doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Sunday, April 17, 2011

ಮನ ತಣಿಸುವ ಆಗುಂಬೆ ಚಾರಣ...











ಮನ ತಣಿಸುವ ಆಗುಂಬೆ ಚಾರಣ...

ಆಗುಂಬೆ... ದಕ್ಷಿಣದ ಚಿರಾಪುಂಜಿ ಎಂದೇ ಕರೆಯ ಲ್ಪಡುವ ಆಗುಂಬೆಯನ್ನು ಮಲೆನಾಡಿನ ಮುಖಪುಟವೆಂದು ಬಣ್ಣಿಸುವುದುಂಟು. ಅವೆಷ್ಟೋ ಹಿರಿ-ಕಿರಿಯ ಬೆಟ್ಟಗುಡ್ಡ, ಬೆಳ್ಳನೆ ಹೊಳೆಯುವ ಅಸಂಖ್ಯ ತೊರೆಗಳನ್ನು ತನ್ನಲ್ಲಿ ಹುದುಗಿಸಿಟ್ಟ ಆಗುಂಬೆ ಎನ್ನುವ ಪುಟ್ಟದಾದ ಅಷ್ಟೇ ಸೊಗಸಾದ ಊರಿಗೆ ಕಣ್ಮನ ಸೆಳೆಯುವ ಪಶ್ಚಿಮ ಘಟ್ಟಗಳ ಸಾಲು ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಬಿರುಬಿಸಿಲು ಸುಡುವ ಬೇಸಗೆ ಕಾಲದಲ್ಲಿ ಆಗುಂಬೆಯ ಕಡೆಗೊಮ್ಮೆ ಹೋಗಿಬನ್ನಿ. ಇಲ್ಲಿರುವ ಜಲಪಾತಗಳು ಬೇಸಿಗೆಯಲ್ಲೂ ಬತ್ತದೆ ತಣ್ಣನೆ ಹರಿಯುತ್ತಿರುತ್ತದೆ. ಎತ್ತರದ ಗಿರಿಶೃಂಗಗಳು ಮುಂಜಾನೆಯ ವೇಳೆ ಮಂಜಿನ ಮುಸುಕಿನಲ್ಲಿ ಬಂಧಿಯಾಗಿ ಜೀವನೋತ್ಸಾಹವನ್ನು ತುಂಬುತ್ತದೆ.

ಮಲೆನಾಡಿನ ಸಾಲಿನಲ್ಲಿ ಬರುವ ಆಗುಂಬೆ ಎನ್ನುವ ಪುಟ್ಟ ಹಳ್ಳಿ ಚಾರಣ ಪ್ರಿಯರ ಸ್ವರ್ಗ. ಇಲ್ಲಿಗೆ ತೀರಾ ಸಮೀಪದಲ್ಲಿ ಚಾರಣಕ್ಕೆ ಹೇಳಿ ಮಾಡಿಸಿದ ಅನೇಕ ತಾಣಗಳಿವೆ. ಇಲ್ಲಿನ ಸೊಬಗನ್ನು ಸವಿಯಲು ಬೆಟ್ಟ ಹತ್ತಿಳಿಯುವ ಚಾರಣ ಪ್ರಿಯರು, ಪ್ರವಾಸಿಗರು ಇಲ್ಲಿಂದ ತೆರಳುವಾಗ ಮಾತ್ರ ಸೂಯರ್ಾಸ್ತಮಾನದ ರಮ್ಯ ಸೊಬಗನ್ನು ಕಣ್ತುಂಬಿಕೊಳ್ಳದೆ ಹೋಗಲಾರರು. ಸೋಮೇಶ್ವರ ಎನ್ನುವ ಬೆಟ್ಟದ ಬದಿಯ ಹಳ್ಳಿಯನ್ನು ದಾಟಿ ಬಸ್ಸು ಆಗುಂಬೆ ಘಾಟಿಯನ್ನು ಹತ್ತಲು ಆರಂಭಿಸಿದರೆ ಬಸ್ನಲ್ಲಿ ಇರುವ ಎಂಥವರ ಎದೆಯೂ ನಡುಗದೇ ಇರದು. ಕಡಿದಾದ ತಿರುವಿನಲ್ಲಿ ಬಸ್ ಚಾಲಕ ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ಇನ್ನೊಂದು ಕೈಯನ್ನು ಹಾನರ್್ ಮೇಲಿಟ್ಟು ಬಸ್ಸನ್ನು ಓಡಿಸುವ ಪರಿಗೆ ಬೆರಗು ಹುಟ್ಟದಿರದು. ಇನ್ನೇನು ಘಾಟಿ ಮುಗಿಯಿತು ಅನ್ನುವಾಗ ಅಲ್ಲೇ ರಸ್ತೆಯ ಎಡಬದಿಯಲ್ಲಿ `ಸೂಯರ್ಾಸ್ತಮಾನ ವೀಕ್ಷಣಾ ಸ್ಥಳ' ಎಂಬ ಬೋಡರ್್ ಕಣ್ಣಿಗೆ ಕಾಣುತ್ತದೆ. ಕ್ಷಮಿಸಿ, ಇಲ್ಲಿ ಸಂಚರಿಸುವ ಹೆಚ್ಚಿನ ಬಸ್ಗಳು ಈ ಸ್ಥಳದಲ್ಲಿ ನಿಲುಗಡೆ ಕೊಡುವುದಿಲ್ಲ. ಇಲ್ಲಿ ಬರಲು ಮೇಲಿನ ಸ್ಟಾಪ್ನಲ್ಲಿ ಇಳಿದು ಹಿಂದಕ್ಕೆ ಬರಬೇಕು. ಆಗುಂಬೆ ಮುಖ್ಯಪೇಟೆಯಲ್ಲಿ ಇಳಿದರೆ ಇಲ್ಲಿಗೆ ಬರಲು ಬರೇ ಒಂದು ಕಿ,ಮೀ. ಅಷ್ಟೇ. ಸರಕಾರ ಪ್ರವಾ ಸಿಗರಿಗಾಗಿ ಕಟ್ಟಿದ ವೀಕ್ಷಣಾ ಸ್ಥಳದಲ್ಲಿ ನಿಂತರೆ ದೂರದಿಂದ ಹೆಬ್ರಿ-ಸೋಮೇಶ್ವರ ಟಾರು ರಸ್ತೆ ಬಳುಕಿ ಕುಲುಕಾಡುತ್ತಾ ಸಂಚ ರಿಸುವಂತೆ ತೋರುತ್ತದೆ. ಸೋಮೇಶ್ವರನ ಸನ್ನಿಧಿ, ಬಲಗಡೆ ವಿಶಾಲವಾದ ಪಶ್ಚಿಮ ಘಟ್ಟಗಳ ಸಾಲು ನಮ್ಮನ್ನು ಅದಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ.

