doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Saturday, January 29, 2011

ಮುಸ್ಸಂಜೆಯ ಮಾಲ್ಗುಡಿ ಪಯಣ...





ಮಾಲ್ಗುಡಿ ಹಸರು ಕೇಳದವರು ಬಹುಷ: ವಿರಳವೇ ಇರಬಹುದು. ಸುಮಾರು 15 ವರ್ಷಗಳ ಹಿಂದೆ ದೂರದರ್ಶನ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಮಾಲ್ಗುಡಿ ಡೇಸ್ ಧಾರಾವಾಹಿ ಜನರನ್ನು ಯಾವ ರೀತಿ ಆಕಷರ್ಿಸಿತ್ತು ಎಂದರೆ ಜನರು ಮಾಲ್ಗುಡಿ ಎಂಬ ಊರಿನ ಬಗ್ಗೆ ಸಹಜವಾಗೇ ಕುತೂಹಲ ಬೆಳೆಸಿದ್ದರು. ಅದು ಪ್ರಸಾರವಾಗುತ್ತಿದ್ದುದು ಹಿಂದಿ ಭಾಷೆಯಲ್ಲಾದರೂ ನಮಗೆಲ್ಲಾ ಅದು ಅಚ್ಚುಮೆಚ್ಚು. ಕಾರಣ ಅದರಲ್ಲಿ ಅಭಿನಯಿಸುತ್ತಿದ್ದ ದಿವಂಗತ ವಿಷ್ಣು, ಶಂಕರನಾಗ್ ಅವರಂತಹ ನಟರುಗಳು. ಮಾತ್ರವಲ್ಲದೆ ಮಾಸ್ಟರ್ ಮಂಜುನಾಥ್ ಎಂಬ ಬಾಲ ಪ್ರತಿಭೆಯನ್ನು ಕಿರುತೆರೆಗೆ ಮೊದಲ ಬಾರಿ ಈ ಧಾರಾವಾಹಿ ಮೂಲಕವೇ ಶಂಕರನಾಗ್ ಪರಿಚಯಿಸಿದ್ದರು. ಆರ್.ಕೆ. ನಾರಾಯಣ್ ರಚಿಸಿದ್ದ `ಸ್ವಾಮಿ ಆ್ಯಂಡ್ ಫ್ರೆಂಡ್ಸ್' ಕಥಾ ಸಂಕಲನವನ್ನು ಹಿರಿಯ ನಟ ಶಂಕರನಾಗ್ ದಕ್ಷ ನಿದರ್ೇಶನದಲ್ಲಿ ಧಾರಾವಾಹಿಯನ್ನಾಗಿ ಮಾಡಲಾಗಿತ್ತು. ಸೊಗಸಾಗಿ ಮೂಡಿಬರುತ್ತಿದ್ದ ಈ ಧಾರಾವಾಹಿಯನ್ನು ರಾತ್ರಿ ನಿದ್ದೆಗೆಟ್ಟಾದರೂ ನೋಡದಿದ್ದರೆ ಮನಸ್ಸಿಗೆ ಸಮಾಧಾನವಾಗುತ್ತಿರಲಿಲ್ಲ. ಆದರೆ ಇದೇ ಮಾಲ್ಗುಡಿ ಬಗ್ಗೆ ಮನದಲ್ಲಿ ಇದ್ದ ಅದೆಷ್ಟೋ ಕುತೂಹಲಕ್ಕೆ ತೆರೆ ಬಿದ್ದಿದ್ದು ದೂರದರ್ಶನಕ್ಕಾಗಿ 25 ವರ್ಷಗಳ ಹಿಂದೆ ಮಾಲ್ಗುಡಿಯಾಗಿ ರೂಪವೆತ್ತಿದ್ದ ದಕ್ಷಿಣದ ಚಿರಾಪುಂಜಿ ಎಂದೇ ಕರೆಯಲ್ಪಡುವ ಆಗುಂಬೆಯ ಬೀದಿಗೆ ಕಾಲಿಟ್ಟಾಗಲೇ.

ಹೌದು... ಆರ್.ಕೆ. ನಾರಾಯಣ್ ಬರೆದಿದ್ದ ಪುಸ್ತಕ ಓದಿದ ಮೇಲಂತೂ ಅಲ್ಲಿಗೊಮ್ಮೆ ಭೇಟಿಕೊಡದಿದ್ದರೆ ಹೇಗೆ ಎಂದು ಮನಸ್ಸು ಹೇಳುತ್ತಿತ್ತು. ಮಾಲ್ಗುಡಿ ಎನ್ನುವುದು ಆಗುಂಬೆಯೆಂಬ ಪುಟ್ಟ ಊರಿನ ಒಂದು ಬೀದಿಯಲ್ಲಿ ಮೂಡಿಬಂದ ಅದೆಷ್ಟೋ ಕಲ್ಪನೆಯ ಸಾಕಾರ ರೂಪ ಎಂದು ಅರಿತಾಗ ಆ ಬಗೆಗಿನ ತವಕ, ಕುತೂಹಲ ಇನ್ನಷ್ಟು ಹೆಚ್ಚುತ್ತಿತ್ತು. ಕಾದು ಕಾದು ಕೊನೆಗೊಮ್ಮೆ ಆ ದಿನ ಬಂದೇಬಿಟ್ಟಿತು. ಮಂಗಳೂರಿನಿಂದ ಹೊರಡುವ ಪುಟ್ಟ ಬಸ್ನಲ್ಲಿ ಹೊರಟು ಆಗುಂಬೆ ತಲುಪಿದಾಗ ಮಧ್ಯಾಹ್ನ ದಾಟಿತ್ತು. ಸೂರ್ಯನ ಸುಡು ಬೇಗೆಯ ಸುಳಿವಿರಲಿಲ್ಲ. ಮಳೆ ಹೆಚ್ಚು ಸುರಿಯುವ ಕಾರಣಕ್ಕೋ ಏನೋ, ಅಷ್ಟಾಗಿ ಇಲ್ಲಿ ಬಿಸಿಲು ಸುಡುವುದಿಲ್ಲ. ಇನ್ನೇನು ಕೆಲ ಹೊತ್ತು ಕಳೆದರೆ ಕೊರೆವ ಚಳಿ ಆರಂಭವಾಗುತ್ತದೆ ಎನ್ನುವುದನ್ನು ಪ್ರಕೃತಿ ಸಾರಿ ಹೇಳುತ್ತಿತ್ತು.

