೆ ಅಲ್ಲಿ ಹೋಗಲು ಸರಿಯಾದ ವ್ಯವಸ್ಥೆಯಿಲ್ಲ. ರಸ್ತೆ ಬಂದ್ ಆಗಿ ಹಲವಾರು ಕಿ.ಮೀ. ದೂರ ಕಲ್ಲುಗುಡ್ಡವನ್ನೇರಿ ನಡೆದೇ ಹೋಗಬೇಕಾದ ಪರಿಸ್ಥಿತಿ ಬೇರೆ. ಹೀಗಿರುವಾಗ ಜಡಿಮಳೆಗೆ ಎದೆಯೊಡ್ಡಿ ಕೊಡಚಾದ್ರಿ ಬೆಟ್ಟವೇರುವುದುಂಟಾ... ಅಂತ ಕೊಡಚಾದ್ರಿ ಹೆಸರು ಕೇಳಿದವರೆಲ್ಲಾ ತಮಾಷೆ ಮಾಡ್ತಾ ಇದ್ರು. ಆದ್ರೂ ಹಿಡಿದ ಪಟ್ಟು ಸಡಿಲಿಸದ ನಮ್ಮ ಗೆಳೆಯರ ತಂಡ ಹೇಗಾದ್ರೂ ಸರಿ, ಅಲ್ಲಿ ಹೋಗೋಕ್ಕೆ ಮುಂಗಾರೇ ಸೂಕ್ತ. ಅದೊಂದು ನೆನಪಿನಂಗಳದಲ್ಲಿ ಮರೆಯಾಗದೆ ಉಳಿದೀತು ಅಂತಂದು ಭಾರೀ ಸಾಹಸಕ್ಕೆ ಹೊರಟಂತೆ ಹೊರಟೇ ಬಿಟ್ಟಿತು.
ಮಂಜು ಮುಸುಕಿದ ಹಾದಿ..!
ಕೊಡಚಾದ್ರಿ ಹೆಸರು ಕೇಳಲಷ್ಟೇ ಮಧುರ. ಆದರೆ ಕೊಡಚಾದ್ರಿ ತಲುಪಲು ಮಂಗಳೂರಿನಿಂದ ಅಂದಾಜು 250 ಕಿ.ಮೀ. ಸಂಚರಿಸಬೇಕು. ಮುಸ್ಸಂಜೆಯ ವೇಳೆ ಮಂಗಳೂರು ಬಿಟ್ಟು ತೆರಳಿದ ನಮ್ಮ ತಂಡ ಬೈಕ್ನಲ್ಲೇ ಸಂಚಾರ ನಡೆಸಿ ಕೊಲ್ಲೂರು ತಲುಪುವಾಗ ರಾತ್ರಿ ಹನ್ನೊಂದು ಗಂಟೆ. ಅಲ್ಲಿ ರಾತ್ರಿ ಕಳೆದು ಮುಂಜಾನೆ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ನಮ್ಮ ತಂಡ ಕೊಡಚಾದ್ರಿಯ ಚಾರಣ ಸುಖ ಅನುಭವಿಸಲು ಹೊರಟು ನಿಂತಿತ್ತು. ಆಗಿನ್ನೂ ಬೆಳಗಾಗಿರಲಿಲ್ಲ. ಹಕ್ಕಿಗಳು ಬೆಳಗಾಯಿತು ಎಂದು ಎಲ್ಲರನ್ನೂ ಎಬ್ಬಿಸುತ್ತಾ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದುವು. ಮಂಜು ಮುಸುಕಿದ ಕೊಲ್ಲೂರಿನ ಹೋಟೆಲ್ ಒಂದರಲ್ಲಿ ಹೊಟ್ಟೆ ತುಂಬಿಸಿ ಹೊರಟಾಗ ಚುಮುಚುಮು ಚಳಿ ಬೇರೆ ನಮ್ಮ ಜತೆಯಾಗಿತ್ತು. ಕೊಲ್ಲೂರು ದೇವಳದ ಎಡಭಾಗದಲ್ಲಿ ಬಲಕ್ಕೆ ತಿರುಗಿದಲ್ಲಿ ಕೊಡಚಾದ್ರಿಗೆ ಹೋಗುವ ರಸ್ತೆ ಸಿಗುತ್ತದೆ.