ಡಾ. ರಾಜ್ಕುಮಾರ್ ಅವರ ಆಕಸ್ಮಿಕ ಚಿತ್ರದ `ಆಗುಂಬೆಯಾ ಪ್ರೇಮ ಸಂಜೆಯಾ... ಮರೆಯಲಾರೆ..' ಈ ಹಾಡು ಪೂತರ್ಿ ಯಾಗಿ ಇಲ್ಲೇ ಚಿತ್ರೀಕರಣವಾಗಿದೆ ಎಂದು ಈಗಲೂ ನೆನಪಿಸಿ ಕೊಳ್ಳುತ್ತಾರೆ ಇಲ್ಲಿನವರು. ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿ ಇಂದು ಗುರುತಿಸಲ್ಪಟ್ಟಿರುವ ಆಗುಂಬೆಯ ಘಾಟಿಯಲ್ಲಿ ಪ್ರವಾಸಿ ಗರಿಗೆ ಸೂಯರ್ಾಸ್ತವನ್ನು ವೀಕ್ಷಿಸಲು ಸೂಕ್ತ ವ್ಯವಸ್ಥೆಯನ್ನು ಸರಕಾರ ಹಲವು ವರ್ಷಗಳ ಹಿಂದೆಯೇ ಮಾಡಿದೆ. ಇಲ್ಲಿನ ಸೂಯರ್ಾಸ್ತವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಇಂದಿಗೂ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ವಾರಾಂತ್ಯದ ದಿನಗಳಲ್ಲಂತೂ ಆಗುಂಬೆ ಎನ್ನುವ ಸ್ಥಳ ಪ್ರವಾಸಿಗರಿಂದ, ಚಾರಣಿಗರಿಂದ ಕಿಕ್ಕಿರಿದು ತುಂಬುತ್ತದೆ. ಜನರು ತಮಗಾಗಿ ಕಟ್ಟಿರುವ ವೀಕ್ಷಣಾ ಸ್ಥಳದಲ್ಲಿ ಗಂಡು-ಹೆಣ್ಣೆಂಬ ಬೇಧವಿಲ್ಲದೆ ನಿಂತು ಸೂಯರ್ಾಸ್ತ ದೃಶ್ಯವೈಭವವನ್ನು ಮನಸೋ ಇಚ್ಛೆ ಸವಿಯುತ್ತಾರೆ. ಎಲ್ಲರಿಗೂ ತಮ್ಮ ಮೊಬೈಲ್, ಕ್ಯಾಮೆ ರಾಗಳಲ್ಲಿ ಆಗಸದ ಅಂಚಿನಿಂದ ಜಾರಿ ಕಡಲಿಗೆ ಇಳಿಯು ತ್ತಿರುವ ನೇಸರನ ಬಂಧಿಸುವ ಆತುರ... ಹೊಳೆವ ಕೆಂಬಣ್ಣದ ಉಂಡೆಯಾಗಿ, ಬೆಳಕಿನ ಬಟ್ಟಲಾಗಿ, ತಟ್ಟೆಯಾಗಿ, ಚಮಚದಂತೆ ಗೋಚರಿಸಿ ಅಂತಿಮವಾಗಿ ಕಣ್ಣು ಪಿಳಿಪಿಳಿಬಿಟ್ಟು ನೋಡುತ್ತಿದ್ದಂತೆ ಕಡಲಿನಲ್ಲಿ ಜಾರಿ ಕ್ಷಣಮಾತ್ರದಲ್ಲಿ ಮರೆಯಾಗುವ ನೇಸರ ಅಲ್ಲಿ ನೆರೆದ ಅಸಂಖ್ಯ ಪ್ರವಸಿಗರಿಗೆ ನಿತ್ಯ ಮಧುರಾನುಭೂತಿಯನ್ನು ನೀಡುತ್ತಾನೆ. ನೇಸರ ಮರೆಯಾದಂತೆ ವಾಸ್ತವ ಲೋಕಕ್ಕೆ ಮರಳಿ ಸುತ್ತ ಕಣ್ಣು ಹಾಯಿಸಿದರೆ ಬೆಟ್ಟಗಳ ಸಾಲಿನಲ್ಲಿ ಕತ್ತಲೆ ತುಂಬುತ್ತದೆ. ಹಿತವಾದ ತಂಗಾಳಿ ಮೈಸೋಕುತ್ತಾ ಕತ್ತಲಾದುದನ್ನು ನೆನಪಿ ಸುತ್ತದೆ. ವಿಶ್ವದ ಪ್ರಸಿದ್ಧ ಸೂಯರ್ಾಸ್ತವನ್ನು ಸವಿದಿದ್ದೇವೆ ಎಂಬ ಖುಷಿಯಿಂದ ಬೆಟ್ಟ ಇಳಿಯುತ್ತಿದ್ದರೆ ಮನಸ್ಸಿಗಾಗುವ ಸಂತಸ ವಣರ್ಿಸಲಸದಳ.