ದೊಡ್ಡಮನೆ ಊರಿಗೆ ದೊಡ್ಡದು...

ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕಾಗಿ ದಿವಂಗತ ಶಂಕರನಾಗ್ ಆರಿಸಿದ್ದ ದೊಡ್ಡಮನೆಯ ಬಗ್ಗೆ ಬೀದಿಯಲ್ಲಿ ಯಾರ ಹತ್ರ ಕೇಳಿದರೂ ಮಾಹಿತಿ ಇತ್ತು. ಊರಿಗೆ ದೊಡ್ಡದು ಎಂಬ ಕಾರಣಕ್ಕೇ ಆಗಿರಬೇಕು, ಕೇಳಿದ ತಕ್ಷಣ ಜನರು ಕರಾರುವಾಕ್ಕಾಗಿ ದಾರಿ ತೋರಿಸುತ್ತಿದ್ದರು. ಬಸ್ ತಂಗುದಾಣದಿಂದ ಕಾಲ್ನಡಿಗೆಯ ದೂರದಲ್ಲಿರೋ ದೊಡ್ಡಮನೆ ಸುಮಾರು 115 ವರ್ಷಗಳನ್ನು ಪೂರೈಸಿದೆ. ಮಾಲ್ಗುಡಿ ಧಾರಾವಾಹಿಯ ಬಹುತೇಕ ಎಪಿಸೋಡ್ಗಳಲ್ಲಿ ಕಾಣಿಸಿಕೊಂಡ ಈ ಮನೆಯ ಎದುರು ನಿಂತಾಗ ನಮ್ಮನ್ನು ಸ್ವಾಗತಿಸಿದ್ದು ಮನೆಯ ಯಜಮಾನ್ತಿ ಕಸ್ತೂರಿ ಅಕ್ಕ. 65 ವರ್ಷ ಪ್ರಾಯದ ಇವರು ಆದರದಿಂದ ಬರಮಾಡಿಕೊಂಡು ಉತ್ಸಾಹದ ಚಿಲುಮೆಯಂತೆ ನಮ್ಮನ್ನು ಸತ್ಕರಿಸಿದ ರೀತಿ ಮಲೆನಾಡಿಗರ ಉಪಚಾರವನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದ್ದು ಸುಳ್ಳಲ್ಲ. ಈ ಮನೆಗೆ ಸೊಸೆಯಾಗಿ ಬಂದಿರುವ ಕಸ್ತೂರಿ ಅಕ್ಕ ಈಗಲೂ ಊರಿಗೆ ಮಹಾಮಾತೆಯಾಗಿದ್ದಾರೆ. ಅವರ ಔದಾರ್ಯತೆ, ಪ್ರೀತಿ, ಅಕ್ಕರೆಯ ಬಗ್ಗೆ ಊರಿನಲ್ಲಿ ಯಾರಲ್ಲಿ ಕೇಳಿದರೂ ಬೇರೆ ಉತ್ತರ ಸಿಗಲಾರದು. ಅತಿಥಿಗಳು, ಪ್ರವಾಸಿಗರು, ಚಾರಣಿಗರು ಹೀಗೆ ದಣಿದು ಬಂದ ಯಾರಿಗೂ ಎಲ್ಲೂ ಕೊರತೆಯಾಗದಂತೆ ಉಪಚರಿಸುವ ಕಸ್ತೂರಿ ಅಕ್ಕ ಮಾಲ್ಗುಡಿ ಡೇಸ್ ಸೀರಿಯಲ್ನಲ್ಲಿ ಈ ಮನೆ ಕಂಡಿದ್ದರ ಹಿಂದಿನ ರಹಸ್ಯವನ್ನು ಈ ರೀತಿ ವಿವರಿಸುತ್ತಾರೆ.