ಸುಮಾರು 13 ಕಿ.ಮೀ. ಬೈಕ್ನಲ್ಲಿ ಸಂಚರಿಸುವ ಮಜಾನೇ ಬೇರೆ. ಮಂಜು ತಬ್ಬಿದ ಹಸಿರು ಕಾನನದ ನಡುವೆ ಸಂಚರಿಸುವಾಗ ಎದುರಿನ ಬೈಕ್ ಕ್ಷಣಮಾತ್ರ ಕಾಣದಾಗುತ್ತದೆ. ಹಚ್ಚ ಹಸಿರಿನ ಕಂಬಳಿ ಹೊದ್ದು ನಿಂತು ಕಂಗೊಳಿಸುವ ಕೊಡಚಾದ್ರಿಯ ತಪ್ಪಲು ಪ್ರದೇಶ ಕಣ್ತುಂಬಿಕೊಳ್ಳಲು ಮಳೆಗಾಲವೇ ಸಕಾಲ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಸುತ್ತಲೂ ಕೊಲ್ಲೂರು ಮೂಕಾಂಬಿಕಾ ರಕ್ಷಿತಾರಣ್ಯ, ನಡುವೆ ಕಪ್ಪಗೆ ಮಿರಮಿರನೆ ಹೊಳೆಯುವ ಟಾರು ರಸ್ತೆ, ರಸ್ತೆಯ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದರೆ ಹಾಲ್ನೊರೆಯಂತೆ ಬಳುಕುತ್ತಾ ಮೇಲ್ಗಡೆಯಿಂದ ಧುಮ್ಮಿಕ್ಕುವ ಜಲಧಾರೆ, ಕಾಡುಬಾಳೆ, ಕಾಡು ಹಲಸಿನ ಮರಗಳು ಇವನ್ನೆಲ್ಲಾ ನೋಡುತ್ತಿದ್ದರೆ ಪ್ರಕೃತಿಯ ಮಡಿಲಿನಲ್ಲಿ ನಿಜಕ್ಕೂ ಧನ್ಯತಾಭಾವ ಮೂಡುತ್ತದೆ.
ಕರಕಟ್ಟ ಎಂಬಲ್ಲಿ ರಸ್ತೆಯ ಬದಿಯ ಫಲಕವೊಂದು ಕೊಡಚಾದ್ರಿಗೆ 10ಕಿ.ಮೀ. ಎಂದು ಸೂಚಿಸುತ್ತದೆ. ಇಲ್ಲಿಂದ ಮುಂದೆ ಬೈಕ್ನಲ್ಲಿ ಅರ್ಧ ಕಿ.ಮೀ. ಸಾಗುವ ಸಾಹಸವೇನೋ ಮಾಡಬಹುದು. ಆದ್ರೆ ಬೈಕ್ ಟಯರ್ಗಳ ಗ್ಯಾರಂಟಿ ಹೇಳಲಾಗದು. ಯಾಕೆಂದರೆ ಅಲ್ಲಲ್ಲಿ ರಸ್ತೆಗಡ್ಡವಾಗಿ ಬೃಹತ್ ಗಾತ್ರದ ಸಾಗುವಾನಿ, ಬೀಟೆ ಮರಗಳು ನೆಲಕ್ಕುರುಳಿರುತ್ತವೆ. ಕಲ್ಲು, ಮಣ್ಣಿನ ದಿಣ್ಣೆಯನ್ನು ಒಳಗೊಂಡ ಏರು ರಸ್ತೆಯಲ್ಲಿ ಸಾಗುವುದು ಅಸಾಧ್ಯವೂ ಹೌದು. ಈ ಕಾರಣಕ್ಕಾಗಿ ನಮ್ಮ ತಂಡ ಬೈಕ್ ನಿಲ್ಲಿಸಿ ಕೆಳಕ್ಕಿಳಿಯಲೇಬೇಕಾಯಿತು.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಚಾರಣ ಕೈಗೊಳ್ಳುವ ಚಾರಣಿಗರಿಗೆ ಸಾಮಾನ್ಯವಾಗಿ ಇಂಬಳದ ಪರಿಚಯವಿದ್ದೇ ಇರುತ್ತದೆ. ಇದಕ್ಕೆ ಉಂಬಳ, ತುಳುವಿನಲ್ಲಿ ಉಂಬುರು ಎಂದೆಲ್ಲಾ ಕರೆಯುತ್ತಾರೆ. ಬೈಕ್ನಿಂದ ಕೆಳಗಿಳಿದದ್ದೇ ನಮಗೆ ಸ್ವಾಗತ ಕೋರಿದ್ದು ರಾಶಿ ರಾಶಿ ಇಂಬಳಗಳು. ನಮ್ಮ ರಕ್ತ ಹೀರಲೆಂದೇ ದಾಹಗೊಂಡು ಕಾದು ನಿಂತ ರಕ್ಕಸನ ರೀತಿ ಒಮ್ಮೆ ಭಾಸವಾಯಿತು. ಎಲ್ಲಿಂದಲೋ ಓಡೋಡಿ ಬಂದು ಕಾಲಿನ ಮೇಲೆ ಹತ್ತಿ ಕ್ಷಣದಲ್ಲಿ ರಕ್ತ ಹೀರಿ ನೇತಾಡುವ ಇಂಬಳಗಳ ಪರಿಚಯ ಮೊದಲೇ ಇದ್ದುದರಿಂದ ನಾವು ಆದಷ್ಟು ಜಾಗ್ರತೆ ವಹಿಸಿದ್ದೆವು. ಆದರೂ ಬೆಂಬಿಡದ ಇಂಬಳ ರಕ್ತ ಹೀರಿ ಹಿಗ್ಗಿದಾಗ ಅಯ್ಯೋ... ಬೆಲೆಬಾಳುವ ರಕ್ತವನ್ನು ಯಾರಿಗಾದರೂ ದಾನವಾದ್ರೂ ಮಾಡಬಹುದಿತ್ತು ಅನ್ನಿಸಿತ್ತು.