ಕೂಲ್ ಕೂಲ್ ಚಾರಣ ಸ್ಪಾಟ್ಗಳು:

ಒನಕೆ ಅಬ್ಬಿ ಜಲಪಾತ: ಚಾರಣಪ್ರಿಯರಿಗೆ ಆಗುಂಬೆ ಹೇಳಿ ಮಾಡಿಸಿದ ತಾಣ. ಇಲ್ಲಿ ಸುತ್ತಮುತ್ತ ಕಲವೇ ಕಿ.ಮೀ. ಅಂತರದಲ್ಲಿ ಅಸಂಖ್ಯ ಜಲಧಾರೆ, ಬೆಟ್ಟಗುಡ್ಡ ಚಾರಣಿಗರ ಬರುವಿಕೆಗಾಗಿ ಕಾದಿದೆ. ಆಗುಂಬೆ ಪೇಟೆ ಪ್ರವೇಶಿಸುವುದಕ್ಕೂ ಹಿಂದೆ ರಸ್ತೆಯ ಎಡಬದಿಯಲ್ಲಿ ಒನಕೆ ಅಬ್ಬಿ ಜಲಪಾತ ಎಂಬ ಬೋಡರ್್ ಕಾಣಿಸುತ್ತದೆ, ಇಲ್ಲಿಂದ 3.5 ಕಿ.ಮೀ. ದೂರ ದಟ್ಟವಾದ ಅರಣ್ಯದಲ್ಲಿ ಸಂಚರಿಸಿದರೆ ಆಗುಂಬೆ ಪರ್ವತ ಶ್ರೇಣಿಯಿಂದ ಸುಮಾರು 1,400 ಅಡಿ ಮೇಲಿನಿಂದ ಕೆಳಕ್ಕೆ ಧುಮ್ಮಿಕ್ಕುವ ಒನಕೆ ಅಬ್ಬಿ ಜಲಧಾರೆ ಕಾಣಸಿಗುತ್ತದೆ. ಸೋಮೇಶ್ವರ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಬರುವ ಈ ಸ್ಥಳಕ್ಕೆ ಹೋಗುವಾಗ ಕಾಡಿನಲ್ಲಿ ಅಸಂಖ್ಯ ಔಷಧಿ ಗುಣವುಳ್ಳ ಮರ-ಗಿಡಗಳು ಕಾಣಿಸುತ್ತವೆ. ಮಳೆಗಾಲ ಆರಂಭವಾದರೆ ಇಲ್ಲಿ ಉಂಬುರು(ಇಂಬಳ) ಕಾಟ ಅಧಿಕ. ಬೇಸಿಗೆಯಲ್ಲಿ ಪರವಾಗಿಲ್ಲ. ಆದರೂ ಬ್ಯಾಗ್ನಲ್ಲಿ ಸುಣ್ಣದುಂಡೆ ಇಟ್ಟುಕೊಳ್ಳುವುದು ಒಳಿತು. ಸರಕಾರ ಇಲ್ಲಿ ಹಲವು ವರ್ಷಗಳ ಹಿಂದೆಯೇ ಚಾರಣಿಗರಿಗೆ ಅನುಕೂಲವಾಗಲೆಂದು ಕಲ್ಲಿನ ಮೆಟ್ಟಿಲನ್ನು ನಿಮರ್ಿಸಿದೆ. ಚಾರಣದ ಹಾದಿಯಲ್ಲಿ ಮರಗಳು ಬಿದ್ದು ಅಡಚಣೆಯಾಗುತ್ತಿದ್ದರೂ ಇಲ್ಲಿಗೆ ಹೋದರೆ ಹಿಂತಿರುಗಿ ಬರಲು ಮನಸ್ಸಾಗದು. ಮುಂಜಾನೆ ಬೇಗನೆ ಕಾಡಿನೊಳಕ್ಕೆ ಹೋದರೆ ಕಾಡುಹಂದಿ, ಕರಡಿ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ. ಈ ಬಗ್ಗೆ ಬೋಡರ್್ ಹಾಕಿರದಿದ್ದರೂ ಎಚ್ಚರ ದಿಂದಿರುವುದು ಒಳಿತು. ಆಗಸ್ಟ್ ತಿಂಗಳಿಂದ ಎಪ್ರಿಲ್ ತಿಂಗಳಾಂತ್ಯದವರೆಗೂ ಇಲ್ಲಿಗೆ ಭೇಟಿ ನೀಡಬಹುದು.

