(ಬಾಳಿನ ದಾರಿಯಲ್ಲಿ ಬೇಗನೆ ಕಳೆದುಹೋದ ಗೆಳೆಯನಿಗೆ ಅಕ್ಷರಗಳ ಅಶ್ರುತರ್ಪಣ)
ಜೀವನ ಅಂದ್ರೆ ಹೀಗೇ ಏನೋ...! ನಾವಂದ್ಕೊಂಡಂತೆ ಆಗಲ್ಲ, ಆಗೋದಾದ್ರೂ ನಮ್ಗೆ ಆಗದವರು ನಮ್ಮನ್ನು ಬಿಡಲ್ಲ... ಹೀಗೆ ಸದಾ ಏರಿಳಿತದ ಜೀವನದಿಂದ ಬೇಸತ್ತು ನಾವಾದ್ರೂ ಯಾಕಪ್ಪಾ ಬದುಕಿರ್ಬೇಕು? ನಾನು ಸತ್ರೆ ಒಳ್ಳೇದಿತ್ತು, ಆವಾಗ ಏನೂ ಟೆನ್ಷನ್ ಇರಲ್ಲ... ಹೀಗೆ ನಮ್ಮ ಪ್ರತಿಯೊಬ್ಬರ ಮನಸ್ಸು ಯಾವತ್ತಾದ್ರೂ ಒಂದ್ಸಲ ಯೋಚಿಸಿರುತ್ತೆ ಬಿಡಿ, ಆದ್ರೆ ಈ ಸತ್ಯಾನಾ ಒಪ್ಕೊಳ್ಳೋಕೆ ಮಾತ್ರ ಯಾರೂ ಸಿದ್ಧರಿರಲ್ಲ...
ಚಿಕ್ಕಂದಿನಿಂದಲೂ ದಿನ, ಕ್ಷಣ ಬಿಡದಂತೆ ಏನಾದರೊಂದು ಸಮಸ್ಯೆ ನಮ್ಮನ್ನು ಕಾಡ್ತಾನೇ ಇರತ್ತೆ. ಈ ಸಮಸ್ಯೆಗಳಿಂದ ಬಿಡುಗಡೆ ಪಡೆಯಲು ಕೆಲವೊಂದು ಹೇಡಿಗಳು ಸಾವಿನ ಮೊರೆ ಹೋಗ್ತಾರೆ. `ಸಾವು' ಅಂತಂದ್ರೆ ಸಮಸ್ಯೆಗಳಿಂದ ಮುಕ್ತಿ ಅನ್ನೋದೇ ಹೆಚ್ಚಿನವರ ವಾದ. ಆದ್ರೆ ಅದೇ ಸಾವಿನಿಂದ ಸಮಸ್ಯೆಗಳ ಆರಂಭ ಅಂತ ತಿಳಿರೋರು ಮಾತ್ರ ತೀರಾ ವಿರಳ. ಹುಟ್ಟು-ಸಾವು ಈ ಎರಡರ ನಡುವೆ ಮೂರು ದಿನದ ಬಾಳು ಅಂತ ದಾಸಶ್ರೇಷ್ಟರೇನೋ ಹೇಳಿದ್ದಾರೆ ಸ್ವಾಮೀ... ಆದ್ರೆ ಈ ಮೂರು ದಿನದ ಬಾಳು ಎಷ್ಟೊಂದು ನೋವು, ಅವಮಾನ, ಕಷ್ಟ ನೀಡುತ್ತೆ ಅಂತ ಅವರ್ಗೇನು ಗೊತ್ತು?
ಹೀಗ ಸಾಯೋದಕ್ಕೆ ಬೇಕಿರೋ ಕಾರಣ, ಆರ್ಹತೆಗಳನ್ನು ಪಟ್ಟಿ ಮಾಡೋದು ಸುಲಭ. ಕ್ಷಣ ಕಾಲ ಯೋಚಿಸಿ ನೋಡಿ. ನಮ್ಮ ಮನಸ್ಸು `ಸಾವು' ಅನ್ನೋ ಎರಡಕ್ಷರಾನಾ ನಮ್ಮ ಕಣ್ಮುಂದೆ ತಂದು ನಿಲ್ಲಿಸಲಿ. ಆಗ ಭಯ ಶುರುವಾಗುತ್ತೆ. ಸಾಯದಕ್ಕಿಂತ ಹೇಗಾದ್ರೂ ಸರಿ ಬದುಕೋದೇ ಬೆಟರ್ ಅನ್ನೋದನ್ನು ಮನಸ್ಸು ಒಪ್ಪಿಕೊಳ್ಳುತ್ತೆ.