ಅರೆಕ್ಷಣ ನಿಂತರೆ ಕಾಲಿಗೆ ಮುತ್ತಿಕೊಳ್ಳುವ ಇಂಬಳ, ಏರು ಹಾದಿಯಲ್ಲಿ ಏದುಸಿರು ಬಿಡುತ್ತಾ ಸಂಚಾರ, ಇವೆಲ್ಲದರ ನಡುವೆ ದಣಿವನ್ನು ಮರೆಸೋ ದಟ್ಟವಾದ ಕಾನನದ ನಡುವೆ ಚಾರಣ ನಡೆಸೋದು ಸುಲಭವಲ್ಲ ಅಂತ ಗೊತ್ತಾಗಿದ್ದು ಆ ವೇಳೆಗೇ. ಮಳೆರಾಯ ಆಗೊಮ್ಮೆ ಈಗೊಮ್ಮೆ ಕೊಂಚ ಬಿಡುವು ಕೊಟ್ಟು ಮತ್ತೆ ತನ್ನ ಕೆಲಸ ಮಾಡುತ್ತಿದ್ದ. ಜಕರ್ಿನ್ ತೊಟ್ಟರೂ ಪೂತರ್ಿ ನೆನೆಯುವ ಜಡಿಮಳೆಗೆ ಸುಮಾರು 3 ಕಿ.ಮೀ. ಸಂಚರಿಸಿದರೆ ಮಳಯಾಲಿ ಟೀ ಶಾಪ್ ಸಿಗುತ್ತದೆ. ಬೆಟ್ಟದ ನಡುವೆ ಒಂಟಿಯಾಗಿ ಟೀ ಶಾಪ್ ತೆರೆದು ಕಷ್ಟಗಳಿಗೆ ಮೈತೆರೆದು ವನ್ಯಜೀವಿಗಳ ಜತೆ ಬದುಕುವ ಮಳಯಾಲಿ ಟೀ ಶಾಪ್ ಮಾಲಕ ನಮಗೆಲ್ಲಾ ಟೀ ವಿತರಿಸಿದ. ಅಲ್ಲಿಯೇ ಇಂಬಳವನ್ನು ಯಾಮಾರಿಸುವ ಸುಣ್ಣದ ಉಂಡೆ ಹಿಡಿದುಕೊಂಡ ನಮ್ಮ ತಂಡ ಮತ್ತೆ ಚಾರಣ ಮುಂದುವರಿಸಿತು.
ಆನಂತರದ ಚಾರಣ ನೆನೆಸಿದಂತಿರದೆ ರುದ್ರ ರಮಣೀಯವಾಗಿತ್ತು. ಕೊಡಚಾದ್ರಿಯ ಶಿಖರ ದೂರದಿಂದಲೇ ಕೈ ಬೀಸಿ ಕರೆಯುತ್ತಿತ್ತು. ಕಲ್ಲಿನ ಕಡಿದಾದ ದುರ್ಗಮ ಹಾದಿಗಳಲ್ಲಿ ಸಾಗುತ್ತಿರಬೇಕಾದರೆ ಪ್ರಕೃತಿಯ ರಮ್ಯ ಪ್ರಪಂಚ ಕಣ್ಮುಂದೆ ಬಂದು ನಿಲ್ಲುತ್ತದೆ. ಕೊಂಚ ವಿರಮಿಸೋಣ ಎಂದರೆ ಇಂಬಳಗಳು ನಾವೂ ಬರ್ತೀವಿ ಅಂತ ಜತೆಯಾಗ್ತಾ ಇತ್ತು. ಮಂಜು ಮುಸುಕಿದ ಮೂರು ದಟ್ಟವಾದ ಅರಣ್ಯವನ್ನು ದಾಟುವಾಗ ನಮ್ಮ ತಂಡ ಸುಸ್ತೋ ಸುತ್ತು. ಅಂತೂ ಇಂತು ಕೊಡಚಾದ್ರಿ ಗಿರಿ ಏರಿದೆವು ಅಂದಾಗ ಗೈಡ್ ಚಂದ್ರ ಜತೆಯಾಗಿ, ಸರ್ವಜ್ಞ ಪೀಠಕ್ಕೆ ಇನ್ನೂ 3 ಕಿ.ಮೀ. ಹೋಗಬೇಕು ಅಂದಾಗ ಮಳೆಯಲ್ಲಿ ಹೋಗೋದು ಹೇಗಪ್ಪಾ ಅನ್ನಿಸಿದ್ದು ಸಹಜ.
