ಬಿಡುವಿರದ ದಿನಗಳ ನಡುವೆಯೂ ಟ್ರೆಕ್ಕಿಂಗ್ ಅಥರ್ಾತ್ ಚಾರಣ ಅಂತಂದ್ರೆ ಕಿವಿ ನಿಮಿರಿಸೋ ನಮ್ಮ ಸಮಾನ ಮನಸ್ಕ ಗೆಳೆಯರ ತಂಡ ಈ ಬಾರಿ ಟ್ರೆಕ್ಕಿಂಗ್ ಹೊರಟಿದ್ದು ಮಂಜು ಕವಿಯುವ ನಾಡಿಗೆ... ಇಬ್ಬನಿ ಹನಿಯಾಗಿ ಹನಿಯೋ ಕೊಡಚಾದ್ರಿಯ ತುದಿಗೆ...
ಕೊಡಚಾದ್ರಿ ಟ್ರೆಕ್... ಅದೂ ಬಿಡದೆ ಕಾಡೋ ಮುಂಗಾರಿನ ನಡುವೆ..! ನಿಮಗೆಲ್ಲೋ ತಲೆ ಕೆಟ್ಟಿರಬೇಕು. ಬೇಸಿಗೆ ಕಾಲಕ್ಕೆ ಅಲ್ಲಿ ಹೋಗಲು ಸರಿಯಾದ ವ್ಯವಸ್ಥೆಯಿಲ್ಲ. ರಸ್ತೆ ಬಂದ್ ಆಗಿ ಹಲವಾರು ಕಿ.ಮೀ. ದೂರ ಕಲ್ಲುಗುಡ್ಡವನ್ನೇರಿ ನಡೆದೇ ಹೋಗಬೇಕಾದ ಪರಿಸ್ಥಿತಿ ಬೇರೆ. ಹೀಗಿರುವಾಗ ಜಡಿಮಳೆಗೆ ಎದೆಯೊಡ್ಡಿ ಕೊಡಚಾದ್ರಿ ಬೆಟ್ಟವೇರುವುದುಂಟಾ... ಅಂತ ಕೊಡಚಾದ್ರಿ ಹೆಸರು ಕೇಳಿದವರೆಲ್ಲಾ ತಮಾಷೆ ಮಾಡ್ತಾ ಇದ್ರು. ಆದ್ರೂ ಹಿಡಿದ ಪಟ್ಟು ಸಡಿಲಿಸದ ನಮ್ಮ ಗೆಳೆಯರ ತಂಡ ಹೇಗಾದ್ರೂ ಸರಿ, ಅಲ್ಲಿ ಹೋಗೋಕ್ಕೆ ಮುಂಗಾರೇ ಸೂಕ್ತ. ಅದೊಂದು ನೆನಪಿನಂಗಳದಲ್ಲಿ ಮರೆಯಾಗದೆ ಉಳಿದೀತು ಅಂತಂದು ಭಾರೀ ಸಾಹಸಕ್ಕೆ ಹೊರಟಂತೆ ಹೊರಟೇ ಬಿಟ್ಟಿತು.
ಮಂಜು ಮುಸುಕಿದ ಹಾದಿ..!
