Saturday, May 15, 2010
ಅಮ್ಮ...ಲವ್ ಯು
ಅಮ್ಮಾ... ಐ ಲವ್ ಯೂ ಟೂ
ಅಮ್ಮಾ ನನ್ನ ತೋಳಿನಲ್ಲಿ ಕಂದ ನಾನು
ನನ್ನಾ ಸಂಗ ಆಡಲೆಂದು ಬಂದೆ ನಾನು
ಪದ್ಯದ ಸಾಲುಗಳಲ್ಲಿ `ಅಮ್ಮಾ...' ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ. ಅಮ್ಮಾ ಎಂದು ಕೂಗಿದಾಗ ಮನಸ್ಸಿಗಾಗುವ ಸಂತಸ, ಸುಖ ಅಷ್ಟಿಷ್ಟಲ್ಲ. ಅಮ್ಮಾ ಎಂದು ತನ್ನ ಪುಟ್ಟ ಮಗು ಕೂಗಿದಾಗ ಆ ಹೆತ್ತ ಮಾತೆ ತನ್ನೆಲ್ಲಾ ನೋವನ್ನು ಮರೆತು ಓಡೋಡಿ ಹೋಗುತ್ತಾಳಲ್ಲಾ... ಆಗ ಆ ತಾಯಿಗೆ ತನ್ನ ಮಗುವಿಗೇನಾದರೂ ಆಗಿದೆಯೋ? ಎನ್ನುವ ಪ್ರಶ್ನೆಯ ಹೊರತು ಆಕೆಯ ಮನದಲ್ಲಿ ಸ್ವಾರ್ಥದ ಲವಲೇಶವೂ ಇರುವುದಿಲ್ಲ. ಈ ಜಗತ್ತಿನಲ್ಲಿ ನಿಸ್ವಾರ್ಥ ಪ್ರೀತಿಯಂದ್ರೆ ಅದು ತಾಯಿ ಪ್ರೀತಿಯಂತೆ. ಅದಕ್ಕೆ ತಾನೇ ತಾಯಿಯ ಪ್ರೀತಿಯನ್ನು ಇತರೇ ಪ್ರೀತಿಗಿಂತ ವಿಭಿನ್ನವಾಗಿ ನೋಡೋದು. ಈ ಪ್ರೀತಿಗೆ ಸರಿಸಮವಾಗಿ ನಿಲ್ಲೋದು ಈ ಜಗತ್ತಿನಲ್ಲಿ ಬೇರೇನಿದೆ ಹೇಳಿ?
ಮುತ್ತು ಕೊಡೋಳು ಬಂದಾಗ...
ತುತ್ತು ಕೊಟ್ಟೋಳ ಮರೀಬೇಡ
ಅಂತ ಕವಿ ತನ್ನ ಸಾಲಿನಲ್ಲಿ ಹೇಳಿದ್ದರಲ್ಲಿ ಎಷ್ಟೊಂದು ಅರ್ಥವಿದೆಯಲ್ವಾ? ಈಗಿನ ಕಾಲದಲ್ಲಿ ಹೆತ್ತವಳು ಅನ್ನೋ ಪ್ರೀತಿ, ಗೌರವವೇ ತಿಳಿಯದ ಮಕ್ಕಳಿರಬಹುದು. ಮುತ್ತು ಕೊಟ್ಟೋಳು ಬಂದಾಗ ತುತ್ತಿಟ್ಟು ರಮಿಸಿದವಳು ನೆನಪಾಗದಿರೋ ಜನಾ ಇರ್ಬಹುದು. ಆದ್ರೆ ತನ್ನ ಆ ಮಕ್ಕಳಿಗೆ ಕೇಡು ಬಯಸೋ ಅಮ್ಮ ಇರೋಕ್ಕೆ ಸಾಧ್ಯವಿಲ್ಲ. ಕಲಿಯುಗದಲ್ಲಿ ಇದೂ ಕೆಲವೊಮ್ಮೆ ತಿರುಗಾಮುರುಗಾ ಆಗಿರಲು ಸಾಧ್ಯ. ಆದ್ರೆ ಆ ತಾಯಿ ಮನಸ್ಸು ಬದಲಾಗ್ಬೇಕಾದ್ರೆ ಅದಕ್ಕೆ ಬಲವಾದ ಕಾರಣಾನೂ ಇರ್ಬೇಕು ಅನ್ನೋದು ಅಷ್ಟೇ ಸತ್ಯ. ಕೆಟ್ಟ ಮಕ್ಕಳು ಹುಟ್ಟಬಹುದು, ಆದ್ರೆ ಕೆಟ್ಟ ತಾಯಿ ಹುಟ್ಟೋಕೆ ಸಾಧ್ಯವಿಲ್ಲ ಇದು ಲೋಕಪ್ರಸಿದ್ಧ ನಾಣ್ಣುಡಿ. ತಾನು