ಖ್ಯಾತ ನಿದರ್ೇಶಕ ಗಿರೀಶ್ ಕಾನರ್ಾಡ್ ಅವರ ಜತೆ ನಮ್ಮ ಯಜಮಾನರಾದ ವಿಜೇಂದ್ರ ರಾಯರಿಗೆ ಒಳ್ಳೆಯ ಸ್ನೇಹವಿತ್ತು. ದಿವಂಗತ ಶಂಕರನಾಗ್ ಸೀರಿಯಲ್ ಮಾಡುತ್ತೇನೆ. ಒಂದು ದೊಡ್ಡ ಮನೆ ತೋರಿಸಿ ಎಂದಾಗ ಕಾನರ್ಾಡರು ನಮ್ಮ ಮನೆ ತೋರಿಸಿದರು. ಇದರ ಪರಿಣಾಮ ನಾವು ಈ ಮನೆಯನ್ನು ಧಾರಾವಾಹಿ ಚಿತ್ರೀಕರಣಕ್ಕೆ ಬಿಟ್ಟುಕೊಟ್ಟೆವು. ಹಲವು ತಿಂಗಳ ಕಾಲ ಚಿತ್ರೀಕರಣಕ್ಕಾಗಿ ನಮ್ಮ ಮನೆ ಹಾಗೂ ಆಗುಂಬೆಯ ಬೀದಿಯನ್ನು ಬಳಸಿಕೊಂಡ ಶಂಕರನಾಗ್ ನಮ್ಮ ಆತ್ಮೀಯರೇ ಆಗಿಹೋದರು. ಧಾರಾವಾಹಿಯ ಕೊನೆಯ ಕಂತಿನಲ್ಲಿ ನನ್ನ ಮಕ್ಕಳು, ಸಾಕುಪ್ರಾಣಿಗಳನ್ನೂ ಬಳಸಿಕೊಂಡರು ಎಂದು ಕಸ್ತೂರಿ ಅಕ್ಕ ಸ್ಮರಿಸಿಕೊಳ್ಳುತ್ತಾ ಮಾತು ಮುಂದುವರಿಸುತ್ತಾರೆ.

ಮಾಲ್ಗುಡಿ ಡೇಸ್ ಧಾರಾವಾಹಿಯ ಮೂಲಕ ದೊಡ್ಡಮನೆಯ ಸೌಂದರ್ಯ ಜಗತ್ತಿಗೇ ತಿಳಿಯುತ್ತಿದ್ದಂತೆ ಅದೆಷ್ಟೋ ಮಂದಿ ತಮ್ಮ ಚಿತ್ರಗಳಿಗಾಗಿ ಈ ಮನೆಯನ್ನು ಬಾಡಿಗೆಗೆ ಕೊಡಿ ಎಂದರು. ನಾನು ಯಾವುದಕ್ಕೂ ಒಪ್ಪಿಗೆ ಕೊಡಲಿಲ್ಲ. ಆದರೂ ರಮಾನಂದ ಸಾಗರ್ ಅವರ ಒತ್ತಾಯದ ಮೇರೆಗೆ ವಿಕ್ರಂ ಔರ್ ಬೇತಾಳ್ ಧಾರಾವಾಹಿ ಚಿತ್ರೀಕರಣಕ್ಕೆ ಮನೆಯನ್ನು ಬಿಟ್ಟುಕೊಟ್ಟೆವು. ಇದಾದ ಬಳಿಕ ಕೆಲವು ವರ್ಷಗಳ ಹಿಂದೆ ಸುದೀಪ್ ಅವರ ಮೈ ಅಟೋಗ್ರಾಫ್ಗೂ ಮನೆ ಬಳಸಿಕೊಂಡಿದ್ದಾರೆ ಎನ್ನುವ ಇವರ ಮಾತಲ್ಲಿ ಸಿನಿಮಾ ಮಂದಿಯ ಬಗ್ಗೆ ಬೇಸರವೂ ಕಂಡುಬರುತ್ತದೆ. ಸಿನಿಮಾ ಚಿತ್ರೀಕರಣದ ವೇಳೆ ಇಲ್ಲಿದ್ದ ಪುರಾತನ ವಸ್ತುಗಳನ್ನು ಒಡೆದು ಹಾಕಿದ್ದು ಮಾತ್ರವಲ್ಲದೆ ಶುಚಿತ್ವದ ಕಡೆಗೂ ಗಮನ ನೀಡುತ್ತಿರಲಿಲ್ಲ, ಹೀಗಾಗಿ ಇನ್ನು ಮುಂದೆ ಮನೆ ಯಾರಿಗೂ ಬಿಟ್ಟುಕೊಡಬಾರದು ಎಂದು ನಿರ್ಧರಿಸಿದೆ ಎನ್ನುತ್ತಾರೆ ಕಸ್ತೂರಿ ಅಕ್ಕ. ಇದೀಗ ಎರಡು ಅಂತಸ್ತಿನಿಂದ ಗಮನ ಸೆಳೆಯುವ ದೊಡ್ಡಮನೆ ಪ್ರಾರಂಭದಲ್ಲಿ ಮೂರು ಅಂತಸ್ತನ್ನು ಹೊಂದಿತ್ತು. ಸರ್. ಎಂ. ವಿಶ್ವೇಶ್ವರಯ್ಯ ಇಲ್ಲಿಗೆ ಭೇಟಿ ಕೊಟ್ಟಿದ್ದ ವೇಳೆ ಮನೆಯ ಮೇಲಿನ ಒಂದು ಅಂತಸ್ತನ್ನು ತೆಗೆಯಿರಿ ಎಂದು ಸಲಹೆ ನೀಡಿದ್ದರಿಂದ ಇದೀಗ ಎರಡು ಅಂತಸ್ತಿಗೆ ಸೀಮಿತವಾಗಿದೆ ಎನ್ನುತ್ತಾರೆ. ಕಪ್ಪು ಕಲ್ಲಿನಿಂದ ಕಟ್ಟಲ್ಪಟ್ಟಿರುವ ಮನೆಯಲ್ಲಿ ಕಿಟಕಿ, ಬಾಗಿಲುಗಳನ್ನು ಲೆಕ್ಕ ಹಾಕಲು ಸುಲಭವಾಗಿ ಸಾಧ್ಯವಾಗದು. ನಾಲ್ಕು ಅಡುಗೆ ಕೋಣೆ, ಐದಾರು ದಾಸ್ತಾನು ಕೊಠಡಿ, ಎಂಟು ಬೆಡ್ರೂಂ ಹೊಂದಿರುವ ಈ ಮನೆಯಲ್ಲಿ ನಾಲ್ಕು ಸುತ್ತಲೂ ಪಡಸಾಲೆ ಇದೆ. ಮೂರು ಬಾವಿಯನ್ನೂ ಹೊಂದಿರುವ ದೊಡ್ಡಮನೆಯಲ್ಲಿ ಒಟ್ಟು 70ಕ್ಕೂ ಅಧಿಕ ಕೋಣೆಗಳಿವೆ ಎಂದರೆ ಅಚ್ಚರಿಯಲ್ಲದೆ ಇನ್ನೇನು?