ಕೊಡಚಾದ್ರಿ ಹೆಸರು ಕೇಳಲಷ್ಟೇ ಮಧುರ. ಆದರೆ ಕೊಡಚಾದ್ರಿ ತಲುಪಲು ಮಂಗಳೂರಿನಿಂದ ಅಂದಾಜು 250 ಕಿ.ಮೀ. ಸಂಚರಿಸಬೇಕು. ಮುಸ್ಸಂಜೆಯ ವೇಳೆ ಮಂಗಳೂರು ಬಿಟ್ಟು ತೆರಳಿದ ನಮ್ಮ ತಂಡ ಬೈಕ್ನಲ್ಲೇ ಸಂಚಾರ ನಡೆಸಿ ಕೊಲ್ಲೂರು ತಲುಪುವಾಗ ರಾತ್ರಿ ಹನ್ನೊಂದು ಗಂಟೆ. ಅಲ್ಲಿ ರಾತ್ರಿ ಕಳೆದು ಮುಂಜಾನೆ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ನಮ್ಮ ತಂಡ ಕೊಡಚಾದ್ರಿಯ ಚಾರಣ ಸುಖ ಅನುಭವಿಸಲು ಹೊರಟು ನಿಂತಿತ್ತು. ಆಗಿನ್ನೂ ಬೆಳಗಾಗಿರಲಿಲ್ಲ. ಹಕ್ಕಿಗಳು ಬೆಳಗಾಯಿತು ಎಂದು ಎಲ್ಲರನ್ನೂ ಎಬ್ಬಿಸುತ್ತಾ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದುವು. ಮಂಜು ಮುಸುಕಿದ ಕೊಲ್ಲೂರಿನ ಹೋಟೆಲ್ ಒಂದರಲ್ಲಿ ಹೊಟ್ಟೆ ತುಂಬಿಸಿ ಹೊರಟಾಗ ಚುಮುಚುಮು ಚಳಿ ಬೇರೆ ನಮ್ಮ ಜತೆಯಾಗಿತ್ತು. ಕೊಲ್ಲೂರು ದೇವಳದ ಎಡಭಾಗದಲ್ಲಿ ಬಲಕ್ಕೆ ತಿರುಗಿದಲ್ಲಿ ಕೊಡಚಾದ್ರಿಗೆ ಹೋಗುವ ರಸ್ತೆ ಸಿಗುತ್ತದೆ.
ಸುಮಾರು 13 ಕಿ.ಮೀ. ಬೈಕ್ನಲ್ಲಿ ಸಂಚರಿಸುವ ಮಜಾನೇ ಬೇರೆ. ಮಂಜು ತಬ್ಬಿದ ಹಸಿರು ಕಾನನದ ನಡುವೆ ಸಂಚರಿಸುವಾಗ ಎದುರಿನ ಬೈಕ್ ಕ್ಷಣಮಾತ್ರ ಕಾಣದಾಗುತ್ತದೆ. ಹಚ್ಚ ಹಸಿರಿನ ಕಂಬಳಿ ಹೊದ್ದು ನಿಂತು ಕಂಗೊಳಿಸುವ ಕೊಡಚಾದ್ರಿಯ ತಪ್ಪಲು ಪ್ರದೇಶ ಕಣ್ತುಂಬಿಕೊಳ್ಳಲು ಮಳೆಗಾಲವೇ ಸಕಾಲ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಸುತ್ತಲೂ ಕೊಲ್ಲೂರು ಮೂಕಾಂಬಿಕಾ ರಕ್ಷಿತಾರಣ್ಯ, ನಡುವೆ ಕಪ್ಪಗೆ ಮಿರಮಿರನೆ ಹೊಳೆಯುವ ಟಾರು ರಸ್ತೆ, ರಸ್ತೆಯ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದರೆ ಹಾಲ್ನೊರೆಯಂತೆ ಬಳುಕುತ್ತಾ ಮೇಲ್ಗಡೆಯಿಂದ ಧುಮ್ಮಿಕ್ಕುವ ಜಲಧಾರೆ, ಕಾಡುಬಾಳೆ, ಕಾಡು ಹಲಸಿನ ಮರಗಳು ಇವನ್ನೆಲ್ಲಾ ನೋಡುತ್ತಿದ್ದರೆ ಪ್ರಕೃತಿಯ ಮಡಿಲಿನಲ್ಲಿ ನಿಜಕ್ಕೂ ಧನ್ಯತಾಭಾವ ಮೂಡುತ್ತದೆ.
