doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Friday, June 4, 2010

ಮಲೆನಾಡ ಮಡಿಲಿಂದ...




ಮಳೆಗಾಲಕ್ಕೆ ಮಲೆನಾಡೇ ಸರಿ...
ಮುಂಗಾರು ಕಳೆದ ಬಾರಿ ಭರದಿಂದ ಆಗಮಿಸಿ, ಆಗೊಮ್ಮೆ ಈಗೊಮ್ಮೆ ರೌಧ್ರಾವತಾರ ತಾಳಿ ಬಿರುಸಾಗಿ ಸುರಿದರೂ ನಮ್ಗೆ ಮುಂಗಾರಿನ ಮೇಲಿರುವ ಮಮತೆ, ಒಲುಮೆ, ಅಕ್ಕರೆ ಒಂದಿನಿತೂ ಕಡಿಮೆಯಾಗಲ್ಲ. ನನ್ಗಂತೂ ಮುಂಗಾರು ಆಗಮನದ ಈ ಹೊತ್ತು ಬಾಲ್ಯದಲ್ಲಿ ಗತಿಸಿಹೋದ ಅದೆಷ್ಟೋ ಸಿಹಿ ಕಹಿ ಮಿಶ್ರಿತ ನೆನಪುಗಳು ಸದಾಕಾಲ ಕಾಡ್ತಾನೇ ಇರುತ್ತೆ. ಮುಂಗಾರು ಮಳೆ ಕ್ಷಣಕ್ಕೊಮ್ಮೆ ವೇಗ ಪಡೆಯಬಹುದು ಅಥವಾ ಹನಿಯುತ್ತಿರಬಹುದು. ಆದ್ರೆ ನೆನಪುಗಳ ಧಾರೆ ಬಿಡದೆ ಸುರಿಯುತ್ತಿರುತ್ತದೆ. ಮಳೆ ಕೆಲವರಿಗೆ ವಿಪರೀತ ಸಂಕಟ ತರಬಹುದು. ಮಳೆ ಬಂತು ಅಂದ್ರೆ ಸಾಕು, ಮನೆಯ ಬಾಗಿಲು ಮುಚ್ಚಿ ಮನೆಯೊಳಗೆ ಸೇರ್ಕೊಳ್ಳೋರು ಬಹಳ ಜನ. ಇವರಿಗೆ ಈ ಮಳೆಯಲ್ಲಿ ನೆನೆಯೋ ಮನಸ್ಸೇನೋ ಇರುತ್ತೆ. ಆದ್ರೆ ಒಳಗೊಳಗೇನೋ ಅಳುಕು. ಎಲ್ಲಿ ನೆಗಡಿ, ಜ್ವರ ಶುರುವಾಗಿ ಕಂಬಳಿಯೊಳಕ್ಕೆ ಸೇರ್ಕೋಬೇಕಾಗುತ್ತೋ ಅನ್ನೋ ಭಯ. ಹೌದು. ಮುಂಗಾರು ಶುರುವಾಗುವಾಗ ಶೀತ ಸಂಬಂಧಿ ಕಾಯಿಲೆಗಳೂ ಆರಂಭವಾಗಿರುತ್ತೆ. ಪರಿಚಯದ ನೆಂಟರಂತೆ ಆಗಮಿಸುವ ಇದು ನಮ್ಮನ್ನು ಇನ್ನಿಲ್ಲದಂತೆ ಗೋಳು ಹೊಯ್ಯುತ್ತೆ ಅನ್ನೋದು ಬೇರೆ ಮಾತು.
ಚಿಕ್ಕಂದಿನಲ್ಲಿ ಮಳೆಯ ಮೊದಲ ಹನಿ ಭೂಮಿಗೆ ಸೋಕುವಾಗ ಅಮ್ಮ ನಮ್ಮನ್ನೆಲ್ಲಾ ಕರೆದು ಬಟ್ಟೆ ಬಿಚ್ಚಿಸಿ ಅಂಗಳದಲ್ಲಿ ನಿಲ್ಲಿಸುತ್ತಿದ್ದಳು. ಮೇಲಿಂದ ಬೀಳುವ ಮುಂಗಾರಿನ ರಸಧಾರೆಗೆ ಮೈಮನ ಪುಳಕವಾಗುತ್ತಿತ್ತು. ಅಮ್ಮ ಮನೆಯ ಮುಂದಿನ ಬಾಗಿಲಿನಲ್ಲಿ ನಿಂತು ನಮ್ಮನ್ನೆಲ್ಲಾ ಗದರಿಸಿ ಕೂಗಿದರೂ ನಾವು ಮನೆಯೊಳಕ್ಕೆ ಬರುತ್ತಿರಲಿಲ್ಲ. ಅಪ್ಪನ ಜೋರು ಸ್ವರ ಕಿವಿಗೆ ಬೀಳಬೇಕಾಗಿತ್ತು, ನಾವು ಮಳೆಸ್ನಾನ ಮಾಡುವುದನ್ನು ನಿಲ್ಲಿಸಲು. ಮಳೆ ಬಂತಂದ್ರೆ ಕುಟ್ಟಿ ದೊಣ್ಣೆ (ಈಗಿನ ಕ್ರಿಕೆಟ್) ಆಟ ಸಂಪೂರ್ಣ ಬಂದ್. ಅದರ ಬದಲಿಗೆ ಮಳೆಯ ಹರಿವ ನೀರಿನಲ್ಲಿ ಕಾಗದದ ದೋಣಿ ತಯಾರಿಸಿ ತೇಲಿಬಿಡುವ ನಮ್ಮ ಆಟ ಶುರುವಿಟ್ಟುಕೊಳ್ಳುತ್ತಿತ್ತು. ದೋಣಿ ಬಿಡುವುದು, ಹಳೆಯ ಸೈಕಲ್ನ ಪಂಕ್ಚರ್ ಆದ ಟಯರ್ ಹೊಡೆದುಕೊಂಡು ಸುರಿವ ಮಳೆಯನ್ನು ಲೆಕ್ಕಿಸದೆ ಹಳ್ಳ ಕೊಳ್ಳಗಳನ್ನು ದಾಟಿ ಸಾಗುತ್ತಿದ್ದೆವು. ಇದರಿಂದ ಮನಸ್ಸಿಗೆ ಏನೋ ಸಂತಸ. ಹೊತ್ತು ಏರತೊಡಗಿದಾಗ ಅಮ್ಮನ ನೆನಪಾಗುತ್ತಿತ್ತು. ಮನೆ ಸೇರಿದರೆ ಮನೆಯ ತುಂಬಾ `ಅಕ್ಷೀ ಅನ್ನೋ ಸದ್ದು. ಸಂಜೆಗೆ ಅಪ್ಪನ ಬೈಗುಳ ಕೇಳುತ್ತಾ ಅಮ್ಮ ತಯಾರಿಸಿಕೊಟ್ಟ ಒಳ್ಳೆಮೆಣಸು, ಶುಂಠಿಯ ಕಷಾಯ ಕುಡಿಯುತ್ತಿದ್ದರೆ ಮನಕ್ಕೆ ಆಹ್ಲಾದವೆನಿಸುತ್ತಿತ್ತು. ಇವೆಲ್ಲಾ ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟರೂ ಮರೆಯಲಸಾಧ್ಯವಾದ ನೆನಪುಗಳು.
ಆಗ ಈಗಿನಂತೆ ರೋಗ ರುಜಿನಗಳ ಭಯವಿರಲಿಲ್ಲ. ಈಗಿನವರು ಇದಕ್ಕೆ ಕಾಲ ಚೆನ್ನಾಗಿತ್ತು ಅಂತ ಹೇಳ್ತಾರೆ. ಕಾಲ ಚೆನ್ನಾಗಿತ್ತೋ, ಜನ ಚೆನ್ನಾಗಿದ್ದರೋ ಗೊತ್ತಿಲ್ಲ. ಸುರಿಯುವ ಮಳೆಯಾದರೇನು, ಸುಡುವ ಬಿಸಿಲಾದರೇನು, ಕೈಗೆ ಸಿಕ್ಕಿದ್ದನ್ನು ತಿನ್ನುತ್ತಿದ್ದೆವು. ನಿಮ್ಮ ಅಜ್ಜ, ಅಜ್ಜಿಯರಿಗೆ ಕೇಳಿ ನೋಡಿ, ಅವರಿಗೆ ಈಗಿನಂತೆ ಜ್ವರ ಬರೋದು, ಹಾಸಿಗೆ ಹಾಸಿ ಮಲಗೋದು ಗೊತ್ತೇ ಇರಲಿಲ್ಲ. ಮಳೆಗಾಲ ಬಂತಂದ್ರೆ ಹಲಸಿನ ಹಣ್ಣುಗಳ ವಿವಿಧ ಬಗೆಯ ತಿನಸುಗಳು, ಪದಾರ್ಥಗಳು ಎಲ್ಲಾ ಕಡೆ ಸಾಮಾನ್ಯವಾದರೂ ಮಲೆ ನಾಡಿನಲ್ಲಿ ತುಸು ಹೆಚ್ಚೇ ಎನ್ನಬಹುದು. ಪ್ರತೀದಿನ ಬಿಡದೆ ಹಲಸಿನ ಹಣ್ಣಿನ ತಿಂಡಿಯನ್ನು ತಿಂದರೂ ಆರೋಗ್ಯ ಹದಗೆಡುತ್ತಿರಲಿಲ್ಲ. ಮಳೆಗಾಲ ಆರಂಭವಾಗುತ್ತೆ ಅನ್ನೋವಾಗ ಕಾಯಿ ಹಲಸನ್ನು ಕೊಯ್ದು ತಂದು ಮನೆಯಲ್ಲಿ ಬೇರ್ಪಡಿಸಿ ಉಪ್ಪು ಹಾಕಿ ಭರಣಿಯಲ್ಲಿ ಶೇಖರಿಸುತ್ತಿದ್ದರು. ಇದರಿಂದ ಮುಂದಿನ ಮಳೆಗಾಲ ಮುಗಿಯೋ ತನಕ ಪದಾರ್ಥ ಮಾಡಲು ಪರದಾಡಬೇಕಿರಲಿಲ್ಲ. ಮನೆಗೆ ನೆಂಟರು ಬಂದರೆ ಮಕ್ಕಳಾದ ನಮ್ಗೆ ಅದೇನೋ ಖುಷಿ, ಅಮ್ಮ ಯಾವಾಗ ಉಪ್ಪು ನರಿನಲ್ಲಿ ಹಾಕಿಟ್ಟ ಹಲಸಿನ ತೊಳೆಗಳನ್ನು ತೆಗೆಯ್ತಾರೋ ಅಂತ ಕಣ್ಣುಬಾಯ್ಬಿಟ್ಟು ಕಾಯ್ತಾ ಇದ್ದೆವು. ಅದರ ಪದಾರ್ಥದ ಆ ಪರಿಮಳ ಈಗಲೂ ಬಾಯಲ್ಲಿ ನೀರೂರಿಸುತ್ತೆ.