ಸಂಪೂರ್ಣ ಮರದ ಕೆತ್ತನೆ, ಪೀಠೋಪಕರಣ ಹೊಂದಿರುವ ದೊಡ್ಡಮನೆ ನಜಕ್ಕೂ ಕುತೂಹಲದ ಕಣಜ. ಇಷ್ಟು ದೊಡ್ಡದಾದ ಮನೆಯಲ್ಲಿ ಸದ್ಯ ಇರುವುದು ಕಸ್ತೂರಿ ಅವರ ಮಗ-ಸೊಸೆ, ಮೊಮ್ಮಕ್ಕಳು ಹಾಗೂ ಅವರ 85 ವರ್ಷ ಪ್ರಾಯದ ತಾಯಿ. ಶುಚಿತ್ವಕ್ಕಾಗಿ ಕೆಲಸದ ಆಳುಗಳನ್ನು ಇಟ್ಟುಕೊಂಡಿದ್ದು, ದೊಡ್ಡಮನೆ ಈಗ ಪ್ರತೀ ಶನಿವಾರ ಹಾಗೂ ಆದಿತ್ಯವಾರದಂದು ಕಿಕ್ಕಿರಿದು ತುಂಬುತ್ತದೆ. ಬೆಂಗಳೂರು, ಮೈಸೂರು ಕಡೆಯಿಂದ ಬರುವ ಚಾರಣಿಗರು, ಪ್ರವಾಸಿಗರಿಗೆ ಮಲೆನಾಡಿನ ಆತಿಥ್ಯ ನೀಡುವ `ಅಜ್ಜಿಮನೆ'ಯಾಗಿ ಮಾರ್ಪಡುತ್ತದೆ. ದೊಡ್ಡಮನೆಯ ಯಜಮಾನ್ತಿಯೂ ಅಷ್ಟೇ, ಅವರು ಕೊಟ್ಟಷ್ಟು ಹಣ ಪಡೆದು ಅತಿಥಿ ದೇವೋಭವ ಎನ್ನುತ್ತಾರೆ. ಮಲೆನಾಡಿನ ಸಹಜ ಸೌಂದರ್ಯದಿಂದ ಕಂಗೊಳಿಸೋ ದೊಡ್ಡಮನೆ ಇತಿಹಾಸದ ಬಗ್ಗೆ ನೆನಪುಗಳನ್ನು ಕೆದಕುತ್ತಾ ನಮ್ಮೊಂದಿಗೆ ಒಂದಿಷ್ಟು ಹೊತ್ತು ಹರಟಿದ ಕಸ್ತೂರಿ ಅಕ್ಕ ನಮ್ಮನ್ನು ಬೀಳ್ಕೊಡುವ ವೇಳೆ ಮಜ್ಜಿಗೆ, ಚಕ್ಕುಲಿಯ ಸತ್ಕಾರವನ್ನು ಮಾಡದೆ ಬಿಡಲಿಲ್ಲ.

ಮಿಠಾಯಿವಾಲಾ...

ಮಾಲ್ಗುಡಿಯ ಎಪಿಸೋಡ್ ಒಂದರಲ್ಲಿ ಬರುವ ಮಿಠಾಯಿವಾಲಾ ಪಾತ್ರಧಾರಿ ಪಾಂಡುರಂಗ ಪಂಡಿತ್ ಅವರಿಗೆ ವಯಸ್ಸು ಎಂಬತ್ತೈದು ದಾಟಿದರೂ ಅಲ್ಲಿಯೇ ಪಕ್ಕದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ಶಂಕರನಾಗ್ ಹಿಂದಿ ಭಾಷೆಯಲ್ಲಿ ಹೇಳಿಕೊಡುತ್ತಿದ್ದ ಡೈಲಾಗ್ ಅನ್ನು ಚಾಚೂ ತಪ್ಪದೆ ಹೇಳುತ್ತಿದ್ದೆ, ಇದರಿಂದ ಅವರಿಗೂ ನಾನು ಆತ್ಮೀಯನಾಗಿದ್ದೆ ಎಂದು ಕನ್ನಡಕ ತೆಗೆದು ಒರೆಸಿಕೊಳ್ಳುವ ಪಾಂಡುರಂಗ ಅವರು ಇಂದಿಗೂ ಅನಂತ್ನಾಗ್ ಈ ದಾರಿಯಲ್ಲಿ ಬರುವವರು ತಮ್ಮ ಕ್ಯಾಂಟೀನ್ಗೆ ಬಾರದೆ ಹೋಗುವುದಿಲ್ಲ ಅನ್ನುತ್ತಾರೆ. ಮಿಠಾಯಿವಾಲಾ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಕಲಾವಿದ ಇಡೀ ಆಗುಂಬೆಗೆ ಈಗಲೂ ಮಿಠಾಯಿವಾಲಾನೇ.

ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕಾಗಿ ಮಾಲ್ಗುಡಿಯಾಗಿ ಬದಲಾಗಿದ್ದ ಆಗುಂಬೆ ಇಂದಿಗೂ ಹಾಗೇ ಇದೆ. ಎಲ್ಲೋ ಸಣ್ಣಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ ಉಳಿದಂತೆ ಮಾಲ್ಗುಡಿ ಪ್ರಕೃತಿಯ ಮಡಿಲಲ್ಲಿ ಹಾಗೇ ತಣ್ಣಗೆ ಮಲಗಿದೆ ಎಂದರೆ ತಪ್ಪಾಗದು. ಎಪಿಸೋಡ್ನಲ್ಲಿ ಕಾಣಿಸಿದ್ದ ಆಗುಂಬೆ ಗ್ರಾ.ಪಂ. ಕಟ್ಟಡ ಈಗಲೂ ಹಾಗೆಯೇ ಇದೆ. ಕಥಾನಾಯಕ ಸ್ವಾಮಿ(ಮಾಸ್ಟರ್ ಮಂಜುನಾಥ್) ಓದಿದ್ದ ಶಾಲೆ ಬೇರೆ ಕಟ್ಟಡಕ್ಕೆ ಸ್ಥಳಾಂತರವಾಗಿದೆ. ಎಪಿಸೋಡ್ಗಾಗಿ ಇಲ್ಲಿನ ಸರ್ಕಲ್ನಲ್ಲಿ ಇಡಲಾಗಿದ್ದ ಬ್ರಟಿಷ್ ಅಧಿಕಾರಿ ಸರ್. ಫೆಡ್ರಿಕ್ ಲಾಲೆ ಪ್ರತಿಮೆಯನ್ನು ಗ್ರಾ.ಪಂ. ಸ್ಥಳಾಂತರ ಮಾಡಿದೆ. ಹಿಂದೆ ಇಲ್ಲಿ ಪೊಲೀಸ್ ಠಾಣೆಯ ಪುಟ್ಟ ಕಟ್ಟಡವಿದ್ದರೆ ಇಂದು ನಕ್ಸಲರ ಹೆಜ್ಜೆಗುರುತುಗಳಿಂದ ಎಎನ್ಎಫ್ ಚೆಕ್ಪೋಸ್ಟ್ ಬಂದಿದೆ. ಹೆಜ್ಜೆ, ಹೆಜ್ಜೆಗೂ ಗನ್ ಹಿಡಿದು ಕಾಣಸಿಗುವ ಪೊಲೀಸರು ಆಗುಂಬೆಯ ಹೊಸ ಅತಿಥಿಗಳು. ಉಳಿದಂತೆ ಮಾಲ್ಗುಡಿ ಅಥರ್ಾತ್ ಆಗುಂಬೆ ಕೊಂಚವೂ ಬದಲಾದಂತೆ ಕಂಡುಬರುವುದಿಲ್ಲ. ಇಲ್ಲಿನ ಜನರ ಆದರ, ಸತ್ಕಾರವೂ ಅಷ್ಟೇ. ಮಾಲ್ಗುಡಿಯ ಆ ದಿನಗಳು ಹೇಗಿತ್ತೋ, ಈಗಿನ ದಿನಗಳು ಹಾಗೇ ಇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಇಲ್ಲಿನ ಜನರು. ಮುಸ್ಸಂಜೆಯ ಕೆಂಬಣ್ಣ ಬಾನಲ್ಲಿ ಚೆಲ್ಲುತ್ತಿರಲು ಆಗುಂಬೆಯ ಬೀದಿಯಲ್ಲಿ ನಡೆಯುತ್ತಿದ್ದಂತೆ ತಂಗಾಳಿ ಮೈ ಕೊರೆಯುತ್ತಿತ್ತು. ಸುಂದರ ಸೂಯರ್ಾಸ್ತವನ್ನು ಕಣ್ಣಲ್ಲಿ ತುಂಬಿಕೊಂಡು ಮರಳಿ ಬಸ್ ಹತ್ತಿದಾಗ ಮಲೆನಾಡು ಕೈ ಬೀಸಿ ಕರೆದ ಅನುಭವ. ಮರೆಯಲಾರದ ಮಾಲ್ಗುಡಿ ಮಂಜಿನ ಹೊದಿಕೆಯೊಳಗೆ ಮರೆಯಾಗುವ ತವಕದಲಿ ಇದ್ದಂತೆ ಕಂಡುಬರುತ್ತಿತ್ತು.

ಅನಾಥನಾದ ಲಾಲೆ..!

