doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Saturday, July 20, 2013

ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ...





ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು,
ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು...

ಆಷಾಢ ಮಾಸ ಅಥರ್ಾತ್ ಆಟಿ ತಿಂಗಳು ಬಂದಾಗ ಕವಿ ಕೆ.ಎಸ್.ನರಸಿಂಹಸ್ವಾಮಿ ಮತ್ತೆ ನೆನಪಾಗುತ್ತಾರೆ. ಆಷಾಢ ಮಾಸದಲ್ಲಿ ಸಂಪ್ರದಾಯದ ಆಚರಣೆಗೆ ತಲೆಬಾಗಿ ಗಂಡನ ಮನೆ ತೊರೆದು ತವರು ಸೇರುವ ಹುಡುಗಿ ವಿರಹ ವೇದನೆಯಲ್ಲಿ ತನ್ನ ಇನಿಯನಿಗೆ ಪತ್ರ ಬರೆಯುವುದನ್ನು ಬಹುಷ: ಕೆ.ಎಸ್.ನ. ಅವರಷ್ಟು ಮನಮುಟ್ಟುವಂತೆ ಬೇರಾರೂ ವಣರ್ಿಸಲಿಕ್ಕಿಲ್ಲ. ಆಗಷ್ಟೇ ಮದುವೆ ಗೌಜಿ ಮುಗಿದಿರುತ್ತದೆ, ಆಕೆ ಕಣ್ಣುಗಳ ತುಂಬಾ ಹೊಂಗನಸುಗಳ ಕಟ್ಟಿಕೊಂಡು ಗಂಡನ ಮನೆ ಸೇರಿರುತ್ತಾಳೆ. ಗಂಡನ ಪ್ರೀತಿ, ಅಕ್ಕರೆಯ ನಡುವೆ ತವರ ನೆನಪಿಗೆ ಅಲ್ಪವಿರಾಮ ಹಾಕುವಷ್ಟರಲ್ಲಿ ಆಷಾಢ ಬಂದಿರುತ್ತದೆ. ಅತ್ತ ತವರು ಮನೆಯವರು ಮಗಳನ್ನು ತವರಿಗೆ ಕರೆದುಕೊಂಡು ಬರಲು ತುದಿಗಾಲಲ್ಲಿ ನಿಂತಿದ್ದರೆ, ಆಕೆಯದ್ದು ಅತ್ತ ಹೆತ್ತವರೂ ನೋವು ಪಡಬಾರದು, ಇತ್ತ ಗಂಡನಿಗೂ ನೋವಾಗಬಾರದು ಎಂಬ ಮನೋಸ್ಥಿತಿ...
ಈಗ ಕಾಲ ಬದಲಾಗಿದೆ, ಮುಂಜಾನೆ ಫೋನ್ ಮಾಡಿ ಬರುತ್ತೇವೆ ಅಂದರೆ ಸಂಜೆ ಬಂದು ಕರೆದುಕೊಂಡು ಹೋಗುತ್ತಾರೆ. ಆದರೆ ಆಗ ಹಾಗಿರಲಿಲ್ಲ. ಈಮೇಲ್, ಮೊಬೈಲ್ ಫೋನ್ಗಳಿಲ್ಲ, ಏನಿದ್ದರೂ ಪತ್ರದ ಮೂಲಕವೇ ಸಂದೇಶ. ಆಗ ಆಷಾಢಕ್ಕೆ ಹೊಸದಾಗಿ ಮದುವೆಯಾದ ಹುಡುಗಿಯನ್ನು ಗಂಡನ ಮನೆಯಿಂದ ಕಳುಹಿಸಿಕೊಡುವುದು ಅಂದರೆ ಅಲ್ಲೊಂದು ಪುಟ್ಟ ಕಾರ್ಯಕ್ರಮವೇ ನಡೆದಿರುತ್ತಿತ್ತು. ಅವರು ಬಂದೇ ಬರುತ್ತಾರೆ, ಆದರೆ ಯಾವಾಗ ಎಂದು ಗೊತ್ತಿಲ್ಲ... ಹೀಗಾಗಿ ಗಂಡನ ಅಲ್ಪಕಾಲದ ಅಗಲಿಕೆಯ ನೋವನ್ನು ಮನಸ್ಸಲ್ಲೇ ಇರಿಸಿಕೊಂಡು ಆಕೆಯೂ ಹೆತ್ತವರ ದಾರಿ ಕಾಯುತ್ತಿದ್ದಳು. ಅವರು ಹೇಳದೆ ಕೇಳದೆ ಬಂದು ಔತಣ (ತಮ್ಮನ) ಮಾಡಿಸಿಕೊಂಡು ಮಗಳನ್ನು ಕರೆದೊಯ್ಯಲು ಮುಂದಾಗುತ್ತಾರೆ. ಈ ವೇಳೆ ಗಂಡನಲ್ಲಿ ಮಾತಾಡುವುದಕ್ಕೂ ಆಕೆಗೆ ಅವಕಾಶ ಸಿಗುತ್ತಿರಲಿಲ್ಲ, ಒಂದೊಮ್ಮೆ ಸಿಕ್ಕಿದರೆ ಅದೇ ಪುಣ್ಯ. ಹೀಗೆ ಕಣ್ಸನ್ನೆಯಲ್ಲೇ `ಬರುತ್ತೇನೆ, ನಿಮ್ಮ ಆರೋಗ್ಯ ಹುಷಾರು ಎಂದು ಹೊರಡುವ ಆಕೆ ತವರುಮನೆ ಸೇರಿದ ನಂತರ ಇನಿಯನಿಗೆ ಬರೆಯುವ ಪತ್ರದಲ್ಲಿ ಅಗಲಿಕೆಯ ನೋವನ್ನು ಹೇಳುತ್ತಾ ಸಾಗುತ್ತಾಳೆ. ಸೋಬಲಕ್ಕಿಯನಿಟ್ಟು ಹೂಮುಡಿಸಿ ಕಳುಹುವರು,
ಕಂದನಿಗೆ ಹೊಸ ಜರಿಯ ಲಂಗವುಡಿಸಿ.
ತಂದೆಯವರೇ ಬಂದು ತಪ್ಪಾಯಿತೆನ್ನುವರು;
ಹೆಣ್ಣ ಹೆತ್ತವರನ್ನು ದೂರಬೇಡಿ...
ಮರೆತಿಹಳು ಎನ್ನದಿರಿ, ಕಣ್ಮರೆಯ ತೋಟದಲಿ
ಅಚ್ಚಮಲ್ಲಿಗೆಯರಳು ಬಿರಿಯುತಿಹುದು.
ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ,
ಚುಚ್ಚದಿರಿ ಮೊನೆಯಾದ ಮಾತನೆಸೆದು...