ಜೋಗಿ ಗುಂಡಿ: ಆಗುಂಬೆ ಪೇಟೆ ದಾಟಿ ಶೃಂಗೇರಿ ರಸ್ತೆಯಲ್ಲಿ ಎರಡು ಕಿ.ಮೀ. ಮುಂದೆ ಸಾಗಿದರೆ `ಜೋಗಿ ಗುಂಡಿ'ಗೆ ಹೋಗುವ ರಸ್ತೆ ಕಾಣಸಿಗುತ್ತದೆ. ರಸ್ತೆಯನ್ನು ದಾಟಿ ದಟ್ಟಾರಣ್ಯದಲ್ಲಿ ಮೂರು ಕಿ,.ಮೀ. ಚಾರಣ ಕೈಗೊಂಡರೆ ಸುಂದರ ಜಲಧಾರೆ ಜೋಗಿ ಗುಂಡಿ ಇದಿರಾಗುತ್ತದೆ. ಕಾಡಿನ ನಡುವೆ ಮನಸೆಳೆಯುವ ಜಲಧಾರೆಯನ್ನು ಮಳೆ ಗಾಲದಲ್ಲಿ ವೀಕ್ಷಿಸುವುದೇ ಸೊಗಸು. ಬೇಸಿಗೆ ಯಲ್ಲಿ ನೀರು ಬತ್ತದಿದ್ದರೂ ಬೆಟ್ಟದ ಮೇಲಿ ನಿಂದ ಹರಿಯುವ ಜಲಧಾರೆಯಲ್ಲಿ ಅಷ್ಟಾಗಿ ರಭಸ ಇರುವುದಿಲ್ಲ. ಇಲ್ಲಿಯೂ ಇಂಬಳಗಳ ಕಾಟ ಅಧಿಕ. ಆಗಸ್ಟ್ ತಿಂಗಳಿನಿಂದ ಫೆಬ್ರವರಿ ತಿಂಗಳು ಚಾರಣಕ್ಕೆ ಸೂಕ್ತ ಸಮಯ.

ನಿಶಾನಿ ಗುಡ್ಡ: ಆಗುಂಬೆ ಪೇಟೆಯ ಸಮೀಪವೇ ಇರುವ ಶಾಲೆಯ ಹಿಂಭಾಗಕ್ಕೆ ಕಣ್ಣು ಹಾಯಿಸಿದರೆ ಕಾಣುವುದೇ ನಿಶಾನಿ ಗುಡ್ಡ. ಸುಮಾರು ಮೂರು ಕಿ.ಮೀ. ಚಾರಣ ನಡೆಸಿದರೆ ನಿಶಾನಿ ಗುಡ್ಡದ ಮೇಲೇರಿ ನಿಸರ್ಗ ಸೌಂದರ್ಯ ಸವಿಯಬಹುದು. ಇಲ್ಲಿ ಸೂಯರ್ಾಸ್ತ, ಸೂಯರ್ೋದಯ ತುಂಬಾ ಸೊಗಸಾಗಿ ಕಾಣುತ್ತದೆ. ಆಗಸ್ಟ್ ತಿಂಗಳಿನಿಂದ ಎಪ್ರಿಲ್ ತಿಂಗಳಾಂತ್ಯ ದವರೆಗೂ ಇಲ್ಲಿ ನಿಸರ್ಗ ಸೌಂದರ್ಯ ಸವಿಯಲು ಉತ್ತಮ ಪ್ರಕೃತಿಯಿದೆ. ಬೆಟ್ಟದ ಮೇಲೆ ಸಾಗಿದಂತೆ ದಟ್ಟನೆ ಮುತ್ತುವ ಮಂಜಿನ ಹನಿಗಳು ಚಾರಣಿಗರಿಗೆ ವಿಭಿನ್ನ ಅವುಭವವನ್ನು ನೀಡುವುದರಲ್ಲಿ ಸಂದೇಹವಿಲ್ಲ.