ಧ್ಯಾನಸ್ಥ ಸರ್ವಜ್ಞನಿಗೊಂದು ಪೀಠ
ಸರ್ವಜ್ಞ ತನ್ನ ಹೊನ್ನಿನಂತಹ ನುಡಿಮುತ್ತುಗಳ ಮೂಲಕ ಜನರ ಬಾಯಲ್ಲಿ ನಿತ್ಯ ಹರಿದಾಡುತ್ತಿದ್ದರೆ ಕೊಡಚಾದ್ರಿಯ ನೆತ್ತಿಯ ಮೇಲೆ ಧ್ಯಾನಸ್ಥನಾಗಿದ್ದಾನೆ. ಪ್ರಪಂಚದ ಅಂಕುಡೊಂಕುಗಳನ್ನು ತನ್ನ ವಚನಗಳ ಮೂಲಕ ತಿದ್ದಿದ ಮಹಾಶಿಲ್ಪಿ ಸರ್ವಜ್ಞ ಪ್ರಕೃತಿಯ ನಡುವೆ ಮಗುವೇ ಆಗಿದ್ದಾನೆ. ಸರ್ವಜ್ಞನ ಪೀಠಕ್ಕೊಂದು ಸುತ್ತು ಬಂದು ತಲೆಬಾಗಿಸಿ ವಂದಿಸಿದ ನಮಗೆ ಚಾರಣಕ್ಕೊಂದು ಅರ್ಥ ಕಂಡುಕೊಂಡ ಧನ್ಯತೆ. ಸಮುದ್ರ ಮಟ್ಟದಿಂದ ಸುಮಾರು 1400 ಅಡಿ ಎತ್ತರದಲ್ಲಿ ನಿಂತು ಇಡೀ ಲೋಕದ ಸೌಂದರ್ಯ, ಪ್ರಕೃತಿಯ ಚೆಲುವು ನೋಡುತ್ತಿದ್ದರೆ ಸಮಯ ಕಳೆದುದು ತಿಳಿಯದು. ಕೊರೆಯುವ ಚಳಿ, ವೇಗವಾಗಿ ಬಡಿಯುವ ಮಳೆಹನಿ, ಜೋರಾದ ಗಾಳಿ, ಮುತ್ತಿಕ್ಕುವ ಮಂಜಿನ ನಡುವೆ ಕೊಡಚಾದ್ರಿ ಮಾನ್ಸೂನ್ ಟ್ರೆಕ್ ನಿಜಕ್ಕೂ ವಣರ್ಿಸಲಸದಳ ಅನುಭವ.
ಕೊಡಚಾದ್ರಿ ಇಳಿದು ಭಟ್ಟರ ಮನೆ ವೀಕ್ಷಿಸಿ, ಹುಲಿರಾಯ ದೇವನಿಗೆ ನಮಸ್ಕರಿಸಿ ಚಂದ್ರ ಅವರ ಪುಟ್ಟ ಮನೆಯಲ್ಲಿ ಊಟ ಮುಗಿಸಿ ಸಂಜೆ 4 ಗಂಟೆಗೆ ಬೆಟ್ಟ ಇಳಿಯಲು ತೊಡಗಿದ ನಮಗೆ ಏನೋ ಕಾಲು ನಿಂತಲ್ಲಿ ನಿಲ್ಲದೆ ಬಲ ಕಳೆದುಕೊಂಡು ನಡುಗುತ್ತಿತ್ತು. ಜೋರಾದ ಮಳೆಯಲ್ಲಿ ಮತ್ತೆ ಎರಡು ಗಂಟೆ ಚಾರಣ ಮುಗಿಸಿ ಹಿಂತಿರುಗಿ ಬೈಕ್ ಏರುವಾಗ ದೂರದಲ್ಲಿ ಕೊಡಚಾದ್ರಿ ತಲೆ ಎತ್ತಿ ನಿಂತಿತ್ತು. ಕೊಡಚಾದ್ರಿಯಿಂದ ಕೊಲ್ಲೂರಿಗೆ ಮತ್ತದೇ ಮುಸ್ಸಂಜೆಯ ಮಬ್ಬು ಕತ್ತಲಿನಲ್ಲಿ ಸಂಚಾರ ಬೆಳೆಸಿದ ನಮಗೆ ಏನೋ ಕಳೆದುಕೊಂಡ ದು:ಖ, ಹಾಗೇ ಏನೋ ಸಾಧಿಸಿದ ಸುಖ ಹೆಜ್ಜೆಹೆಜ್ಜೆಗೆ ಕಾಡುತ್ತಿತ್ತು.