ಹೆತ್ತು, ಹೊತ್ತು ಸಾಕಿ ಸಲಹಿದ ತನ್ನದೇ ಮಕ್ಕಳು ತನ್ನನ್ನು ತಿರಸ್ಕರಿಸಿ ಮುಂದೆ ಸಾಗಿದರೂ ಹೆತ್ತ ತಾಯಿಯ ಮನಸ್ಸು ವಿಚಲಿತಗೊಳ್ಳೋದಿಲ್ಲ, ಅವರೆಲ್ಲೇ ಇರಲಿ, ಚೆನ್ನಾಗಿರಲಿ ಅಂತಾನೇ ಹಾರೈಸುತ್ತೆ. ಈ ಹರಕೆ, ಹಾರೈಕೆ `ಅಮ್ಮ' ಅನ್ನೋ ದೇವರಿಂದಲೇ ಹೊರತು ಬೇರೆ ಯಾರಿಂದಲೂ ಬರೋಕ್ಕೆ ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಅಮ್ಮ ಇತರರಿಗಿಂತ ಪ್ರತ್ಯೇಕ ಸ್ಥಾನಮಾನವನ್ನು ನಮ್ಮಲ್ಲಿ ಪಡೆದುಕೊಂಡಿದ್ದಾಳೆ. ಹೌದು ತನ್ನ ಮಗು ಏನೇ ತಪ್ಪು ಮಾಡಿದರೂ ತಾಯಿಯಾದವಳು ಕ್ಷಮಿಸುತ್ತಾಳೆ. `ಕ್ಷಮಯಾ ಧರಿತ್ರಿ' ಅವಳು. ತಾಯಿ ಮನೆಯ ದೇವತೆಯಿದ್ದಂತೆ. ಆಕೆಯಿಂದಾಗಿ ಇಡೀ ಮನೆಯಲ್ಲಿ ಸುಖ, ಸಂತೃಪ್ತಿ ವೃದ್ಧಿಸುತ್ತದೆ. ಮನೆಯಲ್ಲಿ ಯಾರೇ ಇದ್ದರೂ ಅಮ್ಮ ಇರದಿದ್ದರೆ ಆ ಮನೆ ಖಾಲಿ... ಖಾಲಿ...
ಅಮ್ಮ ಅನ್ನೋ ಮಾಂತ್ರಿಕ ಪದದ ಶಕ್ತೀನೇ ಅಂತದ್ದು. ಪ್ರೀತಿಯಿಂದ ಆಕೆಯನ್ನು ಕರೆದರೆ ಸಾಕು, ಆಕೆ ನಮಗೆ ಪ್ರೀತಿಯ ಗಂಗೆಯನ್ನೇ ಹರಿಸುತ್ತಾಳೆ. ತಪ್ಪು ಮಾಡಿದ್ದೇನೆ ಅಂತ ಮಡಿಲಲ್ಲಿ ಮುಖ ಹುದುಗಿಸಿದರೆ ಸಾಕು ತನ್ನ ಮಗುವಿನ ತಪ್ಪು ಏನೇ ಇರಲಿ ಅದು ಗೌಣವಾಗುತ್ತೆ. ಹೆತ್ತ ತಾಯಿಗೆ ಹೆಗ್ಗಣ ಮುದ್ದು ಅನ್ನೋ ಪದಕ್ಕೆ ಅನ್ವಥವೇ ಆಕೆ. ತನ್ನ ಮಗುವಿನ ತಪ್ಪನ್ನು ಆಕೆ ಅಷ್ಟು ಸುಲಭವಾಗಿ ಒಪ್ಪೋ ಅಮ್ಮ ಅನ್ನುವ ಪದ ಅಕ್ಕರೆ, ಪ್ರೀತಿಯ ಧ್ಯೋತಕ. ಅದಕ್ಕೇ ತಾನೇ ನಾವು ನೋವಾದಾಗ, ಕಷ್ಟ ಬಂದರೂ ಮೊದಲಿಗೆ ಅಮ್ಮಾ ಅಂತ ರೋಧಿಸೋದು. ಯಾವ ಮಗುವಾದ್ರೂ ಹುಟ್ಟಿದ ಕೂಡಲೇ ಅಮ್ಮಾ ಅಂತ ಕರೆಯದೆ `ಮಮ್ಮೀ' ಅಂತಾ ಕರೆಯುತ್ತಾ..? ಅವಕ್ಕೆ ಮಮ್ಮಿ, ಪಪ್ಪ ಅಂತ ಅಭ್ಯಾಸ ಮಾಡಿಸೋ ನಾವುಗಳು, ಆ ಮಗುವಿಗೆ ಅಮ್ಮ ಅನ್ನೋ ಪದದ ಮಹತ್ವಾನೇ ತಿಳಿಯದಂತೆ ಮಾಡಿಬಿಡುತ್ತೇವೆ.