ಈ ಸಾಲುಗಳಲ್ಲಿ ಕವಿ ಸಂಪ್ರದಾಯಕ್ಕೆ ತಲೆಬಾಗಿ ತವರು ಮನೆ ಸೇರಿದ ಹೆಣ್ಣಿನ ಮನೋಸ್ಥಿತಿಯನ್ನು ವಿವರಿಸಿದ್ದಾರೆ. ಮಡಿಲಲ್ಲಿ ಅಕ್ಕಿಯನ್ನು ತುಂಬಿ ಹೂವನ್ನು ಮುಡಿಸಿ ಕಳುಹಿಸುತ್ತಾರೆ ಎಂದು ಇನಿಯನಿಗೆ ತಿಳಿಹೇಳುವ ಆಕೆ, ತಂದೆಯವರೇ ವಾಪಸ್ ಕರೆದುಕೊಂಡು ಬಂದು ತಪ್ಪಾಯಿತು ಎನ್ನುತ್ತಾರೆ, ಇದಕ್ಕಾಗಿ ಹೆಣ್ಣು ಹೆತ್ತವರನ್ನು ದೂರಬೇಡಿ ಎನ್ನುತ್ತಾಳೆ. ಆಷಾಢ ಮುಗಿದೊಡನೆ ಗಂಡನ ಮನೆಗೆ ತಿರುಗಿ ಬರಲು ದಿನ ಎಣಿಸುವ ಆಕೆ ತನ್ನ ಮನದಿಂಗಿತವನ್ನು ಈ ಮೂಲಕ ಬಿಚ್ಚಿಡುತ್ತಾಳೆ. ಆಗ ಈಗಿನಂತೆ ಗಂಡ-ಹೆಂಡತಿ ನಡುವೆ ಸಂಭಾಷಣೆ ನಡೆಸಲು ಮೊಬೈಲ್ ಇರಲಿಲ್ಲ. ಪತ್ರ ಬರೆದರೆ ಸಕಾಲಕ್ಕೆ ಮುಟ್ಟುವುದು ಕಷ್ಟ. ಹೀಗಾಗಿ ಪ್ರೀತಿಯಿಂದ ಬರೆದ ಪತ್ರದಲ್ಲಿ ತಾನು ಪತಿಯನ್ನು ಮರೆತು ಕೂತಿಲ್ಲ ಎನ್ನುವುದನ್ನು ಆಕೆ ಬಿಂಬಿಸುತ್ತಾಳೆ. `ಬಂದುಬಿಡುವೆನು ಬೇಗ ಮುನಿಯದಿರಿ, ಕೊರಗದಿರಿ... ಬಂದ ಬಳಿಕ ಚುಚ್ಚುಮಾತನ್ನು ಆಡದಿರಿ ಎಂದು ವಿರಹ ವೇದನೆಯಿಂದ ಬಳಲುವ ತನ್ನ ಪತಿಯನ್ನು ಆಕೆ ಪ್ರೀತಿ ತುಂಬಿದ ಸಾಲುಗಳಲ್ಲೇ ಸಮಾಧಾನಿಸುತ್ತಾಳೆ. ಹೀಗೆ ಆಟಿ ಅಥವಾ ಆಷಾಢಮಾಸದಲ್ಲಿ ವಿರಹಿಗಳ ಹಾಡು-ಪಾಡು ಸಾಗುತ್ತದೆ.
ಆಷಾಢಮಾಸದ ಬಗ್ಗೆ ನಮ್ಮಲ್ಲಿ ನಾನಾ ನಂಬಿಕೆಗಳಿವೆ. `ಆ ಕಾಲ ಹೋಯಿತು ಮಾರಾಯ್ರೇ ಅನ್ನುವವರೂ ಈ ಕಾಲದಲ್ಲಿ ಒಂದೆರಡು ಆಚರಣೆಗಳನ್ನಾದರೂ ಅನುಸರಿಸುತ್ತಾರೆ, ನಂಬುತ್ತಾರೆ. ಈ ಕಾರಣಕ್ಕಾಗಿ ಆಷಾಢ ಮಾಸ ತುಳುನಾಡಿನಲ್ಲಿ ಉಳಿದ ತಿಂಗಳಿಗಿಂತ ಡಿಫರೆಂಟ್ ಆಗಿ ಗಮನ ಸೆಳೆಯುತ್ತದೆ. ಆಟಿ ಬಂದರೆ ಸಾಕು, ಮರ-ಗಿಡಗಳು ಚಿಗುರೊಡೆದು ಹೊಸ ಬದುಕಿಗೆ ತೆರೆದುಕೊಂಡರೆ ನವವಿವಾಹಿತರಿಗೆ ಮಾತ್ರ ಇದು ವಿರಹದ ಕಾಲ. ಹೊಸದಾಗಿ ಮದುವೆಯಾದ ಹೆಣ್ಣು ಇನ್ನೇನು ತವರು ಸೇರಲು ಜಾತಕಪಕ್ಷಿಯಂತೆ ಕಾದರೆ ಗಂಡನೆಂಬ ಬಡಪಾಯಿ ಮಾತ್ರ ಸುರಿವ ಮಳೆ, ಕಚಗುಳಿಯಿಡುವ ಕುಳಿಗರ್ಾಳಿಯ ಮಧ್ಯೆ ಆಕೆಯಿಲ್ಲದ ದಿನಗಳನ್ನು ನೆನೆಸಿ ವ್ಯಥೆಪಡುತ್ತಾನೆ. ಆಷಾಢ ತಿಂಗಳೇ ಹಾಗೆ ರೈತನಿಗೆ ವ್ಯಥೆಯ ದಿನಗಳಾದರೆ, ನವದಂಪತಿಗೆ ವಿರಹದ ದಿನಗಳು, ಪ್ರಾಣಿ-ಪಕ್ಷಿಗಳಿಗೆ ಮಿಲನದ ದಿನಗಳು...
ಇಲ್ಲಿ ಆಟಿ ತಿಂಗಳಲ್ಲಿ ನವದಂಪತಿಯನ್ನು ದೂರವಿರಿಸುವುದಕ್ಕೆ ಅನೇಕ ಕಾರಣಗಳಿವೆ. ಆಟಿ ತಿಂಗಳಲ್ಲಿ ಗಂಡು-ಹೆಣ್ಣು  ಮಿಲನವಾದರೆ ಎಪ್ರಿಲ್-ಮೇ ತಿಂಗಳಲ್ಲಿ ಹೆಣ್ಣಿಗೆ ಒಂಬತ್ತು ತಿಂಗಳು ಪೂತರ್ಿಯಾಗುತ್ತದೆ. ಬೇಸಿಗೆಯ ಕಾಲವಾದ್ದರಿಂದ ಸುಡುವ ಬಿಸಿಲು ಬೇರೆ. ಈ ವೇಳೆ ಮಗುಳು ಚೊಚ್ಚಲ ಬಸುರಿಯಾದರೆ ಗರ್ಭದಲ್ಲಿರುವ ಮಗು ಹಾಗೂ ತಾಯಿಗೆ ಅಪಾಯವೂ ಇದೆ, ಆರೋಗ್ಯ ಹದಗೆಡುವುದೂ ಬೇಗ ಎಂಬ ಕಾರಣಕ್ಕೆ ಅವರನ್ನು ಆಟಿ ತಿಂಗಳಲ್ಲಿ ದೂರ ಮಾಡುತ್ತಿದ್ದರು. ಇನ್ನೂ ಒಂದು ಕಾರಣವೆಂದರೆ ಆಟಿ ಕಷ್ಟದ ತಿಂಗಳು. ಹಿಂದೆ ಎಲ್ಲರೂ ಬೇಸಾಯವನ್ನೇ ಮಾಡುತ್ತಿದ್ದ ಕಾರಣ ತಿನ್ನಲು-ಉಣ್ಣಲು ಬೇಕೆನಿಸಿದ್ದು ಸಿಗುವುದು ಕಷ್ಟ. ಹೀಗಾಗಿ ಆಟಿಯ ನೆಪದಲ್ಲಾದರೂ ಮಗಳನ್ನು ತವರಿಗೆ ಕರೆತಂದು ಆಕೆಗೆ ಬೇಕೆನಿಸಿದ್ದು ತೆಗೆದು ಕೊಡೋಣ. ಸ್ವಲ್ಪ ದಿನ ಹಾಯಾಗಿ ತಿಂದುಂಡು ಇರಲಿ ಎನ್ನುವುದು ಹೆತ್ತವರ ಬಯಕೆಯಾಗಿತ್ತು. ಹೀಗೆ ಹಿರಿಯರಿಗೆ ಸಂಪ್ರದಾಯದ ಕಟ್ಟುಪಾಡು ಆದರೆ ಯುವಪೀಳಿಗೆಗೆ ಅನಿವಾರ್ಯ ಎಂಬಂತಾಗಿ ಅಷ್ಟು ಬಲವಾಗಿ ಅಲ್ಲದಿದ್ದರೂ ಇಂದಿಗೂ ಆಚರಣೆ ಮಾತ್ರ ಹಾಗೇ ಉಳಿದಿದೆ. ಆಷಾಢ ಬಂದರೆ ಸಾಕು, ಹೆಣ್ಮಕ್ಕಳನ್ನು ಕಂಡು ಹಿರಿಯರು ಇಂದಿಗೂ ಇದೇ ಪ್ರಶ್ನೆಯನ್ನು ಕೇಳುತ್ತಾರೆ, `ನಿಕುಲು ಆಟಿ ಕುಲ್ಲರೆ ಏಪ ಪೋಪಿನಿ. ಅಂದಿನಿಂದ ಇಂದಿನವರೆಗೆ ಹಾಗೇ ನಡೆದು ಬಂದಿರುವ ಈ ಸಂಪ್ರದಾಯ ಇಂದು ಒಂದು ವಾರ, 2-3 ದಿನಗಳಿಗಷ್ಟೇ ಸೀಮಿತವಾದರೂ ಅದು ಹೊತ್ತುತರುವ ಖುಷಿ ಮಾತ್ರ ವಿಶೇಷವಾದುದು.
ಕೃಷಿಯನ್ನೇ ಉಸಿರಾಡುವ ತುಳುವರು ತಮ್ಮ ಗದ್ದೆಯನ್ನು ಉತ್ತು, ಬಿತ್ತು ಹದ ಮಾಡಿ ಫಲಕ್ಕಾಗಿ ಕಾಯುತ್ತಿರುತ್ತಾರೆ. ಈ ವೇಳೆ ಮತ್ತದೇ ಆಷಾಢ ಓಡೋಡಿ ಬಂದಿರುತ್ತದೆ. ಉಳುಮೆ ಮಾಡಲು, ಕೆಲಸಗಾರರಿಗೆ ಸಂಬಳ ಕೊಡಲು ಕೈಯಲ್ಲಿದ್ದ ಹಣ, ಮನೆಯಲ್ಲಿದ್ದ ಅಕ್ಕಿ, ಧವಸ ಧಾನ್ಯ ಎಲ್ಲವೂ ಖಾಲಿಯಾಗಿರುತ್ತದೆ. ಹೀಗಾಗಿ ರೈತನಿಗೆ ದಿನ ದೂಡುವುದೇ ಕಷ್ಟ. ಹಣ ಕೊಟ್ಟು ಖರೀದಿ ಮಾಡುವಂತೆಯೂ ಇಲ್ಲ. ಹೀಗಾಗಿ ಪ್ರಕೃತಿದತ್ತವಾಗಿ ಸಿಗುವ ಆಹಾರ ಪದಾರ್ಥಗಳ ಬಳಕೆ ಮಾಡುವುದು ಈ ಕಾಲದಲ್ಲಿ ವಿಶೇಷವಾಗಿ ತುಳುವರಲ್ಲಿ ಕಂಡುಬರುತ್ತದೆ. ಆಟಿ ತಿಂಗಳಲ್ಲಿ ಬರುವ ಅಮಾವಾಸ್ಯೆಯೂ ತುಳುನಾಡಿನಲ್ಲಿ ವಿಶೇಷ ಆಚರಣೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಹಾಲೆ ಮರದ ಕೆತ್ತೆಯನ್ನು ತೆಗೆದು ಕಷಾಯ ತಯಾರಿಸಿ ಅದನ್ನು ಸೂರ್ಯ ಮೂಡುವ ಮುಂಚೆಯೇ ಸೇವಿಸುವ ತುಳುವರು ಸರ್ವರೋಗಕ್ಕೂ ಇದೇ ಮದ್ದು ಎಂಬುದನ್ನು ಇಂದಿಗೂ ನಂಬುತ್ತಾರೆ. ಆಟಿಯ ವಿಶೇಷ ಆಹಾರ ಪದ್ಧತಿಯನ್ನು ಇಂದು ತುಳುನಾಡಿನ ವಿವಿಧ ಸಂಘ-ಸಂಸ್ಥೆಗಳು ಯುವಪೀಳಿಗೆಗೆ ಮತ್ತೆ ಪರಿಚಯಿಸಲು ಮುಂದಾಗಿರುವುದು ಒಳ್ಳೆಯ ವಿಚಾರ. ಆಷಾಢ ಮಾಸ ನಾಡಿನ ಜನತೆಗೆ ಶುಭ ತರಲಿ.