ದೊಡ್ಡಮನೆ: ಆರ್.ಕೆ ನಾರಾಯಣ್ ಬರೆದಿದ್ದ ಕಾದಂ ಬರಿಯನ್ನು ಆಧರಿಸಿ ದಿ. ಶಂಕರ್ನಾಗ್ ನಿಮರ್ಿಸಿದ `ಮಾಲ್ಗುಡಿ ಡೇಸ್' ಧಾರಾವಾಹಿ ಸಂಪೂರ್ಣ ಚಿತ್ರಿತ ವಾಗಿದ್ದು ಆಗುಂಬೆ ಯಲ್ಲಿ. ಇಲ್ಲಿ ಯಾರ ಬಳಿಯೂ ನೀವು `ದೊಡ್ಡಮನೆ ಎಲ್ಲಿ, ಮಾಲ್ಗುಡಿ ಮನೆ ಎಲ್ಲಿ' ಎಂದು ಕೇಳಿದರೆ ಎರಡಂತಸ್ತಿನ ಹತ್ತಿರದಲ್ಲೇ ಇರುವ ದೊಡ್ಡಮನೆಯನ್ನು ತೋರಿಸುತ್ತಾರೆ. ಇಲ್ಲಿ ಹೋಗಿ ದೊಡ್ಡಮನೆಯನ್ನು ಸಂದ ಶರ್ಿಸಿದಲ್ಲಿ ಮನೆ ಯೊಡತಿ ಕಸ್ತೂರಿ ಅಕ್ಕ ಬಿಸಿಬಿಸಿ ಆಗುಂಬೆ ಸ್ಪೆಷಲ್ ಕಷಾಯ ದೊಂದಿಗೆ ನಿಮ್ಮನ್ನು ಸ್ವಾಗತಿಸುತ್ತಾರೆ. ಆಗುಂಬೆಯ ಜೀವನಶೈಲಿ, ಬದುಕಿನ ವಿವಿಧ ಮಜಲುಗಳ ಅರಿವಿರುವ ಕಸ್ತೂರಿ ಅಕ್ಕನ ಬಳಿ ಮಾತಾಡುತ್ತ ಕುಳಿತರೆ, ಇಡೀ ಆಗುಂಬೆಯ ಪರಿಚಯ ನಮಗಾಗುತ್ತದೆ.

ಸೋಮೇಶ್ವರ ಮಳೆಕಾಡಿನ ವಿಶ್ರಾಂತಿಧಾಮ: ಆಗುಂಬೆ ಯ ಪೇಟೆಗಿಂತ ಅರ್ಧ ಕಿಮೀ ದೂರ ಸೋಮೇಶ್ವರ ರಸ್ತೆಯಲ್ಲಿ ಸಂಚರಿಸಿದರೆ ಸೋಮೇಶ್ವರ ಮಳೆಕಾಡಿನ ವಿಶ್ರಾಂತಿ ಧಾಮ ಸಿಗುತ್ತದೆ. ಇಲ್ಲಿ ವಿಶಾಲವಾದ ಕೆರೆಯಲ್ಲಿ ಪೆಡಲ್ ಬೋಟಿಂಗ್ ಮಾಡಬಹುದು. ಹತ್ತು ರೂಪಾಯಿಯ ಒಂದು ನೋಟು ಕೊಟ್ಟರೆ ಬೋಟನ್ನು ನಾವೇ ಚಲಾಯಿಸಿಕೊಂಡು ಕೆರೆಗೆ ಒಂದು ಸುತ್ತು ಹಾಕಿ ವಾಪಸ್ ಬರಬಹುದು. ಇಲ್ಲಿ ಮಂಗಗಳ ಉಪದ್ರವೂ ಹೆಚ್ಚು. ಕೆರೆಯ ಬದಿಯಲ್ಲಿ ನಿಮರ್ಿಸಿ ರುವ ಕುಟೀರ, ಬೆಂಚುಗಳಲ್ಲಿ ಸಾಕಷ್ಟು ಹೊತ್ತು ಪ್ರಕೃತಿಯ ಮಡಿಲಿನಲ್ಲಿ ವಿರಮಿಸಿ ವಾಪಸ್ ಆಗಬಹುದು.