ದಿನ ಕಳೆದಂತೆ ಅಮ್ಮ ಅಂದ್ರೆ ಏನು ಅಂತ ತಿಳಿಯದ ಎಲ್. ಕೆಜಿ, ಯು.ಕೆಜಿ ಮಕ್ಕಳು ಹೆತ್ತವಳನ್ನು ಮಮ್ಮಿ ಅಂತ ಕರೆಯೋದು ನೋಡಿದ್ರೆ ಹಿಂಸೆ ಅಂತನ್ನಿಸುತ್ತೆ. ಅಮ್ಮಾ ಅನ್ನೋ ಪದದಲ್ಲಿರೋ ಪ್ರೀತಿ, ಅಕ್ಕರೆ ಈ ಹಾಳು ಇಂಗ್ಲೀಷ್ನಲ್ಲೇನಿದೆಯೋ ದೇವರಿಗೇ ಗೊತ್ತು. ತನ್ನ ಮಗು ಮಮ್ಮೀ ಅಂತಾ ಹೇಳೋಕ್ಕೆ ಕಲಿತರೆ ಅದೇ ಭಾಗ್ಯ ಅಂತ ತಿಳಿಯೋ ಮಮ್ಮಿಗಳು ಇರೋವಾಗ ಅಮ್ಮ ಅಂತ ಕರೆಯೋ ಮಕ್ಕಳಾದ್ರೂ ಎಲ್ಲಿರುತ್ತೆ?
ನಾವು ಪ್ರತಿವರ್ಷ ಪ್ರೀತಿಗೊಂದು ದಿನ, ಸ್ನೇಹಕ್ಕೊಂದು ದಿನ, ಟೀಚರುಗಳಿಗೆ ಒಂದು ದಿನ ಅಂತ ನೆನಪಲ್ಲಿಟ್ಟು ಆಚರಿಸ್ತೇವೆ. ಆದ್ರೆ ಅಮ್ಮನಿಗೂ ಒಂದು ದಿನ ಇದೆ, ಅದನ್ನು ಆಚರಿಸೋದು ಬಿಡಿ, ಅದರ ಬಗ್ಗೆ ತಿಳಿಯದವರೇ ಸಾಕಷ್ಟು ಜನ ಇದಾರೆ.
ಮಕ್ಕಳಿಗೆ ಅಮ್ಮನೇ ದಾರಿದೀಪ. ಆಕೆ ನಡೆದ ಹಾದಿಯನ್ನು ಅನುಸರಿಸಿದ ಮಕ್ಕಳು ಜೀವನದಲ್ಲಿ ಖಂಡಿತಾ ಮುಂದೆ ಬಂದೇ ಬರ್ತಾರೆ. ಮುಂದೆ ಅಮ್ಮನ ಆದರ್ಶ ಗುಣಗಳು ಆ ಮಕ್ಕಳನ್ನು ಎಡವದಂತೆ ಕಾಪಾಡುತ್ತೆ. ಅಮ್ಮನಾಗುವುದು ಮುಖ್ಯವಲ್ಲ. ಆದ್ರೆ ಮಕ್ಕಳಿಗೆ ಒಳ್ಳೆಯ ಅಮ್ಮನಾಗಿ ಅವರ ಬಾಳು ಬೆಳಗಿಸೋದು ಮುಖ್ಯ. ತಪ್ಪಿದಾಗ ತಿದ್ದಿ, ಎಡವಿದಾಗ ಕೈ ಹಿಡಿದು ಮುನ್ನಡೆಸೋ ಅಮ್ಮ ದೇವತೆಗಿತಲೂ ಒಂದು ಹೆಜ್ಜೆ ಮುಂದಿರುತ್ತಾಳೆ. ಒಂದು ಮಾತಿದೆ, ದೇವರಿಗೆ ಭೂಮಿಯೆಲ್ಲೆಡೆ ಹೋಗಲು ಪುರುಸೋತ್ತಿರಲಿಲ್ಲವಂತೆ, ಆಗ ತನ್ನ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಮ್ಮನನ್ನು ಸೃಷ್ಟಿಸಿದನಂತೆ.
ಇಂದಿನ ಫ್ಯಾಶನ್ ಯುಗದಲ್ಲಿ ಅಮ್ಮ ಅನ್ನೋ ಪ್ರೀತಿ ಬಾಂಧವ್ಯ ಜಸ್ಟ್ ಫ್ರೆಂಡ್ಸ್ ಅನ್ನೋದಕ್ಕೆ ಬಂದು ನಿಂತಿದೆ. ಇದು ಸರಿಯಲ್ಲ. ಅಮ್ಮ ಜಸ್ಟ್ ಫ್ರೆಂಡ್ ಅಲ್ಲ, ಆಕೆ ಬೆಸ್ಟ್ ಫ್ರೆಂಡ್. ಬಾಳಿನುದ್ದಕ್ಕೂ ನಮಗೆ ಕೈ ಹಿಡಿದು ನಡೆಸುವವಳು. ಆಕೆ ಎಲ್ಲಿಯೇ ಇರಲಿ, ಹೇಗೇ ಇರಲಿ. ಆಕೆಯ ನೆನಪು ಸದಾ ಹಸಿರು. ಅಮ್ಮಾ... ಐ ಲವ್ ಯೂ ಟೂ...
Subscribe to:
Post Comments (Atom)
1 comment:
i love amma
Post a Comment