Saturday, June 5, 2010

ನನ್ನ ಇಷ್ಟ...











ಫಲಕ ಪುರಾಣಗಳು..!


ಫಲಕ ಪುರಾಣಗಳು...
ಎದುರು ನೋಡಿಕೊಂಡು ನಡೆಯಿರಿ... ಮುಂದಕ್ಕೆ ಉಬ್ಬು ತಗ್ಗುಗಳಿವೆ.
ಏನ್ರೀ ಹಾಗೆ ನೋಡ್ತಾ ಇದ್ದೀರಾ..? ನವು ಇದನ್ನು ಅಪಾರ್ಥ ಮಾಡ್ಕೋಬೇಕಾಗಿಲ್ಲ. ಇದೊಂದು ರಸ್ತೆ
ಬದಿ ಸಿಗೋ ಸಾಮಾನ್ಯ `ಫಲಕದ ಒಕ್ಕಣೆ ಅಷ್ಟೇ. ಇದರಲ್ಲಿ ಬರೆದಿರೋ ಪದಗಳನ್ನು ಯಾರಾದ್ರೂ ಅಪಾರ್ಥ ಮಾಡ್ಕೊಂಡು ಓದಿದ್ರೆ ನಾನೇನೂ ಮಾಡೋಕ್ಕಾಗಲ್ಲ. ಇಂತಹ ಫಲಕಗಳನ್ನು ಅದೆಷ್ಟೋ ನಾವು
ನಮ್ಮಗಳ ಲೈಪಲ್ಲಿ ನೋಡಿರ್ತೀವಿ. ಕೆಲವೊಮ್ಮೆ ನಮ್ಗೆ ಈ ಫಲಕಗಳನ್ನು ಎಷ್ಟು ಹೊತ್ತು ಓದಿದ್ರೂ ಅದರ ಅರ್ಥ ಮಾತ್ರ ತಿಳಿಯೋದೇ ಇಲ್ಲ. ಫಲಕಗಳು ಅನ್ನೋ ಪದ ನಮಗೆ ಹೊಸದೇನೂ ಅಲ್ಲ. ಜಾಹೀರಾತು ಫಲಕಗಳು, ಎಚ್ಚರಿಕೆ ಫಲಕಗಳು ಇವೆಲ್ಲಾ ಜನರನ್ನು ಸುಲಭವಾಗಿ ಸೆಳೆಯುತ್ತೆ ಅಂತ ಅಂತ ನಾನು ನಂಬ್ಕೊಂಡಿದ್ದೀನಿ.
ನನ್ಗಂತೂ ಎಲ್ಲಿಗೆ ಹೋಗ್ತಾ ಇದ್ರೂ ಈ ಎಚ್ಚರಿಕೆ ಫಲಕಗಳು ಕಣ್ಣಿಗೆ ರಾಚುತ್ತದೆ. ದಿನದ ಕೆಲಸ ಮುಗಿಸಿ ಮಂಗ್ಳೂರಲ್ಲೊಂದು ಸುತ್ತು ಹಾಗೆ ಸುತ್ತಾಡೋಣ ಅಂತ ಹೊರಟ್ರೆ ಸಾಕು ಮಾರಾಯ್ರೇ... ಈ ಫಲಕಗಳನ್ನು ನಾನು ನೋಡದೇ ಇದ್ರೂ ಅವೇ ಕಣ್ಮುಂದೆ ಬಂದು ನಿಂತಂತೆ ಭಾಸವಾಗುತ್ತೆ. ಈ ಫಲಕಗಳನ್ನು ಓದೋದ್ರಲ್ಲಿ ಇರೋ ಆನಂದ ನಿಮ್ಗೇನು ಗೊತ್ತು ಬಿಡಿ. ಹಾಗಂತ ನಾನೊಬ್ಬ `ಫಲಕ ಪ್ರೇಮಿ ಇರೋದು ಅಂತಾ ತಿಳಿಯೋದೇನೂ ಬೇಡ.