6 comments:

Nishmitha said...

nanu bega maduve agtene... ee tara feeling agodu nija antadre....

Nishmitha said...

nanu bega maduve agtene... ee tara feeling agodu nija antadre....

ಶಶೀ ಬೆಳ್ಳಾಯರು said...

ನಿಶ್ಮಿತಾ, ಕಾಲ ಬದಲಾದಂತೆ ಆಧುನಿಕ ಯುಗದಲ್ಲಿ ಇಂಥ ಭಾವನೆಗಳಿಗೆ ಬೆಲೆ ಸಿಗುವುದು ಅಷ್ಟು ಕಡಿಮೆಯಾದರೂ ಇದನ್ನು ಮನಸಾರೆ ಅನುಭವಿಸೋಕೆ ಏನೂ ತೊಂದ್ರೆ ಇಲ್ಲ ಬಿಡಿ, ನೀವು ಮದುವೆಯಾಗಿ, ಆಷಾಢದಲ್ಲಿ ತವರಿಗೆ ಹೋದಾಗ ಮೊಬೈಲ್ ಅನ್ನು ಮರೆತುಬಿಡಿ. ವಿರಹವೇದನೆಗೆ ಅಕ್ಷರದ ರೂಪ ಕೊಟ್ಟುಬಿಡಿ. ಆಗ ಖಂಡಿತ ಕವಿ ಕೆ.ಎಸ್.ನರಸಿಂಹಸ್ವಾಮಿಯವರು ತಮ್ಮ ಕವನದಲ್ಲಿ ಸ್ಫುರಿಸಿದ ಭಾವಗಳನ್ನು ನೀವೂ ಕಟ್ಟಿಕೊಳ್ಳಬಹುದು... ಥ್ಯಾಂಕ್ಸ್ ನಿಮಗೆ, ಜೈಹೋ...!!

vinoda sadanand said...

It's a very beautiful post.... Thanks

vinoda sadanand said...

It's a very beautiful post ... Thank you.

ಶಶೀ ಬೆಳ್ಳಾಯರು said...

Thnx vinu dr