ಕೆಲವರು ಮಾತು-ಮಾತಿಗೂ ನಾನು ಸಾಯ್ತೀನಿ ಅಂತ ಹೇಳ್ತಾರೆ, ಆದ್ರೆ ಅಂಥವ್ರು ಯಾರೂ ಸತ್ತ ಉದಾಹರಣೆಗಳೂ ಇಲ್ಲ. ಸಾಯಬೇಕೆಂದಿರುವವರು ಎಂದೂ ತನ್ನ ಸಾವನ್ನು ಯಾರ ಜೊತೆಯೂ ಹಂಚ್ಕೊಳ್ಳಲ್ಲ. ಇಷ್ಟಕ್ಕೂ ಸಾವನ್ನು ನಾವಾಗೇ ತಂದುಕೊಂಡ್ರೆ? ಇದು ಖಂಡಿತಾ ಅಪರಾಧವೇ ಸರಿ. ಎಕ್ಸಾಮಲ್ಲಿ ಫೇಲ್ ಆಗ್ತೀವಿ, ಲವರ್ ಕೈಕೊಟ್ರು, ಮನೇಲಿ ಬೈದ್ರು, ಕೆಲಸ ಕೈಕೊಡುತ್ತೆ ಇಂಥ ಕಾರಣಕ್ಕೆ ಸಾಯ್ಬೇಕು ಅಂಥ ನಿಧರ್ಾರ ಮಾಡರಿಗೆ ನಾನು-ನೀವು ಏನು ಹೇಳೋಕಾಗುತ್ತೆ ಬಿಡಿ. ಅವರಿಗೆ ಒಟ್ಟಾರೆ ಹೇಗಾದ್ರೂ ಸಾಯಲೇಬೇಕು. ಅದಕ್ಕಾಗಿ ಆತ್ಮಹತ್ಯೆ ಎನ್ನುವ ಪಾಪದ ಕೃತ್ಯಕ್ಕೆ ಕೊರಳೊಡ್ಡುತ್ತಾರೆ.
ಆತ್ಮಹತ್ಯೆ ಹೇಳೋಕೆ ಎಷ್ಟೊಂದು ಸುಲಭ ಅಲ್ವಾ? ಆದರೆ ಆತ್ಮಹತ್ಯೆ ಮಾಡ್ಕೊಂಡೋರ ಮನೋಸ್ಥಿತಿ ಹೇಗಿರಬಹುದು ಅಂತ ದೂರದಲ್ಲಿ ನಿಂತು ಕಲ್ಪಿಸಿಕೊಳ್ಳೋಕೂ ಅಸಾಧ್ಯ. ನಾನಂತೂ ಆತ್ಮಹತ್ಯೆ ಮಾಡ್ಕೊಂಡೋರ ಹೆಣ ನೋಡೋಕ್ಕೂ ಹೋಗಲ್ಲ. ಅವರ ನಿಸ್ತೇಜ ದೇಹ ನೋಡಿ ಕಣ್ಣೀರೂ ಸುರಿಸಲ್ಲ. ಯಾಕೇಂದರೆ ನನ್ ಜೀವನದಲ್ಲಿ ಇಂತಹ ಆತ್ಮಹತ್ಯೆಯ ಕೃತ್ಯವನ್ನು ಅದೆಷ್ಟೋ ಕಂಡಿದ್ದೀನಿ. ನಿಮಗೆ ಹೀಗೆ ಹೇಳೋದಕ್ಕೆ ಮುಖ್ಯ ಕಾರಣಾನೇ ನನ್ನ ಬಾಲ್ಯ ಸ್ನೇಹಿತ.
ಅವನೊಬ್ಬನಿದ್ದ ನಮ್ಮೊಂದಿಗೆ...
ನಾನು, ನನ್ನ ಕಸಿನ್ ಬ್ರದರ್ ಮತ್ತು ಆತ ನಾವೆಲ್ಲಾ ಚಡ್ಡಿ ಹಾಕದ ಕಾಲದಿಂದಲೂ ಚಡ್ಡಿದೋಸ್ತ್ಗಳು. ಎಲ್ಲಿಗೋ ಹೋದ್ರೋ ನಮ್ಗೆ ತ್ರಿಮೂತರ್ಿ ಅನ್ನೋ ಅಡ್ಡ ಹೆಸರು ಬೇರೆ. ಕಲಿಯುವುದರಲ್ಲೂ ಅಷ್ಟೇ... ಆತ ನಮಗಿಂತ ಸ್ವಲ್ಪ ಮುಂದೆ, ನಾವೆಲ್ಲಾ ಹಿಂದೆ. ಬಾಲ್ಯದಲ್ಲೇ ಅವನ ಜತೆ ನಾವೆಲ್ಲಾ ಜೀವನಪೂತರ್ಿ ಜತೆಯಾಗಿರುವ ಪಣ ತೊಟ್ಟಿದ್ದೆವು. ಹಸ್ತಕ್ಕೆ ಹಸ್ತವನ್ನು ತಾಗಿಸಿ ಭಾಷೆಯೇನೋ ಕೊಟ್ಟಿದ್ವಿ. ಆದ್ರೆ ಆ ಭಾಷೆ, ಪಣ ಇವೆಲ್ಲದರಿಂದ ಆತನನ್ನು ನಮ್ಜೊತೆ ಉಳಿಸೋಕ್ಕೆ ಆಗಿಲ್ಲ. ಮೆಟ್ರಿಕ್ ಮುಗಿದ ನಂತರ ನಾವು ಮೂವರೂ ಬೇರೆ-ಬೇರೆಯಾದೆವು. ಆತ ಮತ್ತು ನಾನು ಪ್ರತಿದಿನ ಅಲ್ಲದಿದ್ರೂ ವಾರದಲ್ಲಿ ಒಂದು ದಿನ ಭೇಟಿಯಾಗಿ ಮಾತಾಡುವಷ್ಟು ಗೆಳೆತನ ಇನ್ನೂ ಉಳಿದಿತ್ತು. ಆತನಂದ್ರೆ ನನಗೆ ಏನೋ ಅಕ್ಕರೆ... ನಮ್ಮ ಮನೆಯಲ್ಲೂ ಅಷ್ಟೇ... ನನಗಿಂತ ನನ್ನ ಗೆಳೆಯನ ಮೇಲೆ ಮಮತೆ ಹೆಚ್ಚು. ಹೌದು... ಆತ ಇಂದು ನಮ್ಮೊಂದಿಗಿಲ್ಲ... ಆತ ಆತ್ಮಹತ್ಯೆ ಎಂಬ ಪಾಪದ ಕೂಪಕ್ಕೆ ಕೊರಳೊಡ್ಡಿ ಬರಲಾರದ ಊರಿಗೆ ಪಾದ ಬೆಳೆಸಿ ಆಗಿದೆ. ಕೊನೆಯ ಸಲ ನನ್ನನ್ನು ಭೇಟಿಯಾದಾಗ ತುಂಬಾ ಮಾತನಾಡಿದ್ದ. ಆದ್ರೆ ಅದೇ ದಿನ ಕೊನೆಯ ಮಾತು ಹೇಳದೆ ಸಾವಿಗೆ ಶರಣಾದ ಎಂದರೆ ಊಹಿಸಲು ಕಷ್ಟವಾಗಿತ್ತು. ಸಾವು ಅನ್ನೋ ಪದಾನೇ ನನಗಾಗೇ ಅಪರಿಚಿತ. ಹಾಗಾಗಿ ಆತನ ಸಾವನ್ನು ಅರಗಿಸಿಕೊಳ್ಳೋಕೆ ನಾನು ಸಿದ್ಧನಿರಲಿಲ್ಲ. ಆತನ ಮನೆಮುಂದೆ ಶವ ಅಂಗಾತ ಮಲಗಿತ್ತು. ಎಲ್ಲರೂ ಬಿಳಿವಸ್ತ್ರಧಾರಿಗಳೇ... ಅಮ್ಮನ ಬಲವಂತಕ್ಕೆ ಕಟ್ಟುಬಿದ್ದು ಅಲ್ಲಿಗೆ ಹೋಗಿದ್ದೆ. ಆದರೆ ಯಾಕೋ ಮನಸ್ಸು ಕಠಿಣವಾಗಿತ್ತು. ಕಣ್ಣಿಂದ ಒಂದ ಹನಿ ಕಣ್ಣೀರೂ ಉರುಳಲಿಲ್ಲ. ಅವನು ಕಾಲನ ಕರೆಗೆ ಓಗೊಟ್ಟು ಹೋಗಿದ್ದರೆ ಕ್ಷಮಿಸುತ್ತಿದ್ದೆನೇನೋ... ಆದರೆ ಆತನೇ ಕಾಲನನ್ನು ಕೈಬೀಸಿ ಕರೆದರೆ...?