ಕರಕಟ್ಟ ಎಂಬಲ್ಲಿ ರಸ್ತೆಯ ಬದಿಯ ಫಲಕವೊಂದು ಕೊಡಚಾದ್ರಿಗೆ 10ಕಿ.ಮೀ. ಎಂದು ಸೂಚಿಸುತ್ತದೆ. ಇಲ್ಲಿಂದ ಮುಂದೆ ಬೈಕ್ನಲ್ಲಿ ಅರ್ಧ ಕಿ.ಮೀ. ಸಾಗುವ ಸಾಹಸವೇನೋ ಮಾಡಬಹುದು. ಆದ್ರೆ ಬೈಕ್ ಟಯರ್ಗಳ ಗ್ಯಾರಂಟಿ ಹೇಳಲಾಗದು. ಯಾಕೆಂದರೆ ಅಲ್ಲಲ್ಲಿ ರಸ್ತೆಗಡ್ಡವಾಗಿ ಬೃಹತ್ ಗಾತ್ರದ ಸಾಗುವಾನಿ, ಬೀಟೆ ಮರಗಳು ನೆಲಕ್ಕುರುಳಿರುತ್ತವೆ. ಕಲ್ಲು, ಮಣ್ಣಿನ ದಿಣ್ಣೆಯನ್ನು ಒಳಗೊಂಡ ಏರು ರಸ್ತೆಯಲ್ಲಿ ಸಾಗುವುದು ಅಸಾಧ್ಯವೂ ಹೌದು. ಈ ಕಾರಣಕ್ಕಾಗಿ ನಮ್ಮ ತಂಡ ಬೈಕ್ ನಿಲ್ಲಿಸಿ ಕೆಳಕ್ಕಿಳಿಯಲೇಬೇಕಾಯಿತು.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಚಾರಣ ಕೈಗೊಳ್ಳುವ ಚಾರಣಿಗರಿಗೆ ಸಾಮಾನ್ಯವಾಗಿ ಇಂಬಳದ ಪರಿಚಯವಿದ್ದೇ ಇರುತ್ತದೆ. ಇದಕ್ಕೆ ಉಂಬಳ, ತುಳುವಿನಲ್ಲಿ ಉಂಬುರು ಎಂದೆಲ್ಲಾ ಕರೆಯುತ್ತಾರೆ. ಬೈಕ್ನಿಂದ ಕೆಳಗಿಳಿದದ್ದೇ ನಮಗೆ ಸ್ವಾಗತ ಕೋರಿದ್ದು ರಾಶಿ ರಾಶಿ ಇಂಬಳಗಳು. ನಮ್ಮ ರಕ್ತ ಹೀರಲೆಂದೇ ದಾಹಗೊಂಡು ಕಾದು ನಿಂತ ರಕ್ಕಸನ ರೀತಿ ಒಮ್ಮೆ ಭಾಸವಾಯಿತು. ಎಲ್ಲಿಂದಲೋ ಓಡೋಡಿ ಬಂದು ಕಾಲಿನ ಮೇಲೆ ಹತ್ತಿ ಕ್ಷಣದಲ್ಲಿ ರಕ್ತ ಹೀರಿ ನೇತಾಡುವ ಇಂಬಳಗಳ ಪರಿಚಯ ಮೊದಲೇ ಇದ್ದುದರಿಂದ ನಾವು ಆದಷ್ಟು ಜಾಗ್ರತೆ ವಹಿಸಿದ್ದೆವು. ಆದರೂ ಬೆಂಬಿಡದ ಇಂಬಳ ರಕ್ತ ಹೀರಿ ಹಿಗ್ಗಿದಾಗ ಅಯ್ಯೋ... ಬೆಲೆಬಾಳುವ ರಕ್ತವನ್ನು ಯಾರಿಗಾದರೂ ದಾನವಾದ್ರೂ ಮಾಡಬಹುದಿತ್ತು ಅನ್ನಿಸಿತ್ತು.