ಸೋಮೇಶ್ವರ ಹಪರ್ೆಟೋ ಕ್ಯಾಂಪ್: ಆಗುಂಬೆಯ ದಾರಿಯಲ್ಲಿ ಸೋಮೇಶ್ವರ ಪೇಟೆ ಪ್ರವೇಶಿಸುವುದಕ್ಕೂ ಮುನ್ನ ಹಪರ್ೆಟೋ ಕ್ಯಾಂಪ್ ಸಿಗುತ್ತದೆ. ವಿವಿಧ ಜಾತಿಯ ಸಸ್ಯ, ಪ್ರಾಣಿ, ಹಕ್ಕಿಗಳನ್ನು ನೋಡಿ ಸಂತಸಪಡಲು ಇದು ಹೇಳಿ ಮಾಡುವ ತಾಣ. ಇಲ್ಲಿ ಪ್ರವಾಸಿಗರು, ಚಾರಣಿಗರು ಉಳಿಯಲು ಸೂಕ್ತ ವ್ಯವಸ್ಥೆಯೂ ಇದೆ. ಇಲ್ಲಿ ಒಳಹೋಗಲು ವಿಧಿಸಿರುವ ದರ ಕೊಂಚ ಹೆಚ್ಚೇ ಎಂದೆಣಿಸಿದರೂ ಇಲ್ಲಿ ಸುತ್ತಾಡಿ ಕಾಲ ಕಳೆಯಲು ಯೋಗ್ಯವಾಗಿದೆ.

ಚಾರಣಿಗರಿಗೆ ಟಿಪ್ಸ್:

ಆಗುಂಬೆಯಲ್ಲಿ ಪ್ರವಾಸಿಗರ, ಚಾರಣಿಗರ ಅನುಕೂಲಕ್ಕೆ ಲಾಡ್ಜ್, ಸರಕಾರದ ವಸತಿಗೃಹವೂ ಇದೆ. ಸೋಮೇಶ್ವರದಲ್ಲಿ ಇರುವ ಹಪರ್ೆಟೋ ಕ್ಯಾಂಪ್ನಲ್ಲಿ ಟೆಂಟ್ ವ್ಯವಸ್ಥೆಯೂ ಇದೆ. ಚಾರಣ ಕೈಗೊಂಡ ಸ್ಥಳಗಳಲ್ಲಿ ಊಟ, ತಿಂಡಿ, ನೀರು ಸಿಗುವುದು ಕಷ್ಟ. ಹತ್ತಿರದ ಕ್ಯಾಂಟೀನ್, ಗೂಡಂಗಡಿಯಲ್ಲಿ ಮೊದಲೇ ಹೇಳಿ ಹೋದರೆ ಹಿಂತಿರುಗುವ ಹೊತ್ತಿಗೆ ಬಿಸಿಬಿಸಿ ಮಲೆನಾಡ ಸ್ಪೆಷನ್ ಅಡುಗೆ ರೆಡಿ ಆಗಿರುತ್ತದೆ. ಒಂದು ವೇಳೆ ನೀರು, ಆಹಾರದ ಪೊಟ್ಟಣವನ್ನು ಕಟ್ಟಿಕೊಂಡು ಚಾರಣಕ್ಕೆ ಹೋದರೂ ತಿಂದುಳಿದ ಪ್ಲಾಸ್ಟಿಕ್ ಪೊಟ್ಟಣ, ನೀರಿನ ಬಾಟ್ಲಿಯನ್ನು ಯಾರೂ ಕೇಳುವವರಿಲ್ಲ ಎಂದು ಅಲ್ಲಿ ಬಿಸಾಡದಿರಿ. ಬದಲಿಗೆ ಅದನ್ನು ಕೊಂಡುಹೋದಷ್ಟೇ ಜೋಪಾನವಾಗಿ ಮರಳಿ ತನ್ನಿ. ಚಾರಣ ಬೆಳೆಸುವ ಮುನ್ನ ನಕ್ಸಲ್ ನಿಗ್ರಹ ದಳ ಅಥವಾ ಪೊಲೀಸ್ ಠಾಣೆಯಲ್ಲಿ ಮಾಹಿತಿ. ವಿಳಾಸ ಮೊದಲೇ ನೀಡುವುದು ಒಳಿತು. ಒಂದೊಮ್ಮೆ ನೀಡದೆ ಹಾಗೇ ಹೋದರೆ ಸಿಕ್ಕಿಬಿದ್ದರೆ ಕಷ್ಟ. ನಕ್ಸಲರೆಂಬ ಭ್ರಮೆಯಲ್ಲಿ ಮಾನಸಿಕ ಕಿರುಕುಳ ಕೊಟ್ಟು ಚಾರಣದ ನೆನಪನ್ನು ಕಹಿ ಮಾಡಿಬಿಡುತ್ತಾರೆ.