ಮಾಲ್ಗುಡಿ ಡೇಸ್ ಕಥಾಸರಣಿಯಲ್ಲಿ ಫೆಡ್ರಿಕ್ ಲಾಲೆ ಎಂಬ ಬ್ರಿಟಿಷ್ ಸವರ್ಾಧಿಕಾರಿಯೊಬ್ಬನ ಕಥೆಯೂ ಬರುತ್ತದೆ. ಧಾರಾವಾಹಿ ನಿಮರ್ಾಣದ ವೇಳೆ ದಿ. ಶಂಕರನಾಗ್ ಅವರು ಪ್ಯಾರಿಸ್ ಪ್ಲಾಸ್ಟರ್ನಿಂದ ನಿಮರ್ಿಸಲ್ಪಟ್ಟ ಫೆಡ್ರಿಕ್ ಲಾಲೆಯ ಆಳೆತ್ತರದ ಪ್ರತಿಮೆಯನ್ನು ನಿಮರ್ಿಸಿ ಅದನ್ನು ಮಾಲ್ಗುಡಿ ಅಥರ್ಾತ್ ಆಗುಂಬೆಯ ಸರ್ಕಲ್ನಲ್ಲಿ ನಿಲ್ಲಿಸುತ್ತಾರೆ. ಅಂದಿನಿಂದ ಸಮಾರು ಸಮಯ ಧಾರಾವಾಹಿ ತಂಡ ಊರನ್ನು ತೊರೆದು ಹೋದ ಬಳಿಕವೂ ಈ ರಸ್ತೆ ಲಾಲೆ ಬೀದಿ ಎಂದೇ ಕರೆಸಿಕೊಂಡಿದ್ದೂ ಇದೆ. ಆದರೆ ಕಳೆದ ಎರಡು ವರ್ಷದ ಹಿಂದೆ ಆಗುಂಬೆ ಗ್ರಾ,ಪಂ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಲಾಲೆ ಪ್ರತಿಮೆಯನ್ನು ಇಲ್ಲಿಂದ ತೆಗೆಸುವ ನಿಧರ್ಾರ ಕೈಗೊಂಡಿತು. ಅಲ್ಲಿಂದ ಸ್ಥಳೀಯ ಎಸ್ವಿಎಸ್ ಪ್ರೌಢಶಾಲೆಯ ಆವರಣದಲ್ಲಿ ಸ್ವಲ್ಪ ಸಮಯ ನಿಂತಿದ್ದ ಲಾಲೆ ಪ್ರತಿಮೆ ಅಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯಾಗಿದ್ದನ್ನೂ ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿಂದಲೂ ಎತ್ತಂಗಡಿಯಾದ ಪ್ರತಿಮೆ ಶಾಲೆಯ ಹಿಂದಿನ ಮರದ ಬುಡದಲ್ಲಿ ಆಶ್ರಯ ಪಡೆದಿದೆ. ಕೈ, ಕಾಲು ಮುರಿದು ಜೀಣರ್ಾವಸ್ಥೆಯನ್ನು ತಲುಪಿರುವ ಬ್ರಿಟಿಷ್ ಸವರ್ಾಧಿಕಾರಿ ಫೆಡ್ರಿಕ್ ಲಾಲೆ ಪ್ರತಿಮೆ ಅನಾಥವಾಗಿದ್ದು, ಮಾನವನ ದುರಾಸೆ, ಸರ್ವಕ್ಕೂ ತಾನೇ ಅಧಿಕಾರಿಯಾಗಬೇಕೆಂಬ ಹಂಬಲವನ್ನು ಕಂಡು ನಕ್ಕಂತೆ ಭಾಸವಾಗುತ್ತದೆ.

ಆರ್.ಕೆ.ನಾರಾಯಣ್ ಅಂದಂತೆ...

ಸಣ್ಣಕತೆಗಳ ಸಂಗ್ರಹದ ಪುಸ್ತಕಕ್ಕೆ `ಮಾಲ್ಗುಡಿ ಡೇಸ್' ಎಂಬ ಹೆಸರಿಟ್ಟುದರ ಬಗ್ಗೆ ಕತರ್ೃ ಆರ್.ಕೆ.ನಾರಾಯಣ್ ಹೀಗೆ ಹೇಳುತ್ತಾರೆ. ಕತೆಗಳ ಸಂಗ್ರಹಕ್ಕೆ ಒಪ್ಪುವಂತಹ ಭೌಗೋಳಿಕ ಅಂತಸ್ತನ್ನು ತಂದುಕೊಡುವ ಉದ್ದೇಶದಿಂದ ಕಥಾಸಂಕಲನಕ್ಕೆ ಮಾಲ್ಗುಡಿ ಡೇಸ್ ಎಂಬ ಹೆಸರಿಟ್ಟಿದ್ದೇನೆ. ಆದರೆ ಎಲ್ಲಿದೆ ಮಾಲ್ಗುಡಿ ಎಂದು ಆಗಾಗ ನನ್ನನ್ನು ಜನರು ಕೇಳುತ್ತಾರೆ. ಅದು ಕೇವಲ ಕಾಲ್ಪನಕ ಮಾತ್ರ. ಅದು ಯಾವ ಭೌಗೋಳಿಕ ನಕ್ಷೆಯಲ್ಲೂ ಸಿಗಲಾರದು ಎಂಬುದನ್ನು ಮಾತ್ರ ಹೇಳಬಲ್ಲೆ. ಮಾಲ್ಗುಡಿ ದಕ್ಷಿಣ ಭಾರತದ ಸಣ್ಣ ಊರು ಎಂದು ನಾನು ಹೇಳಿದರೆ ಅದು ಅರ್ಧಸತ್ಯದ ಅಭಿವ್ಯಕ್ತಿಯಾಗುತ್ತದೆ. ಏಕೆಂದರೆ ಮಾಲ್ಗುಡಿಯಲ್ಲಿ ಬರುವ ಪಾತ್ರಗಳೆಲ್ಲ ಸಾರ್ವತ್ರಿಕ ಎಂದೇ ನನ್ನ ಅನಿಸಿಕೆ. ಮಾಲ್ಗುಡಿಯ ಪಾತ್ರಗಳನ್ನು ನಾನು ನ್ಯೂಯಾಕರ್್ ನಗರದಲ್ಲಿ ಸಹ ಕಂಡಕೊಳ್ಳಬಲ್ಲೆ. ಇತ್ತೀಚೆಗೆ ಲಂಡನ್ನಿನಲ್ಲಿ ಉತ್ಸಾಹಿ ನಿಮರ್ಾಪಕನೊಬ್ಬ ತಾನು ಒಂದು ಗಂಟೆಯ ಟಿವಿ ಕಾರ್ಯಕ್ರಮ ಮಾಡುವುದಾಗಿಯೂ, ತನ್ನನ್ನು ಮಾಲ್ಗುಡಿಗೆ ಕರೆದೊಯ್ದು ತೋರಿಸುವಿರಾ, ನಿಮ್ಮ ಕಾದಂಬರಿಯ ಪಾತ್ರಗಳನ್ನು ತನ್ನನ್ನು ಪರಿಚಯಿಸುತ್ತೀರಾ ಎಂಬುದಾಗಿ ಕೇಳಿದಾಗ ನಾನು ಒಂದು ಕ್ಷಣ ವಿಚಲಿತನಾದರೂ. ನಾನೀಗ ಒಂದು ಹೊಸ ಕಾದಂಬರಿ ರಚಿಸುವುದರಲ್ಲಿ ನಿರತನಾಗಿದ್ದೇನೆ ಎಂದೆ. ಇನ್ನೊಂದು ಮಾಲ್ಗುಡಿ ಕಾದಂಬರಿಯಾ ಎಂದಾತ ಕೇಳಿದ... ನಾನು ಹೌದು ಎಂದೆ. ಯಾವ ವಿಚಾರವಾಗಿ? ಆತ ಮರುಪ್ರಶ್ನೆ ಎಸೆದ, ಮಾನವ ಆತ್ಮವನ್ನು ಪಡೆದಿರುವ ಹುಲಿಯ ಬಗ್ಗೆ ಎಂದೆ. ಆತ, ಆಹಾ ಒಳ್ಳೇ ಕುತೂಹಲಕಾರಿಯಾಗಿದೆ, ಹಾಗಾದರೆ ನಾನು ಕಾಯುತ್ತೇನೆ, ನಾನು ತಯಾರಿಸಲಿರುವ ಸಾಕ್ಷ್ಯಚಿತ್ರದಲ್ಲಿ ಹುಲಿಯನ್ನೂ ಸೇರಿಸಿದರೆ ಅಧ್ಭುತವಾಗಿರುತ್ತದೆ ಅಂದ.