ಅರೆಕ್ಷಣ ನಿಂತರೆ ಕಾಲಿಗೆ ಮುತ್ತಿಕೊಳ್ಳುವ ಇಂಬಳ, ಏರು ಹಾದಿಯಲ್ಲಿ ಏದುಸಿರು ಬಿಡುತ್ತಾ ಸಂಚಾರ, ಇವೆಲ್ಲದರ ನಡುವೆ ದಣಿವನ್ನು ಮರೆಸೋ ದಟ್ಟವಾದ ಕಾನನದ ನಡುವೆ ಚಾರಣ ನಡೆಸೋದು ಸುಲಭವಲ್ಲ ಅಂತ ಗೊತ್ತಾಗಿದ್ದು ಆ ವೇಳೆಗೇ. ಮಳೆರಾಯ ಆಗೊಮ್ಮೆ ಈಗೊಮ್ಮೆ ಕೊಂಚ ಬಿಡುವು ಕೊಟ್ಟು ಮತ್ತೆ ತನ್ನ ಕೆಲಸ ಮಾಡುತ್ತಿದ್ದ. ಜಕರ್ಿನ್ ತೊಟ್ಟರೂ ಪೂತರ್ಿ ನೆನೆಯುವ ಜಡಿಮಳೆಗೆ ಸುಮಾರು 3 ಕಿ.ಮೀ. ಸಂಚರಿಸಿದರೆ ಮಳಯಾಲಿ ಟೀ ಶಾಪ್ ಸಿಗುತ್ತದೆ. ಬೆಟ್ಟದ ನಡುವೆ ಒಂಟಿಯಾಗಿ ಟೀ ಶಾಪ್ ತೆರೆದು ಕಷ್ಟಗಳಿಗೆ ಮೈತೆರೆದು ವನ್ಯಜೀವಿಗಳ ಜತೆ ಬದುಕುವ ಮಳಯಾಲಿ ಟೀ ಶಾಪ್ ಮಾಲಕ ನಮಗೆಲ್ಲಾ ಟೀ ವಿತರಿಸಿದ. ಅಲ್ಲಿಯೇ ಇಂಬಳವನ್ನು ಯಾಮಾರಿಸುವ ಸುಣ್ಣದ ಉಂಡೆ ಹಿಡಿದುಕೊಂಡ ನಮ್ಮ ತಂಡ ಮತ್ತೆ ಚಾರಣ ಮುಂದುವರಿಸಿತು.
ಆನಂತರದ ಚಾರಣ ನೆನೆಸಿದಂತಿರದೆ ರುದ್ರ ರಮಣೀಯವಾಗಿತ್ತು. ಕೊಡಚಾದ್ರಿಯ ಶಿಖರ ದೂರದಿಂದಲೇ ಕೈ ಬೀಸಿ ಕರೆಯುತ್ತಿತ್ತು. ಕಲ್ಲಿನ ಕಡಿದಾದ ದುರ್ಗಮ ಹಾದಿಗಳಲ್ಲಿ ಸಾಗುತ್ತಿರಬೇಕಾದರೆ ಪ್ರಕೃತಿಯ ರಮ್ಯ ಪ್ರಪಂಚ ಕಣ್ಮುಂದೆ ಬಂದು ನಿಲ್ಲುತ್ತದೆ. ಕೊಂಚ ವಿರಮಿಸೋಣ ಎಂದರೆ ಇಂಬಳಗಳು ನಾವೂ ಬರ್ತೀವಿ ಅಂತ ಜತೆಯಾಗ್ತಾ ಇತ್ತು. ಮಂಜು ಮುಸುಕಿದ ಮೂರು ದಟ್ಟವಾದ ಅರಣ್ಯವನ್ನು ದಾಟುವಾಗ ನಮ್ಮ ತಂಡ ಸುಸ್ತೋ ಸುತ್ತು. ಅಂತೂ ಇಂತು ಕೊಡಚಾದ್ರಿ ಗಿರಿ ಏರಿದೆವು ಅಂದಾಗ ಗೈಡ್ ಚಂದ್ರ ಜತೆಯಾಗಿ, ಸರ್ವಜ್ಞ ಪೀಠಕ್ಕೆ ಇನ್ನೂ 3 ಕಿ.ಮೀ. ಹೋಗಬೇಕು ಅಂದಾಗ ಮಳೆಯಲ್ಲಿ ಹೋಗೋದು ಹೇಗಪ್ಪಾ ಅನ್ನಿಸಿದ್ದು ಸಹಜ.