ನನ್ನ ದಿನಚರಿ ಆರಂಭವಾಗೋದೇ ಈ ಫಲಕಗಳಿಂದ... ಮುಂಜಾನೆಗೆ ಇನ್ನೂ ಒಂದರೆಗಳಿಗೆ ಇದೆ ಅನ್ನೋವಾಗ ಬಸ್ಸು ಹತ್ತಿ ಸೀಟುಗಳೇನಾದ್ರೂ ಖಾಲಿ ಇವೆಯಾ ಅಂತ ಒಳಗಡೆ ನೋಡಿದ್ರೆ ಕೆಲವೊಂದು ಸೀಟುಗಳು ಖಾಲಿ ಇರುತ್ತೆ. ಆದ್ರೆ ಅಲ್ಲಿ ಕುಳಿತ್ಕೊಳ್ಳೋಕೆ ಈ ಹಾಳು ಫಲಕಗಳು ಅಡ್ಡ ಬರುತ್ತೆ. ಆರ್.ಟಿ.ಓ.ದವ್ರು `ಮುಂದಿನ ನಾಲ್ಕು ಸೀಟು ಮಹಿಳೆಯರಿಗೆ ಮೀಸಲು ಅಂತ ದಪ್ಪ ಅಕ್ಷರದಲ್ಲಿ ಬರೆದಿದ್ದು ದೂರದಿಂದಲೇ ಕಾಣುತ್ತೆ. ಪರವಾಗಿಲ್ಲ ಮಹಿಳಾಮಣಿಗಳು ಬಂದಾಗ ಎದ್ದು ನಿಂತ್ಕೋಬಹುದು ಅಂತ ಕುಳಿತುಕೊಳ್ಳೋಕೆ ಹೋದ್ರೆ, ಬದಿಯಲ್ಲಿ ಕುಳಿತ ನಾರೀಮಣಿಯೊಂದು ವಾರೆಗಣ್ಣಿನಲ್ಲಿ ಸಂಶಯ ವ್ಯಕ್ತ ಪಡಿಸುತ್ತೆ. ಇದರ ಸಹವಾಸವೇ ಬೇಡ,
ಅಂತ ಆ ಕಡೆ ನೋಡಿದ್ರೆ ಅಲ್ಲಿ `ಅಂಗವಿಕಲರಿಗೆ ಮಾತ್ರ ಅಂತ ಬೋಡರ್ು ಬೇರೆ. ನಮ್ಮೂರ
ಬಸ್ಸಿನಲ್ಲಿ ಕೆಲವು ಕುಚೇಷ್ಟಿಗಳು `ಅಂಗವನ್ನು ಸ್ವಲ್ಪ ಓರೆಕೋರೆ ಮಾಡಿ `ಲಂಗ `ಲಿಂಗ ಅಂತ ತಿದ್ದಿದ್ದು ಅದು ಈಗ್ಲೂ ಹಾಗೇ ಇದೆ. ನನ್ ಪ್ರಕಾರ ಈ ಹಾಳು ಬಸ್ಸಿನಲ್ಲಿ ಮಹಿಳೆಯರಿಗೆ, ಅಂಗವಿಕಲರಿಗೆ ಪ್ರತ್ಯೇಕಾಸನ ಇರುವಂತೆಯೇ ಕಾಲೇಜು ಹುಡ್ಗೀರಿಗೆ, ಮದುವೆಯಾದವರಿಗೆ, ಪ್ರೇಮಿಗಳಿಗೆ, ಮಗು ಇರೋರಿಗೆ ಪ್ರತ್ಯೇಕಾಸನವನ್ನು ಇಟ್ಟು ಫಲಕ ಬರೆಯ್ಬೇಕು. ಬಸ್ಸಿಂದ ಇಳಿದು ನಡೆದು ಹೋಗ್ತಾ ಇರ್ಬೇಕಾದ್ರೆ ಮನೆಗಳ ಮುಂದೆ ದೊಡ್ಡದಾದ ಫಲಕ `ಇಲ್ಲಿ ಕಚ್ಚುವ ನಾಯಿಗಳಿವೆ... ಎಚ್ಚರಿಕೆ ಆದ್ರೆ ನಾಯಿಯ ಬೊಗುಳುವಿಕೆ ಮಾತ್ರ ಕೇಳಲ್ಲ. ಮನೆಯ ಯಜಮಾನನ ಕೈಯಲ್ಲೊಂದು ಬೆಕ್ಕಿನ ಗಾತ್ರದ ನಾಯಿಮರಿ. ಇದು ಬೊಗಳುತ್ತೋ, ಕಚ್ಚುತ್ತೋ ದೇವರಿಗೇ ಗೊತ್ತು.