ಕೆಂಪು ಉಗ್ರರ ನಾಡು?

ಹೆಬ್ರಿ ಪೇಟೆ ದಾಟಿದರೆ ಸಾಕು ನಮ್ಮನ್ನು ಕಾಡುವ ಭಯ ಎಂದರೆ ನಾವೀಗ ಕೆಂಪು ಉಗ್ರರ ಅಥರ್ಾತ್ ನಕ್ಸಲರ ನೆಲದಲ್ಲಿದ್ದೇವೆ ಎನ್ನುವುದು..! ಪತ್ರಿಕೆ, ಟಿವಿ ಚಾನೆಲ್ಲುಗಳು ತಮಗೆ ಸಿಗುವ ಒನ್ಲೈನ್ ಸುದ್ದಿಯನ್ನು ಬೇಕಾಬಿಟ್ಟಿ ಬಳಸಿಕೊಂಡು ಮಲೆನಾಡನ್ನು ನಕ್ಸಲರ ಆವಾಸಸ್ಥಾನ ಎಂಬಷ್ಟರಮಟ್ಟಿಗೆ ಜನರಲ್ಲಿ ಭಯ ಹುಟ್ಟಿಸಿವೆಯೋ, ಅಥವಾ ಪೊಲೀಸ್ ಇಲಾಖೆ ಇಲಿಯನ್ನು ಹುಲಿ ಎಂದು ಭಾವಿಸಿ ಭಯ ಹುಟ್ಟಿಸಿದೆಯೋ ತಿಳಿಯಲಾಗದು. ಆದರೆ ಇಂದಿಗೂ ಆಗುಂಬೆಯ ಬೀದಿಗೆ ಕಾಲಿಟ್ಟರೆ ಸಾಕು ಕಂಡುಬರುವುದು ಮಾತ್ರ ಪೊಲೀಸರದ್ದೇ ದಂಡು..! ಹೆಗಲಲ್ಲೊಂದು ಬ್ಯಾಗು, ಕೈಯಲ್ಲಿ ಕ್ಯಾಮೆರಾ, ಕಾಲಿಗೆ ಚಪ್ಪಲಿ, ಕಪ್ಪು ಬಣ್ಣದ ಶೂ ಇದ್ದರೆ ಹೇಳುವುದೇ ಬೇಡ, ಅಪಾದಮಸ್ತಕವಾಗಿ ನಮ್ಮನ್ನು ನೋಡಿ ಪ್ರಶ್ನೆಗಳ ಸುರಿಮಳೆ ಸುರಿಸುವ ಇವರನ್ನು ಕಂಡು ಅದೆಷ್ಟೋ ಬಾರಿ ಅನಿಸಿದ್ದುಂಟು... ಇವರಿಗಿಂತ ನಕ್ಸಲರೇ ಬೆಟರ್ ಅಂತ. ಇದು ನಾನು ಹೇಳುವ ಮಾತಲ್ಲ. ಅದೇ ಆರ್.ಕೆ.ನಾರಾಯಣ್ ತಮ್ಮ `ಮಾಲ್ಗುಡಿ ಡೇಸ್ನಲ್ಲಿ ಹಾಡಿ ಹೊಗಳಿ ಮಲೆನಾಡು, ಅದೇ ಕುವೆಂಪು ಕುಪ್ಪಳ್ಳಿಯಲ್ಲಿ ಕುಳಿತು, `ಉತ್ತುಂಗ ಶಿಖರಗಳಿರುವುದು ಪ್ರವಾಸಕ್ಕಲ್ಲದೆ, ನಿವಾಸಕ್ಕಲ್ಲ ಎಂದು ಬರೆದ ವಾಕ್ಯ. ದರಾಬೇಂದ್ರೆ, ಕಾರಂತರ ಸೊಬಗಿನ ಮಲೆನಾಡು ಇಂದು ಹಾಗೆ ಉಳಿದಿಲ್ಲ ಎನ್ನುವುದೇ ಬೇಸರದ ಸಂಗತಿ. ಮಲೆನಾಡಿಗೆ ನಕ್ಸಲರೆನ್ನುವ ಮಂದಿ ಬಂದಿದ್ದು ಈಗ್ಗೆ ಕೆಲವು ವರ್ಷಗಳ ಹಿಂದೆ. ಆದರೆ ಆನಂತರದ ಬದಲಾವಣೆಗಳನ್ನು ಗಮನಿಸಿದರೆ ನಿಜಕ್ಕೂ ಸೋಜಿಗವೆನಿಸುತ್ತದೆ. ಮಲೆನಾಡು ಎನ್ನುವ ಪ್ರಕೃತಿ ನಿಜಕ್ಕೂ ಕೆಂಪು ಉಗ್ರರ ನೆರಳಿನಲ್ಲಿ ಕರಗುತ್ತಿದೆಯೇ ಅಥವಾ ಹಾಗೆಂಬ ಭ್ರಮೆ ನಮ್ಮನ್ನು ಆವರಿಸಿಕೊಂಡು ಬಿಟ್ಟಿದೆಯೇ ಎನ್ನುವುದು ತಿಳಿಯುತ್ತಿಲ್ಲ.
ಕಾಮತರ ಚರುಮುರಿ