ಸತ್ತವನ ಮನೆಯ ಮುಂದೆ ಜಾತ್ರೆಯ ವಾತಾವರಣ.., ಯಾರು ಯಾರಿಗೆ ಅಳುವುದೋ? ಅಯ್ಯೋ.. ಅಮ್ಮಾ ಅಂತ ಎಷ್ಟು ದಿನ ಬೊಬ್ಬಿಡಬಹುದಲ್ವಾ? ಕೊನೆಗೊಂದು ದಿನ ಕಣ್ಣೀರು ಬತ್ತಿಹೋದಾಗ ಸಾವಕಾಶವಾಗಿ ಅವನ ನೆನಪೂ ಕರಗುತ್ತೆ.
ಬಾಲ್ಯ ಸ್ನೇಹಿತನ ಅಕಾಲ ಮರಣ ನನ್ನನ್ನು ಅಧೀರನನ್ನಾಗಿಸಿದ್ದು ಹೌದು.! ಆಮೇಲೆ ಸಾವಿಗೆ ಭಯ ಪಡಬಾರದು ಅಂದುಕೊಂಡೆ. ಸತ್ತೋರಿಗ ಅತ್ರೆ ಅವರು ಮತ್ತೆ ಬರ್ತಾರಾ? ಅದಕ್ಕೆ ಹೇಳೋದು... ಸಾವು ತಾನಾಗೇ ಬರ್ಬೇಕು, ನಾವು ಅದನ್ನು ಹುಡ್ಕೊಂಡು ಹೋಗೋದು ಮೂರ್ಖತನವೇ ಸರಿ.
ಜೀವನದಲ್ಲಿ ಏನೇ ಸಮಸ್ಯೆ ಬರಲಿ, ಎಷ್ಟೇ ಕಷ್ಟ ಸಿಗಲಿ ಆದರೆ, ಆತ್ಮಹತ್ಯೆಯಂತಹ ಪಾಪಕ್ಕೆ ಕೊರಳೊಡ್ಡುವ ಮುನ್ನ ಕೊಂಚ ಹೊತ್ತು ಯೋಚಿಸೋಣ. ಸಾಯಲು ಮತ್ತು ಸಾಯದಿರಲು ಕಾರಣ ಹುಡುಕೋಣ. ಆತ ಸಾವು ಬೇಡವೆನ್ನಿಸುತ್ತೆ. ಮನಸ್ಸು ಬುದ್ಧಿಯ ಜಾಡು ಹಿಡಿದು ನಡೆಯುತ್ತೆ. ದೂರದಲ್ಲೆಲ್ಲೋ ದೀಪವೊಂದು ಬೆಳಗುತ್ತಿರುವುದು ಕಾಣುತ್ತೆ. ಸಾಯೋದು ಬಿಟ್ಟು ಆ ಕಡೆ ನಡೆದರೆ ಸಾಕು, ನಾವು ನಡೆಯೋ ದಾರಿ ಸ್ಪಷ್ಟವಾಗುತ್ತೆ. ಆದ್ದರಿಂದ ನೋ ಮೋರ್ ಸುಸೈಡ್ ಪ್ಲೀಸ್..
ನಿನ್ನೆಗೆ ಆತ ನನ್ನಿಂದ ದೂರವಾಗಿ 10 ವರ್ಷಗಳು ಸಂದಿವೆ. ಗೆಳೆಯನ ನೆನಪಿನಲ್ಲಿ ಕಣ್ಣು ಮಂಜಾಗುತ್ತಿವೆ. ಮತ್ತೊಂದು ಜನ್ಮ ಅಂತಿದ್ದರೆ ನಾನೂ-ಅವನೂ ಮತ್ತೆ ಗೆಳೆಯರಾಗಿ ಹುಟ್ಟುತ್ತೇವೆ.... ಎಂಬ ವಿಶ್ವಾಸ ಮಾತ್ರ ಹಾಗೇ ಉಳಿದಿದೆ...!!!