ಇಂತಹ ಫಲಕಗಳು ನಮ್ಮಲ್ಲಿ ಬೇಕಾದಷ್ಟು ಕಡೆ ಕಾಣಸಿಗುತ್ತೆ. ರಸ್ತೆ ಬದಿ ನಡೆದುಕೊಂಡು ಹೋಗ್ತಾ ಇದ್ರೆ ನಮ್ಮನ್ನು ಎಚ್ಚರಿಸುವ ಫಲಕಗಳ ಸಾಲು ಸಾಲು ಕಾಣಸಿಗುತ್ತದೆ. ದೊಡ್ಡ ಅಂಗಡಿಯ ಮುಂದೆ `ವಾಹನ ಪಾಕರ್ಿಂಗ್ ನಿಷೇಧಿಸಲಾಗಿದೆ ಎಂದು ಬರೆದಿದ್ದರೂ ವಾಹನಗಳ ದಂಡೇ ನೆರೆದಿರುತ್ತೆ. ಹೊಟೇಲ್ನಲ್ಲಿ `ಹೊರಗಿನ ತಿಂಡಿಗಳಿಗೆ ನಿಷೇಧವಿದೆ ಎನ್ನುವ ಫಲಕಗಳು ಇರುವುದುಂಟು. ಹೊಟೇಲ್ಗೆ ಹೋಗೋದೇ ಏನಾದ್ರೂ ತಿನ್ನೋದಕ್ಕೆ, ಹೀಗಿರುವಾಗ ಹೊರಗಿನ ತಿಂಡಿಯನ್ನು ಒಳಗೆ ಕೊಂಡ್ಹೋಗಿ ತಿನ್ನುವ ಜರೂರತ್ತಾದರೂ ಏನು? ಅನ್ನೋದಕ್ಕೆ ಉತ್ತರಿಸೋರು ಯಾರು?
ದೇವಸ್ಥಾನದ ಹೊರಗಡೆ ಫಲಕದಲ್ಲಿ `ಚಪ್ಪಲಿ ಬಿಟ್ಟು ಹೋಗಿ ಅಂತ ಬರೆದಿತರ್ಾರೆ. ಅದರರ್ಥ ಚಪ್ಪಲಿ ಇಲ್ಲೇ ಬಿಟ್ಟು ಹೋಗಿ ಅನ್ನೋದರ ಅರ್ಥ ಪಾದಯಾತ್ರೆ ಮಾಡಿ ಮನೆಗೆ ಬಂದಾಗ ಅರಿವಾಗುತ್ತೆ. ನಾವು ಚಪ್ಪಲಿ ಬಿಟ್ಟು ಹೊಗುವಾಗ, ಕೊಂಡು ಹೋಗುವವನೂ ತಯಾರಿರುತ್ತಾನೆ. ಇಷ್ಟಕ್ಕೇ ಫಲಕಗಳ ಬಗ್ಗೆ ಹೇಳೋದು ಮುಗೀಲಿಲ್ಲ. ರಸ್ತೆ ಬದಿ ಸ್ವಚ್ಛತೆ ಕಾಪಾಡಿಕೊಳ್ಳಿ ಅನ್ನೋ ಫಲಕಗಳಿಂದ ಹಿಡಿದು `ಇಲ್ಲಿ ಮೂತ್ರ ಮಾಡಬಾರದು ಅಂತಾನೂ ಬರೆದಿತರ್ಾರೆ, ಆದ್ರೂ ಕೆಲವರು ತಮ್ಮ ಬುದ್ಧಿ ಬಿಡದೆ ಅಲ್ಲಿಯೇ ಕಾಲೆತ್ತಿ ನಿಲ್ಲೋದುಂಟು, ಅದಕ್ಕೆ ನಮ್ಮ ಊರಿನಲ್ಲೊಂದು ಕಡೆ ಯಾರೋ ಪುಣ್ಯಾತ್ಮರು, ಇಲ್ಲಿ ಮೂತ್ರ ಮಾಡಿದವ ನಾಯಿಗೆ ಸಮಾನ,
ಮಂಗನಿಗೆ ಸಮಾನ...... ಅಂತ ಇನ್ನೂ ಏನೇನೋ ಬರೆದಿದ್ದಾರೆ. ಹೀಗಾಗಿ ಹಗಲು ಹೊತ್ತು ಅಲ್ಲಿಗೆ ಹೋಗೋ ಸಾಹಸ ಮಾಡಲ್ವಂತೆ. ಇವಿಷ್ಟೇ ಅಲ್ಲ, ಬಸ್ಸಿನಲ್ಲಿ ಗೇರ್ ಬಾಕ್ಸ್ನ ಮೇಲೆ ಚಿಕ್ಕದಾದ ಫಲಕ, `ಇದರ ಮೇಲೆ ಕಾಲಿಡಬೇಡಿ, ಅದರರ್ಥ ಕಾಲು ಮಾತ್ರ ಇಡಬಾರದು, ಕೈ, ಇಡೀ ದೇಹ ಇಡಬಾರದು ಎಂದೇನೂ ಬರೆದಿಲ್ವಲ್ಲಾ, ಅಂತ ನಮ್ಮೂರಿನ ತಲರ್ೆಗಳು ಅವನ್ನು ಏರಿ ಕುಳಿತುಬಿಡುತ್ತೆ. ಡ್ರೈವರನ ಹಿಂದಿನ ಫಲಕದಲ್ಲಿ `ಡ್ರೈವರನೊಂದಿಗೆ ಮಾತಾಡದಿರಿ ಅಂತ ಬರೆದೇ ಇದ್ರೂ ಯಾವ ಡ್ರೈವರ್ ಮಾತಾಡ್ದೇ ಹೋಗ್ತಾನೆ ಹೇಳಿ? ಡ್ರೈವರ್ನನ್ನು ಮಾತಾಡಿ ತಮ್ಮ ತೀಟೆ ತೀರಿಸಲಿಕ್ಕೆಂದೇ ಕೆಲವರು ಬಸ್ಸು ಹತ್ತುವುದುಂಟು. ಗಂಡಸರಾದ್ರೆ ಬಾಯಿ ಮಾತು, ಹುಡ್ಗೀರ ಜತೆ ಕಣ್ಣಲ್ಲೇ ಡ್ರೈವರ್ ಮಾತಾಡ್ತಾ ಇರ್ತಾನೆ. ಬಸ್ಸಿನೊಳಗೆ ಸಿನಿಮಾ ಗೃಹದೊಳಗೆ ಬರೆದಂತೆ `ಹೊಗೆಬತ್ತಿ ಸೇದಬಾರದು ಅಂತಾ ಬೋಡರ್ಿದ್ರೂ ಎಷ್ಟು ಜನ ಸೇದೋದಿಲ್ಲ? ಹೀಗೆ ಕೆಲವೊಂದು ಸಮಯ ಈ ಎಚ್ಚರಿಕೆ ಫಲಕಗಳು ಅಭಾಸವಾಗಿ ಕಾಡೋದುಂಟು. `ದಯವಿಟ್ಟು ಚಿಲ್ಲರೆ ಕೊಟ್ಟು ಸಹಕರಿಸಿ, `ಟಿಕೇಟನ್ನು ಕೇಳಿ ಪಡೆಯಿರಿ, `ಟಿಕೆಟಿಲ್ಲದ ಪ್ರಯಾಣ ರೂ.500 ದಂಡ. ಇವನ್ನೆಲ್ಲಾ ಸರಕಾರದ ಡಬ್ಬಾ ಬಸ್ನಲ್ಲಿ ನೋಡಿದ್ರೆ ಇದಕ್ಕಿಂತ ನಮ್ಮೂರ ಕೆಂಪು ಮುಸುಡಿಯ ಬಸ್ಸೇ ವಾಸಿ ಅನ್ನಿಸುತ್ತೆ. ಕಂಡಕ್ಟರ್ ಕೇಳಿದ್ರೆ ಟಿಕೇಟ್, ಇಲ್ಲಾಂದ್ರೆ ಇಲ್ಲ. ನಾನು ನಗರ ಪ್ರದಕ್ಷಿಣೆ ಹಾಕುವಾಗ 15 ನಂಬರ್ ಬಸ್ಸಿನಲ್ಲಿ ದೇವಾಲಯದೊಳಗಿರುವಂತೆ ಬರೆದಿದ್ದು ಕಾಣಿಸುತ್ತೆ. `ಕಿಸೆ ಕಳ್ಳರಿದ್ದಾರೆ, ಎಚ್ಚರಿಕೆ... ನಿಮ್ಮ ಸೊತ್ತಿಗೆ ನೀವೇ ಜವಾಬ್ಧಾರರು ಈ ಫಲಕ ಬರೆದಿರೋ ತಲೆಗೆ ಥ್ಯಾಂಕ್ಸ್ ಹೇಳಲೇಬೇಕು. ಒಟ್ಟಾರೆ, ಈ ಫಲಕಗಳ ಬಗ್ಗೆ ಬರೆಯತೊಡಗಿದ್ರೆ ರಾತ್ರಿ ಕಳೆದು ಹಗಲು ಬರುತ್ತೆ. ಇವಿಷ್ಟು ಸದ್ಯಕ್ಕೆ ಸಾಕು, ಇನ್ನೊಮ್ಮೆ ಫಲಕ ಪುರಾಣ ಮುಂದುವರಿಸ್ತೀನಿ. ನಮಸ್ಕಾರ...