ಮಾಲ್ಗುಡಿ ಎಲ್ಲಿದೆ?

ಮಾಲ್ಗುಡಿ ಎಂದೇ ಕರೆಯಲ್ಪಡುವ ಆಗುಂಬೆಯ ಬೀದಿ, ದೊಡ್ಡಮನೆಯನ್ನು ಸಂದಶರ್ಿಸಲು ಬಯಸುವವರು ಮಂಗಳೂರಿನಿಂದ ಆಗುಂಬೆ-ಶಿವಮೊಗ್ಗ ಕಡೆ ಸಂಚರಿಸುವ ವೇಗದೂತ ಬಸ್ನಲ್ಲಿ ಸಂಚಾರ ಬೆಳೆಸಬಹುದು. ಆದರೆ ಇವುಗಳು ನಿಗದಿತ ಸಮಯದಲ್ಲಿ ಸಂಚರಿಸುವುದರಿಂದ ಮಂಗಳೂರಿನಿಂದ ಕಾರ್ಕಳ-ಹೆಬ್ರಿ ಮೂಲಕ ಆಗುಂಬೆಯನ್ನು ತಲುಪುವುದು ಸುಲಭ. ಜೂನ್ ಮೊದಲ ವಾರದಿಂದ ಅಕ್ಟೋಬರ್ ತಿಂಗಳವರೆಗೂ ಮಳೆಯ ಆರ್ಭಟ ಸಾಮಾನ್ಯವಾಗಿ ಹೆಚ್ಚೇ ಇರುವುದರಿಂದ ಆ ಬಳಿಕದ ಸಮಯ ಸಂಚಾರಕ್ಕೆ ಯೋಗ್ಯವಾದುದು. ಆಗುಂಬೆಯಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆಯಿದೆ. ಚಾರಣಪ್ರಿಯರಿಗೆ ಇಲ್ಲೇ ಹತ್ತಿರದಲ್ಲಿರುವ ಆಗುಂಬೆಯ ದಟ್ಟಾರಣ್ಯದಲ್ಲಿ ಮರೆಯಾಗಿರುವ ಒನಕೆ ಅಬ್ಬಿ ಜಲಪಾತ ವಿಶಿಷ್ಟ ಅನುಭವ ನೀಡಬಲ್ಲುದು. ವಿಷಪೂರಿತ ಹಾವು, ಕಾಡುಪ್ರಾಣಿಗಳು ಹಾಗೂ ಇಂಬಳದ ಹಾವಳಿ ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.

5 comments:

Ittigecement said...

ಶಶಿಯವರೆ...

ಸುಂದರ...
ಉಪಯುಕ್ತ ಲೇಖನ... ಎರಡನೆಯ ಫೋಟೊ ಬೊಂಬಾಟ್ !!

ನಾನು ಸಣ್ಣವನಿದ್ದಾಗ ಮಾಲ್ಗುಡಿ ಡೇಯ್ಸ್.. ಬಹಳ ಜನಪ್ರಿಯವಾಗಿತ್ತು...
ಶಂಕರ್ ನಾಗ್ ಅವರ ಸಾಹಸ ಮನೆ ಮಾತಾಗಿತ್ತು..

ಆ ಊರಿನ ಕಥೆ...
ಆ ದೊಡ್ಡ ಮನೆಯವರ ವಿಷಯ ಗೊತ್ತಿಲ್ಲವಾಗಿತ್ತು...