4 comments:
ಪ್ರೀತಿಯ ಶಶಿ...
ಆತ್ಮಹತ್ಯೆ ಮಾಡಿಕೊಳ್ಳುವವರು ತುಂಬಾ ದಿನದಿಂದ ಪ್ಲ್ಯಾನ್ ಮಾಡಿ ಮಾಡಿಕೊಳ್ಳುವದಿಲ್ಲ..
ಹೆಚ್ಚಿನದಾಗಿ..
ಅದೊಂದು ದುರ್ಬಲ ಮನಸ್ಸಿನ ಆ ಕ್ಷಣದ ಆತುರದ ನಿರ್ಧಾರ..
ಆ ಕ್ಷಣ ತಪ್ಪಿಹೋದರೆ ಮತ್ತೆ ಆ ನಿರ್ಧಾರಕ್ಕೆ ಬರಲಾರರು..
ನಿಜ
ಆತ್ಮೀಯರು ಅನಿರೀಕ್ಷಿತವಾಗಿ ಹೋಗಿಬಿಟ್ಟರೆ ಆಘಾತ ಸಹಿಸೋದು ಬಹಳ ಕಷ್ಟ..
ಶಶೀ...
ನಿಜ ಸಾವು ಸಮಸ್ಯೆಗಳಿಗೆ ಪರಿಹಾರ ಖಂಡಿತ ಅಲ್ಲ...ಕ್ಷಣದ ದುರ್ಬಲತೆ ಸಾವಿಗೆ ಒಡ್ಡಿಕ್ಕೊಳ್ಳುವಂತೆ ಮಾಡುತ್ತದೆ..ಇಂಥ ದುರ್ಬಲತೆ ಯಾರ ಬಾಳಲ್ಲೂ ಬರದಿರಲಿ..ಸೋಲಲ್ಲಿ ಬದುಕು ಇರಲಿ..ಸಾವು ಬೇಡ...
ಒಳ್ಳೆಯ ಸಂದೇಶ ಇರುವ ಲೇಖನ...ಧನ್ಯವಾದಗಳು..
ಆತ್ಮಹತ್ಯೆ ನಿಜಕ್ಕೂ ಬೇಸರದ ವಿಷಯ,ಹೆತ್ತವರಿಗೆ ಮತ್ತು ಆಪ್ತರಿಗೆ ದುಖ ತರುವ ಕೆಲಸ,ಆತ್ಮಹತ್ಯೆ ಹೇಡಿಗಳ ಲಕ್ಷಣ ,
ಜೀವನದಲ್ಲಿ ಧೈರ್ಯವಾಗಿ ಮುನ್ನುಗ್ಗುವುದನ್ನು ಎಲ್ಲರು ಕಲಿಯಬೇಕಿದೆ
ಶಶೀ...
ನಮ್ಮ ಮನಸ್ಸಿಗೆ ಆತ್ಮೀಯರಾಗಿರುವವರ ಸಾವನ್ನು ಅರಗಿಸಿಕೊಳ್ಳುವುದು ಕೊಂಚ ಕಷ್ಟವೇ. ಆತ್ಮಹತ್ಯೆಗೆ ಪ್ರಯತ್ನ ಪಡೋ ಮನಸ್ಸು ಯಾವಾಗಲೂ ಆ ಬಗೆಯ ಯೋಚನೆಯನ್ನು ಮಾಡೋಲ್ಲ. ಆದರೆ ಆ ಯೋಚನೆ ಬಂತು ಅಂತಾದರೆ ಆ ಕ್ಷಣ ಅವರಿಗೆ ಬೇಕಾಗಿರುವುದು. ಆತ್ಮೀಯತೆ, ಪ್ರೀತಿ, ಧೈರ್ಯ ತುಂಬಿರುವ ಮಾತುಗಳು. ಇವು ಸಿಕ್ಕಿಲ್ಲ ಎಂದಾದರೆ ತನ್ನನ್ನು ಯಾರೂ ಪ್ರೀತಿಸುವುದಿಲ್ಲ. ನನಗೆ ಎಲ್ಲೂ ಪ್ರೀತಿ ಸಿಗಲ್ಲ ಅನ್ನೋ ನಿರ್ಧಾರಕ್ಕೆ ಒಂದು ಕ್ಷಣಾರ್ಧದಲ್ಲಿ ಬದುಕು ಮುಗಿಸುತ್ತಾರೆ.
Post a Comment