ಮಳೆಗಾಲದಲ್ಲಿ ಯತೇಚ್ಫವಾಗಿ ಸಿಗುವ ಕೆಸುವಿನ ಎಲೆ, ದಂಟು, ವಿವಿಧ ಬಗೆಯ ಸೊಪ್ಪುಗಳು ನಾಲಗೆಗೆ ರುಚಿಯನ್ನು ಒದಗಿಸುವುದರ ಜತೆಗೆ ಔಷಧೀಯ ಗುಣವನ್ನೂ ನಮಗೆ ಒದಗಿಸುತ್ತೆ. ಮಲೆನಾಡಿನ ಗುಡ್ಡಗಳಲ್ಲಿ ಬೇಕಾದಷ್ಟು ಸಿಗುವ ಕಲ್ಲಣಬೆಯ ಪದಾರ್ಥದ ಸವಿಯನ್ನಂತೂ ಸವಿದವರೇ ಬಲ್ಲರು. ಆದ್ರೆ ಈಗ ಕಾಲ ಬದಲಾಗಿದೆ. ಮನುಷ್ಯ ಬದಲಾದಂತೆ ಸಹಜವಾಗಿ ಈ ಹಸಿರ ಪ್ರಕೃತಿಯೂ ಬದಲಾಗಿದೆ. ಪ್ರಕೃತಿಯ ಜತೆಗೆ ಮನುಷ್ಯನಿಗೆ ನಾನಾ ರೀತಿಯ ರೋಗ ಭಯಗಳೂ ಶುರುವಾಗಿದೆ.
`ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅನ್ನೋ ಹಾಗೆ, ನಮಗೊಂದು ಕಾಲ, ಸೊಳ್ಳೆಗಳಿಗೊಂದು ಕಾಲ ಬರಲೇ ಬೇಕು ತಾನೆ? ಮಳೆಗಾಲ ಆರಂಭವಾದಾಗ ಸೊಳ್ಳೆಗಳ ಹಾರಾಟವೂ ಜಾಸ್ತಿಯಾಗಿ ಮನುಷ್ಯನಿಗೆ ಇನ್ನಿಲ್ಲದ ಕಾಟ ಕೊಡಲು ಶುರುವಾಗುತ್ತದೆ. ಮಲೇರಿಯಾ, ಡೆಂಗ್ಯೂನಂತಹ ಮಾರಣಾಂತಿಕ ರೋಗಗಳು ಮಳೆಗಾಲದ ಉಚಿತ ಉಡುಗೊರೆಯೆಂದರೆ ತಪ್ಪಾಗಲಾರದು. ಈಗಂತೂ ಹೊಸದಾದ ಚಿಕೂನ್ ಗುನ್ಯಾ ಕರಾವಳಿ ಪ್ರದೇಶದಲ್ಲಿ ನಿತ್ಯ ಸುದ್ದಿ ಮಾಡುತ್ತಿದೆ. ಆ ಮಟ್ಟಿಗೆ ಹೇಳುವುದಾದರೆ ಮಲೆನಾಡಿನ ನಾವೇ ಧನ್ಯರು ಅನ್ನಬಹುದು. ನಮ್ಮಲ್ಲಿ ಈಗಲೂ ಅದೇ ಹಳೆಯ ಸಂಪ್ರದಾಯಬದ್ಧ ತಿನಿಸುಗಳು ಪದಾರ್ಥಗಳು ದಿನದ ಊಟದಲ್ಲಿ ಇದ್ದೇ ಇರುತ್ತೆ. ನನ್ಗಂತೂ ವಾರಾಂತ್ಯದ ದಿನದಲ್ಲಿ ನಮ್ಮೂರು ಕೈ ಬೀಸಿ ಕರೆಯುತ್ತೆ. ಅಮ್ಮನ ಸ್ವಾದಿಷ್ಟ ತಿನಸು, ಹಲಸಿನ ಪದಾರ್ಥ ಇವೆಲ್ಲಾ ತಿಂದಷ್ಟೂ ಸಾಲದು. ನಮ್ಮೂರು ಬೆಟ್ಟ, ಗುಡ್ಡಗಳ ಹಸಿರು ವನಗಳಿಂದ ಸುತ್ತುವರಿದಿದ್ದರೂ ರೋಗ ಹರಡುವ ಸೊಳ್ಳೆಗಳಿಲ್ಲ.
ಹಾಗಾಗಿ ಮಲೆಗಾಲಕ್ಕೆ ಮಲೆನಾಡೇ ಸರಿ. ಏನಂತೀರಾ?

3 comments:

Unknown said...

shashi halasinahannu bayalli nirurisutha ide

mungarannu nange thumbha kushi kodutte

Sandeep K B said...

ನಿಜ ಶಶಿಯವರೇ ....
ಮಳೆ ಒಂದು ರೀತಿಯ ಮಾಯೆ ......
+ ಕನಸನ್ನು ಹುಟ್ಟಿಸುತದೆ
+ ಕಣ್ಣೀರು ತರಿಸುತ್ತದೆ / ಮರೆಸುತ್ತದೆ
+ ಮೈ ನಡುಗಿಸುತ್ತದೆ , ಮನ ಚಡಪಡಿಸುತ್ತದೆ
+ ನಾಲಗೆ ಚಪ್ಪರಿಸುತ್ತದೆ ..................
ಹೇಳೋಕೆ ನಿಂತರೆ..ಸಮಯ ಕಳೆಯೋದಿಲ್ಲ ..
ಸುಂದರ ಲೇಖನೆಗೆ ನನ್ನ ಸಲಾಂ ...
ಬೆಂಗಳೂರಿಗರು ನಾವು, ಮಳೆಗಾಲದಲ್ಲಿ ಬಜ್ಜಿ, ಬೋಂಡ, ಚಿಪ್ಸ್, ತಿಂದವರು....
ನಿಮ್ಮೊರಿಗೆ ಹೋದಾಗ, ಹಲಸಿನ ತಿಂಡಿ ಕಟ್ಟಿಸಿಕೊಂಡು ತರೋದು ಮರೆಯಬೇಡಿ

ಮನದಾಳದಿಂದ............ said...

Nija Shashi,

Malenada sobagu savidashtoo innu beku enisuva tayiya preetiyante.
lekhana tumbaa ishtavaytu.