ಆ ಮನೆಯೊಡತಿಯವರ ಶೂಟಿಂಗ್ ಅನುಭವ ನಮಗೂ ಬೇಸರ ತರಿಸಿತು...

ಒಂದು ಸುಂದರ ಸ್ಥಳದ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು...

ಮನಮುಕ್ತಾ said...

ಒಳ್ಳೆಯ ಲೇಖನ.. ಅನೇಕ ವಿಚಾರಗಳು ತಿಳಿದವು.
ವ೦ದನೆಗಳು.

ಶಶೀ ಬೆಳ್ಳಾಯರು said...

ಧನ್ಯವಾದ ಪ್ರಕಾಶ್ ಸರ್,, ಮನಮುಕ್ತಾ ಅವರಿಗೆ...
ಮಾಲ್ಗುಡಿಯ ಪಯಣ ನನ್ನ ಅದೆಷ್ಟೋ ಸಮಯದ ಬಯಕೆ. ಆದರೆ ಬಿಡುವಿಲ್ಲದೆ ಅತ್ತ ಕಡೆ ಹೋಗಲಾಗಲಿಲ್ಲ. ಒಂದು ದಿನ ಪುರುಸೋತ್ತು ಮಾಡಿಕೊಂಡು ಮಾಲ್ಗುಡಿಯ ಬೀದಿಗೆ ಕಾಲಿಟ್ಟಾಗ ಏನೋ ಅವ್ಯಕ್ತ ಆನಂದ. ಮಲೆನಾಡಿನ ಒಡಲಲ್ಲಿರುವ ಮಾಲ್ಗುಡಿ ಅಥರ್ಾತ್ ಆಗುಂಬೆ ಎಂಬ ಊರು ಸಹಜವಾಗಿ ಪೇಟೆಯ ಗಲಿಬಿಲಿ, ಜಂಜಡದ ಬದುಕಿನಿಂದ ನಮ್ಮನ್ನು ದೂರ ಇರಿಸುವಂತೆ ಮಾಡಿತು. ಅಲ್ಲಿ ಕಳೆದ ಪ್ರತಿಕ್ಷಣವೂ ನಮಗೆ ತೀರಾ ಅಮೂಲ್ಯ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮಾಲ್ಗುಡಿಯ ಸೌಂದರ್ಯವೇ ಅಂಥದ್ದು... ಇನ್ನೊಮ್ಮೆ ಅಲ್ಲಿಗೆ ಹೋಗಿ ಮಾಲ್ಗುಡಿಯ ಸುಂದರ ಸ್ವಪ್ನವನ್ನು ಕನವರಿಸಬೇಕೆಂದು ಅನಿಸುತ್ತದೆ...
ಪ್ರೀತಿ ತುಂಬಿದ ನಿಮ್ಮ ಮಾತುಗಳು ನನ್ನ ಜತೆ ಹೀಗೇ ಇರಲಿ...

ಸುಷ್ಮಾ ಮೂಡುಬಿದಿರೆ said...

ಮಾಲ್ಗುಡಿಯ ಪಯಣ...ಲೇಖನ ಬಹಳ ಚೆನ್ನಾಗಿದೆ...ನಿಮ್ಮ ಅನುಭವಗಳನ್ನು ಅಕ್ಷರಗಳಲ್ಲಿ ನಮಗೆ ಉಣಬಡಿಸಿದ ಬಗೆ ಬೆರಗಾಗುವಾವಂತದ್ದು...ಓದಿಸಿಕ್ಕೊಂಡು ಹೋಗುವಂತಿರುವ ನಿಮ್ಮ ನಿರೂಪಣಾ ಶೈಲಿ, ಕಲೆ ಹಾಕಿಕೊಂಡಿರುವ ಮಾಹಿತಿ ಬ್ಲಾಗ್ ಓದುಗರನ್ನೂ ಮಾಲ್ಗುಡಿಯ ಸುತ್ತಾಡಿಸಿ ಬಂದಿತು.. ಮತ್ತೇ ನಿಮ್ಮಿಂದ, ನಿಮ್ಮ ಲೇಖನಿಯಿಂದ ಇನ್ನಷ್ಟು ಲೇಖನಗಳುಹರಿದುಬರಲಿ...

ಶಶೀ ಬೆಳ್ಳಾಯರು said...

ಧನ್ಯವಾದ ಸುಶ್ಮಾ ಅವರೇ... ನನ್ನ ಪ್ರತಿ ಬರಹದ ಬಗ್ಗೆಯೂ ಕಾಳಜಿಯಿಂದ ಪ್ರತಿಕ್ರಿಯೆ ನೀಡುತ್ತಿರುವುದಕ್ಕೆ...ಮಾಲ್ಗುಡಿ ನನಗಿಷ್ಟ ಆಯ್ತು.. ಹಾಗೆ ನೋಡಿದರೆ ಮಂತ್ರಮುಗ್ಧಗೊಳಿಸುವ ಆಗುಂಬೆಯ ಬಗ್ಗೆ ಬರೆದದ್ದು ಕಮ್ಮಿಯೇ ಅನ್ನಿಸುತ್ತದೆ... ಮುಂದಿನ ಬಾರಿ ಮಾಲ್ಗುಡಿಗೆ ಪಯಣ ಕೈಗೊಂಡಾಗ ಮತ್ತಷ್ಟು ಬರೆಯುತ್ತೇನೆ... ನಿಮ್ಮ ಪ್ರೀತಿ, ಕಾಳಜಿ ಇದೇ ರೀತಿ ಇರಲಿ...