ನೀವು ಆಗುಂಬೆಯ ಸೂಯರ್ಾಸ್ತಮಾನ ಸ್ಥಳಕ್ಕೊಮ್ಮೆ ಭೇಟಿ ಕೊಟ್ಟಿದ್ದರೆ ನಿಮಗೆ ಅಲ್ಲಿ ಚರುಮುರಿ ಮಾರುವ ಕಾಮತರ ಪರಿಚಯ ವಿರಲೇಬೇಕು. ಕಳೆದ 15 ವರ್ಷಗಳಿಂದ ಆಗುಂಬೆಯ ಸೂಯರ್ಾ ಸ್ತಮಾನ ಪ್ರದೇಶವನ್ನು ವ್ಯವಹಾರಕ್ಕೆ ಆಯ್ದುಕೊಂಡಿರುವ ಕಾಮತರ ಮುಖದಲ್ಲಿ ಆಗುಂಬೆಯಲ್ಲಿ ಕಳೆದ ಗತಜೀವನದ ಏರಿಳಿತಗಳು ಅಡಕ ವಾದಂತೆ ಭಾಸವಾಗುತ್ತದೆ. ಇವರು ಮಾಡಿಕೊಡುವ ಮಂಡಕ್ಕಿ ಚರುಮುರಿ ತಿಂದಲ್ಲಿ ಆಗುಂಬೆಯ ಭೇಟಿ ಮರೆಯದ ನೆನಪಾಗಿ ಉಳಿಯುತ್ತೆ ಎಂಬ ಕಾರಣಕ್ಕೋ ಏನೋ ಇವರ ಸುತ್ತ ಗ್ರಾಹಕರಿಗೆ ಕೊರತೆಯೆಂದೂ ಬಂದಿಲ್ಲ. `ಎಲ್ಲಾ ದೇವರ ಅನುಗ್ರಹ, ಆತ ನಡೆಸಿದಂತೆಯೇ ಆಗುತ್ತದೆ' ಎಂದು ಕಾಣದ ದೇವರಿಗೆ ಕೈಮುಗಿಯುವ ಕಾಮತರ ಮನೆ ಇರುವುದು ಸೋಮೇಶ್ವರದಲ್ಲಿ. ಇಳಿವಯಸ್ಸಿನಲ್ಲೂ ಆಗುಂಬೆಯ ಬೆಟ್ಟ ಹತ್ತಿ ವ್ಯವಹಾರ ಮಾಡುವ ಇವರ ಬದುಕು ನಿಜಕ್ಕೂ ಆಗುಂಬೆಯಷ್ಟೇ ಬೆರಗು ಹುಟ್ಟಿಸುತ್ತದೆ. ತನ್ನ ಬಳಿಗೆ ಬರುವ ಪ್ರವಾಸಿಗರನ್ನು ಪ್ರೀತಿಯಿಂದ ಮಾತಾಡಿಸುವ ಕಾಮತರ ಸ್ಪೆಷಲ್ ಚರುಮುರಿ ಸದಾಕಾಲ ಸಿದ್ಧವಾಗಿರುತ್ತದೆ...

3 comments:

Sandeep K B said...

ಸುಂದರ ಫೋಟೋ ಮತ್ತು ಬರಹ

ಶಶೀ ಬೆಳ್ಳಾಯರು said...

ಧನ್ಯವಾದ ಸಂದೀಪ್... ಪ್ರತೀ ಬಾರಿ ಬ್ಲಾಗ್ ಬರೆಯುವಾಗಲೂ ನಿಮ್ಮಿಂದ ಸಲಹೆ, ಪ್ರತಿಕ್ರಿಯೆ ನಿರೀಕ್ಷಿಸುತ್ತೇನೆ... ನಿರಾಸೆಗೊಳಿಸದೆ ಹಾಕಿದ ದಿನವೇ ಪ್ರತಿಕ್ರಿಯೆ ನೀಡಿದ್ದಕ್ಕೆ ಥ್ಯಾಂಕ್ಸ್...!

vishwasdiary said...

 ಆಗುಂಬೆ  ಬಗ್ಗೆ  ತುಂಬ ಚೆನ್ನಾಗಿದೆ