ಧ್ಯಾನಸ್ಥ ಸರ್ವಜ್ಞನಿಗೊಂದು ಪೀಠ
ಸರ್ವಜ್ಞ ತನ್ನ ಹೊನ್ನಿನಂತಹ ನುಡಿಮುತ್ತುಗಳ ಮೂಲಕ ಜನರ ಬಾಯಲ್ಲಿ ನಿತ್ಯ ಹರಿದಾಡುತ್ತಿದ್ದರೆ ಕೊಡಚಾದ್ರಿಯ ನೆತ್ತಿಯ ಮೇಲೆ ಧ್ಯಾನಸ್ಥನಾಗಿದ್ದಾನೆ. ಪ್ರಪಂಚದ ಅಂಕುಡೊಂಕುಗಳನ್ನು ತನ್ನ ವಚನಗಳ ಮೂಲಕ ತಿದ್ದಿದ ಮಹಾಶಿಲ್ಪಿ ಸರ್ವಜ್ಞ ಪ್ರಕೃತಿಯ ನಡುವೆ ಮಗುವೇ ಆಗಿದ್ದಾನೆ. ಸರ್ವಜ್ಞನ ಪೀಠಕ್ಕೊಂದು ಸುತ್ತು ಬಂದು ತಲೆಬಾಗಿಸಿ ವಂದಿಸಿದ ನಮಗೆ ಚಾರಣಕ್ಕೊಂದು ಅರ್ಥ ಕಂಡುಕೊಂಡ ಧನ್ಯತೆ. ಸಮುದ್ರ ಮಟ್ಟದಿಂದ ಸುಮಾರು 1400 ಅಡಿ ಎತ್ತರದಲ್ಲಿ ನಿಂತು ಇಡೀ ಲೋಕದ ಸೌಂದರ್ಯ, ಪ್ರಕೃತಿಯ ಚೆಲುವು ನೋಡುತ್ತಿದ್ದರೆ ಸಮಯ ಕಳೆದುದು ತಿಳಿಯದು. ಕೊರೆಯುವ ಚಳಿ, ವೇಗವಾಗಿ ಬಡಿಯುವ ಮಳೆಹನಿ, ಜೋರಾದ ಗಾಳಿ, ಮುತ್ತಿಕ್ಕುವ ಮಂಜಿನ ನಡುವೆ ಕೊಡಚಾದ್ರಿ ಮಾನ್ಸೂನ್ ಟ್ರೆಕ್ ನಿಜಕ್ಕೂ ವಣರ್ಿಸಲಸದಳ ಅನುಭವ.
ಕೊಡಚಾದ್ರಿ ಇಳಿದು ಭಟ್ಟರ ಮನೆ ವೀಕ್ಷಿಸಿ, ಹುಲಿರಾಯ ದೇವನಿಗೆ ನಮಸ್ಕರಿಸಿ ಚಂದ್ರ ಅವರ ಪುಟ್ಟ ಮನೆಯಲ್ಲಿ ಊಟ ಮುಗಿಸಿ ಸಂಜೆ 4 ಗಂಟೆಗೆ ಬೆಟ್ಟ ಇಳಿಯಲು ತೊಡಗಿದ ನಮಗೆ ಏನೋ ಕಾಲು ನಿಂತಲ್ಲಿ ನಿಲ್ಲದೆ ಬಲ ಕಳೆದುಕೊಂಡು ನಡುಗುತ್ತಿತ್ತು. ಜೋರಾದ ಮಳೆಯಲ್ಲಿ ಮತ್ತೆ ಎರಡು ಗಂಟೆ ಚಾರಣ ಮುಗಿಸಿ ಹಿಂತಿರುಗಿ ಬೈಕ್ ಏರುವಾಗ ದೂರದಲ್ಲಿ ಕೊಡಚಾದ್ರಿ ತಲೆ ಎತ್ತಿ ನಿಂತಿತ್ತು. ಕೊಡಚಾದ್ರಿಯಿಂದ ಕೊಲ್ಲೂರಿಗೆ ಮತ್ತದೇ ಮುಸ್ಸಂಜೆಯ ಮಬ್ಬು ಕತ್ತಲಿನಲ್ಲಿ ಸಂಚಾರ ಬೆಳೆಸಿದ ನಮಗೆ ಏನೋ ಕಳೆದುಕೊಂಡ ದು:ಖ, ಹಾಗೇ ಏನೋ ಸಾಧಿಸಿದ ಸುಖ ಹೆಜ್ಜೆಹೆಜ್ಜೆಗೆ ಕಾಡುತ್ತಿತ್ತು.
No comments:
Post a Comment